
ಆರ್. ಕೇಶವಮೂರ್ತಿ
ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಹೇಗನಿಸುತ್ತಿದೆ?
ಭಯದ ಜತೆಗೆ ಈ ಚಿತ್ರವನ್ನು ಜನ ನೋಡುತ್ತಾರೆಂಬ ನಂಬಿಕೆಯೂ ಇದೆ. ಯಾಕೆಂದರೆ ನಾವು ಮಾಡಿಕೊಂಡಿರುವ ಕತೆ ಆ ರೀತಿ ಇದೆ. ಡಿ.3ಕ್ಕೆ ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಮೂಡಿ ಬರಲಿದೆ.
ಎರಡನೇ ಪ್ರಯತ್ನವೇ ಇಷ್ಟುದೊಡ್ಡ ಚಿತ್ರ ಆಗುತ್ತದೆ ಎಂದುಕೊಂಡಿದ್ರಾ?
ಒಂದು ಪ್ರಯತ್ನ ಅಂತ ಶುರು ಮಾಡಿದೆ. ಆದರೆ, ಯಾವಾಗ ನಾನು ಹೇಳಿದ ಕತೆ ಶ್ರೀಮುರಳಿ ಹಾಗೂ ನಿರ್ಮಾಪಕ ಉಮಾಪತಿ ಒಪ್ಪಿಕೊಂಡರೋ ಆಗಲೇ ಇದೊಂದು ದೊಡ್ಡ ಸಿನಿಮಾ ಆಗುತ್ತದೆ ಎನ್ನುವ ನಿರೀಕ್ಷೆ ಇತ್ತು.
ನೀವು ಶ್ರೀಮುರಳಿ ಅವರನ್ನು ಭೇಟಿ ಮಾಡಿದಾಗ ಸಿಕ್ಕ ಮೊದಲ ಪ್ರತಿಕ್ರಿಯೆ ಏನು?
‘ಮಹೇಶ್, ನಾನು ನಿಮ್ಮ ಮೊದಲ ಸಿನಿಮಾ ನೋಡಿಲ್ಲ. ಆದರೆ, ನೀವು ಮಾಡಿಕೊಂಡಿರುವ ಕತೆ ಮತ್ತು ನಿಮ್ಮ ಎನರ್ಜಿ ನೋಡಿ ನಿಮ್ಮ ಜತೆ ಕೆಲಸ ಮಾಡಬೇಕು ಅನಿಸುತ್ತಿದೆ. ಖಂಡಿತಾ ಜತೆಯಾಗಿ ಸಿನಿಮಾ ಮಾಡೋಣ.’ ಅವರು ಮೊದಲ ದಿನವೇ ಹಾಗೆ ಹೇಳಿದ್ದರಿಂದಲೇ ಸಿನಿಮಾ ಮುಗಿಯುವ ತನಕ ಅದೇ ಉತ್ಸಾಹ ನನ್ನ ಜತೆಗೆ ಕ್ಯಾರಿ ಆಯಿತು.
ಕತೆ ಮೊದಲು ಹೇಳಿದ್ದು ಪ್ರಶಾಂತ್ ನೀಲ್ ಅವರಿಗಾ, ಶ್ರೀಮುರಳಿ ಅವರಿಗಾ?
ನಟ ಶ್ರೀಮುರಳಿ ಅವರಿಗೆ. ಅವರು ಕತೆ ಕೇಳಿದ ಮೇಲೆಯೇ ನಾನು ಪ್ರಶಾಂತ್ ನೀಲ್ ಅವರಿಗೆ ಪೂರ್ತಿ ರೀಡಿಂಗ್ ಕೊಟ್ಟಿದ್ದು.
ಮದಗಜ ಚಿತ್ರದ ಕತೆಯಲ್ಲಿ ಪ್ರಶಾಂತ್ ನೀಲ್ ಅವರ ಪಾತ್ರ ಎಷ್ಟಿದೆ?
