ವಿ ಮನೋಹರ್ ಅವರ ಯೂ ಟ್ಯೂಬ್ ಸಿನಿಮಾ!

By Suvarna NewsFirst Published Jun 1, 2020, 11:31 AM IST
Highlights

ಸದ್ಯದ ಮಟ್ಟಿಗೆ ಮಾಸ್ ಹೀರೋಗಳು ಕೂಡ ಮಾಸ್ಕ್ ಒಳಗೆ ಸೇರಿಕೊಳ್ಳುವಂಥ ಸಂದರ್ಭ. ದೊಡ್ಡ ಪರದೆಗಳೆಲ್ಲ ತೆರೆಯುವುದೇ ಕಷ್ಟ ಎನ್ನುವಂತಾಗಿದೆ. ಹಾಗಂತ ಸ್ಟಾರ್ ಕಲಾವಿದರು ಸುಮ್ಮನಿರಲು ಸಾಧ್ಯವೇ? ತಮ್ಮದೇ ಒಂದೊಂದು ಫ್ಲಾಟ್ಫಾರ್ಮ್ ಮಾಡಿಕೊಂಡು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರ ನಡುವೆ ಜನಪ್ರಿಯ ಸಂಗೀತ ನಿರ್ದೇಶಕ, ಗೀತ ರಚನೆಕಾರ, ನಟ, ಸಿನಿಮಾ ನಿರ್ದೇಶಕ ವಿ ಮನೋಹರ್ ತಮ್ಮ ಈ ಎಲ್ಲ ಪ್ರತಿಭೆಗಳಿಗೆ ಒಂದು ಅದ್ಭುತ ವೇದಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಅದೇ `ಮಲ್ಲಿಗೆ ಮೂವೀಸ್' ಯೂ ಟ್ಯೂಬ್ ವಾಹಿನಿ. ಅದರಲ್ಲಿನ ವಿಶೇಷತೆಗಳ ಸ್ವತಃ ವಿ ಮನೋಹರ್ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.
 

ಸದ್ಯದ ಮಟ್ಟಿಗೆ ಮಾಸ್ ಹೀರೋಗಳು ಕೂಡ ಮಾಸ್ಕ್ ಒಳಗೆ ಸೇರಿಕೊಳ್ಳುವಂಥ ಸಂದರ್ಭ. ದೊಡ್ಡ ಪರದೆಗಳೆಲ್ಲ ತೆರೆಯುವುದೇ ಕಷ್ಟ ಎನ್ನುವಂತಾಗಿದೆ. ಹಾಗಂತ ಸ್ಟಾರ್ ಕಲಾವಿದರು ಸುಮ್ಮನಿರಲು ಸಾಧ್ಯವೇ? ತಮ್ಮದೇ ಒಂದೊಂದು ಫ್ಲಾಟ್ಫಾರ್ಮ್ ಮಾಡಿಕೊಂಡು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರ ನಡುವೆ ಜನಪ್ರಿಯ ಸಂಗೀತ ನಿರ್ದೇಶಕ, ಗೀತ ರಚನೆಕಾರ, ನಟ, ಸಿನಿಮಾ ನಿರ್ದೇಶಕ ವಿ ಮನೋಹರ್ ತಮ್ಮ ಈ ಎಲ್ಲ ಪ್ರತಿಭೆಗಳಿಗೆ ಒಂದು ಅದ್ಭುತ ವೇದಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಅದೇ `ಮಲ್ಲಿಗೆ ಮೂವೀಸ್' ಯೂ ಟ್ಯೂಬ್ ವಾಹಿನಿ. ಅದರಲ್ಲಿನ ವಿಶೇಷತೆಗಳ ಸ್ವತಃ ವಿ ಮನೋಹರ್ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

ಶಶಿಕರ ಪಾತೂರು

`ಓ ಮಲ್ಲಿಗೆ' ಸಿನಿಮಾದ ಕಾರಣದಿಂದ `ಮಲ್ಲಿಗೆ ಮೂವೀಸ್' ಹೆಸರಿಟ್ಟಿರಾ?

ಹೌದು, ಅದು ನನ್ನ ನಿರ್ದೇಶನದ ಮೊದಲ ಚಿತ್ರವಾಗಿತ್ತು. ಅದರಲ್ಲಿ ನಾನು ಸಂಗೀತ ನೀಡಿದ ಹಾಡಿಗಾಗಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ರಾಜ್ಯ ಪ್ರಶಸ್ತಿ ದೊರಕಿತ್ತು. ಈ ಎಲ್ಲ ಕಾರಣದಿಂದ ನನಗೆ ಅದು ಸದಾ ಆಪ್ತ. ಆದರೆ ನಾನು ಮೊದಲು ಪದ್ಮರಾಗ ಎಂದು ಹೆಸರಿಡಲು ಬಯಸಿದ್ದೆ. ಯಾಕೆಂದರೆ ನನ್ನ ತಾಯಿಯ ಹೆಸರು ಪದ್ಮಾವತಿ ಎಂದು. ಪದ್ಮರಾಗ ಎಂದರೆ ನವರತ್ನಗಳಲ್ಲಿ ಒಂದು. ಆದರೆ ನಾನು ರಾಗವನ್ನು ಸೇರಿಸಲು ಕಾರಣ ಸಂಗೀತ ಪ್ರಿಯ ಎನ್ನುವ ಕಾರಣಕ್ಕೆ. ಆದರೆ ಆ ಹೆಸರಲ್ಲಿ ಈಗಾಗಲೇ ಚಾನೆಲ್ ಇದ್ದ ಕಾರಣ ನನಗೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಹಾಗೆ ಮಲ್ಲಿಗೆ ಮೂವೀಸ್‌ಗೆ ಫಿಕ್ಸ್‌ ಆದೆ.

`ಮಲ್ಲಿಗೆ ಮೂವೀಸ್' ಮೂಲಕ ನೀವು ಹಾಡುಗಳನ್ನು ಹಂಚಿಕೊಳ್ಳುತ್ತೀರ?

ನನ್ನ ಮೊದಲ ಆದ್ಯತೆ ಹಾಡುಗಳಿಗಾಗಿಯೇ ಇರುತ್ತದೆ. ಯಾಕೆಂದರೆ ನಾನು ಆಲ್ರೆಡಿ ಟ್ಯೂನ್ ಮಾಡಿರುವ ಹಾಡುಗಳೇ ಸಾಕಷ್ಟು ಇವೆ. ಸಿನಿಮಾಗಳಿಗೆ ಸಂಗೀತ ನೀಡುವಾಗ ನಾವು ನೀಡುವ ಹಾಡುಗಳಲ್ಲಿ ನಿರ್ದೇಶಕರ ಟೇಸ್ಟ್ ಕೂಡ ಇರುತ್ತದೆ. ಆದರೆ ನಾನು ಸಂಪೂರ್ಣ ಸ್ವಾತಂತ್ರ್ಯ ತೆಗೆದುಕೊಂಡು ಸಂಗೀತ ನೀಡಿರುವ ಒಂದಷ್ಟು ಹಾಡುಗಳು ನನ್ನಲ್ಲೇ ಇವೆ. ಅವುಗಳನ್ನು ಮಲ್ಲಿಗೆ ಮೂವೀಸ್ ಮೂಲಕ ಬಿಡುಗಡೆಗೊಳಿಸಲಿದ್ದೇನೆ. ಮಾತ್ರವಲ್ಲ, ಅವುಗಳಿಗೆ ಹೊಂದುವಂಥ ಕಿರುಚಿತ್ರ, ಹಾಸ್ಯದ ಕಾರ್ಯಕ್ರಮಗಳು, ಸದ್ಯದ ಸಾಮಾಜಿಕ, ರಾಜಕೀಯ ವಿಚಾರಗಳ ಕುರಿತಾದ ನನ್ನ ಅನಿಸಿಕೆಗಳು ಇವೆಲ್ಲವೂ ಅದರಲ್ಲಿ ಇರಲಿವೆ.

ಲಾಕ್ಡೌನ್ ದಿನಗಳಲ್ಲಿ ಮಲ್ಲಿಗೆ ಮೂವೀಸ್ ತಯಾರಿಯಲ್ಲೇ ತೊಡಗಿಸಿಕೊಂಡಿದ್ದಿರಾ?

