ನಾಗಿಣಿ-2 ಧಾರಾವಾಹಿಯ 'ದಿಗ್ವಿಜಯ್' ಪಾತ್ರಕ್ಕೆ ಗುಡ್‌ಬೈ ಹೇಳಿದ ಮೋಹನ್!

By Suvarna NewsFirst Published Apr 28, 2021, 5:52 PM IST
Highlights

`ನಾಗಿಣಿ' ಧಾರಾವಾಹಿಯ ಪ್ರೇಕ್ಷಕರು `ದಿಗ್ವಿಜಯ್' ಎನ್ನುವ ಪಾತ್ರವನ್ನು ಮೆಚ್ಚಲು ಒಂದು ಪ್ರಮುಖ ಕಾರಣ ಮೋಹನ್ ಎಂದೇ ಹೇಳಬೇಕು. ಯಾಕೆಂದರೆ ಹಾಸ್ಯ, ತಂತ್ರಗಾರಿಕೆಯ ಪಾತ್ರಗಳಿಂದ ಗುರುತಿಸಿಕೊಂಡಿದ್ದ ಇವರು ದಿಢೀರ್ ಎಂದು ಒಂದು ಯಜಮಾನನ ಪಾತ್ರವನ್ನು ಕಟ್ಟಿಕೊಟ್ಟ ರೀತಿ ಅಂಥದ್ದು. ಪ್ರಸ್ತುತ ಆ ಧಾರಾವಾಹಿಯಿಂದ ತಾವು ಹೊರಗೆ ಬಂದಿರುವುದಾಗಿ ಮೋಹನ್ ಸುವರ್ಣ ನ್ಯೂಸ್‌.ಕಾಮ್‌ ಜೊತೆಗೆ ತಿಳಿಸಿದ್ದಾರೆ.
 

ಸ್ಟಾರ್ ನಾಯಕರ ನಡುವೆ ವಯಸ್ಸೇ ಆಗದ ನಾಯಕ, ಪೋಷಕ ನಟರಾಗಿರುವವರು ಮೋಹನ್. ಸ್ವತಃ ನಾಯಕ, ನಿರ್ದೇಶಕರಾಗಿ ಕೂಡ ಗುರುತಿಸಿಕೊಂಡಿರುವ ಮೋಹನ್ ರಚನೆಯ ಸಂಭಾಷಣೆಗಳು ಒಂದು ಚಿತ್ರದಲ್ಲಿವೆ ಎಂದರೆ ಅದರ ತೂಕವೇ ಬೇರೆ. ಇಂಥ ನಟನನ್ನು ನಾಯಕನ ತಂದೆಯ ಪಾತ್ರದಲ್ಲಿ ತೋರಿಸಿದ್ದು ಜೀ ಕನ್ನಡ ವಾಹಿನಿಯ `ನಾಗಿಣಿ-2' ಧಾರಾವಾಹಿ. ಅಲ್ಲಿ ಒಬ್ಬ ತಂದೆಯ ಪಾತ್ರವನ್ನು ಕೂಡ ಹೇಗೆ ಆಕರ್ಷಕವಾಗಿ, ವಾತ್ಸಲ್ಯಮಯ, ಗೌರವಾನ್ವಿತ ಸ್ಥಾನದಿಂದ ನಿಭಾಯಿಸಬಲ್ಲೆ ಎಂದು ಸಾಬೀತು ಮಾಡಿಕೊಟ್ಟವರು ಮೋಹನ್. ಪ್ರಸ್ತುತ ನಾಗಿಣಿಯ ಪಾತ್ರಕ್ಕೆ ಅವರು ಗುಡ್‌ಬೈ ಹೇಳಿದ್ದಾರೆ. ಅದಕ್ಕೆ ಕಾರಣವೇನು? ಈ ಲಾಕ್ಡೌನ್‌ ಸಂದರ್ಭವನ್ನು ಅವರು ಹೇಗೆ ಕಳೆಯುತ್ತಿದ್ದಾರೆ ಎನ್ನುವ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. 

- ಶಶಿಕರ ಪಾತೂರು

ದಿಗ್ವಿಜಯ್ ಪಾತ್ರ ಅಷ್ಟೊಂದು ಜನಪ್ರಿಯವಾಗಲು ಕಾರಣವೇನು?
ಮೊದಲನೆಯದಾಗಿ ಆ ಪಾತ್ರದ ವ್ಯಾಪ್ತಿ ಹಾಗಿತ್ತು. ಒಂದು ಯಜಮಾನನಿಗೆ ಇರಬೇಕಾದ ಐಶ್ವರ್ಯ, ಆಡಂಬರ, ಗತ್ತು ಎಲ್ಲವೂ ಅಲ್ಲಿ ಅಡಗಿತ್ತು. ಜೊತೆಗೆ ಒಬ್ಬ ತಂದೆಯ ಅಮಾಯಕತೆ ಮತ್ತು ಕತೆಯಲ್ಲಿರುವ ಅತಿ ಮಾನುಷ ಶಕ್ತಿ ಇವೆಲ್ಲವುಗಳು ಕೂಡ ಪಾತ್ರ ಜನಪ್ರಿಯವಾಗಲು ಕಾರಣವಾಗಿತ್ತು. ನನ್ನಂಥ ಒಬ್ಬ ಸಿನಿಮಾ ಕಲಾವಿದ ಕಿರುತೆರೆಯ ಪಾತ್ರವೊಂದನ್ನು ಒಪ್ಪಲು ಬೇಕಾದಂಥ ಗಟ್ಟಿತನ ಮೊದಲೇ ಅದರಲ್ಲಿ ಮನಗಂಡಕಾರಣವೇ ಪಾತ್ರವನ್ನು ಒಪ್ಪಿದ್ದೆ. ಸುಮಾರು ಒಂದೂವರೆ ವರ್ಷಗಳ ಈ ಜರ್ನಿಯಲ್ಲಿ ಸಾಕಷ್ಟು ಮಂದಿ ದಿಗ್ವಿಜಯ್ ಪಾತ್ರವನ್ನು ಉಲ್ಲೇಖಿಸಿ ಮೆಚ್ಚುಗೆಯ ಮಾತನಾಡಿದ್ದರು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ನಾನು ನಾಗಿಣಿ ಧಾರಾವಾಹಿಯಿಂದ ಹೊರ ಬಂದಿದ್ದೇನೆ.

ರಶ್ಮಿಕಾಗೆ ಬಾಯ್ ಫ್ರೆಂಡ್ ಇದಾರಾ?

ಲಾಕ್ಡೌನ್‌ ಮತ್ತು ಕೋವಿಡ್ ನಿಮ್ಮ ಮೇಲೆ ಏನೆಲ್ಲ ಪರಿಣಾಮ ಬೀರಿವೆ?
ಕಳೆದ ವರ್ಷದ ಕೊರೊನಾ ದುರಂತದ ಬಗ್ಗೆ ಟಿವಿಯಲ್ಲಿ ನೋಡಿದ್ದು ಬಿಟ್ಟರೆ, ತೀರ ಪರಿಚಿತರಿಗೆ ಕೋವಿಡ್ ಆಗಿರಲಿಲ್ಲ. ಆದರೆ ಈ ಬಾರಿ ನನ್ನ ಕುಟುಂಬದಲ್ಲೇ ಐದಾರು ಮಂದಿ ತೀರಿಕೊಂಡಿದ್ದಾರೆ. ನನ್ನ ತಂದೆ ಬಿದ್ದು ಏಟು ಮಾಡಿಕೊಂಡಿದ್ದರು. ತಂದೆ ಮತ್ತು ತಾಯಿ ಇಬ್ಬರಿಗೂ ಕೋವಿಡ್ ಕೂಡ ಬಂತು. ಒಂದೆಡೆ ಅವರ ಆರೋಗ್ಯದ ಕುರಿತಾದ ಕಾಳಜಿಯಾದರೆ ಮತ್ತೊಂದೆಡೆ ಲಾಕ್ಡೌನ್‌ನಿಂದಾಗಿ ಚೇತರಿಕೆ ಕಾಣದೆ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಎರಡೂ ಕೂಡ ನನ್ನ ಮೇಲೆ ಗಂಭೀರ ಪರಿಣಾಮ ಬೀರಿವೆ. ಎರಡು ವರ್ಷಗಳಿಂದ ಚಿತ್ರೋದ್ಯಮದಲ್ಲಿ ಕೆಲಸವೇ ನಡೆಯುತ್ತಿಲ್ಲ. ಸಾಮಾಜಿಕ ಅಂತರ ಬೇಕು ಎಂದೊಡನೆ ಮೊದಲು ಕಾಣ ಬರುವುದೇ ಸಿನಿಮಾರಂಗ. ಚಿತ್ರಮಂದಿರ ಮುಚ್ಚಿ ಎನ್ನುವಲ್ಲಿಂದ ಕಲಾವಿದರ ಕಷ್ಟ ಶುರುವಾಗುತ್ತದೆ. ಕೆಲಸ ಇಲ್ಲವಾದರೆ ಬದುಕಿದ್ದು ಸತ್ತ ಹಾಗೆಯೇ ತಾನೇ? ನಾನು ಏನೇ ಕೆಲಸ ಮಾಡಿದ್ದರೂ ಅದು ಮನರಂಜನಾ ಮಾಧ್ಯಮದಲ್ಲೇ. ಹಾಗಾಗಿ ಸಿನಿಮಾರಂಗವನ್ನು ಬಿಟ್ಟು ನನ್ನ ಭವಿಷ್ಯ ಏನು ಎಂದೇ ಅರ್ಥವಾಗದಂಥ ಸಂದರ್ಭ ಇದು. 

