ನಟ ಶಿವರಾಜ್‌ಕುಮಾರ್ ಅವರಿಗೆ 58ನೇ ಹುಟ್ಟು ಹಬ್ಬದ ಸಂಭ್ರಮ. ಪ್ರತಿ ವರ್ಷ ಜು.12 ಬಂದರೆ ಸೆಂಚುರಿ ಸ್ಟಾರ್ ಅಭಿಮಾನಿಗಳು ತಮ್ಮ ಮನ ಮೆಚ್ಚಿದ ನಟನ ಹುಟ್ಟು ಹಬ್ಬವನ್ನು ‘ಆನಂದ’ದಿಂದ ಕೊಂಡಾಡುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಸಂಕಷ್ಟ. ಇದರಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮತ್ತು ಅಗತ್ಯ ಕೂಡ. ಹೀಗಾಗಿ ಹಿಂದಿನಂತೆ ಈ ವರ್ಷ ಶಿವಣ್ಣ ಅವರ ಮನೆ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಕೇಕ್ ಕತ್ತರಿಸಿ ಅದ್ದೂರಿಯಾಗಿ ಆಚರಿಸಲು ಆಗದು. ಹುಟ್ಟುಹಬ್ಬದ ಹೊತ್ತಿನಲ್ಲಿ ಶಿವಣ್ಣ ಅವರ ಈ ಸಂದರ್ಶನ.
ಆರ್ ಕೇಶವಮೂರ್ತಿ
ನೀವಿದ್ದಲ್ಲೇ ಹಾರೈಸಿ
undefined
ಕಳೆದ ಬಾರಿಯೂ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜತೆ ಮಾಡಿಕೊಳ್ಳಲಿಲ್ಲ. ಈ ಸಲ ಕೊರೋನಾ ಕಾರಣಕ್ಕೆ ಅಭಿಮಾನಿಗಳ ಜತೆ ಇರಲಾಗದು. ಇಷ್ಟಪಟ್ಟು ಮನೆವರೆಗೂ ಬರುವ ಅಭಿಮಾನಿಗಳಿಗೆ ಕಾಣಿಸಿಕೊಳ್ಳುವುದಕ್ಕೆ ಆಗುತ್ತಿಲ್ಲವಲ್ಲ ಎನ್ನುವ ಬೇಸರ ಇದೆ. ಆದರೆ, ಆರೋಗ್ಯ ದೃಷ್ಟಿಯಿಂದ ಸಾಮಾಜಿಕ ಅಂತರ ಮುಖ್ಯ. ನನ್ನ ಹುಟ್ಟು ಹಬ್ಬದ ಸಂಭ್ರಮವು ಇನ್ನೊಬ್ಬರಿಗೆ ತೊಂದರೆ ಆಗಬಾರದು. ನನ್ನ ನೋಡಲು ಬರುವವರ ಆರೋಗ್ಯದವೂ ಮುಖ್ಯ. ಅಲ್ಲದೆ ಈ ಬಾರಿ ಹುಟ್ಟು ಹಬ್ಬದ ದಿನ ನಾನು ಮನೆಯಲ್ಲಿ ಇರಲ್ಲ. ಹೀಗಾಗಿ ಎಲ್ಲರಲ್ಲೂ ನಾನು ಕೇಳಿಕೊಳ್ಳುವುದಿಷ್ಟೆ, ನೀವು ಇದ್ದಲ್ಲಿಯೇ ನನಗೆ ಪ್ರೀತಿಯಿಂದ ಶುಭ ಕೋರಿದರೆ ಸಾಕು.
