Banaras ಸಿನಿಮಾ ಪ್ರೀತಿ ಮೂಡಿಸಿದ್ದು ಅಣ್ಣಾವ್ರು: ಝೈದ್‌ ಖಾನ್‌

By Kannadaprabha NewsFirst Published Nov 4, 2022, 10:42 AM IST
Highlights

ಪ್ಯಾನ್ ಇಂಡಿಯಾ ಚಿತ್ರ ‘ಬನಾರಸ್‌’ ಇಂದು ಐದು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಝೈದ್‌ ಖಾನ್‌ ಮತ್ತು ಸೋನಲ್‌ ಮೊಂತೆರೋ ನಟಿಸಿರುವ ಈ ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದಾರೆ. ತಿಲಕರಾಜ್‌ ಬಲ್ಲಾಳ್‌ ನಿರ್ಮಾಣ ಮಾಡಿದ್ದಾರೆ.

ಪ್ರಿಯಾ ಕೆರ್ವಾಶೆ

ಮೊದಲ ಸಿನಿಮಾ ರಿಲೀಸು. ನಿರೀಕ್ಷೆ, ಕನಸು?

 ಸದ್ಯಕ್ಕೀಗ ತಲೆ ಓಡ್ತಾ ಇಲ್ಲ. ಎಲ್ಲಿ, ಏನು ಮಾಡಬೇಕೋ ತೋಚುತ್ತಿಲ್ಲ. ನನ್ನ ಅದೃಷ್ಟಪರೀಕ್ಷೆ ದಿನ. ಫಸ್ಟ್‌ ಡೇ ಫಸ್ಟ್‌ ಶೋನಲ್ಲಿ ಹಣೆಬರಹ ನಿರ್ಧಾರವಾಗಲಿದೆ.

ಹೊಸ ಹೀರೋ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದಾರೆ ಅಂದಾಗ ನಿರೀಕ್ಷೆ ಹೆಚ್ಚಿರುತ್ತಲ್ವಾ?

ಈ ನಿರೀಕ್ಷೆಯೇ ನಮ್ಮ ಜವಾಬ್ದಾರಿ ಹೆಚ್ಚಿಸೋದು, ಭಯ ಹುಟ್ಟಿಸೋದು. ಹೀಗೆ ನಿರೀಕ್ಷೆ ಇಟ್ಟುಕೊಂಡು ಬಂದ ಜನ ಸಿನಿಮಾ ನೋಡಿ ಆಚೆ ಹೋಗುವಾಗ ಈ ಹುಡುಗ ಏನೋ ಮಾಡಿದ್ದಾನೆ ಮಗಾ ಅಂದ್ಕೊಂಡು ಹೋಗ್ಬೇಕು. ಹಾಗಂತಾರೆ ಅನ್ನೋ ವಿಶ್ವಾಸ ಇದೆ.

ನಿಮ್ಮ ಓದು?

ನಂಗೆ ಓದಿನಲ್ಲಿ ಅಂಥಾ ಆಸಕ್ತಿ ಇರಲಿಲ್ಲ. ಆದರೆ ಮನೆಯಲ್ಲಿ ಬೇಸಿಕ್‌ ಶಿಕ್ಷಣವಾದರೂ ಬೇಕೇ ಬೇಕು ಅಂದರು. ಅವರ ಒತ್ತಾಯಕ್ಕೆ ಸೆಕೆಂಡ್‌ ಪಿಯುಸಿವರೆಗೆ ಓದಿದೆ. ಆಮೇಲೆ ಮುಂಬೈಗೆ ಹೋಗಿ ಅನುಪಮ್‌ ಖೇರ್‌ ಫಿಲಂ ಇನ್ಸ್‌ಟಿಟ್ಯೂಟ್‌ನಲ್ಲಿ ಸಿನಿಮಾದ ವ್ಯಾಕರಣ ಕಲಿಯಲು ಪ್ರಯತ್ನಿಸಿದೆ. ಬೆಂಗಳೂರಿಗೆ ಬಂದ ಮೇಲೆ ಸಿನಿಮಾಗೆ ಬೇಕಾದ ಕನ್ನಡ ನನ್ನಲ್ಲಿಲ್ಲ ಅಂತ ತಿಳಿಯಿತು. ರಂಗತಜ್ಞೆ ಗೌರಿ ದತ್ತು ಅವರಿಂದ 9 ತಿಂಗಳು ಕನ್ನಡ ಪಾಠ ಹೇಳಿಸಿಕೊಂಡೆ.

ಕನ್ನಡ ಸರಿ ಬರದಿದ್ದರೂ ಕನ್ನಡ ಸಿನಿಮಾ ಮಾಡಬೇಕು ಅಂದುಕೊಂಡಿದ್ದು ಯಾಕೆ?

ನನ್ನ ನೆಲದ ಭಾಷೆಯನ್ನು ಸರಿಯಾಗಿ ಕಲಿತು ನಾನು ಹುಟ್ಟಿಬೆಳೆದ ನೆಲದಲ್ಲೇ ಸಿನಿಮಾ ಮಾಡಬೇಕು ಅನ್ನೋ ಕನಸಿತ್ತು. ಮೊದಲಿಂದಲೂ ನನಗೆ ಹಿಂದಿ ಸಿನಿಮಾಗಳಿಂದ ಆಫರ್‌ ಇತ್ತು. ಇಪ್ಪತ್ತಕ್ಕೂ ಹೆಚ್ಚು ಸೀರಿಯಲ್‌ಗೆ ಕರೆದಿದ್ದರು. ವೆಬ್‌ ಸೀರೀಸ್‌ಗೆ ಆಫರ್‌ ಬರ್ತಿತ್ತು. ಆದರೆ ನನಗಿದ್ದದ್ದು ಮಾಡಿದರೆ ಕನ್ನಡದಲ್ಲೇ ಸಿನಿಮಾ ಮಾಡಬೇಕು ಅನ್ನೋ ಕನಸು. ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್‌ ಮಾಡಲೂ ತಯಾರಿದ್ದೆ. ಆದರೆ ಯಾಕೋ ಸರಿ ಹೋಗುತ್ತಿರಲಿಲ್ಲ . ಹೀಗಾಗಿ ಬೇರೆಯವರು ಡಬ್‌ ಮಾಡಿದ್ದಾರೆ.

ಬನಾರಸ್ ನಿಂದ `ಬೆಳಕಿನ ಕವಿತೆ'; ಹೊರಬರಲು ಮುಹೂರ್ತ ಫಿಕ್ಸ್..!

ರಾಜಕೀಯವಾಗಿ ಗುರುತಿಸಿಕೊಂಡ ಕುಟುಂಬ ನಿಮ್ಮದು, ಸಿನಿಮಾಕ್ಕೆ ಬರಬೇಕು ಅಂತ ಯಾಕನಿಸಿತು?

ಬಹುಶಃ ಇದಕ್ಕೆ ಅಣ್ಣಾವ್ರು ಕಾರಣ ಇರಬಹುದು. ಅವರು ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ನನ್ನ ಅಜ್ಜಿ ಮಾಡೋ ನಾಟಿ ಕೋಳಿ ಸಾರು ಅವರಿಗೆ ಬಹಳ ಇಷ್ಟ. ಬೆಳಗ್ಗೆಯೇ ಅಜ್ಜಿಗೆ ಫೋನ್‌ ಮಾಡಿ ಮನೆಗೆ ಬಂದು ಊಟ ಮಾಡಿ ಖುಷಿಯಿಂದ ಹೋಗುತ್ತಿದ್ದರು. ಹಾಗೆ ಹೋಗುವಾಗ ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗ್ತಿದ್ದರು. ನಾನು ಸಂಜೆವರೆಗೂ ಅವರ ಮನೆಯಲ್ಲೇ ಆಟ ಆಡ್ತಿದ್ದೆ. ಅಪ್ಪು ಸಾರ್‌, ಮನೆಯವರ ಜೊತೆಗೆ ಸಮಯ ಕಳೆಯುತ್ತಿದ್ದೆ. ಸಂಜೆ ಅಪ್ಪ ನನ್ನ ವಾಪಾಸು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಮನೆಯಲ್ಲೆಲ್ಲ ಸಿನಿಮಾದ ವಾತಾವರಣ.

ಸುಮಾರು ಕತೆ ಕೇಳಿರಬೇಕಲ್ವಾ?

ಅಬ್ಬಾ ಸುಮಾರಾ? ಏಳು ವರ್ಷಗಳಿಂದ ಕತೆ ಕೇಳ್ತಾ ಇದ್ದೀನಿ. ಕೆಲವೊಮ್ಮೆ ಒಳ್ಳೆ ಕಥೆ ಇರುತ್ತೆ, ನಿರ್ದೇಶಕರು ಸರಿಬರಲ್ಲ. ಬೆಸ್ಟ್‌ ನಿರ್ದೇಶಕರಿದ್ದರೆ ಕಥೆ ಚೆನ್ನಾಗಿರಲ್ಲ. ಹೀಗೆಲ್ಲ ಆಗ್ತಿತ್ತು. ಕೊನೆಗೆ ರಿಷಬ್‌ ಶೆಟ್ಟಿಅವರ ಜೊತೆ ಮಾತಾಡುತ್ತಿದ್ದಾಗ ಅವರು ಜಯತೀರ್ಥ ಅವರ ಬಗ್ಗೆ ಹೇಳಿದರು.

ಹೇಗಿತ್ತು ಮೊದಲ ಸಿನಿಮಾ ಅನುಭವ?

ಅದನ್ನು ಹೇಳೋಕೆ ಮೂರು ದಿನ ಸಾಕಾಗಲ್ಲ. ಸೆಟ್‌ನಲ್ಲಿ ನಾನು ಮಾಡದ ಕೆಲಸ ಇಲ್ಲ. ಪ್ರೊಡ್ಯೂಸರ್‌, ಆ್ಯಕ್ಟರ್‌, ಅಸೋಸಿಯೇಟ್‌, ಮೇಕಪ್‌ ಮ್ಯಾನ್‌, ಸೆಟ್‌ ಹುಡುಗ, ಕೊನೆಗೆ ಪೊರಕೆ ಹಿಡಿದು ಗುಡಿಸೋ ಕೆಲಸವನ್ನೂ ಮಾಡಿದ್ದೇನೆ.

ತಮಿಳುನಾಡಿನಾದ್ಯಂತ ಶಕ್ತಿ ಫಿಲ್ಮ್ ಪ್ಯಾಕ್ಟರಿ ಸಂಸ್ಥೆಯಿಂದ ಬನಾರಸ್ ಹಂಚಿಕೆ

ಬನಾರಸ್‌ನಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆತರುವ ಅಂಶಗಳೇನಿವೆ?

ಕಾಶಿಯ 85 ಘಾಟ್‌ಗಳನ್ನು ಚಿತ್ರೀಕರಿಸಿದ ಮೊದಲ ಸಿನಿಮಾ ನಮ್ಮದು. ಇದೊಂದು ಪರಿಶುದ್ಧ ಪ್ರೇಮಕಥೆ. ಥ್ರಿಲ್ಲರ್‌, ಫ್ಯಾಮಿಲಿಗೆ ಖುಷಿ ಕೊಡುವ ಸಂಗತಿಗಳು, ಸಂದೇಶ ಎಲ್ಲ ಇದೆ. ಮೈ ಜುಂ ಅನಿಸೋ ಸಪ್ರೈರ್‍ಸಿಂಗ್‌ ಎಲಿಮೆಂಟೂ ಇದೆ.

ಇದು ಟೈಮ್‌ ಲೂಪ್‌ ಬಗೆಗಿನ ಸಿನಿಮಾವ?

ಖಂಡಿತಾ ಅಲ್ಲ. ಟೈಮ್‌ ಲೂಪ್‌ ಆಗಲೀ, ಟೈಮ್‌ ಟ್ರಾವೆಲ್‌ ಆಗಲಿ ಸಿನಿಮಾದಲ್ಲಿ ಮುಖ್ಯ ಎಳೆಯಾಗಿ ಬಂದಿಲ್ಲ. ಚಿಕ್ಕ ಭಾಗವಾಗಿ ಬಂದಿದೆಯಷ್ಟೇ.

1000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್‌

ಬನಾರಸ್‌ ರಾಷ್ಟಾ್ರದ್ಯಂತ 5 ಭಾಷೆಗಳಲ್ಲಿ 1000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ 125 ಸಿಂಗಲ್‌ ಸ್ಕ್ರೀನ್‌, 50 ಮಲ್ಟಿಪ್ಲೆಕ್ಸ್‌, ಉತ್ತರ ಭಾರತದಲ್ಲಿ ಹಿಂದಿ ವರ್ಶನ್‌ 500 ಸ್ಕ್ರೀನ್‌, ಹೈದರಾಬಾದ್‌ನಲ್ಲಿ ತೆಲುಗು 300 ಸ್ಕ್ರೀನ್‌, ತಮಿಳ್ನಾಡಿನಲ್ಲಿ 250 ಸ್ಕ್ರೀನ್‌, ಕೇರಳದಲ್ಲಿ 120 ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆ ಕಾಣಲಿದೆ. ಹಿಂದಿಯಲ್ಲಿ ಬಾಲಿವುಡ್‌ ನಟ ಅಜಯ್‌ ದೇವಗನ್‌ ಈ ಚಿತ್ರವನ್ನು ವಿತರಿಸಲಿದ್ದಾರೆ.

click me!