ಆ ಸಿನಿಮಾ ಶೂಟಿಂಗ್‌ ಅಷ್ಟೂ ದಿನ ಅತ್ತುಕೊಂಡೇ ಹೋಗಿದ್ದೆ ಅಷ್ಟು ನೋಯಿಸಿದ್ದಾರೆ: ಸಂಯುಕ್ತ ಹೆಗ್ಡೆ

Published : Mar 01, 2024, 09:20 AM IST
 ಆ ಸಿನಿಮಾ ಶೂಟಿಂಗ್‌ ಅಷ್ಟೂ ದಿನ ಅತ್ತುಕೊಂಡೇ ಹೋಗಿದ್ದೆ ಅಷ್ಟು ನೋಯಿಸಿದ್ದಾರೆ: ಸಂಯುಕ್ತ ಹೆಗ್ಡೆ

ಸಾರಾಂಶ

ಅಗ್ನಿಶ್ರೀಧರ್ ಕಥೆ ಬರೆದು ನಟಿಸಿರುವ,ಸಂಯುಕ್ತಾ ಹೆಗ್ಡೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಕ್ರೀಂ. ಅಭಿಷೇಕ್ ಬಸಂತ್ ಚಿತ್ರದ ನಿರ್ದೇಶಕರು, ಡಿಕೆ ದೇವೇಂದ್ರ ನಿರ್ಮಾಪಕರು. ಸಿನಿಮಾ ಬಗ್ಗೆ, ತನ್ನ ವೃತ್ತಿ ನುಡಿಗಳನ್ನಾಡಿದ್ದಾರೆ. 

ಪ್ರಿಯಾ ಕೆರ್ವಾಶೆ

ಕ್ರೀಂ ಅನ್ನೋದು ಮಹಾಕಾಳಿಯ ಬೀಜಮಂತ್ರ ಅಂತಾರೆ. ಅದು ಸಿನಿಮಾಗೆ ಹೇಗೆ ರಿಲೇಟ್‌ ಆಗುತ್ತೆ?

ನಮ್ಮಲ್ಲಿ ದೈವ ಶಕ್ತಿ ಮತ್ತು ರಾಕ್ಷಸ ಶಕ್ತಿಗಳಿರುತ್ತವೆ. ಮಹಾಕಾಳಿ ಮಹಾ ಶಕ್ತಿಶಾಲಿ ಮಾತೃ ದೇವತೆ. ಸಿನಿಮಾದಲ್ಲಿ ಅಸುರ ಶಕ್ತಿ ಹಾಗೂ ಸ್ತ್ರೀ ಶಕ್ತಿಯ ನಡುವಿನ ಸಂಘರ್ಷ, ಹೆಣ್ಣಿನ ಮಹಾನ್‌ ಶಕ್ತಿಯ ಪ್ರಕಟರೂಪ ಇರುವ ಕಾರಣ ಚಿತ್ರಕ್ಕೆ ಈ ಶೀರ್ಷಿಕೆ ಇಡಲಾಗಿದೆ.

ಚಿತ್ರದಲ್ಲಿ ನಿಮ್ಮದು ಅಸಾಧಾರಣ ಅನಿಸುವ ಪಾತ್ರ. ಇದನ್ನು ನಿಭಾಯಿಸೋದಕ್ಕೆ ಗಟ್ಸ್ ಬೇಕು ಅಂತಾರೆ, ನಿಜನಾ?

ನನಗೆ ಆ ಗಟ್ಸ್ ಇದೆ ಅಂದುಕೊಳ್ಳುತ್ತೇನೆ. ಈ ಪಾತ್ರ ಬಹಳ ಚಾಲೆಂಜಿಂಗ್ ಆಗಿತ್ತು. ಆ್ಯಕ್ಷನ್‌ ಪ್ರಧಾನವಾಗಿತ್ತು. ಬಹಳ ಎನರ್ಜಿ ಬೇಡುತ್ತಿತ್ತು. ಒಂದು ಹಂತದ ಶೂಟಿಂಗ್‌ನಲ್ಲಿ ನಾನು ಮೂಳೆ ಮುರಿತಕ್ಕೆ ತುತ್ತಾದೆ. ಡಾಕ್ಟರ್‌ 18 ತಿಂಗಳು ರೆಸ್ಟ್ ಬೇಕೇಬೇಕು ಅಂತ ಹೇಳಿದ್ದರು. ಆದರೆ ನಾನು ಐದೂವರೆ ತಿಂಗಳಿಗೇ ಶೂಟಿಂಗ್‌ಗೆ ಹಾಜರಾದೆ. ಏಕೆಂದರೆ ಇದು ನಾನು ಒಪ್ಪಿಕೊಂಡ ಪಾತ್ರ. ಕಂಪ್ಲೀಟ್ ಮಾಡಲೇಬೇಕಾದ ಹೊಣೆಗಾರಿಕೆ ನನ್ನ ಮೇಲಿತ್ತು.

18 ವರ್ಷ ಕ್ರಿಶ್ಚಿಯನ್ ಧರ್ಮ ಫಾಲೋ ಮಾಡಿದ್ದ ಸಂಯುಕ್ತಾ ಭಗವದ್ಗೀತೆ ಓದಿ ಬದಲಾದ್ರು!

ನಿಮ್ಮ ಬಗ್ಗೆ ಹಲವರು ನಿರ್ಮಾಪಕರ ಬಳಿ, ‘ಆ ಹುಡುಗಿ ಕಿರಿಕ್‌ ಮಾಡ್ತಾಳೆ’ ಅಂದಿದ್ದರಂತೆ?

ಅದೊಂದು ದೊಡ್ಡ ಕಥೆ. ‘ಕಾಲೇಜ್ ಕುಮಾರ್’ ಸಿನಿಮಾ ಮಾಡುವಾಗ ವ್ಯವಸ್ಥಿತವಾಗಿ ನನ್ನ ಮೇಲೆ ಷಡ್ಯಂತ್ರ ನಡೆಯಿತು. ಆ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಅಷ್ಟೂ ದಿನ ಅತ್ತುಕೊಂಡೇ ಹೋಗಿದ್ದೆ. ಅಷ್ಟು ನೋಯುವಂತೆ ನಡೆಸಿಕೊಂಡಿದ್ದರು. ಬಳಿಕ ಹೈಪ್‌ ಕ್ರಿಯೇಟ್‌ ಮಾಡಲಿಕ್ಕೆ ಅಂತ ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಾ ಬಂದರು. ನನ್ನ ಕೆರಿಯರ್‌ ಅನ್ನು ಸಂಪೂರ್ಣ ತುಳಿದುಹಾಕಲು ಮುಂದಾದರು.

ನಟಿ ಸಂಯುಕ್ತಾ ಹೆಗಡೆ ಕಾಲಿಗೆ ಗಾಯ; ಕ್ರೀಂ ಸಿನಿಮಾ ಶೂಟಿಂಗ್ ಸಮಯದಲ್ಲಿ ನಡೆದ ಅವಘಡ

ನಿಮ್ಮ ಮೇಲಿನ ಆರೋಪಗಳೆಲ್ಲ ಸುಳ್ಳಾ?

ಸಿನಿಮಾ ಕ್ಷೇತ್ರದಲ್ಲಿ ಆರಂಭದಿಂದಲೂ ಬಹಳ ಪ್ರೊಫೆಶನಲ್‌ ಆಗಿದ್ದವಳು ನಾನು. ಅದಕ್ಕೂ ಮೊದಲು ಕಾಲೇಜಿಗೆ ಹೋಗ್ತಿದ್ದಾಗಲೂ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಟ್ಟು ಮಧ್ಯರಾತ್ರಿ ಮನೆಗೆ ಬಂದು ವಾಪಾಸ್ ಬೆಳಗ್ಗೆ ಕಾಲೇಜಿಗೆ ಹೋಗ್ತಿದ್ದೆ. ನನ್ನ ಕೆಲಸದಲ್ಲಿ ಪ್ರಾಮಾಣಿಕತೆಗೆ ಹೆಸರಾಗಿದ್ದೆ. ಸಣ್ಣದೊಂದು ಕಳಂಕವೂ ಇರಲಿಲ್ಲ. ಆದರೆ ಕಾಲೇಜು ಕುಮಾರ ಚಿತ್ರದ ನಿರ್ಮಾಪಕರು ಪ್ರಭಾವಿ ವ್ಯಕ್ತಿಗಳು. ಅವರ ಸಿನಿಮಾ ಪ್ರಚಾರಕ್ಕೆ ನನ್ನನ್ನು ಬಲಿಪಶು ಮಾಡಿದರು. ಈ ಆರೋಪದಿಂದಾಗಿ ಗಾಡ್‌ ಫಾದರ್‌ಗಳ್ಯಾರೂ ಇಲ್ಲದ ನಾನು ಆಮೇಲೆ ಕನ್ನಡ ಸಿನಿಮಾದಲ್ಲಿ ನಟಿಸಲೂ ಸಾಧ್ಯವಾಗಲಿಲ್ಲ. ಈಗ ಮತ್ತೆ ನನ್ನ ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿದೆ.

ಅಗ್ನಿ ಶ್ರೀಧರ್‌ ಈ ಸಿನಿಮಾಗೆ ಕಥೆ ಬರೆಯುವ ಜೊತೆಗೆ ನಿಮ್ಮೊಂದಿಗೆ ನಟಿಸಿದ್ದಾರೆ?

ಅಗ್ನಿ ಶ್ರೀಧರ್‌ ಬಗ್ಗೆ ಮೊದಲು ಭಯವಿತ್ತು. ಆದರೆ ಅವರ ಜೊತೆ ಮಾತನಾಡಿದ ಮೇಲೆ, ಅವರು ಕಥೆ ಹೇಳುತ್ತಿದ್ದ ರೀತಿ ಕೇಳಿದ ಮೇಲೆ ಭಯ ಹೋಗಿ ಗೌರವ ಬಂತು. ಈ ಸಿನಿಮಾದಲ್ಲಿ ನನ್ನ ಹಾಗೂ ಅವರ ಕಾಂಬಿನೇಶನ್‌ ಸರ್ಪ್ರೈಸಿಂಗ್ ಆಗಿರಲಿದೆ. ಅವರನ್ನು ನಾನು ಅವರ ಮೊಮ್ಮಕ್ಕಳು ಕರೆಯೋ ರೀತಿಯಲ್ಲೇ ಕರೀತೀನಿ. ಅಂಥಾ ಅನುಭವಿ, ಮೇಧಾವಿ ಆಗಿದ್ದರೂ ಚಿಕ್ಕ ಮಕ್ಕಳ ಮಾತನ್ನೂ ಆಸ್ಥೆಯಿಂದ ಕೇಳುತ್ತಾರೆ. ಅವರು ನನ್ನ ಪಾಲಿಗೆ ಅಚ್ಚರಿ.

‘ಸಂಯುಕ್ತಾ ತುಂಬಾ ಕಿರಿಕ್ಕು, ಕೈಕೊಟ್ರೆ ಏನ್ ಕತೆ ಅಂತ ಜನ ಹೆದರಿಸಿದ್ರು’

ಪಾತ್ರ ನಿರ್ವಹಣೆ ಬಗ್ಗೆ ತೃಪ್ತಿ ಇದೆಯಾ?

ಖಂಡಿತಾ, ಈ ಪಾತ್ರದ ಬಗ್ಗೆ, ಈ ಟೀಮ್‌ನ ಬಗ್ಗೆ ತೃಪ್ತಿ ಇದೆ. ಬರೀ ಸಿನಿಮಾ ಕೆರಿಯರ್‌ ಅಷ್ಟೇ ಅಲ್ಲ, ನನ್ನ ಬದುಕಲ್ಲೂ ಇದರಿಂದ ಬದಲಾವಣೆ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು