ಸದ್ಯದ ಸ್ಥಿತಿಗತಿಯ ಬಗ್ಗೆ ತಿಥಿ ಪೂಜಾ ಅವಲೋಕನ

By Suvarna NewsFirst Published Apr 30, 2021, 5:17 PM IST
Highlights

ತಿಥಿ ಪೂಜಾ ಎಂದೊಡನೆ ತಿಥಿ ಚಿತ್ರದಲ್ಲಿ ಅವರು ಮಾಡಿರುವ ಪಾತ್ರ ನೆನಪಾಗಲೇಬೇಕು. ಅದರ ಬಳಿಕ ಕೂಡ ಒಂದಕ್ಕಿಂತ ಒಂದು ವಿಭಿನ್ನವಾದ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಆದರೆ ಅವೆಲ್ಲದರಾಚೆಗೆ ಅವರಿಗೆ ಈಗ ತಿಥಿ ಎಂದರೇನೇ ಭಯ ಶುರುವಾಗಿದೆ. ಯಾಕೆ ಎನ್ನುವುದನ್ನು ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.
 

ಪೂಜಾ ಹೆಸರಿನಲ್ಲಿ ಕನ್ನಡದಲ್ಲೇ ಒಂದಿಬ್ಬರು ನಟಿಯರು ಬಂದು ಹೋಗಿದ್ದಾರೆ. ಅವರಲ್ಲಿ ಪ್ರತಿಯೊಬ್ಬರು ಕೂಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಕಂಡುಕೊಂಡಿದ್ದಾರೆ. ಆದರೆ `ತಿಥಿ' ಚಿತ್ರದ ಮೂಲಕ ಜನಪ್ರೀತಿ ಪಡೆದ ನಟಿಯನ್ನು ವಿಭಿನ್ನವಾಗಿಸಿರುವುದೇ ಹೆಸರಿನ ಜೊತೆಗಿರುವ ಚಿತ್ರದ ಹೆಸರು ಎನ್ನಬಹುದು. ತಿಥಿ ಪೂಜಾ ಎಂದೊಡನೆ ಈ ನಟಿಯ ಅಗಾಧ ಪ್ರತಿಭೆ ಒಮ್ಮೆ ಎಲ್ಲರ ಕಣ್ಮುಂದೆ ಸರಿದು ಹೋದರೆ ಅಚ್ಚರಿ ಇಲ್ಲ. ಆದರೆ ನಿಜ ಜೀವನದಲ್ಲಿ ಇವರಿಗೆ ಇಂದು ಸುತ್ತಮುತ್ತ ನಡೆಯುತ್ತಿರುವ ತಿಥಿಕಾರ್ಯಗಳೇ ಆತಂಕ ಮೂಡಿಸಿವೆ. ಅದಕ್ಕೆ ಕಾರಣ ಕೊರೊನಾ ಕಾರಣದಿಂದ ಬೆಂಗಳೂರಿನಲ್ಲಿ ಸಂಭವಿಸುತ್ತಿರುವ ಸಾಲು ಸಾಲು ಸಾವುಗಳು. ಇದೇ ತಿಂಗಳಲ್ಲಿ ತಮ್ಮ ಹುಟ್ಟೂರಾದ ರಾಣಿ ಬೆನ್ನೂರಿನಿಂದ ಬೆಂಗಳೂರು ಸೇರಿಕೊಂಡ ಪೂಜಾರನ್ನು ಸ್ವಾಗತಿಸಿರುವುದು ಮಾರಣಾಂತಿಕ ಕಾಯಿಲೆಯ ವಾತಾವರಣ. ಆದರೂ ದೈರ್ಯ ಬಿಡದೆ ಬೆಂಗಳೂರಲ್ಲೇ ಮುಂದುವರಿಯಲು ನಿರ್ಧರಿಸುವ ಪೂಜಾ ಜೊತೆಗಿನ ಮಾತುಕತೆ ಇದು.

