ಕ್ರೇಜಿಸ್ಟಾರ್ ಮೆಚ್ಚುಗೆ ಕೊನೆ ತನಕ ಮರೆಯಲ್ಲ..!- ಗಾಯಕಿ ಕಾವ್ಯ ಶ್ರೀ

Suvarna News   | Asianet News
Published : Aug 05, 2021, 04:46 PM ISTUpdated : Nov 16, 2024, 12:35 PM IST
ಕ್ರೇಜಿಸ್ಟಾರ್ ಮೆಚ್ಚುಗೆ ಕೊನೆ ತನಕ ಮರೆಯಲ್ಲ..!- ಗಾಯಕಿ ಕಾವ್ಯ ಶ್ರೀ

ಸಾರಾಂಶ

ಕನಸುಗಾರನ ಕಣ್ಣು ಮಾತ್ರವಲ್ಲ ಕಿವಿ ಕೂಡ ಪ್ರತಿಭೆಗಳನ್ನು ಗುರುತಿಸುವಲ್ಲಿ ಅಗ್ರಸ್ಥಾನದಲ್ಲಿದೆ. ಅದಕ್ಕೊಂದು ತಾಜಾ ಉದಾಹರಣೆ ಇತ್ತೀಚೆಗಷ್ಟೇ ಕ್ಲಬ್ ಹೌಸ್ ಮೂಲಕ ರವಿಚಂದ್ರನ್ ಅವರ ಪ್ರಶಂಸೆಗೊಳಗಾದ ಗಾಯಕಿ ಕಾವ್ಯ ಶ್ರೀ. ಹಾಡು ಮೆಚ್ಚಿದ ರವಿಚಂದ್ರನ್ ಹೇಗೆ ಸರ್ಪ್ರೈಸ್ ನೀಡಿದರು ಎನ್ನುವ ಬಗ್ಗೆ ಸ್ವತಃ ಕಾವ್ಯ ಶ್ರೀ ಇಲ್ಲಿ ಮಾತನಾಡಿದ್ದಾರೆ.

ಕಾವ್ಯ ಜನಿಸಿದ್ದು ಶಿವಮೊಗ್ಗದಲ್ಲಿ. ತಂದೆ ತಾಯಿ ಅವಿಭಜಿತ ದ.ಕ ಜಿಲ್ಲೆಯವರು. ಅಜ್ಜ ಅಜ್ಜಿ ಈಗಲೂ ಪುತ್ತೂರಿನ ಕಲ್ಲಡ್ಕದಲ್ಲಿದ್ದಾರೆ. ಮನೆಯಲ್ಲಿದ್ದುಕೊಂಡೇ ಧ್ವನಿಯಿಂದ ದೇಶ, ವಿದೇಶದ ಗಮನ ಸೆಳೆಯಿಸಬಲ್ಲ ಕ್ಲಬ್ ಹೌಸ್ ಅವರನ್ನು ಮತ್ತೆ ಜನಪ್ರಿಯತೆಯ ಲೋಕಕ್ಕೆ ಕರೆತಂದಿದೆ. ಆ ಜನಪ್ರಿಯತೆಗೆ ಕಲಶವಿಟ್ಟಂತೆ ಕನಸುಗಾರ ರವಿಚಂದ್ರನ್ ಒಂದು ಆಫರ್ ಕೂಡ ನೀಡಿದ್ದಾರೆ.

- ಶಶಿಕರ ಪಾತೂರು

ನೀವು ಕ್ರೇಜಿಸ್ಟಾರ್ ಅವರ ಗಮನ ಸೆಳೆದಿದ್ದು ಹೇಗೆ?
ಮೊದಲನೆಯದಾಗಿ ಹೇಳಬೇಕೆಂದರೆ ಅಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇದ್ದರು ಎನ್ನುವುದೇ ನನಗೆ ಗೊತ್ತಿರಲಿಲ್ಲ. ಚಿತ್ರರಂಗಕ್ಕೆ ಸಂಬಂಧಿಸಿದಂತೆ ಸದಾಶಿವ ಪ್ರೊಡಕ್ಷನ್ ಹೌಸ್ ಕ್ಲಬ್ ಹೌಸಲ್ಲಿ ಸಂಗೀತ ಸ್ಪರ್ಧೆ ಏರ್ಪಡಿಸಿತ್ತು. ಅದರಲ್ಲಿ ವಿಜೇತರಿಗೆ ಬಹುಮಾನವನ್ನೂ ಘೋಷಿಸಿದ್ದರು. ನಾನು ಅದರ ತೀರ್ಪುಗಾರರಲ್ಲಿ ಒಬ್ಬಳಾಗಿದ್ದೆ. ವಾರದಿಂದ ಕಾರ್ಯಕ್ರಮ ನಡೆಯುತ್ತಿತ್ತು. ಮೊದಲ ದಿನ ನನ್ನಿಂದ ಒಂದು ಹಾಡನ್ನೂ ಹಾಡಿಸಿದ್ದರು. ನಾಲ್ಕನೇ ದಿನ ಇರಬೇಕು; ನಾನು ಗ್ರೂಪ್‌ಗೆ ಬರುವ ಮೊದಲೇ ಅಲ್ಲಿ ರವಿಚಂದ್ರನ್ ಸರ್ ಇರುವುದಾಗಿ ಸುದ್ದಿಯಾಯಿತು. ತಕ್ಷಣ ಬಂದು ಹುಡುಕಾಡಿದೆ. ಅವರ ಡಿಪಿ ಮತ್ತು ಹೆಸರು ಗುರುತಿಸುವಂತೆ ಇರದ ಕಾರಣ ತಕ್ಷಣ ಗುರುತು ಸಿಗಲಿಲ್ಲ. ಆಮೇಲೆ ಪತ್ತೆ ಮಾಡಿದಾಗ ಅವರು ನನ್ನನ್ನು ಫಾಲೊ ಮಾಡ್ತಿರೋದು ನೋಡಿ ಖುಷಿಯಾಯಿತು. ಮಾತ್ರವಲ್ಲ 'ನಿಮ್ಮ ಹಾಡು ಇಷ್ಟವಾಯಿತು' ಎಂದು ಅವರ ಬಾಯಿಯಿಂದಲೇ ಕೇಳಿದಾಗ ನನಗೆ ಮಾತೇ ಹೊರಡದಂತಾಯಿತು.

