ಧಾರಾವಾಹಿಯ ಮೂಲಕ ಎಂಟ್ರಿ ಕೊಟ್ಟು ಕನ್ನಡ, ಮಲಯಾಳಂ, ತುಳು ಸಿನಿಮಾಗಳಲ್ಲಿ ನಾಯಕನಾದವರು ಶಿವಧ್ವಜ್ ಶೆಟ್ಟಿ. ಇವರು ನಿರ್ದೇಶಿಸಿದ ಕೊಡವ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇದೀಗ ಕನ್ನಡದಲ್ಲಿಯೂ ನಿರ್ದೇಶಕರಾಗಲು ಮುಂದಾಗಿರುವ ಶಿವಧ್ವಜ್ ಒಂದಷ್ಟು ಕನ್ನಡ ಧಾರಾವಾಹಿ, ರಿಯಾಲಿಟಿ ಶೋಗಳ ನಿರ್ಮಾಪಕರೂ ಹೌದು. ಲಾಕ್ಡೌನ್ ದಿನಗಳನ್ನು ಅವರು ಕಳೆದ ರೀತಿ ಮತ್ತು ಹೊಸ ಸಿನಿಮಾದ ಕನಸುಗಳೇನು ಎನ್ನುವ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.
ಧಾರಾವಾಹಿಯ ಮೂಲಕ ಎಂಟ್ರಿ ಕೊಟ್ಟು ಕನ್ನಡ, ಮಲಯಾಳಂ, ತುಳು ಸಿನಿಮಾಗಳಲ್ಲಿ ನಾಯಕನಾದವರು ಶಿವಧ್ವಜ್ ಶೆಟ್ಟಿ. ಇವರು ನಿರ್ದೇಶಿಸಿದ ಕೊಡವ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇದೀಗ ಕನ್ನಡದಲ್ಲಿಯೂ ನಿರ್ದೇಶಕರಾಗಲು ಮುಂದಾಗಿರುವ ಶಿವಧ್ವಜ್ ಒಂದಷ್ಟು ಕನ್ನಡ ಧಾರಾವಾಹಿ, ರಿಯಾಲಿಟಿ ಶೋಗಳ ನಿರ್ಮಾಪಕರೂ ಹೌದು. ಲಾಕ್ಡೌನ್ ದಿನಗಳನ್ನು ಅವರು ಕಳೆದ ರೀತಿ ಮತ್ತು ಹೊಸ ಸಿನಿಮಾದ ಕನಸುಗಳೇನು ಎನ್ನುವ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.
ಶಶಿಕರ ಪಾತೂರು
undefined
ಲಾಕ್ಡೌನ್ ದಿನಗಳನ್ನು ಹೇಗೆ ವಿನಿಯೋಗಿಸಿದಿರಿ?
ಮೊದಲ ನಾಲ್ಕು ದಿನ ಡಿಪ್ರೆಶನ್ ಆದ ಹಾಗಾಯಿತು. ಯಾಕೆಂದರೆ ಸದಾ ಚಟುವಟಿಕೆಗಳಲ್ಲಿ ನಿರತನಾಗಿದ್ದ ವ್ಯಕ್ತಿ ನಾನು. ಒಮ್ಮೆಲೆ ಅದು ನಿಂತು ಹೋದಾಗ ಮನಸು ಸ್ಥಿಮಿತಕ್ಕೆ ತಂದುಕೊಳ್ಳುವುದೇ ಚಾಲೆಂಜ್ ಆಗಿತ್ತು. ಆಮೇಲೆ ಒಂದು ಟೈಮ್ ಟೇಬಲ್ ಹಾಕಿಕೊಂಡಂತೆ ಕೆಲಸದಲ್ಲಿ ತೊಡಗಿಸಿಕೊಂಡೆ. ಉದಾಹರಣೆಗೆ ಮೊದಲೆಲ್ಲ ಬೆಳಗ್ಗಿನ ವ್ಯಾಯಾಮವನ್ನು ಸಮಯ ಸಿಕ್ಕಷ್ಟೇ ಹೊತ್ತು ಮಾಡುತ್ತಿದ್ದೆ. ಆದರೆ ಈ ಎರಡು ಮೂರು ತಿಂಗಳಲ್ಲಿ ಒಂದು ಗಂಟೆಯನ್ನು ವರ್ಕೌಟ್ ಮಾಡಲೆಂದೇ ನೀಡಿದ್ದೇನೆ. ಅದರ ಪರಿಣಾಮವಾಗಿ ಮೂರು ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಮನೆಯಲ್ಲಿ ಪತ್ನಿಗೆ ಅಡುಗೆಗೆ ಸಹಾಯ ಮಾಡುತ್ತಿದ್ದೆ. ಮನೆಕೆಲಸದವರು ಬರುತ್ತಿರಲಿಲ್ಲ. ಮಂಗಳೂರಿನ ಸ್ಪೆಷಲ್ `ಪೋಡಿ'ಯಿಂದ ಹಿಡಿದು `ಕೋಳಿ'ಯ ತನಕ ಎಲ್ಲ ರೀತಿಯ ಅಡುಗೆ ನಾ ಮಾಡಬಲ್ಲೆ! ಆಮೇಲೆ ಅಮೆಜಾನ್, ನೆಟ್ ಫ್ಲಿಕ್ಸ್ ನಲ್ಲಿ ಒಂದಷ್ಟು ಸಿನಿಮಾಗಳನ್ನು ನೋಡಿದೆ. ಜತೆಗೆ ನಾನೇ ಒಂದು ಚಿತ್ರ ಮಾಡಲಿಕ್ಕಾಗಿ ಕತೆಯನ್ನು ತಯಾರು ಮಾಡಿದ್ದೇನೆ.
ಸುಮಧುರ ಕಂಠದಿಂದ ಕನ್ಡಡಿಗರ ಹೃದಯ ಕದ್ದ ರಾಜೇಶ್ ಕೃಷ್ಣನ್
ಹೊಸ ಚಿತ್ರದಲ್ಲಿ ನೀವೇ ನಾಯಕರಾಗಿರುತ್ತೀರ?
ಇಲ್ಲ ಅದು ನಾನು ನಿರ್ದೇಶಿಸಲಿರುವ ಚಿತ್ರ. ಯುವ ಪ್ರೇಮಿಗಳ ಪ್ರೇಮಕತೆಯಾದ ಕಾರಣ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡುವ ಯೋಜನೆ ನನ್ನದು. ನನ್ನ ಆತ್ಮೀಯರೊಡನೆ ಈ ಬಗ್ಗೆ ಫೋನಲ್ಲೇ ಡಿಸ್ಕಶನ್ ಮಾಡಿದ್ದೇನೆ. ಒಂದು ರೀತಿ ಬೇಸಿಕ್ ತಯಾರಿ ಎಲ್ಲವೂ ಮುಗಿದಿದೆ. ನನ್ನ ಮಟ್ಟಿಗೆ ನಾನು ಒಂದು ಕತೆಯನ್ನು ಬರೆದಾಗಲೇ ಅದರೊಳಗೆ ಸಂಪೂರ್ಣವಾಗಿ ವಿಲೀನಗೊಂಡು ನಿರ್ದೇಶನ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ನಾನೇ ಕತೆ ಬರೆದಿದ್ದೇನೆ. ನಿರ್ದೇಶನದ ಜತೆಗೆ ನಿರ್ಮಾಪಕನೂ ನಾನೇ ಆಗಿರುವುದರಿಂದ ಸಿನಿಮಾರಂಗ ಚಿತ್ರೀಕರಣಕ್ಕೆ ತಯಾರಾಗುತ್ತಿದ್ದ ಹಾಗೆ ನಮ್ಮ ಸಿನಿಮಾ ಚಿತ್ರೀಕರಣವೂ ಶುರುವಾಗಲಿದೆ ಎಂದು ಹೇಳಬಲ್ಲೆ.
`ಮಜಾ ಭಾರತ' ಆರಂಭವಾಗುವುದಕ್ಕೂ ಕಾಲಾವಕಾಶ ಇರುವಂತಿದೆ?
ಹೌದು, ನಿಮಗೆಲ್ಲ ತಿಳಿದಿರುವಂತೆ `ಕಲರ್ಸ್ ಸೂಪರ್' ಸ್ಥಗಿತಗೊಳ್ಳುತ್ತಿರುವ ಕಾರಣ, ನನ್ನ ನಿರ್ಮಾಣದ `ಮಜಾ ಭಾರತ' ರಿಯಾಲಿಟಿ ಶೋ ಇನ್ನು ಮುಂದೆ `ಕಲರ್ಸ್ ಕನ್ನಡ'ದಲ್ಲಿ ಮುಂದುವರಿಯುತ್ತದೆ. ಈಗಾಗಲೇ ಧಾರಾವಾಹಿಗಳ ಚಿತ್ರೀಕರಣ ಆರಂಭವಾಗಿದೆ. ಅದೇ ಮುಂಜಾಗರೂಕತೆ ಬಳಸಿಕೊಂಡು ರಿಯಾಲಿಟಿ ಶೋಗಳನ್ನು ಕೂಡ ಆರಂಭಿಸಬಹುದು. ಆದರೆ ನಮ್ಮ `ಮಜಾಭಾರತ' ಸೇರಿದಂತೆ ಬಹಳಷ್ಟು ರಿಯಾಲಿಟಿ ಶೋಗಳಿಗೆ ಪ್ರೇಕ್ಷಕರು ಕೂಡ ಬೇಕಾಗುತ್ತಾರೆ. ಪ್ರೇಕ್ಷಕರನ್ನು ಜತೆಯಾಗಿ ಸೇರಿಸುವುದು ಸದ್ಯದ ಮಟ್ಟಿಗೆ ಅಪಾಯಕಾರಿ. ಅಲ್ಲದೆ ನಮ್ಮ ಶೋನಲ್ಲಿ ಮುಂಬೈ ಮತ್ತು ಚೆನ್ನೈನಿಂದ ತಂತ್ರಜ್ಞರು ಇದ್ದಾರೆ. ಸೆಟ್ ಹಾಕುವುದು ಕೂಡ ಅಲ್ಲಿನವರೇ ಆಗಿರುವ ಕಾರಣ ತಡವಾಗುವುದು ಖಚಿತ. ತೀರ್ಪುಗಾರರಾಗಿ ರಚಿತಾ ಮತ್ತು ಗುರುಕಿರಣ್ ಅವರೇ ಇರುತ್ತಾರೆ. ಸಿನಿಮಾದ ವಿಚಾರಕ್ಕೆ ಬಂದರೆ ಅಲ್ಲಿಯೂ ತುಂಬ ಜನ ಸೇರಬೇಕಾಗುತ್ತದೆ ಮತ್ತು ಥಿಯೇಟರಲ್ಲಿ ಬಿಡುಗಡೆಗೊಳಿಸುವುದು ಕೂಡ ಕಷ್ಟ ಎನ್ನುವ ವಾತಾವರಣ ಇರುವ ಕಾರಣ ಇನ್ನೊಂದಷ್ಟು ಕಾಲ ಮುಂದೆ ಹೋಗುವ ಅನಿವಾರ್ಯತೆ ಇದೆ. ಈ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಭರವಸೆ ಇರುವವರಿಗೆ ಚಿತ್ರೀಕರಣ ನಡೆಸಲು ಸದ್ಯಕ್ಕೆ ಯಾವುದೇ ತಡೆ ಇಲ್ಲ.
ಪ್ರಿಯಾಮಣಿ 56ನೇ ಚಿತ್ರದ ಟೈಟಲ್ಲೇ ಸ್ಪೆಷಲ್
ಇಂಥದೊಂದು ಅನಿರೀಕ್ಷಿತ ಬಿಡುವಿನಲ್ಲಿ ಹೊಸತೇನಾದರೂ ಕಲಿತಿರಾ?
ಪ್ರಕೃತಿ ನನಗೆ ಮಾತ್ರವಲ್ಲ, ಪೂರ್ತಿ ಮಾನವ ಸಮಾಜಕ್ಕೆ ಒಂದು ಸಂದೇಶ ನೀಡಿದೆ. ದಿನ ಬೆಳಗಾದರೆ ಅವಸರದ ಬದುಕು ನಡೆಸುವ ಮಂದಿಗೆ `ನಿಧಾನವಾಗಿರು' ಎಂದು ಜೀವನದ ವೇಗದ ಮಿತಿ ತೋರಿಸಿಕೊಟ್ಟಿದೆ. ಮಗಳ ಮದುವೆಗೆಂದು ಅನಗತ್ಯವಾಗಿ ಅದ್ಧೂರಿತನದ ಖರ್ಚು ಮಾಡುವವರು ಅದೇ ಹಣವನ್ನು ತಮ್ಮ ಮಗಳ ಅಕೌಂಟ್‌ಗೆ ಹಾಕಿ ಜೀವನ ಭದ್ರಗೊಳಿಸಲು ಆರಂಭಿಸಿದ್ದಾರೆ. ನನ್ನ ಮಗಳ ವಿಚಾರಕ್ಕೆ ಬಂದರೆ ಈಗ ಅವಳು ಮಾಂಟೆಸ್ಸರಿ ಪಾಸಾಗಿದ್ದಾಳೆ. ಆಕೆಯ ಹೆಸರು ಶ್ರೀಯಾ ಶೆಟ್ಟಿ. ಆಕೆಯನ್ನು ಮುಂದಿನ ತರಗತಿಗೆ ಕಳಿಸುವುದಾದರೆ ಅದು ಕೋವಿಡ್ ಗೆ ಔಷಧಿ ಕಂಡು ಹಿಡಿದ ಮೇಲೆಯೇ. ಅದಕ್ಕೆ ಹತ್ತು ವರ್ಷ ತಡವಾದರೂ ಅಲ್ಲಿಯ ತನಕ ನಾವೇ ಆಕೆಗೆ ಮನೆಯಲ್ಲಿ ಶಿಕ್ಷಣ ನೀಡುತ್ತೇವೆ ಎನ್ನುವ ಮನಸ್ಥಿತಿ ನನ್ನದಾಗಿದೆ. ಮಗ ಧ್ಯಾನ್ ಶೆಟ್ಟಿ ಬಿಷಬ್ ಕಾಟನ್ ನಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿ. ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಇಷ್ಟೊಂದು ಆತ್ಮೀಯವಾದ ಸಮಯವನ್ನುಕಳೆಯಲು ಸಾಧ್ಯವಾಗಿದ್ದು ಅದೃಷ್ಟ ಎಂದುಕೊಂಡಿದ್ದೇನೆ.