ನಾಣಿ ಸರ್‌ ಹೊಗಳಿಕೆ ಕೇಳಿ ಭಯವಾಗಿತ್ತು: ದೀಕ್ಷಿತ್‌ ಶೆಟ್ಟಿ

By Kannadaprabha NewsFirst Published Mar 31, 2023, 9:55 AM IST
Highlights

ನಾಣಿ ನಟನೆಯ ‘ದಸರಾ’ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸೂರಿ ಎಂಬ ಪ್ರಮುಖ ಪಾತ್ರ ನಿರ್ವಹಿಸಿದ ದೀಕ್ಷಿತ್‌ ಶೆಟ್ಟಿನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅವರು ನಟಿಸಿರುವ ಕನ್ನಡದ ಕೆಟಿಎಂ, ಬ್ಲಿಂಕ್‌ ಸಿನಿಮಾಗಳು ಬಿಡುಗಡೆಗೆ ತಯಾರಿವೆ. ಹಾಟ್‌ಸ್ಟಾರ್‌ಗಾಗಿ ತೆಲುಗು ವೆಬ್‌ಸೀರೀಸ್‌ನಲ್ಲಿ ನಟಿಸುತ್ತಿದ್ದಾರೆ. ಈ ಜನಮೆಚ್ಚಿದ ಕಲಾವಿದನ ಜೊತೆ ಮಾತುಕತೆ.

ಬಿಗ್‌ ಬಜೆಟ್‌ನ ದೊಡ್ಡ ಸಿನಿಮಾ ದಸರಾ ಬಿಡುಗಡೆಯಾಗಿದೆ, ಹೇಗಿದೆ ಈ ಅನುಭವ?

ನಾನು ಪ್ರತೀ ಪಾತ್ರ ಮಾಡುವಾಗಲೂ ಪ್ರೇಕ್ಷಕರಿಗೆ ಇಷ್ಟವಾಗಬೇಕು ಎಂದೇ ಬಯಸುತ್ತೇನೆ. ದಸರಾ ಬಿಡುಗಡೆ ದಿನ ಹೈದರಾಬಾದ್‌ನಲ್ಲಿ ಪ್ರೇಕ್ಷಕರ ಮಧ್ಯೆ ಕುಳಿತು ಸಿನಿಮಾ ನೋಡಿದೆ. ಅವರ ಶಿಳ್ಳೆ, ಚಪ್ಪಾಳೆಯ ಮಧ್ಯೆ ಜೀವಿಸಿದೆ. ಆ ಸದ್ದುಗಳಿಂದಲೇ ನನ್ನ ಮನಸ್ಸು ತುಂಬಿದೆ. ಆ ಅನುಭವ ಮಾತಿನಲ್ಲಿ ಹೇಳಲಾರೆ.

ನಾಣಿ ನಿಮ್ಮ ಅಭಿನಯಕ್ಕೆ ಏನು ಹೇಳಿದರು?

ಅವರು ನಟನೆ ಆದ ಮೇಲೆ ಮಾನಿಟರ್‌ ನೋಡಿಯೇ ಮೆಚ್ಚುಗೆ ಮಾತುಗಳನ್ನು ಹೇಳಿದ್ದರು. ಪ್ರಮೋಷನ್‌ ಸಂದರ್ಭದಲ್ಲಿ ಅವರು ನನ್ನ ಅಭಿನಯ ಹೊಗಳುತ್ತಿದ್ದ ರೀತಿ ನೋಡಿ ನನಗೇ ಭಯವಾಗಿತ್ತು. ನನ್ನ ಬಗ್ಗೆ ನನಗಿಂತ ಹೆಚ್ಚಾಗಿ ಅವರೇ ವಿಶ್ವಾಸ ಇಟ್ಟುಕೊಂಡಿದ್ದರು.

70 ಲಕ್ಷಕ್ಕೂ ಅಧಿಕ ಹಣ ಖರ್ಚು: ಸಿನಿಮಾದ130 ಮಂದಿಗೆ ಚಿನ್ನದ ನಾಣ್ಯ ಕೊಟ್ಟ ಕೀರ್ತಿ ಸುರೇಶ್!

ದಸರಾ ಪಯಣ ಶುರುವಾಗಿದ್ದು ಹೇಗೆ?

