ಜಿಯೋ ಸ್ಟುಡಿಯೋಸ್‌ ಸೇರಿದ ಪರಮ್; ಕಲರ್ಸ್‌ ಕನ್ನಡ ಬಿಟ್ಟಿದ್ದು ಯಾಕೆ?

By Kannadaprabha News  |  First Published Apr 6, 2023, 9:36 AM IST

ಪತ್ರಕರ್ತರಾಗಿದ್ದ ಪರಮೇಶ್ವರ ಗುಂಡ್ಕಲ್‌ ಆರಂಭದಿಂದಲೂ ಸಿನಿಮಾ ಮೂಲಕ ಕತೆ ಹೇಳುವ ಕನಸು ಕಂಡವರು. ಕಲರ್ಸ್‌ ಕನ್ನಡ ವಾಹಿನಿಯನ್ನು ಆರಂಭದಿಂದ ದಿನದಿಂದ ಈಗ ಇರುವ ಹಂತಕ್ಕೆ ಬೆಳೆಸಿದವರು. ಕನ್ನಡ ಕಿರುತೆರೆಗೆ ಹೊಸರೂಪ ಕೊಟ್ಟವರು. ಈಗ ಮತ್ತೆ ಕತೆಗಳ ಸಹವಾಸಕ್ಕೆ ಹೊರಟಿದ್ದಾರೆ. ತೀವ್ರವಾಗಿ ಕತೆ ಹೇಳಬೇಕು ಎಂಬ ಹಂಬಲದಲ್ಲಿದ್ದಾರೆ. ಅವರ ಕನಸಿಗೆ ಜಿಯೋ ಸ್ಟುಡಿಯೋಸ್‌ ವೇದಿಕೆಯಾಗಿದೆ.


ನೀವೇ ಕಟ್ಟಿದ ಕಲರ್ಸ್‌ ಕನ್ನಡದಿಂದ ಹೊರಗೆ ಬಂದಿದ್ದೀರಿ. ಯಾಕೆ? ಹೇಗೆ?

ಕಲರ್ಸ್‌ ಕನ್ನಡದ ಆರಂಭದ ದಿನದಿಂದ ಇದ್ದೇನೆ. ಕಾರ್ಪೆಟ್‌ನಿಂದ ಹಿಡಿದು ಆಫೀಸಿನ ಬಣ್ಣದವರೆಗೆ ಎಲ್ಲದರ ಜೊತೆಗೂ ಭಾವನಾತ್ಮಕ ಸಂಬಂಧ ಇದೆ. ಎಲ್ಲವನ್ನೂ ತೊರೆದು ಬರುವುದು ಸುಲಭವಲ್ಲ. ಆದರೆ ನಾನು ಬರಲೇಬೇಕಿತ್ತು. ಒಂದು ವರ್ಷದ ಹಿಂದೆ ನಾನು ಯಾಕೆ ಇಲ್ಲಿಗೆ ಬಂದಿದ್ದು ಎಂಬುದನ್ನು ನೆನಪಿಸಿಕೊಂಡೆ. ಕಲರ್ಸ್‌ ಕನ್ನಡದಲ್ಲಿ ಎಲ್ಲವೂ ಚೆನ್ನಾಗಿತ್ತು. ನಾನು ಇಲ್ಲೇ ರಿಟೈರ್‌ ಆಗುತ್ತಿನೇನೋ ಎಂದೆನಿಸಲು ಶುರುವಾಯಿತು. ನಾನು ಹೋಗಬೇಕಿದ್ದ ಊರು ಬೇರೆ ಇತ್ತು. ಆದರೆ ಮಧ್ಯದಲ್ಲಿ ಚಂದದ ಊರು ಸಿಕ್ಕಿತೆಂದು ಇಲ್ಲೇ ಉಳಿದುಬಿಟ್ಟಿದ್ದೆ. ಆದರೆ ಈಗ ಹೊರಗೆ ಹೋಗದಿದ್ದರೆ ಬದುಕು ಕಷ್ಟವಾಗುತ್ತದೆ ಎಂದು ಬಲವಾಗಿ ಅನ್ನಿಸಿ ಹೊರಗೆ ಬಂದೆ.

Tap to resize

Latest Videos

undefined

ನೀವು ಹೋಗಬೇಕಾದ ಊರು ಯಾವುದು?

ಕತೆಗಳ ಊರು. ನಾನು ತೀವ್ರವಾಗಿ ಕತೆ ಹೇಳುವ ಆಸೆ ಇಟ್ಟುಕೊಂಡವನು. ನನಗೆ ಅಪ್ಪಟ ಕನ್ನಡದ, ನನ್ನನ್ನು ಅಲುಗಾಡಿಸುವ ಕತೆಗಳನ್ನು ಹೇಳುವ ಆಸೆ ಇದೆ. ಅದನ್ನು ಈಗ ಇದ್ದ ಫಾಮ್ರ್ಯಾಟಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಕತೆ ಹೇಳುವ ವಿಧಾನ ಸಿನಿಮಾ ಆಗಿರಬಹುದು. ಅಥವಾ ಪಾಡ್‌ಕಾಸ್ಟ್‌ ಆಗಿರಬಹುದು. ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಅದನ್ನೇ ನನ್ನ ಬಾಸ್‌ಗೆ ಹೇಳಿ ಕಲರ್ಸ್‌ ಕನ್ನಡ ಬಿಡುತ್ತೇನೆ ಎಂದು ಹೇಳಿದೆ. ಆದರೆ ಅವರು ಹೊಸ ಜವಾಬ್ದಾರಿ ಕೊಟ್ಟರು. ಜಿಯೋ ಸ್ಟುಡಿಯೋಸ್‌ ನೋಡಿಕೊಳ್ಳಲು ತಿಳಿಸಿದರು.

ಕಲರ್ಸ್‌ ಕನ್ನಡ ವಾಹಿನಿ ಮುಖ್ಯಸ್ಥರ ಸ್ಥಾನಕ್ಕೆ ಪರಮ್ ರಾಜೀನಾಮೆ; 10 ವರ್ಷಗಳ ಜರ್ನಿ ನೆನೆದು ಭಾವುಕ

ಮುಂದೆ ನಿಮ್ಮ ಜವಾಬ್ದಾರಿ ಏನು?

ಕತೆ ಹೇಳುವುದು. ಜಿಯೋ ಸ್ಟುಡಿಯೋಸ್‌ ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡುತ್ತದೆ. ಆ ಕತೆ ಹೇಳುವ ಪ್ರಕ್ರಿಯೆಯ ಹಿಂದೆ ನಾನು ಇರುತ್ತೇನೆ. ದೊಡ್ಡ ಸಿನಿಮಾ ಆಗಿರಬಹುದು, ಕಡಿಮೆ ಬಜೆಟ್‌ನ ಸಿನಿಮಾ ಆಗಿರಬಹುದು. ಅತ್ಯಂತ ಪ್ರಾಮಾಣಿಕವಾಗಿ ಕತೆ ಹೇಳಬೇಕು. ಈ ಕ್ಷೇತ್ರ ನನಗೆ ಗೊತ್ತಿಲ್ಲ. ಕಲಿಯುತ್ತಿದ್ದೇನೆ. ಕಲಿಯುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಅನ್ನಿಸುತ್ತದೆ. ಕತೆಗಳ ಊರಿಗೆ ಸೇರಿದ್ದೇನೆ. ಇಲ್ಲಿ ಗೆಲುವೇ ಸಿಗಬೇಕೆಂಬ ಹಂಬಲವಿಲ್ಲ. ಆದರೆ ಪ್ರಯಾಣವಂತೂ ಶುರುವಾಗಿದೆ.

click me!