ಪ್ರಶಾಂತ್ ನೀಲ್ ಅವರು ನನ್ನ ಕತೆ ಕೇಳಿ ಏನೇ ಸಲಹೆ- ಸೂಚನೆಗಳನ್ನು ಕೊಡುತ್ತಿದ್ದರೂ ‘ನಿರ್ದೇಶಕರೇ ಇದು ನಿಮಗೆ ಓಕೆ ಅನಿಸಿದರೆ ಇಟ್ಟಿಕೊಳ್ಳಿ. ನಾನು ಹೇಳಿದೆ ಅಂದ ಮಾತ್ರಕ್ಕೆ ಬದಲಾಯಿಸಿಕೊಳ್ಳಬೇಡಿ’ ಎನ್ನುತ್ತಿದ್ದರು. ನಿರಂತರವಾಗಿ ಹೀಗೆ ಅವರು ನನಗೆ ಬೆನ್ನೆಲುಬಾಗಿ ನಿಂತಿದ್ದರು.
ಆರಂಭದಲ್ಲಿ ಬೇರೆ ಕತೆ ಇತ್ತು, ಅದು ಮುಂದೆ ಬದಲಾಯಿತು ಅನ್ನೋ ಮಾತು ಇದೆಯಲ್ಲ?
ಒಂದು ಪ್ಲಾಟ್ ಪಾಯಿಂಟ್ ಅಂತ ಮಾಡಿಕೊಳ್ಳುತ್ತೇವೆ. ಅದು ಬರೆಯುತ್ತಾ ಹೋದಾಗ ಒಂದಿಷ್ಟುಬದಲಾವಣೆಗಳು ಆಗುತ್ತವೆ. ಏನೇ ಬದಲಾದರೂ ಆತ್ಮ ಹಾಗೆ ಇರುತ್ತದೆ. ಕತೆ ಅನ್ನೋದು ದೇವಸ್ಥಾನದ ಗರ್ಭಗುಡಿ ಇದ್ದಂತೆ. ಉಳಿದಿದ್ದು ಕಟ್ಟಡ, ಗೋಪುರ ಹಾಗೂ ಸಿಂಗಾರ.
‘ಮದಗಜ’ ಚಿತ್ರದ ಆತ್ಮ ಯಾವುದು?
ತಾಯಿ ಸೆಂಟಿಮೆಂಟ್. ಅಮ್ಮನ ಭಾವನೆಗಳು ಮೇನ್ ಫುಡ್. ಉಳಿದ್ದು, ಸೈಡ್ಸ್. ಹೀಗಾಗಿಯೇ ಅಮ್ಮನ ಮೇಲೆ ಮೂಡಿ ಬಂದಿರುವ ಹಾಡು ನಮ್ಮ ಚಿತ್ರದ ಸೋಲ್ ಅಂತ ಹೇಳುತ್ತೇನೆ. ನಾಯಕ ಪ್ರಧಾನ ಮಾಸ್ ಮತ್ತು ತಾಯಿ ಕತೆ ಮುಖಾಮುಖಿ ಆಗುವ ಸಿನಿಮಾ ಇದು.
ವಾಣಿಜ್ಯ ಪ್ರಧಾನ ಚಿತ್ರಗಳಲ್ಲಿ ಇಂಥ ಸಂದೇಶಗಳನ್ನು ಹೇಳಲು ಸಾಧ್ಯವಿಲ್ಲ ಅಂತಾರಲ್ಲ?
ಹಾಗೇನೂ ಇಲ್ಲ. ನಾವು ಹೇಗೆ ಪ್ರಸೆಂಟ್ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ‘ಅಯೋಗ್ಯ’ ಸಿನಿಮಾ ಮೂಲಕ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಶೌಚಾಲಯದ ಸಮಸ್ಯೆಯನ್ನು ಹೇಳಿದೆ. ಇಲ್ಲಿ ತಾಯಿ ಪ್ರೀತಿಯನ್ನು ದೊಡ್ಡ ಸ್ಕೇಲ್‌ನಲ್ಲಿ ಹೇಳಿದ್ದೇನೆ.
ಯಾರು ಇಲ್ಲಿ ಮದಗಜ?
ನಮ್ಮ ಚಿತ್ರದಲ್ಲಿ ಇಬ್ಬರು ಮದಗಜಗಳು ಇದ್ದಾರೆ. ಒಬ್ಬರು ತೆರೆ ಮೇಲೆ ಕಾಣಿಸಿಕೊಳ್ಳುವ ಶ್ರೀಮುರಳಿ, ತೆರೆ ಆಚೆಗೆ ಇರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೌಡ.
ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಯಾವಾಗ?