ನಿಜ. ಆದರೆ ಇದರ ಜತೆಗೆ ಒಂದಷ್ಟು ಭಕ್ತಿಗೀತೆಗಳ ರಚನೆಯನ್ನೂ ಮಾಡಬೇಕಿತ್ತು. ಆಂಜನೇಯ ಸ್ವಾಮಿಯ ಭಕ್ತಿಗೀತೆಯ ಆಲ್ಬಮ್ ಒಂದಕ್ಕೆ ಮೂವತ್ತು ಹಾಡುಗಳನ್ನು ರಚಿಸಿದ್ದೇನೆ. ಅದರ ನಡುವೆ ಇಂಥದೊಂದು ಯೂ ಟ್ಯೂಬ್ ವಾಹಿನಿ ತರಬೇಕು ಎನ್ನುವ ಆಕಾಂಕ್ಷೆ ಇತ್ತು. ಆದರೆ ಅದನ್ನು ಲಾಂಚ್ ಮಾಡಬೇಕಾದರೆ ಒಂದು ಒಳ್ಳೆಯ ಅಂಶದ ಜತೆಯಲ್ಲೇ ಹೊರಗೆ ತರಬೇಕಿತ್ತು. ಅದಕ್ಕಾಗಿ `ವಿಎಮ್ಸ್ ಚಾಟ್ ಮಸಾಲ' ಎನ್ನುವ ಕಾನ್ಸೆಪ್ಟ್ ಮಾಡಿಕೊಂಡೆ. ಇದರಲ್ಲಿ ನಾನಲ್ಲದೆ ಸಾಕಷ್ಟು ಮಂದಿ ಕಲಾವಿದರು ಭಾಗಿಯಾಗಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಖಂಡಿತವಾಗಿ ಆಕರ್ಷಕವೆನಿಸುವುದರಲ್ಲಿ ಸಂದೇಹವಿಲ್ಲ.

ಕೊರೋನಾ ಬಗ್ಗೆ ಮೊದಲೇ ಕಲ್ಪಿಸಿಕೊಂಡಿದ್ದ ವಿ ಮನೋಹರ್‌! .

`ವಿ ಎಮ್ಸ್' ಚಾಟ್ ಮಸಾಲ'ದ ವಿಶೇಷತೆಗಳ ಬಗ್ಗೆ ಹೇಳಿ

ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಒಂದಷ್ಟು ಕಾರ್ಯಕ್ರಮಗಳನ್ನು ಸೆಲೆಬ್ರಿಟಿಗಳು ಮಾಡಿರುವುದನ್ನು ನೋಡಿರುತ್ತೀರಿ.  ನಾನು ಕಲಾವಿದರನ್ನು ಬಳಸಿ ಹಾಡು ಮಾಡುವ ಯೋಜನೆಯಲ್ಲಿದ್ದೆ. ಅಷ್ಟರಲ್ಲಿ ನಿರ್ದೇಶಕ ಪವನ್ ಒಡೆಯರ್ ಕೂಡ ಮಾಡಿದ್ರು.  

ಹಾಗಾಗಿ ಅವೆಲ್ಲಕ್ಕಿಂತ ಭಿನ್ನವಾಗಿ ಒಂದು ಕಾನ್ಸೆಪ್ಟ್ ಮಾಡಬೇಕಿತ್ತು. 20 ಹಾಡುಗಳ ಮೂಲಕ ಕತೆ ಹೇಳುವ ಮ್ಯೂಸಿಕಲ್ ‌ಫಿಲ್ಮ್ ಮಾಡೋಣ ಎಂದು ಹಾಡು ಬರೆಯಲು ಶುರು ಮಾಡಿದೆ. ಲಾಕ್ಡೌನ್ ಟೈಮಲ್ಲಿ‌ ಅವಯಗಳು ಪರಸ್ಪರ ಏನು‌ ಮಾತನಾಡಿಕೊಳ್ಳಬಹುದು ಎನ್ನುವುದೇ ‌ನನ್ನ ಕಾನ್ಸೆಪ್ಟ್. ನಮ್ಮ ಪಂಚೇಂದ್ರಿಯಗಳು ಸೇರಿದಂತೆ ಎಲ್ಲ ಅವಯಗಳು ಹಾಡುವಂಥ ದೃಶ್ಯಗಳನ್ನು ಸೃಷ್ಟಿಸಿದೆ. ಇದಕ್ಕಾಗಿ ಯುವಗಾಯಕ, ಗಾಯಕಿರು, ಸಂಗೀತ ನಿರ್ದೇಶಕರು ಸೇರಿ ಸುಮಾರು ಒಂಬತ್ತು ಮಂದಿ ಸಂಗೀತ ವಿಭಾಗದಲ್ಲಿ ನನಗೆ ಸಾಥ್ ನೀಡಿದ್ದಾರೆ. 

ಕಲಾವಿದರ ಬಗ್ಗೆ ಮಾಹಿತಿ ನೀಡಬಹುದೇ?

ಇಪ್ಪತ್ತು ಹಾಡುಗಳಿರುವ ಕಾರಣ ಸಾಕಷ್ಟು ಕಲಾವಿದರು ಇದ್ದಾರೆ. ಇದರಲ್ಲಿ ಕೊರೊನಾ ಪಾತ್ರವನ್ನು ಮಿಮಿಕ್ರಿ ದಯಾನಂದ್ ಮಾಡಿದ್ದಾರೆ. ಮೂಗಿನ ಪಾತ್ರ ಮೂಗು ಸುರೇಶ್, ಕಣ್ಣು ಮತ್ತು ಹಲ್ಲುಗಳಾಗಿ ರಮಾನಂದ್, ನಾಲಿಗೆಯಾಗಿ ನಟಿ ಶುಭ ರಕ್ಷಾ, ಜಠರವಾಗಿ ಪಿಡಿ‌ ಸತೀಶ್, ಜೋಡಿ ಕಿಡ್ನಿಗಳಿಗೆ ಮೇರಿ ಕಿಡ್ನಿಮತ್ತು  ರೋಸಿ ಕಿಡ್ನಿ ಎಂದು ಹೆಸರಿಟ್ಟಿದ್ದು ಅದನ್ನು ಕೂಡ ಇಬ್ಬರು ಕಲಾವಿದೆಯರು ಅಭಿನಯಿಸಿದ್ದಾರೆ. ಹೃದಯವಾಗಿ ಗೀತರಚನೆಕಾರ, ನಿರ್ದೇಶಕ ಹೃದಯ ಶಿವ ಅಭಿನಯಿಸಿದ್ದಾರೆ. ಕುದ್ರೋಳಿ ಗಣೇಶ್ ಅವರು ಬ್ರೈನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ  ನಕುಲ್ ಅಭಯಂಕರ್, ವಿಜೆ ಭರತ್, ಗಾಯಕಿ ಬಿ ಆರ್ ಛಾಯಾ ,  ಮಾನಸ ಹೊಳ್ಳ, ಚೈತ್ರಾ ಹೀಗೆ ಒಟ್ಟು 15 ಮಂದಿ ಕೆಲಸ ಮಾಡಿದ್ದಾರೆ. ಯಾರಿಗೂ‌ ದುಡ್ಡು ಕೊಟ್ಟಿಲ್ಲ. ಕೊಟ್ಟಿದ್ದರೆ ಏಳೆಂಟು ಲಕ್ಷ ಖರ್ಚಾಗುತ್ತಿತ್ತು. ಎಲ್ಲರೂ ಸ್ನೇಹಕ್ಕಾಗಿ ಮಾಡಿದ್ದಾರೆ. ಅವರೆಲ್ಲರನ್ನು ಅಭಿನಂದಿಸುತ್ತೇನೆ. ಮುತ್ತು ರಾಜ್ ಅವರ ಸಂಕಲನ ಹೈಲೈಟ್ ಆಗಲಿದೆ. ಇಂದು ಮಧ್ಯಾಹ್ನ 12  ಗಂಟೆ ಲಾಂಚ್ ಆಗಲಿದ್ದು ಎಲ್ಲರೂ ನೋಡಿ ಪ್ರೋತ್ಸಾಹಿಸುವಂತೆ ವಿನಂತಿಸುತ್ತೇನೆ.

click me!