ಶಶಿಕರ ಪಾತೂರು

ದಿಗ್ವಿಜಯ್ ಪಾತ್ರಕ್ಕೆ ಗುಡ್ ಬೈ ಹೇಳಿದ ಮೋಹನ್

ಈ ಲಾಕ್ಡೌನ್ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ?
ಚಿತ್ರೀಕರಣ ಸ್ಥಗಿತವಾಗಿರುವ ಕಾರಣ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದೇನೆ. ಆದರೆ ಈ ವರ್ಕ್ ಸಿನಿಮಾದ್ದಲ್ಲ! ನಾನು ಸಿನಿಮಾಗಳ ಜೊತೆಯಲ್ಲೇ ಒಂದು ಖಾಸಗಿ ಸಂಸ್ಥೆಯಲ್ಲಿ ನೆಟ್ವರ್ಕ್ ಇಂಜಿನಿಯರ್ ವೃತ್ತಿಯನ್ನೂ ಮಾಡುತ್ತಿದ್ದೇನೆ. ಇದರ ನಡುವೆ ಧಾರಾವಾಹಿಯೊಂದಕ್ಕೆ ಕರೆದಿದ್ದರು. ಅದು ಅತಿಥಿ ಪಾತ್ರದ ಹಾಗಿದ್ದಿದ್ದರೆ ಹೋಗಿ ನಟಿಸಿಕೊಂಡು ಬರಲು ಸಿದ್ಧಳಿದ್ದೆ. ಆದರೆ ಪೂರ್ತಿ ಮೂರು ತಿಂಗಳು ಅವರಿಗಾಗಿ ನೀಡಬೇಕಿತ್ತು. ಒಂದು ಕಡೆ ನೆಟ್ವರ್ಕ್ ಇಂಜಿನಿಯರ್ ಆಗಿಯೂ ಕೆಲಸ ಮಾಡುತ್ತಿರುವ ಕಾರಣ ಅದನ್ನು ಒಪ್ಪಿಕೊಂಡಿಲ್ಲ. ಈಗ ನೋಡಿದರೆ ಈ ವೃತ್ತಿಗೆ ರಾಜೀನಾಮೆ ನೀಡದೆ ಒಳ್ಳೆಯ ಕೆಲಸ ಮಾಡಿದ್ದೇನೆ ಅನಿಸಿದೆ. ಉಳಿದಂತೆ ಡ್ರಾಯಿಂಗ್ ಮಾಡುವ ಹವ್ಯಾಸ ನನಗಿದೆ. ಒಟ್ಟಿನಲ್ಲಿ ಸದಾ ಬ್ಯುಸಿಯಾಗಿರಬೇಕು.

ಕೊರೊನ ವಿರುದ್ಧ ಎಚ್ಚರಿಕೆ ಅತ್ಯಗತ್ಯ ಅಂತಾರೆ ನಯನಾ

ಎಲ್ಲರಂತೆ ನೀವ್ಯಾಕೆ ಲಾಕ್ಡೌನ್ ಸಮಯದಲ್ಲಿ ನಿಮ್ಮೂರಿಗೆ ಹೋಗಿಲ್ಲ?
ಬೆಂಗಳೂರಲ್ಲಿ ಕೋವಿಡ್‌19 ಸಂಬಂಧಿತ ಸಾವಿನ ಸರಮಾಲೆಗಳನ್ನು ಕಂಡಾಗ ಅಂಥ ನಿರ್ಧಾರ ಮಾಡದಿರುವವರೇ ಇಲ್ಲ. ಆದರೆ ದುರದೃಷ್ಟವಶಾತ್‌ ಕೊರೊನಾದ ಎರಡನೇ ಅಲೆ ಶುರುವಾಗುವ ಹೊತ್ತಿನಲ್ಲೇ ನಾನು ಬೆಂಗಳೂರು ಸೇರಿಕೊಂಡೆ. ಈ ತಿಂಗಳ ಮೊದಲ ವಾರದಲ್ಲಿ ರಾಣಿ ಬೆನ್ನೂರಲ್ಲಿ ನಾವಿದ್ದ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ಕೊಟ್ಟು ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದೇವೆ. ನಾನು, ಅಮ್ಮ, ಅಣ್ಣ ಮತ್ತು ನನ್ನ ತಮ್ಮ ಜೊತೆಗಿದ್ದಾರೆ. ಊರಲ್ಲಿ ಒಂದು ಬೇಕರಿ ಮತ್ತು ಸಾಧನಾ ಎನ್ನುವ ಬುಕ್‌ ಸ್ಟೋರ್‌ ಇತ್ತು. ಅವುಗಳನ್ನು ಇನ್ನೇನು ಇಲ್ಲಿ ಹೊಸದಾಗಿ ಆರಂಭಿಸಬೇಕು ಎನ್ನುವ ಹೊತ್ತಲ್ಲಿ ಲಾಕ್ಡೌನ್ ಘೋಷಿಸಲಾಯಿತು. ಒಂದು ರೀತಿ ಅತಂತ್ರ ಸ್ಥಿತಿ ನಮ್ಮದು. ಸರ್ಕಾರಕ್ಕೆ ಎಂಟು ತಿಂಗಳ ಕಾಲಾವಧಿ ಇದ್ದರೂ ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿಲ್ಲ. ಎಲ್ಲದಕ್ಕೂ ನಾವೇ ಹೋರಾಡಬೇಕು ಎನ್ನುವುದಾದರೆ ಇವರನ್ನು ಚುನಾಯಿಸುವ, ಅವರಿಗೊಂದು ಹುದ್ದೆ ನೀಡುವ ಅಗತ್ಯ ಏನಿತ್ತು? ಇವರಿಗೆ ಲಾಕ್ಡೌನ್ ಬಿಟ್ಟರೆ ಬೇರೆ ಪರಿಹಾರ ಕ್ರಮಗಳೇ ಗೊತ್ತಿಲ್ಲ. ನಮ್ಮಿಂದ ತೆರಿಗೆ, ಜಿಎಸ್‌ಟಿ ಸಹಿತ ನಮ್ಮ ಸಂಬಳದಲ್ಲಿಯೂ ಕಡಿತ ಮಾಡಿ ಹಿಡಿದುಕೊಳ್ಳುವ ಸರ್ಕಾರಕ್ಕೆ ಜನತೆಗೆ ಅಗತ್ಯದ ಮೂಲಭೂತ ಸೌಕರ್ಯ ನೀಡಲು ಕಷ್ಟವಾಗುತ್ತಿದೆ ಅಂದರೆ ನಂಬಲು ಕಷ್ಟವಾಗುತ್ತಿದೆ.