ಸುದೀಪ್ ಅವರಿಗೆ ಧನ್ಯವಾದ
ಈ ಸಲ ಅಭಿಮಾನಿಗಳ ಸಂಭ್ರಮ ಸಾಮಾಜಿಕ ಜಾಲತಾಣಗಳಲ್ಲಿ ಕಲ್ಲರ್‌ಫುಲ್ಲಾಗಿದೆ. ಎಲ್ಲವನ್ನು ನಾನು ನೋಡುತ್ತಿದ್ದೇನೆ. ಒಬ್ಬ ಕಲಾವಿದನ ಹುಟ್ಟು ಹಬ್ಬವನ್ನು ಈ ಕಷ್ಟಕಾಲದಲ್ಲೂ ಇಷ್ಟುಸಂಭ್ರಮಿಸುತ್ತಿದ್ದಾರಲ್ಲ ಎಂದು ಖುಷಿ ಆಯ್ತು. ಇನ್ನೂ ನನ್ನ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳೇ ರೂಪಿಸಿದ ಕಾಮನ್ ಡಿಪಿ ಫೋಸ್ಟರ್ ಅನ್ನು ನಟ ಸುದೀಪ್ ಅವರು ಬಿಡುಗಡೆ ಮಾಡಿದ್ದು, ದೊಡ್ಡ ವಿಚಾರ. ಅವರಿಗೆ ನನ್ನ ಧನ್ಯವಾದ. ಸ್ಟಾರ್ ಹೀರೋಗಳು, ಹೊಸಬರು ಎನ್ನುವ ಬೇಲಿ ನಮ್ಮ ನಡುವೆ ಇಲ್ಲ. ನಾವೆಲ್ಲ ಒಂದೇ. ಕಲಾವಿದರು. ಸಿನಿಮಾ ಕುಟುಂಬದ ಸದಸ್ಯರು. ನಾನು ಗೆದ್ದೆ, ನನ್ನ ಸಿನಿಮಾ ಗೆಲ್ತು ಅಂದುಕೊಳ್ಳುವುದಕ್ಕಿಂತ ನಮ್ಮ ಭಾಷೆ ಗೆಲ್ಲುತ್ತದೆ ಎಂದುಕೊಳ್ಳುವ ಕಲಾವಿದರು ನಾವು.
'ನನ್ನ ಸುಖ ನಿನಗಿರಲಿ, ನಿನ್ನ ದುಖಃ ನನಗಿರಲಿ; ಶಿವಣ್ಣ ಪುತ್ರಿಗೆ ರಾಘವೇಂದ್ರ ರಾಜ್‌ಕುಮಾರ್ ಭಾವುಕ ಮಾತು!
ನಿರ್ದೇಶಕರಿಗೆ ನಾನು ತೆರೆದು ಬಾಗಿಲು
ಪ್ರತಿ ವರ್ಷ ಹುಟ್ಟು ಹಬ್ಬಕ್ಕೆ ನನ್ನ ಹೆಸರಿನಲ್ಲಿ ಸಾಕಷ್ಟುಸಿನಿಮಾಗಳು ಘೋಷಣೆ ಆಗುತ್ತವೆ ಯಾಕೆ ಅಂತ ತುಂಬಾ ಸಲ ನನ್ನ ಕೇಳಿದ್ದಾರೆ. ನಿರ್ದೇಶಕರಿಗೆ ಇಂಥದ್ದು ಮಾಡಬೇಡಿ ಅಂತ ಅದೇಶಿಸುವ ನಟ ಅಲ್ಲ. ಅವರಿಗೆ ನನ್ನ ಮೇಲೆ ಪ್ರೀತಿ ಇದೆ. ಅವರ ಕತೆ, ಅವರ ಕನಸುಗಳಿಗೆ ನಾನು ಬೇಕು ಅನಿಸಿದೆ. ಆ ಕಾರಣಕ್ಕೆ ನನ್ನ ಜತೆ ಸಿನಿಮಾ ಮಾಡುವ ಆಸೆಯೊಂದಿಗೆ ಜಾಹೀರಾತು ನೀಡುತ್ತಾರೆ. ಅದಕ್ಕೆ ನನ್ನ ಅಭ್ಯಂತರ ಇಲ್ಲ. ನಿರ್ದೇಶಕರಿಗೆ ನನ್ನ ಮನೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಯಾರ ಕನಸಿನಲ್ಲಿ, ಯಾರ ಬರವಣಿಗೆಯಲ್ಲಿ ಯಾವ ರೀತಿ ಕತೆ ಇರುತ್ತದೆ ಅಂತ ಹೇಳಲಾಗದು.