ಆರಂಭದಲ್ಲಿ ಇದೊಂದು ಕನ್ನಡ ಸಿನಿಮಾ ಅಂತಲೇ ಶುರು ಮಾಡಿದ್ದು. ವಾರಾಣಸಿಯಲ್ಲಿ ಶೂಟಿಂಗ್ ಮಾಡಿಕೊಂಡು ಬಂದು ಅದರ ಮೇಕಿಂಗ್ ದೃಶ್ಯಗಳನ್ನು ನಿರ್ಮಾಪಕರಿಗೆ ತೋರಿಸಿದ ಮೇಲೆ ಅವರು ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕು ಅಂತ ಹೇಳಿದರು. ಅವರೇ ಹೀರೋ ಜತೆ ಮಾತನಾಡಿದರು. ಹಾಗೆ ಸಿನಿಮಾ ಮೇಕಿಂಗ್ ನೋಡಿದ ಮೇಲೆ ಸಿನಿಮಾ ಸ್ಕೇಲ್ ದೊಡ್ಡದಾಯಿತು. ಕನ್ನಡದ ಜತೆಗೆ ಐದು ಭಾಷೆಗಳಲ್ಲಿ ಸಿನಿಮಾ ಬರುತ್ತಿದೆ.
ಈ ಚಿತ್ರದಲ್ಲಿ ನಿಮಗೆ ಎದುರಾದ ಸವಾಲು ಏನು?
ಹೀರೋ ಹಿಂದಿನ ಚಿತ್ರಗಳಿಗಿಂತ ನಾನು ನನ್ನ ಚಿತ್ರದ ಮೂಲಕ ಹೇಗೆ ಭಿನ್ನವಾಗಿ ತೋರಿಸಬೇಕು ಎನ್ನುವುದು ಪ್ರತಿ ನಿರ್ದೇಶಕನಿಗೂ ಎದುರಾಗುವ ಸವಾಲು. ಅದನ್ನು ಈ ಚಿತ್ರದಲ್ಲಿ ನಾನು ಎದುರಿಸಿದ್ದೇನೆ.
ಮದಗಜ ಎನ್ನುವ ಟೈಟಲ್‌ನಲ್ಲಿ ಸಿನಿಮಾ ಮಾಡುತ್ತೇನೆ ಎಂದಾಗ ನಿಮ್ಮ ಕಿವಿಗೆ ಬಿದ್ದ ಮೊದಲ ಪ್ರತಿಕ್ರಿಯೆ ಏನು?
ಇವನು ಮಾಡ್ತಾನಾ ಎನ್ನುವ ವ್ಯಂಗ್ಯ ಮಾತುಗಳು. ಮಾಡ್ತಾ ಇದ್ದಾನಂತೆ ಅಂತ ನಂತರ ಬಂದ ಮಾತುಗಳು. ಅಯ್ಯೋ ಮಾಡೇ ಬಿಟ್ಟೆನೋಡ್ರಿ ಅನ್ನುವ ಉದ್ಗಾರಗಳು. ಈ ಮಾತುಗಳನ್ನು ಕೇಳಿಸಿಕೊಂಡೇ ನನ್ನ ಕೆಲಸವನ್ನು ನಾನು ಅಚ್ಚುಕಟ್ಟಾಗಿ ಮಾಡಿದ್ದೇನೆ. ಉಮಾಪತಿ ಅವರಂತಹ ನಿರ್ಮಾಪಕರು, ಶ್ರೀಮುರಳಿ ಅವರಂತಹ ಹೀರೋಗಳು ಜತೆ ಸೇರಿದರೆ ಯಾರು ಬೇಕಾದರೂ ನಿರ್ದೇಶಕರಾಗಬಹುದು.
ಬಿಡುಗಡೆಗೂ ಮೊದಲೇ ಈ ಸಿನಿಮಾ ತುಂಬಿದ ಭರವಸೆಗಳೇನು?
ಡಬ್ಬಿಂಗ್ ರೈಟ್ಸ್, ಟೀವಿ ರೈಟ್ಸ್, ಆಡಿಯೋ ಹಕ್ಕು ಹಾಗೂ ಓಟಿಟಿಗೆ ಈ ಸಿನಿಮಾ ಸೇಲ್ ಆಗಿದೆ. ಇದು ನಮ್ಮ ‘ಮದಗಜ’ ಚಿತ್ರಕ್ಕೆ ಸಿಕ್ಕಿರುವ ಮೊದಲ ಗೆಲುವು ಮತ್ತು ಭರವಸೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.