'ನಾನು ಹೀರೋ ಅಲ್ಲ, ವಿಲನ್‌': ‘ಸ್ಪಾರ್ಕ್’ ಪಾತ್ರದ ಬಗ್ಗೆ ಲವ್ಲಿ ಸ್ಟಾರ್‌ ಪ್ರೇಮ್‌ ಬಿಚ್ಚಿಟ್ಟ ಸೀಕ್ರೆಟ್ ಏನು?

Published : Sep 24, 2026, 07:50 PM IST
Prem Spark Movie

ಸಾರಾಂಶ

ಲವ್ಲಿ ಸ್ಟಾರ್‌ ಪ್ರೇಮ್‌ ‘ಸ್ಪಾರ್ಕ್’ ಸಿನಿಮಾದಲ್ಲಿ ತಮ್ಮ ಲವರ್‌ ಬಾಯ್‌ ಇಮೇಜ್‌ಗೆ ಭಿನ್ನವಾಗಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರಂಜನ್‌ ಸುಧೀಂದ್ರ ಎದುರು ವಿಲನ್‌ ಆಗಿ ನಟಿಸಿದ್ದಾರೆ.

‘ಲವ್ಲಿ ಸ್ಟಾರ್’ ಪಟ್ಟದಿಂದ ಪ್ರೇಮ್‌ ದೂರವಾಗಿಲ್ಲ. ಆದರೆ ‘ಸ್ಪಾರ್ಕ್’ ಸಿನಿಮಾದಲ್ಲಿ ಮೃದುವಾದ ಪ್ರೇಮಕಥೆಯ ನಾಯಕನ ಇಮೇಜ್‌ ಬಿಟ್ಟು ಸಿಗಾರ್‌ ಸೇದುತ್ತಾ ಕಾಣಿಸಿಕೊಳ್ಳುವ ಕ್ರೂರ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೀರೋ-ವಿಲನ್‌ ಮುಖಾಮುಖಿ ಪರಿಣಾಮಕಾರಿಯಾಗಬೇಕಾದರೆ ಸ್ಟಾರ್‌ ಇಗೋವನ್ನು ಬದಿಗಿಡಲೇಬೇಕು ಎನ್ನುತ್ತಾರೆ ಪ್ರೇಮ್‌.

‘ನೆನಪಿರಲಿ’ ಸಿನಿಮಾ ಮೂಲಕ ಎರಡು ದಶಕಗಳಿಗೂ ಹಿಂದೆ ಸಿಕ್ಕ ‘ಲವ್ಲಿ ಸ್ಟಾರ್’ ಎಂಬ ಬಿರುದನ್ನು ಪ್ರೇಮ್‌ ಇಂದಿಗೂ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಜನರು ತೋರಿಸಿದ ಅಪಾರ ಪ್ರೀತಿಯಿಂದಲೇ ಆ ಹೆಸರು ನನಗೆ ಬಂದಿದೆ. ಅದನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.

ಆದರೆ ಆರಂಭಿಕ ಯಶಸ್ಸು ಕೆಲವೊಮ್ಮೆ ನಟನನ್ನೇ ಒಂದು ನಿರ್ದಿಷ್ಟ ಇಮೇಜ್‌ನಲ್ಲಿ ಬಂಧಿಸಿಬಿಡುತ್ತದೆ. ನಮ್ಮ ಚಿತ್ರರಂಗದಲ್ಲಿ ಒಬ್ಬ ನಟ ಲವರ್‌ ಬಾಯ್‌ ಆಗಿ ಒಂದು ಹಿಟ್‌ ಕೊಟ್ಟರೆ, ಮರುದಿನವೇ ಅದೇ ರೀತಿಯ ಇಪ್ಪತ್ತು ಕಥೆಗಳು ಮನೆ ಬಾಗಿಲಿಗೆ ಬರುತ್ತವೆ. ವೃತ್ತಿಜೀವನದ ಆರಂಭದಲ್ಲಿ ನೀವು ಇನ್ನೂ ನಿಮ್ಮ ಸ್ಥಾನ ಹುಡುಕುತ್ತಿರುವಾಗ, ಆಯ್ಕೆ ಮಾಡುವಷ್ಟು ಅವಕಾಶ ಇರುವುದಿಲ್ಲ. ಸಿಕ್ಕಿದ್ದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಪ್ರೇಮ್‌.

ನನ್ನ ಅಭಿಮಾನಿಗಳೂ ಕೂಡ, ‘ಸರ್‌, ನಿಮ್ಮ ಲುಕ್‌ ಬೇರೆ ಪಾತ್ರಗಳಿಗೂ ಚೆನ್ನಾಗಿ ಹೊಂದುತ್ತದೆ. ಯಾಕೆ ಲವರ್‌ ಬಾಯ್‌ ಪಾತ್ರಗಳನ್ನೇ ಮಾಡುತ್ತೀರಿ?’ ಎಂದು ಕೇಳುತ್ತಿದ್ದರು. ‘ಸ್ಪಾರ್ಕ್’ ನನಗೆ ಆ ಇಮೇಜ್‌ನಿಂದ ಹೊರಬರಲು ಅವಕಾಶ ನೀಡಿತು. ಪ್ರೇಕ್ಷಕರಲ್ಲೂ ಈ ಪಾತ್ರದ ಬಗ್ಗೆ ಕುತೂಹಲ ಮೂಡಿತು. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಜನರು ‘ಲವ್ಲಿ ಸ್ಟಾರ್’ ಎನ್ನುವುದರ ಬದಲು ‘ರಾಕರ-ಕರ-ರಾಕ್ಷಸ!’ ಎಂದು ಕೂಗಿದ್ದನ್ನು ನೋಡಿ ನನ್ನ ಮಗ ಕೂಡ ತಮಾಷೆ ಮಾಡಿದ್ದ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

‘ಸ್ಪಾರ್ಕ್‌’ನಲ್ಲಿ ಪ್ರೇಮ್‌ ಖಳನಾಯಕ

ಡಿ. ಮಹಾಂತೇಶ್‌ ಹಂದ್ರಾಳ್‌ ನಿರ್ದೇಶನದ, ಡಾ. ಗರಿಮಾ ಹಾಗೂ ಅವಿನಾಶ್‌ ವಶಿಷ್ಠ ನಿರ್ಮಾಣದ ‘ಸ್ಪಾರ್ಕ್’ ಸಿನಿಮಾದಲ್ಲಿ ಪ್ರೇಮ್‌ ಇದೇ ಸೆಪ್ಟೆಂಬರ್‌ 25ರಂದು ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ನಿರಂಜನ್‌ ಸುಧೀಂದ್ರ ಎದುರು ಪ್ರೇಮ್‌ ಇಲ್ಲಿ ಕ್ರೂರ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಿಗಾರ್‌, ಮುಖದಲ್ಲಿ ಕಠಿಣ ಭಾವ, ಕಣ್ಣಲ್ಲಿ ತಣ್ಣನೆಯ ನೋಟ-ಇದು ಅವರ ಈವರೆಗಿನ ನಾಯಕನ ಇಮೇಜ್‌ಗೆ ಸಂಪೂರ್ಣ ಭಿನ್ನವಾದ ಲುಕ್‌.

ಆದರೆ ಧೂಮಪಾನ ಮಾಡದ ಪ್ರೇಮ್‌ಗೆ ಈ ಪಾತ್ರಕ್ಕಾಗಿ ಸಿಗಾರ್‌ ಹಿಡಿಯುವುದೇ ಸುಲಭವಾಗಿರಲಿಲ್ಲ. ನನಗೆ ಸ್ಮೋಕಿಂಗ್‌ ಎಂದರೆ ಅಸಹ್ಯ. ಶೂಟಿಂಗ್‌ ಮುಗಿದ ಬಳಿಕ ಸುಮಾರು ಒಂದು ತಿಂಗಳ ಕಾಲ ತೀವ್ರ ಗಂಟಲು ಸೋಂಕಿನಿಂದ ಬಳಲಿದ್ದೆ. ನಟನೆಯಲ್ಲಿ ಕಣ್ಣುಗಳು ಮತ್ತು ದೇಹಭಾಷೆಯ ಮೂಲಕವೂ ಭಾವನೆಗಳನ್ನು ತೋರಿಸಬಹುದು. ಆದರೆ ಒಂದು ಪ್ರಾಪ್‌ ಪಾತ್ರದೊಳಗಿನ ಭಾವನೆಯನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಿಕೊಡುತ್ತದೆ ಎಂದು ಪ್ರೇಮ್‌ ಹೇಳುತ್ತಾರೆ.

ಜನರು ತಮ್ಮ ಕುಟುಂಬದ ಮೇಲೆ ತೋರಿಸಲಾಗದ ಕೋಪವನ್ನು ಕೆಲವೊಮ್ಮೆ ಸ್ಮೋಕ್‌ ಮಾಡುವ ಮೂಲಕ ಹೊರಹಾಕುತ್ತಾರೆ. ಹೊಗೆಯೊಂದಿಗೆ ಆ ಕೋಪವನ್ನೂ ಹೊರಗೆ ಬಿಡುತ್ತಾರೆ. ಈ ಪಾತ್ರದ ಸಿಗಾರ್‌ ಕೂಡ ಅವನೊಳಗಿನ ಕೋಪದ ಪ್ರತೀಕ. ಆದರೆ ಇದು ಸಿನಿಮಾಗೆ ಮಾತ್ರ ಸೀಮಿತ; ಜೀವನದಲ್ಲಿ ಯಾರೂ ಇದನ್ನು ಅನುಸರಿಸಬೇಡಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಸೆಟ್‌ಗೆ ಕಾಲಿಟ್ಟ ಕ್ಷಣವೇ ಇಗೋ ಸಾಯಬೇಕು’

ತಮ್ಮಗಿಂತ ಕಿರಿಯ ನಟ ನಿರಂಜನ್‌ ಸುಧೀಂದ್ರ ಎದುರು ಖಳನಾಯಕನ ಪಾತ್ರದಲ್ಲಿ ನಟಿಸುವಾಗ ಹಿರಿಯ ನಟನಾಗಿ ಯಾವುದೇ ಹಿಂಜರಿಕೆ ಇರಲಿಲ್ಲ ಎನ್ನುತ್ತಾರೆ ಪ್ರೇಮ್‌. ನೀವು ಸೆಟ್‌ಗೆ ಕಾಲಿಟ್ಟ ಕ್ಷಣವೇ ಇಗೋ ಸಾಯಬೇಕು. ‘ನನಗೆ 25 ವರ್ಷಗಳ ಅನುಭವವಿದೆ, ಇವನು ಈಗಷ್ಟೇ ಆರಂಭಿಸುತ್ತಿದ್ದಾನೆ. ನಾನು ಯಾಕೆ ಎರಡನೇ ಸ್ಥಾನದಲ್ಲಿ ನಟಿಸಬೇಕು?’ ಎಂದು ಯೋಚಿಸಿದ ಕ್ಷಣವೇ ಆ ದೃಶ್ಯ ಸತ್ತುಹೋಗುತ್ತದೆ ಎಂದು ಅವರು ಖಡಕ್‌ ಆಗಿ ಹೇಳುತ್ತಾರೆ.

ನಾನು ಮೊದಲೇ ನನ್ನ ಮನಸ್ಸನ್ನು ಸಿದ್ಧಪಡಿಸಿಕೊಂಡಿದ್ದೆ. ನಿರಂಜನ್‌ ಹೀರೋ, ನಾನು ವಿಲನ್‌. ಹೀರೋ ಪಾತ್ರಕ್ಕೆ ನೂರು ರೀತಿಯ ನಿರ್ಬಂಧಗಳಿರುತ್ತವೆ. ಆತ ಒಳ್ಳೆಯವನಾಗಿರಬೇಕು, ಕೆಟ್ಟ ಚಟಗಳಿಂದ ದೂರವಿರಬೇಕು, ಎಲ್ಲರನ್ನೂ ಮೆಚ್ಚಿಸಬೇಕು. ಆದರೆ ವಿಲನ್‌ಗೆ ಅಂತಹ ಯಾವುದೇ ಬಂಧನವಿರುವುದಿಲ್ಲ. ಆತ ತನ್ನದೇ ನಿಯಮಗಳ ಮೇಲೆ ಬದುಕುತ್ತಾನೆ. ನಟನಾಗಿ ಆ ಸ್ವಾತಂತ್ರ್ಯ ನನಗೆ ತುಂಬಾ ಇಷ್ಟವಾಯಿತು ಎಂದು ಪ್ರೇಮ್‌ ವಿವರಿಸುತ್ತಾರೆ.

ನಿರ್ದೇಶಕರ ಸ್ಪಷ್ಟತೆಯೇ ಆತ್ಮವಿಶ್ವಾಸ ನೀಡಿತು

‘ಸ್ಪಾರ್ಕ್’ ಸಿನಿಮಾದ ನಿರ್ದೇಶಕ ಮಹಾಂತೇಶ್‌ ಅವರ ಸ್ಕ್ರಿಪ್ಟ್‌ ಮೇಲಿನ ಹಿಡಿತವೂ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿತು ಎಂದು ಪ್ರೇಮ್‌ ಹೇಳಿದ್ದಾರೆ. ಪಾತ್ರದ ಸ್ಟೈಲಿಂಗ್‌, ಟೋನ್‌ ಹಾಗೂ ಅದರ ಮಿತಿಗಳ ಬಗ್ಗೆ ನಾನು ನಿರ್ದೇಶಕರನ್ನು ನಿರಂತರವಾಗಿ ಪ್ರಶ್ನಿಸುತ್ತಿದ್ದೆ. ಪಾತ್ರದ ಸ್ವಭಾವವನ್ನೇ ಬದಲಿಸುವ ರೀತಿಯಲ್ಲಿ ನಾನು ಯಾವುದಾದರೂ ಹೊಸ ಸಲಹೆ ನೀಡಿದರೆ, ‘ಸರ್‌, ಟ್ರ್ಯಾಕ್‌ ತಪ್ಪುವಷ್ಟು ಬಾಕ್ಸ್‌ನ ಹೊರಗೆ ಯೋಚಿಸಬೇಡಿ’ ಎಂದು ಅವರು ಹೇಳುತ್ತಿದ್ದರು.

ಆ ಸ್ಪಷ್ಟತೆ ನನಗೆ ಧೈರ್ಯ ನೀಡಿತು. ಹೀರೋನನ್ನು ಎತ್ತಿ ಹಿಡಿಯಲು ಮಾತ್ರ ನನ್ನನ್ನು ಸಿನಿಮಾಕ್ಕೆ ಕರೆತಂದಿಲ್ಲ ಎಂಬ ನಂಬಿಕೆ ಮೂಡಿತು ಎಂದು ಪ್ರೇಮ್‌ ಹೇಳಿದ್ದಾರೆ. ‘ಸ್ಪಾರ್ಕ್’ ಸಿನಿಮಾದಲ್ಲಿ ರಚನಾ ಇಂದರ್‌ ನಾಯಕಿಯಾಗಿ ನಟಿಸಿದ್ದು, ಭಾವನಾ ಕನ್ನಡ ಚಿತ್ರರಂಗಕ್ಕೆ ಮತ್ತೆ ಮರಳಿದ್ದಾರೆ. ಅವರು ಸಿನಿಮಾದಲ್ಲಿ ವಕೀಲೆಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧರ್ಮಣ್ಣ ಕಡೂರ್‌ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.

‘ಹಿರಿಯ ನಟರಿಗೆ ಒಳ್ಳೆಯ ಪಾತ್ರಗಳು ಕಡಿಮೆಯಾಗುತ್ತಿಲ್ಲ’

ತಮ್ಮ ವೃತ್ತಿಜೀವನದ ಏಳು-ಬೀಳುಗಳನ್ನು ನೆನಪಿಸಿಕೊಂಡಿರುವ ಪ್ರೇಮ್‌, ಹಿರಿಯ ನಟರಿಗೆ ಉತ್ತಮ ಪಾತ್ರಗಳು ಸಿಗುತ್ತಿಲ್ಲ ಎಂಬ ಮಾತನ್ನು ಒಪ್ಪುವುದಿಲ್ಲ. ಇನ್ನು ಕಷ್ಟಪಟ್ಟು ಕೆಳಮಟ್ಟದಿಂದ ಮೇಲಕ್ಕೆ ಬಂದಾಗ ಮತ್ತು ಬದುಕುಳಿಯುವುದನ್ನು ಕಲಿತಾಗ ಮಾತ್ರ ಯಶಸ್ಸಿನ ನಿಜವಾದ ಅರ್ಥ ಗೊತ್ತಾಗುತ್ತದೆ. ಒಳ್ಳೆಯ ಪಾತ್ರಗಳು ಕಡಿಮೆಯಾಗುತ್ತಿಲ್ಲ. ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ಹಳೆಯ ಯಶಸ್ಸಿನ ಮೇಲೆಯೇ ಅವಲಂಬಿತರಾಗುವುದನ್ನು ನಿಲ್ಲಿಸಿ, ಹೊಸ ಪ್ರಯೋಗಗಳಿಗೆ ಸಿದ್ಧರಾಗಬೇಕು ಎಂದು ಪ್ರೇಮ್‌ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬ್ಯಾಡ್ಮಿಂಟನ್ ಆಡುತ್ತಿದ್ದ ದೀಪಿಕಾ ನಟಿಯಾಗಿದ್ದೇಗೆ?: ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದು ಇದೇ!
ಸಿನಿಮಾ ರೇಸ್‌ನಿಂದ ಶ್ರದ್ಧಾ ಶ್ರೀನಾಥ್ ದೂರ.. 'ನೆನಪಿನಲ್ಲಿ ಉಳಿಯಬೇಕು' ಎಂದಿದ್ಯಾಕೆ U ಟರ್ನ್‌ ನಟಿ!