Interview with Small screen Actress: ಮನಸೆಳೆವ ಪೋಷಕ ನಟಿ ಮಧುಮತಿ

By Suvarna NewsFirst Published Nov 24, 2021, 5:00 AM IST
Highlights

ಮಧುಮತಿ ಎನ್ನುವ ಇವರ ನಿಜವಾದ ಹೆಸರಿಗಿಂತ ಕನ್ನಡತಿ ಎನ್ನುವ ಧಾರಾವಾಹಿಯಲ್ಲಿ ಕಂಡೇ ಇವರ ಪರಿಚಯ. ಅಂಥದೊಂದು ಖ್ಯಾತಿ ದೊರಕಿಸಿಕೊಟ್ಟಿದ್ದು ಧಾರಾವಾಹಿಯಲ್ಲಿ ಬಂದ ಇವರದೇ ಪಾತ್ರದ ಟ್ರ್ಯಾಕ್. ಇಂದು ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಮಧುಮತಿಯವರ ಮಾತುಗಳು ಇಲ್ಲಿವೆ.
 

ಕನ್ನಡತಿ ಧಾರಾವಾಹಿಯಲ್ಲಿ  ಗಂಭೀರವಾದ ಕೌಟುಂಬಿಕ ಪಾತ್ರಕ್ಕೆ ಜೀವ ನೀಡಿದವರು ಮಧುಮತಿ. ಆದರೆ 'ಮೈನಸ್ 18 ಪ್ಲಸ್' ಎನ್ನುವ ವೆಬ್ ಸೀರೀಸ್ ನಲ್ಲಿ ಇವರ ನಟನೆ ಕಂಡು ಬೆಚ್ಚಿ ಬಿದ್ದವರೂ ಇದ್ದಾರೆ. ಎರಡು ಕೂಡ ವಿಭಿನ್ನ ಅನುಭವ. ಎರಡನ್ನು ಕೂಡ ಅರಿತರೇನೇ ನಟಿಯಾಗಿ ನಾನು ಪರಿಪೂರ್ಣತೆ ಕಾಣಲು ಸಾಧ್ಯ  ಎನ್ನುವ ಮಧುಮತಿ ಜೊತೆಗಿನ ಮಾತುಕತೆ ಇದು. 

- ಶಶಿಕರ ಪಾತೂರು

ನೀವೊಬ್ಬರು ಕಲಾವಿದೆಯಾಗಿ ರೂಪುಗೊಂಡಿದ್ದು ಹೇಗೆ?
ನನ್ನ ತಂದೆ ಒಬ್ಬರು ಪುಟ್ಟ ಕಲಾವಿದರಾಗಿದ್ದರಂತೆ. ಹಾಗಾಗಿ ಈಗ ಎಲ್ಲರೂ ತಂದೆಯಿಂದಲೇ ಬಂದಿರಬಹುದು ಎನ್ನುತ್ತಾರೆ. ಆದರೆ ತಾಯಿ ಗರ್ಭದಲ್ಲಿರುವಾಗಲೇ ನಾನು ಅವರನ್ನು ಕಳೆದುಕೊಂಡ ಕಾರಣ ನನಗೆ ಅವರ ನೆನಪುಗಳು ಇಲ್ಲ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಅವರು ಅಪಘಾತದಲ್ಲಿ ತೀರಿಕೊಂಡಿದ್ದರು. ನನಗೆ ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು. ಬೆಂಗಳೂರಿನ ವಿಜಯನಗರದಲ್ಲಿರುವ 'ಬಿಂಬ' ನಾಟಕ ತಂಡದಲ್ಲಿ ತರಬೇತಿ ಪಡೆದು ಐದಾರು ವರ್ಷ ಪಾತ್ರ ಮಾಡಿದ್ದೇನೆ. 'ಶತಮರ್ಟಕ' ನಾಟಕದಲ್ಲಿ ನಾನು ಮಾಡಿದ ಹಳ್ಳಿಯ ಕೆಲಸದವಳ ಪಾತ್ರ ತುಂಬ ಮೆಚ್ಚುಗೆಗೊಳಗಾಗಿತ್ತು. ಬೀದಿ ನಾಟಕಗಳಲ್ಲಿ ನಟಿಸಿದ ಅನುಭವವೂ ಇದೆ. ಇದೀಗ ಧಾರಾವಾಹಿಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದೇನೆ.

ಬಣ್ಣದ ಲೋಕದ ಪ್ರವೇಶಕ್ಕೆ ಮನೆಯಿಂದ ಸಿಕ್ಕ ಪ್ರೋತ್ಸಾಹ ಹೇಗಿತ್ತು?
ನಾನು ಎಲ್‌ ಕೆಜಿ ದಿನಗಳಿಂದಲೂ ನಟಿಸುವ ಆಸೆ ಹೊಂದಿದ್ದೆ. ಬಾಲ್ಯದಲ್ಲಿ ಚೆನ್ನಾಗಿಯೇ ಪ್ರೋತ್ಸಾಹ ನೀಡಿದ್ದರು. ʻಶಾಂತಿಕ್ರಾಂತಿʼ ಸಿನಿಮಾದ ಚಿತ್ರೀಕರಣ ಕುದುರೆಮುಖದಲ್ಲಿ ನಡೆಯುತ್ತಿದ್ದಾಗ ನಮ್ಮ ಮನೆ ಅಲ್ಲಿಯೇ ಇತ್ತು. ಅಲ್ಲಿ ನಡೆದ ಹಾಡಿನ ಚಿತ್ರೀಕರಣದಲ್ಲಿ ರಮೇಶ್‌ ಅರವಿಂದ್‌ ಖುಷ್ಬು ಪಾಲ್ಗೊಂಡಿದ್ದರು.  ನಾನು ಒಂದು ವಾರ ತದೇಕವಾಗಿ ನೋಡಿ ಬಳಿಕ ಹೋಗಿ ಅವಕಾಶ ಕೇಳಿದಾಗ ಮಕ್ಕಳು ಮೊದಲು ಓದಬೇಕು ಎಂದು ರಮೇಶ್‌ ಅವರು ಹೇಳಿದ್ದರು! ಕಾಲೇಜ್‌ ದಿನಗಳಲ್ಲಿ ʻಹೃದಯದಿಂದʼ ಎನ್ನುವ ಉದಯ ವಾಹಿನಿಯ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದೆ. ಆದರೆ ಅದನ್ನು ಮುಂದುವರಿಸಲು ಮನೆಯಲ್ಲಿ ಪ್ರೋತ್ಸಾಹ ದೊರಕಲಿಲ್ಲ. ಬೇಗ ಗಂಡು  ಹುಡುಕಿ ಮದುವೆ ಮಾಡಿ ಕಳಿಸಿಕೊಟ್ಟರು.

ಉದಯ ಟಿ.ವಿಯಲ್ಲಿ ಶುರುವಾಗಲಿದೆ ಹೊಸ ಧಾರಾವಾಹಿ ʻಅಣ್ಣ ತಂಗಿʼ

ಮದುವೆ ಬಳಿಕ ಗಂಡನಿಗೆ ಹೇಳಿ ಧಾರಾವಾಹಿಗೆ ಕಾಲಿಟ್ಟಿರಾ?
ಅಷ್ಟು ವೇಗದಲ್ಲೇನೂ ಅದು ನಡೆಯಲಿಲ್ಲ. ಹತ್ತು ವರ್ಷಗಳಿಂದ ಮಾಂಟೆಸರಿ ವಿದ್ಯಾರ್ಥಿಗಳಿಗೆ  ಶಿಕ್ಷಕಿಯಾಗಿದ್ದೆ. ಹಾಗೆ ಸ್ಕೇಟರ್‌ ಕೂಡ ಹೌದು. ಟೀಚಿಂಗ್‌ ಫೀಲ್ಡಲ್ಲಿ ಸೆಟಲಾಗಿದ್ದ ನಾನು ಮತ್ತೆ ನಟಿಸುತ್ತೇನೆ ಎಂದು ಅವರು ಅಂದುಕೊಂಡಿರಲಿಲ್ಲ. ಯಾವುದೋ ಕಾರಣಕ್ಕೆ ನಾನು ಆ ಕೆಲಸಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಆದರೆ ಆನಂತರ ಕೆಲಸ ಹುಡುಕಿಕೊಂಡೆ. ಧಾರಾವಾಹಿಗಳಲ್ಲಿ ಪ್ರಯತ್ನ ಮಾಡುತ್ತೇನೆ ಎಂದೆ. ಅವಕಾಶ ಸಿಗದಿದ್ದರೆ ವಾಪಾಸು ಟೀಚಿಂಗ್‌ ಕ್ಷೇತ್ರಕ್ಕೆ ಮರಳಬೇಕು ಅಂತಾನೇ ಇದ್ದೆ. ಎಲ್ಲೋ ಜಾಹೀರಾತುಗಳು, ಡಾಕ್ಯುಮೆಂಟರಿಯಲ್ಲಿ ಮಾತ್ರ ನಟಿಸುತ್ತಿದ್ದ ನನಗೆ ಸುವರ್ಣ ವಾಹಿನಿಯ ʻಜೀವ ಹೂವಾಗಿದೆʼ ಮೊದಲ ಧಾರಾವಾಹಿವಾಗಿ ದೊರಕಿತ್ತು. ಬಳಿಕ ಉದಯದಲ್ಲಿ ʻಸುಂದರಿʼ, ಕಲರ್ಸ್‌ ವಾಹಿನಿಯಲ್ಲಿ ʻಕನ್ನಡತಿʼ ಮಾಡಿದೆ. ಈಗ ಹೊಸದಾಗಿ ʻದೊರೆಸಾನಿʼ ಎನ್ನುವ ಧಾರಾವಾಹಿ ಕೂಡ ಶುರುವಾಗುವುದಿದೆ. ಅದೇ ರೀತಿ ʻಮೈನಸ್‌ 18ʼ ಎನ್ನುವ ವೆಬ್‌ ಸೀರೀಸ್‌ ಮಾಡಿದ್ದೇನೆ. 

ʻದೊರೆಸಾನಿʼ ಮೂಲಕ ಕಿರುತೆರೆಗೆ ರೂಪಿಕಾ

ಆದರೆ 'ಕನ್ನಡತಿ' ಬಳಿಕ ಇಂಥದೊಂದು ವೆಬ್‌ ಸೀರೀಸ್‌ ಮಾಡಿದಾಗ ಪ್ರತಿಕ್ರಿಯೆ ಹೇಗಿತ್ತು?
ಎರಡು ಕೂಡ ವಿರುದ್ಧ ರೀತಿಯ ಪಾತ್ರಗಳಾದರೂ ನಟಿಯಾಗಿ ಎರಡು ಕೂಡ ನನಗೆ ಹೆಸರು ತಂದುಕೊಟ್ಟಿವೆ.  ಖಂಡಿತವಾಗಿ ಇದುವರೆಗೆ ಮಾಡಿರುವುದರಲ್ಲಿ ʻಕನ್ನಡತಿʼ ನನಗೆ ತುಂಬ ಕ್ಲೋಸ್ ಟು ಹಾರ್ಟ್. ಅದರ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದು ತುಂಬ ಖುಷಿಯಾಯಿತು. ಇತರ ಧಾರಾವಾಹಿಗಳಿಗಿಂತ ಬೇರೆಯೇ ಸ್ಥಾನ ಪಡೆಯುವ ಧಾರಾವಾಹಿ ಅದು. ಅದೇ ರೀತಿ ಮೈನಸ್ 18 ಪ್ಲಸ್ ಕೂಡ ನನ್ನ ಹಾರ್ಟ್ ಗೆ ಕ್ಲೋಸ್ ಆಗಿರುವಂಥದ್ದು. ಅದು ಯಾವ ರೀತಿಯ ಪಾತ್ರ ಎಂದು ನನಗೆ ಮೊದಲೇ ಗೊತ್ತಿತ್ತು. ಜೊತೆಗೆ ನನಗೆ ಹಾಸ್ಯ ಭರಿತ ಪಾತ್ರ ಮಾಡಬೇಕು ಎನ್ನುವ ಆಕಾಂಕ್ಷೆಯೂ ಇತ್ತು. ರಿಹರ್ಸಲ್ ಸಂದರ್ಭದಲ್ಲೇ ವಿಡಿಯೋ ಮಾಡಿಕೊಂಡು ಬಂದು ಮನೆಗೆ ತೋರಿಸಿದ್ದೆ. ಅದಕ್ಕೆ ಅವರು ಪರ್ವಾಗಿಲ್ಲ ನಟನೆ ತಾನೇ ಜನ ಅರ್ಥ ಮಾಡ್ಕೋತಾರೆ ಎಂದರು. ಈಗ ಎರಡು ವಿಭಾಗದ ಪ್ರೇಕ್ಷಕರು ಕೂಡ ನನ್ನನ್ನು ಇಷ್ಟಪಡುವಂತಾಗಿದೆ.


ನಿಮ್ಮ ಕುಟುಂಬದ ಬಗ್ಗೆ ಹೇಳಿ
ನನ್ನ ಪತಿ ಸಂಜಯ್ ಕುಮಾರ್ ಖಾಸಗಿ ಬ್ಯಾಂಕ್ ಉದ್ಯೋಗಿ. ಮಗಳು ಕೃತಿ ಬಿಎ ವಿದ್ಯಾರ್ಥಿನಿ. ಮಗ ಕೌಸ್ತುಭ್ ಒಂಬತ್ತನೇ ತರಗತಿ ವಿದ್ಯಾರ್ಥಿ. ನಮಗೆ ನಾಲ್ಕು ಮಂದಿಗೂ ರಂಗಭೂಮಿಯಲ್ಲಿ ಅಭಿನಯಿಸಿರುವ ಅನುಭವ ಇದೆ. ಹಾಗಾಗಿ ಬಣ್ಣದ ಲೋಕದ ವಾತಾವರಣಕ್ಕೆ ಒಗ್ಗಿಕೊಂಡ ಕುಟುಂಬ ನಮ್ಮದು.ಹೆಚ್ಚು ಹೆಚ್ಚು ಕೆಲಸ ಮಾಡಬೇಕು, ಸಿನಿಮಾದಲ್ಲಿ ನಟಿಸಬೇಕು ಎನ್ನುವುದಷ್ಟೇ ಸದ್ಯಕ್ಕೆ ನನ್ನ ಧ್ಯೇಯ.
 

click me!