ಪಾರು ಧಾರಾವಾಹಿಯಿಂದ ಅಪರೂಪದ ಅವಕಾಶ - ಶರತ್

ರವಿಚಂದ್ರನ್ ಅವರು ನಿಮ್ಮ ಹಾಡನ್ನು ಮೆಚ್ಚಿದ್ದಕ್ಕೆ ಕಾರಣ ಹೇಳಿದರಾ?
ಹೌದು. ಮರುದಿನದ ಕಾರ್ಯಕ್ರಮದ ಕೊನೆಗೆ ಅದೇ ಹಾಡನ್ನು ಮತ್ತೊಮ್ಮೆ ಹಾಡಿಸಿದರು ಕೂಡ. ನಾನು ಹಾಡಿದ್ದಿದ್ದು ಕೈಲಾಶ್ ಖೇರ್ ಅವರ `ತೇರೀ ದೀವಾನಿ’ ಹಾಡು. ಅಂಥದೊಂದು ಹೈ ಪಿಚ್ ಗೀತೆ ನಾನು ಹಾಡಿದ ರೀತಿ, ಬೇಸ್ ವಾಯ್ಸ್ ಅವರಿಗೆ  ಇಷ್ಟವಾಗಿತ್ತು ಅಂತ ಆಮೇಲೆ ಹೇಳಿದರು. ಜೊತೆಗೆ ನಾವು ತೀರ್ಪುಗಾರರು ಹೊಸ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿ ಮಾತನಾಡುತ್ತಿದ್ದ ರೀತಿಯೂ ಇಷ್ಟವಾಗಿತ್ತು ಎಂದರು. ನಾನಂತೂ ಹಿಂದಿನ ದಿನ ಸ್ಪರ್ಧಿಗಳಲ್ಲಿ “ಯಾಕೆ ಇಷ್ಟೊಂದು ಭಯ ಪಡ್ತಾ ಇದ್ದಿರ? ಇಲ್ಲಿ ಹುಲಿ, ಸಿಂಹ ಯಾರೂ ಇಲ್ಲ, ನಾವೇ ಇರೋದು ಧೈರ್ಯದಿಂದ ಹಾಡಿ” ಎಂದು ಹೇಳ್ತಾ ಇದ್ದೆ. ಕನ್ನಡ ಚಿತ್ರರಂಗದ ಅಷ್ಟು ದೊಡ್ಡ ಸ್ಟಾರ್ ಅಲ್ಲಿದ್ದಾರೆ ಎನ್ನುವ ಕಲ್ಪನೆಯೂ ನನಗೆ ಆಗ ಇರಲಿಲ್ಲ. ಆದರೆ ನೆಕ್ಸ್ಟ್‌ ಡೇ ಅವನ್ನೆಲ್ಲ ಕೇಳಿಸಿಕೊಂಡು ಖುಷಿ ಪಟ್ಟಿದ್ದು ಮಾತ್ರವಲ್ಲ, “ನನ್ನ ಮುಂದಿನ ಚಿತ್ರದಲ್ಲಿ ನೀವು ಹಾಡಬೇಕು” ಎಂದು ಸ್ವತಃ ರವಿಚಂದ್ರನ್ ಅವರೇ ಹೇಳಿದಾಗ ನನಗೆ ಸ್ವರ್ಗವೇ ಸಿಕ್ಕಂತಾಯಿತು.
 

`ಬ್ರಹ್ಮಗಂಟು' ಹೆಚ್ಚಿಸಿತು ಬಣ್ಣದ ನಂಟು - ಹರ್ಷಗೌಡ 

ನಿಮ್ಮ ಸಂಗೀತದ ಹಿನ್ನೆಲೆಯ ಬಗ್ಗೆ ಸ್ವಲ್ಪ ಹೇಳ್ತೀರಾ?
ಆರಂಭದಲ್ಲಿ ಬೇಸಿಕ್ ಕರ್ನಾಟಿಕ್ ಸಂಗೀತವನ್ನು  ಹೊಸಹಳ್ಳಿ ಅನಂತು ಅವರ ಬಳಿ ಕಲಿತಿದ್ದೆ. ಅಂಧ ಗಾಯಕ ಶಿವಮೊಗ್ಗ ವೇಣುಗೋಪಾಲ್ ಅವರು ನನ್ನ ಹಿಂದೂಸ್ಥಾನಿ ಸಂಗೀತಕ್ಕೆ  ಗುರುಗಳಾಗಿದ್ದರು. ಶಾಲಾ ಬಾಲಕಿಯಾಗಿದ್ದಾಗ ‘ಈ ಟಿವಿಯ ಎದೆ ತುಂಬಿ ಹಾಡುವೆನು’ ಮೊದಲ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದೆ. ಕಸ್ತೂರಿ ವಾಹಿನಿಯಲ್ಲಿ `ಮಧುರ ಮಧುರವೀ ಮಂಜುಳ ಗಾನ’ ಕಾರ್ಯಕ್ರಮದಲ್ಲಿ ಹಾಡಿದ್ದೆ. ಸುವರ್ಣ ವಾಹಿನಿಯ `ಸ್ಟಾರ್ ಸಿಂಗರ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಎನ್‌ಸಿಸಿಯ  ರಿಪಬ್ಲಿಕ್ ಡೇ ಕ್ಯಾಂಪಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟೊರೇಟೆಡ್‌ನ ಮುಖ್ಯ ಗಾಯಕಿಯಾಗಿದ್ದೆ. `ಸರಿಗಮಪ’ ಹಿಂದಿ ಶೋಗೆ ಬೆಂಗಳೂರಿನಿಂದ ಆಯ್ಕೆಯಾಗಿದ್ದೆ. ಹೀಗೆ ಆರಂಭದ ಅವಕಾಶಕ್ಕೆ, ಆಯ್ಕೆಗೆ ಯಾವತ್ತಿಗೂ ತೊಂದರೆ ಆಗಿರಲೇ ಇಲ್ಲ. ಆದರೆ ಆನಂತರ ಏನಾದರೊಂದು ಕಾರಣಕ್ಕೆ ಸ್ಪರ್ಧೆಯಲ್ಲಿ ಮುಂದುವರಿಯುತ್ತಿರಲಿಲ್ಲ. ಮದುವೆಗೆ ಮೊದಲು ಆಕಾಶವಾಣಿ ಭದ್ರಾವತಿಯಲ್ಲಿ ಸುಗಮ ಸಂಗೀತ ಕಲಾವಿದೆಯೂ ಆಗಿದ್ದೆ.

ಒಳಗಿಂದ ಫೀಲ್ ಮಾಡಿದಾಗಲೇ ಹೊಸಲೋಕ - ಕ್ರೇಜಿಸ್ಟಾರ್

ಕನಸುಗಾರನಿಂದ ಆಫರ್ ಬಂದಿದ್ದಕ್ಕೆ ಮನೆಯಲ್ಲಿ ಏನಂದಿದ್ದಾರೆ?
ಮನೆಯಲ್ಲಿ ಕೂಡ ನನ್ನಷ್ಟೇ ಅಚ್ಚರಿಯಾಗಿದ್ದಾರೆ. ಸುಮ್ಮನೇ ಅವಕಾಶಕ್ಕಾಗಿ ಅಲೆದಾಡುವುದನ್ನು ವಿರೋಧಿಸಿದ್ದರೇ ಹೊರತು ಪ್ರತಿಷ್ಠಿತ ಈಶ್ವರಿಯಂಥ ಸಂಸ್ಥೆಯಿಂದ ಆಫರ್ ಬರುವ ಬಗ್ಗೆ ಅವರು ಕೂಡ ಕನಸು ಕಂಡಿರಲಿಲ್ಲ. ಅಂಥ ಸಂದರ್ಭದಲ್ಲಿ ಖುದ್ದು ರವಿ ಸರ್ ಹೀಗೆ ಕ್ಲಬ್ ಹೌಸಲ್ಲಿ ಓಪನ್ನಾಗಿ ಅವಕಾಶ ನೀಡಿ ಆಹ್ವಾನಿಸಿದಾಗ ಆ ಅದೃಷ್ಟಕ್ಕೆ ಏನು ಹೇಳಬೇಕು ಎಂದು ನನಗೂ ಗೊತ್ತಾಗಿಲ್ಲ. ಸ್ವತಃ ರವಿಚಂದ್ರನ್ ಅವರೇ ಆಹ್ವಾನಿಸಿರುವ ಕಾರಣ ಅವರ ಮುಂದಿನ ಸಿನಿಮಾದಲ್ಲಿ ನೀಡುವ ಅವಕಾಶದಲ್ಲಿ ಚೆನ್ನಾಗಿ ಹಾಡಿ ಗೀತೆಗೆ ನ್ಯಾಯ ಒದಗಿಸುವಂತೆ ಮನೆ ಮಂದಿಯೂ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು