
* ಸ್ಪಾರ್ಕ್ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?
ಕ್ಯಾರೆಕ್ಟರ್ ಅಂತ ಬಂದಾಗ ನಾನು ಇಲ್ಲಿ ಪೊಲೀಸ್ ಪಾತ್ರಧಾರಿ. ಈ ರೀತಿಯ ಪಾತ್ರ ಮಾಡಬೇಕೆಂದು ತುಂಬಾ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಅದು ಈ ಚಿತ್ರದಲ್ಲಿ ಈಡೇರಿದೆ.
* ಆದರೆ, ಪೊಲೀಸ್ ಪಾತ್ರ ಮಾಡಿದ್ದೀರಲ್ಲ?
ಪೊಲೀಸ್ ಪಾತ್ರದಲ್ಲಿರುವ ಪ್ರತಿನಾಯಕ ನಾನು. ಆಂಟಗನಿಸ್ಟ್ ಪಾತ್ರವನ್ನು ನಾನು ಇದುವರೆಗೂ ಮಾಡಿಲ್ಲ. ತೆರೆ ಮೇಲೆ ನನ್ನ ನಾನು ಬೇರೆ ರೀತಿ ತೋರಿಸಿಕೊಳ್ಳಬೇಕು, ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸಬೇಕು ಎಂದುಕೊಳ್ಳುತ್ತಿದ್ದೆ. ಅದಕ್ಕೆ ತಕ್ಕಂತೆ ‘ಸ್ಪಾರ್ಕ್’ ಚಿತ್ರದಲ್ಲಿ ನನಗೆ ಪಾತ್ರ ಸಿಕ್ಕಿದೆ.
* ಪಾತ್ರಗಳ ವಿಚಾರದಲ್ಲಿ ಈಗ ಇಂಥ ಆಲೋಚನೆ- ಬದಲಾವಣೆ ಬರಲು ಕಾರಣ ಏನು?
ನನ್ನ ಎಲ್ಲರು ಲವರ್ ಬಾಯ್ ಅಮೇಜ್‌ನಲ್ಲೇ ಬ್ರಾಂಡ್ ಮಾಡಿದ್ದರು. ಎಲ್ಲರು ಅದೇ ರೀತಿಯ ಪಾತ್ರಗಳಲ್ಲೇ ನೋಡುತ್ತಿದ್ದರು. ಒಬ್ಬ ನಟನಾಗಿ ಬ್ರಾಂಡು, ಇಮೇಜ್ ಮೀರಬೇಕು. ನನ್ನ ಒಳಗೂ ಬೇರೆ ಬೇರೆ ಇಮೇಜಿನ ಕಲಾವಿದ ಇದ್ದಾನೆ ಅಂತ ಸಾಬೀತು ಮಾಡಬೇಕೆಂಬುದೇ ಕಾರಣ.
* ‘ಸ್ಪಾರ್ಕ್’ ಚಿತ್ರ ಒಪ್ಪಿಕೊಳ್ಳುವುಕ್ಕೆ ಪಾತ್ರವೇ ಮುಖ್ಯನಾ?
ಹೌದು. ಹಾಗೆ ನೋಡಿದರೆ ಈ ಕತೆ ನನಗೇ ನೇರವಾಗಿ ಬಂದಿದ್ದಲ್ಲ. ನಿರ್ದೇಶಕರು ಬೇರೊಬ್ಬರಿಗೆ ಕತೆ ಹೇಳುವಾಗ ಅವರು ನನ್ನ ಲುಕ್ಕು ನೋಡಿ, ತಾನು ಅಂದುಕೊಂಡ ಪಾತ್ರಕ್ಕೆ ಸೂಕ್ತ ಅನಿಸಿ ಆ ಮೇಲೆ ನನಗೆ ಕತೆ ಹೇಳಿದರು. ಕತೆ ಮತ್ತು ಪಾತ್ರವೇ ಈ ಚಿತ್ರದಲ್ಲಿ ನಾನು ನಟಿಸಲು ಕಾರಣವಾಯಿತು.
* ಈ ಚಿತ್ರದ ಕತೆ ಏನು?
ಪತ್ರಿಕೋದ್ಯಮದ ಸುತ್ತಾ ಇರುವ ಕತೆ. ರಾಜಿಯಾಗುವಂತಹ ಸಂದರ್ಭ, ಸನ್ನಿವೇಶಗಳು ಬಂದಾಗಲೂ ಅದಕ್ಕೆ ಎದುರಾಗಿ ನಿಂತು ಸತ್ಯ, ನಿಷ್ಠೆಗೆ ಮಾತ್ರ ಬದ್ಧ ಎನ್ನುವ ಪತ್ರಕರ್ತನ ಕತೆ ಇಲ್ಲಿದೆ. ತನಿಖಾ ಪತ್ರಿಕೋದ್ಯಮ, ಪತ್ರಕರ್ತರ ಕುಟುಂಬಗಳು, ಅವರ ನೋವು- ನಲಿವು, ಸಂಕಷ್ಟಗಳು, ಸತ್ಯಕ್ಕೆ ಎಷ್ಟೇ ಹತ್ತಿರವಾದ ಸುದ್ದಿ ಮಾಡಿದರೂ ಅದು ಪ್ರಕಟಣೆ ಆಗುವ ರೀತಿ, ಇದರ ನಡುವೆ ಒಬ್ಬ ಪೊಲೀಸ್... ಇತ್ಯಾದಿಗಳು ಚಿತ್ರದಲ್ಲಿವೆ.
* ಪ್ರೇಕ್ಷಕರಿಗೆ ಈ ಚಿತ್ರ ಹೇಗೆ ಕನೆಕ್ಟ್ ಆಗುತ್ತದೆ?
ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ. ಪ್ರತಿ ನಿತ್ಯ ನಾವು ಎದ್ದ ಕೂಡಲೇ ನೋಡುವುದು ಪತ್ರಿಕೆ, ಮಾಧ್ಯಮಗಳತ್ತ. ಅಂಥ ಕ್ಷೇತ್ರದ ಕತೆ ಇದು. ‘ಕನ್ನಡ ಸಿನಿಮಾಗಳಲ್ಲಿ ಕತೆಗಳೇ ಇರಲ್ಲ’ ಎಂದು ಹೇಳುವ ಪ್ರೇಕ್ಷಕರು ಈ ಚಿತ್ರ ನೋಡಿದರೆ ಖಂಡಿತ ಸಿನಿಮಾ ಅವರಿಗೆ ಕನೆಕ್ಟ್ ಆಗುತ್ತದೆ.
* ಯಂಗ್ ಹೀರೋ ನಿರಂಜನ್ ಸುಧೀಂದ್ರ ತೆರೆ ಹಂಚಿಕೊಂಡಿದ್ದು ಹೇಗಿತ್ತು?
ತುಂಬಾ ತಯಾರಿ ಮಾಡಿಕೊಂಡು ಬಂದಿರುವ ನಟ ನಿರಂಜನ್ ಸುಧೀಂದ್ರ. ಎಂಟು ವರ್ಷದ ತಯಾರಿ ಅವನಲ್ಲಿದೆ. ಆತನ ಮುಂದೆ ನಿಂತು ನಟಿಸುವಾಗ ಹೊಸಬ, ಯಂಗ್ ಅಂತ ಅನಿಸಲೇ ಇಲ್ಲ. ತುಂಬಾ ಕಷ್ಟಪಟ್ಟು ಪ್ರೀತಿಯಿಂದ ನಟನೆ ಕಲಿಯುತ್ತಿರುವ ಹುಡುಗ. ಸ್ಟಾರ್ ಕುಟುಂಬದ ಕಿಡ್ ಅಂತ ಸುಮ್ಮಲೆ ಬಂದಿಲ್ಲ. ಈ ಚಿತ್ರದಲ್ಲಿ ನಿರಂಜನ್ ಸುಧೀಂದ್ರ ನೆಕ್ಟ್ಸ್ ಲೆವಲ್ ನಟನೆ ಮಾಡಿದ್ದಾರೆ.
* ನಿಮ್ಮ ಮುಂದಿನ ಚಿತ್ರಗಳು ಯಾವುವು?
ಡಿಡಿ ಡಿಕ್ಕಿ ಹಾಗೂ ಕೆಂಬಾಬುದಿ. ಈ ಎರಡೂ ಚಿತ್ರಗಳಿಗೆ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಎರಡೂ ಕೂಡ ಬೇರೆ ರೀತಿಯ ಸಿನಿಮಾಗಳು. ಆಗಲೇ ಹೇಳಿದಂತೆ ಬೇರೆ ರೀತಿಯ ಚಿತ್ರಗಳಲ್ಲೂ ನಟಿಸಬೇಕೆಂಬ ಯೋಚನೆಯ ಭಿನ್ನ ಚಿತ್ರಗಳ ಆಯ್ಕೆಗೆ ಕಾರಣವಾಗುತ್ತಿದೆ.
* ಮಕ್ಕಳು ಏನು ಮಾಡುತ್ತಿದ್ದಾರೆ?
ಮಗಳು ಅಮೃತಾ ‘ಪಬ್ಬಾರ್’ ಚಿತ್ರ ಶೂಟಿಂಗ್ ಮುಗಿಸಿದ್ದಾಳೆ. ‘ಗುರು ಶಿಷ್ಯರು’ ಚಿತ್ರದ ಮೂಲಕ ಬಂದ ಮಗ ಏಕಾಂತ್ ಪ್ರೇಮ್ ಹೀರೋ ಆಗುವುದಕ್ಕೆ ತಯಾರಿ ಮಾಡಿಕೊಂಡಿದ್ದಾನೆ. ಅವನನ್ನು ಲಾಂಚ್ ಮಾಡಬೇಕು. ಸಿನಿಮಾ ಬಿಟ್ಟು ಬೇರೆ ಏನೂ ಮಾಡಲ್ಲ ಅಂತಿದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.