ನಾಣಿ ನಿರ್ಮಾಣದ, ಅವರ ಸಹೋದರಿ ದೀಪ್ತಿ ಗಂಟ ನಿರ್ದೇಶನದ ಮೀಟ್‌ ಕ್ಯೂಟ್‌ ಎಂಬ ಆ್ಯಂಥಾಲಜಿಯಲ್ಲಿ ನಟಿಸಿದ್ದೆ. ಅಲ್ಲಿ ಎಲ್ಲರೂ ನನ್ನ ಪಾತ್ರ ನಿರ್ವಹಣೆ ಮೆಚ್ಚಿಕೊಂಡಿದ್ದರು. ಅದರಲ್ಲಿ ಸಹ ನಿರ್ದೇಶಕರಾಗಿದ್ದ ವಿನಯ್‌ ದಸರಾ ಕಾಸ್ಟಿಂಗ್‌ ಸಂದರ್ಭದಲ್ಲಿ ನನ್ನ ಹೆಸರು ಸೂಚಿಸಿದ್ದಾರೆ. ನಾಣಿಯವರು ಒಪ್ಪಿದ್ದರು. ನಿರ್ದೇಶಕ ಶ್ರೀಕಾಂತ್‌ ಅವರಿಗೆ ನಾನು ಗಡ್ಡಧಾರಿಯಾಗಿರುವ ಫೋಟೋ ಕಳುಹಿಸಿದ್ದೆ. ಅದನ್ನು ನೋಡಿ ಅವರೂ ನನಗೆ ಪ್ರಮುಖ ಪಾತ್ರ ಕೊಡಲು ಒಪ್ಪಿಕೊಂಡರು.

ದಸರಾ ಚಿತ್ರೀಕರಣ ಹೇಗಿತ್ತು?

ನಾಣಿ, ಸಾಯಿಕುಮಾರ್‌, ಕೀರ್ತಿ ಸುರೇಶ್‌, ಸಮುದ್ರಖಣಿ ಎಲ್ಲರೂ ದೊಡ್ಡ ಸ್ಟಾರ್‌ಗಳು. ಅವರ ಜೊತೆ ಇದ್ದು ನಟನೆ ಮತ್ತು ನಟನೆಗೆ ಮೀರಿದ್ದನ್ನೂ ಕಲಿತುಕೊಂಡೆ. ನಾಣಿ ಸರ್‌ ನಿಗದಿತ ಸಮಯಕ್ಕಿಂತ 10 ನಿಮಿಷ ಮೊದಲೇ ಸೆಟ್‌ಗೆ ಬರುತ್ತಿದ್ದರು. ಅವರನ್ನು ನೋಡಿ ನಾವೆಲ್ಲಾ ಅರ್ಧ ಗಂಟೆ ಮೊದಲೇ ಸೆಟ್‌ನಲ್ಲಿ ಇರುತ್ತಿದ್ದೆವು.

'ದಸರಾ' ಪ್ರಚಾರಲು ಮಾಡಲು ರವಿಚಂದ್ರನ್ ನಿವಾಸಕ್ಕೆ ಭೇಟಿ ಕೊಟ್ಟ ತೆಲುಗು ನಟ ನಾನಿ!

ಒಂದು ಮರೆಯಲಾಗದ ಘಟನೆ..

ಮಧ್ಯಪ್ರದೇಶದಲ್ಲಿ ಚಲಿಸುತ್ತಿರುವ ಗೂಡ್‌್ಸ ರೈಲಿನಲ್ಲಿ ಒಂದು ಸ್ಟೇಷನ್‌ನಿಂದ ಮತ್ತೊಂದು ಸ್ಟೇಷನ್‌ಗೆ ಹೋಗುವಾಗ ನಟಿಸಬೇಕಿತ್ತು. ಬಹಳ ಕಷ್ಟಕರ ಅನುಭವ. ಆ ಎರಡು ಸ್ಟೇಷನ್‌ಗಳ ಮಧ್ಯದ ಪ್ರಯಾಣದ ಅವಧಿ ಎರಡು ಗಂಟೆ. ಅಲ್ಲಿಗೆ ಹೋಗುವಾಗ ಶೂಟಿಂಗ್‌ ಮುಗಿಸಿದೆವು. ವಾಪಸ್‌ ಬರುವಾಗ ಶೂಟಿಂಗ್‌ ಇರಲಿಲ್ಲ. ಕಲ್ಲಿದ್ದಲಿನ ಮೇಲೆ ಮಲಗಿ ವಾಪಸ್‌ ಬರಬೇಕಿತ್ತು. ನಾನು ಮತ್ತು ನಾಣಿ ಇಬ್ಬರೇ. ಆ ಗೂಡ್‌್ಸ ರೈಲಿನ ಮೇಲೆ ಕಲ್ಲಿದ್ದಲಿನ ಮೇಲೆ ಮಲಗಿಕೊಂಡು ಕಾಡು ಮೇಡು, ಜಲಪಾತಗಳನ್ನು ದಾಟುತ್ತಾ ಸಾಗುತ್ತಾ ನಾನು ನನ್ನ ಬದುಕಿನ ಬಗ್ಗೆ, ಅವರು ಅವರ ಬದುಕಿನ ಬಗ್ಗೆ ಹೇಳುತ್ತಿದ್ದರು. ನನಗೆ ಆಗ ಪೂರ್ಣಚಂದ್ರ ತೇಜಸ್ವಿಯ ಕತೆಯೊಳಗೆ ಹೋದಂತೆ ಭಾಸವಾಗಿತ್ತೂ. ಈಗಲೂ ಆ ಚಿತ್ರ ಹಾಗೇ ಇದೆ.

 

click me!