`ಡಾನ್ಸ್ ಕರ್ನಾಟಕ ಡಾನ್ಸ್‌'ನ ವರುಣ್‌ ನೃತ್ಯ ವಿಶೇಷ

ನಿಮ್ಮ ಚಿತ್ರಗಳಿಗೆ ಪ್ರಶಸ್ತಿ ಖಾಯಂ ಎನ್ನುವುದು ಮತ್ತೊಮ್ಮೆ ಸಾಬೀತಾದಂತಿದೆ?
ಹಾಗೇನಿಲ್ಲ, ಬಹುಶಃ ನೀವು `ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರಕ್ಕೆ ಪ್ರಶಸ್ತಿ ಬಂದಿರುವುದಕ್ಕೆ ಹೇಳುತ್ತಿರಬೇಕು. ವಿಶೇಷ ಏನೆಂದರೆ ಆ ಚಿತ್ರಕ್ಕೆ ಇದುವರೆಗೆ ಎಂಬತ್ತಕ್ಕೂ ಅಧಿಕ ಪ್ರಶಸ್ತಿಗಳು ಬಂದಿವೆ. ಚಿತ್ರದ ಬರಹಗಾರರಿಂದ ಹಿಡಿದು ನಾಯಕನಿಗೆ, ನಿರ್ದೇಶಕರಿಗೆ ಹೀಗೆ ಎಲ್ಲ ವಿಭಾಗದಲ್ಲಿಯೂ ಬಂದಿದೆ. ನನ್ನ ತಾಯಿಯ ಪಾತ್ರಕ್ಕೂ ಪ್ರಶಸ್ತಿ ಬಂದಿದೆ. ಆದರೆ ನನಗೆ ಮಾತ್ರ ಇನ್ನೂ ಯಾವುದೇ ಪ್ರಶಸ್ತಿ ಬಂದಿಲ್ಲ. ಸಾಮಾನ್ಯವಾಗಿ ನಾನು ಕೂಡ ಪ್ರಶಸ್ತಿಯನ್ನು ನಿರೀಕ್ಷೆ ಮಾಡುವುದಿಲ್ಲ. ಆದರೆ ಚಿತ್ರಕ್ಕೆ ಇಷ್ಟೊಂದು ಪ್ರಶಸ್ತಿಗಳು ಬರುವಾಗ ಸಹಜವಾಗಿ ನಿರೀಕ್ಷಿಸುವಂತಾಗಿದೆ. ಚಿತ್ರ ಕಳೆದ ಏಪ್ರಿಲ್‌ನಲ್ಲೇ ಪೂರ್ತಿಯಾಗಿತ್ತು. ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಆದರೆ ತೆರೆಗೆ ಬಂದಾಗ ನನ್ನ ಪಾತ್ರಕ್ಕೆ ಪ್ರೇಕ್ಷಕರಿಂದ ಪ್ರಶಂಸೆ ಸಿಗುವುದೆಂಬ ಭರವಸೆ ನನಗಿದೆ. 

click me!