ಭಜರಂಗಿ 2 ನಂತರ ಆರ್‌ಡಿಎಕ್ಸ್
ಸದ್ಯಕ್ಕೆ ‘ಭಜರಂಗಿ 2’ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಇದು ಮುಗಿದ ಮೇಲೆ ‘ಆರ್‌ಡಿಎಕ್ಸ್ ’ ಸಿನಿಮಾ ಚಿತ್ರೀಕರಣಕ್ಕೆ ತೆರಳಲಿದೆ. ಆ ನಂತರ ಯಾವ ಸಿನಿಮಾ ಎಂಬುದು ಇನ್ನೂ ನಿರ್ಧರಿಸಿಲ್ಲ. ನಿರ್ದೇಶಕ ಹರ್ಷ ‘ಭಜರಂಗಿ 2’ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. ಯಾವ ರೀತಿ ಇರುತ್ತದೆ ಎಂದು ನನಗೂ ಕುತೂಹಲ ಇದೆ. ಹರ್ಷ ಒಳ್ಳೆಯ ನಿರ್ದೇಶಕರು. ವಿಶೇಷವಾದ ಕತೆಯನ್ನು ಈ ಚಿತ್ರದಲ್ಲಿ ತಂದಿದ್ದಾರೆ. ಆ ಚಿತ್ರದ ಬಗ್ಗೆ ನಾನು ಹೇಳುವುದಕ್ಕಿಂತ ನೀವು ನೋಡಿ ಹೇಳಿ. ಚಿತ್ರದ ಮೊದಲ ಪೋಸ್ಟರ್ ನೋಡಿಯೇ ನನಗೆ ನಿರೀಕ್ಷೆ ಹೆಚ್ಚಾಗಿತ್ತು. ಈಗ ಟೀಸರ್ ಬರುತ್ತಿದೆ.
ಶಿವರಾಜ್‌ಕುಮಾರ್ ಬರ್ತಡೇ ಕ್ಯಾನ್ಸಲ್; ಈ ಮೆಸೇಜ್ ನೋಡಲೇಬೇಕು!
3 ಕತೆ ಕೇಳಿದ್ದೇನೆ
ಲಾಕ್‌ಡೌನ್ ದಿನಗಳಲ್ಲಿ ನಾನು ಹೆಚ್ಚು ಸಿನಿಮಾ ಕೆಲಸಗಳ ಕಡೆ ಗಮನ ಕೊಡಲಿಲ್ಲ. ಆದರೆ, ಈ ನಡುವೆ ಮೂರು ಕತೆಗಳನ್ನು ಕೇಳಿದ್ದೇನೆ. ತುಂಬಾ ಚೆನ್ನಾಗಿತ್ತು. ವಿಶೇಷವಾಗಿ ಮಾಡಿಕೊಂಡು ಬಂದಿದ್ದಾರೆ. ಮೂರೂ ಕತೆಗಳು ನನಗೆ ಇಷ್ಟವಾಗಿ ಒಪ್ಪಿಕೊಂಡಿದ್ದೇನೆ. ಅದರ ನಿರ್ದೇಶಕರು, ಹೆಸರು ಎಲ್ಲವನ್ನು ಮುಂದೆ ಹೇಳುತ್ತೇನೆ. ನನಗೆ ಖುಷಿ ಕೊಟ್ಟಮೂರು ಕತೆಗಳು ಇವು.
ಕೊರೋನಾದಲ್ಲಿ ಸಾವಿನ ನೋವು
ಒಂದು ಕಡೆ ಕೊರೋನಾ ಸಂಕಷ್ಟವಾದರೆ ಮತ್ತೊಂದು ಕಡೆ ಸಾವಿನ ನೋವು. ಇಬ್ಬರು ಯುವ ಪ್ರತಿಭೆಗಳು ಆತ್ಮಹತ್ಯೆ ಮಾಡಿಕೊಂಡರು. ಚಿರಂಜೀವಿ ಸರ್ಜಾ ಅನಾರೋಗ್ಯದಿಂದ ಅಗಲಿದರು. ಬುಲೆಟ್ ಪ್ರಕಾಶ್, ಮೈಕಲ್ ಮಧು ಅಗಲಿದ್ದು ದುಃಖಕರ. ಅದರಲ್ಲೂ ಯುವ ಪ್ರತಿಭೆಗಳ ನಿಧನ ವಿಷಯ ಕೇಳಿ ತುಂಬಾ ನೋವಾಯ್ತು. ಏನೇ ಕಷ್ಟಬರಲಿ ಆತ್ಮಹತ್ಯೆ ಪರಿಹಾರ ಅಲ್ಲ. ಆ ದಾರಿ ತುಳಿಯುವ ಮುನ್ನ ಒಮ್ಮೆಯಾದರೂ ನಿಮ್ಮ ಸ್ನೇಹಿತರು, ಕುಟುಂಬವನ್ನು ನೆನಪಿಸಿಕೊಳ್ಳಿ. ನಾವೆಲ್ಲ ಜತೆಗೆ ಇದ್ದೇವೆ. ನಿಮಗೆ ಕಷ್ಟಬಂದರೆ ಬೇರೆಯವರ ಜತೆ ಹೇಳಿಕೊಳ್ಳಿ. ಅದೇ ಉತ್ತಮ ದಾರಿ. ನಿಮ್ಮಲ್ಲೇ ಇಟ್ಟುಕೊಂಡು ಸಾವಿನ ದಾರಿ ಹುಡುಕಬೇಡಿ.
ಕೊರೋನಾ ಬಗ್ಗೆ ಜಾಗೃತಿ ವಹಿಸಿದ ಶಿವಣ್ಣ; 'ಬುಟ್ಟ ಬೊಮ್ಮ' ಹಾಡಿಗೆ ಅಪ್ಪು ಸ್ಟೆಪ್ಸ್!
ಆ ಕತೆಗೆ ಧನಂಜಯ್ ಬೇಕಿತ್ತು: ಶಿವಣ್ಣ
ಅಂದಹಾಗೆ ‘ಟಗರು’ ನಂತರ ಮತ್ತೆ ಶಿವಣ್ಣ ಹಾಗೂ ಡಾಲಿ ಧನಂಜಯ್ ಜತೆಯಾಗುತ್ತಿದ್ದಾರೆ. ವಿಜಯ್ ಮಿಲ್ಟನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ‘ಪ್ರೀಮಿಯರ್ ಪದ್ಮಿನಿ’ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಕೃಷ್ಣ ಸಾರ್ಥಕ್ ಅವರೇ ತಮ್ಮ ಕೃಷ್ಣ ಕ್ರಿಯೇಷನ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಇದೆ. ‘ಚಿತ್ರದ ಕತೆ ಕೇಳಿದ ಮೇಲೆ ಒಂದು ಸ್ಟ್ರಾಂಗ್ ಆದ ಪಾತ್ರಕ್ಕೆ ಧನಂಜಯ್ ಅವರೇ ಸೂಕ್ತ ಅನಿಸಿತು. ಹೀಗಾಗಿ ಮತ್ತೆ ಧನಂಜಯ್ ಹಾಗೂ ನಾನು ಜತೆಯಾದರೆ ಚೆನ್ನಾಗಿರುತ್ತದೆ ಎಂದು ನಾನೇ ಹೇಳಿದೆ. ‘ಟಗರು’ ಚಿತ್ರದಂತೆ ಒಳ್ಳೆಯ ಕತೆ ಈ ಚಿತ್ರದಲ್ಲಿದೆ. ವಿಜಯ್ ಮಿಲ್ಟನ್ ಅವರದ್ದು ದೊಡ್ಡ ಹೆಸರು. ಈ ಚಿತ್ರದ ಮೂಲಕ ನಮ್ಮ ಜೋಡಿಗೆ ಮತ್ತೊಂದು ಇಮೇಜ್ ನೀಡುತ್ತಾರೆಂಬ ಭರವಸೆ ಇದೆ’ ಎನ್ನುತ್ತಾರೆ ನಟ ಶಿವರಾಜ್‌ಕುಮಾರ್.