ಕೊರೋನಾ ವಿರುದ್ಧ ಎಚ್ಚರಿಕೆ ಅಗತ್ಯ ಅಂತಾರೆ ಗಿಣಿರಾಮ ನಟಿ ನಯನಾ

ಈ ಸಂದರ್ಭದಲ್ಲಿ ನಿಮ್ಮ ಮುಂದಿರುವ ಯೋಜನೆಗಳೇನು? 
ನನಗಂತೂ ಹತ್ತನೇ ತಾರೀಕು ತನಕ ಯಾವುದೇ ಶೂಟಿಂಗ್ ಯೋಜನೆ ಇಲ್ಲ. ಇತರರಿಗೂ ಅದೇ ನನ್ನ ಸಲಹೆ; ಮನೆಯಲ್ಲಿ ವಯಸ್ಸಾದವರಿದ್ದರೆ ಮನೆಯಿಂದ ಹೊರಗೆ ಹೋಗದಿರುವುದೇ ಉತ್ತಮ. ಒಂದು ವೇಳೆ ಹೊರಗೆ ಹೋದರೆ ಅವರೊಂದಿಗೆ ಅಂತರ ಕಾಪಾಡಿಕೊಂಡಿರಬೇಕು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ತೆಲುಗು ಮತ್ತು ಕನ್ನಡದ ಎರಡು ದೊಡ್ಡ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ನಾನು ನಟಿಸಬೇಕಾಗಿತ್ತು. ಎರಡೂ ಕೂಡ ಮುಂದೆ ಹೋಯಿತು. ರವಿ ಸರ್ ಜೊತೆಗೆ ನಟಿಸಿ ಅವರ ನಿರ್ದೇಶನ ಮತ್ತು ನನ್ನ ಸಂಭಾಷಣೆಯಲ್ಲಿ ಮೂಡಿ ಬಂದಿರುವ `ರವಿ ಬೋಪಣ್ಣ' ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ತುಂಬ ಚೆನ್ನಾಗಿ ಮೂಡಿ ಬಂದಿದ್ದು ನಾನು ಕೂಡ ಒಂದು ಪಾತ್ರವನ್ನು ಮಾಡಿದ್ದೇನೆ. ಇವಲ್ಲದೆ ನನ್ನದೇ ನಿರ್ಮಾಣ, ನಿರ್ದೇಶನ ಮತ್ತು ನಟನೆಯಲ್ಲಿ ವೆಬ್ ಸೀರೀಸ್ ಒಂದು ಆರಂಭವಾಗಲಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಿದ್ದೇನೆ.

click me!