ಡಾಲಿ ಧನಂಜಯ್ ಸಂದರ್ಶನ/ ಶೂಟಿಂಗ್ ಶುರುವಾಗಲಿ ಎನ್ನುತ್ತಾರೆ ಡಾಲಿ/ ನಾಯಕನಾಗಿಯೂ ರಂಜಿಸಿದ್ದ ಯುವ ನಟ/ ಕೊರೋನಾ ಬಗ್ಗೆ ಧನಂಜಯ್ ಏನ್ ಹೇಳ್ತಾರೆ?
ಶಶಿಕರ ಪಾತೂರು
ರಂಗಭೂಮಿಯಿಂದ ಸಿನಿಮಾರಂಗಕ್ಕೆ ಬಂದವರು ಮೊದಲ ಚಿತ್ರದಲ್ಲೇ ಸ್ಟಾರ್ ಆಗಬೇಕಿಲ್ಲ. ಆದರೆ ಒಂದಲ್ಲ ಒಂದು ದಿನ ಅವರ ನೈಜ ಪ್ರತಿಭೆಯನ್ನು ಗುರುತಿಸುವ ಕಾಲ ಬರುತ್ತದೆ ಎನ್ನುವುದಕ್ಕೆ ಧನಂಜಯ್ ಅವರಿಗಿಂತ ಉತ್ತಮ ಉದಾಹರಣೆ ಮತ್ತೊಬ್ಬರು ಸಿಗಲಿಕ್ಕಿಲ್ಲ. ನಾಯಕನಾಗಿ ಆಕರ್ಷಕವಾಗಿಯೇ ಕಾಣಿಸಿಕೊಳ್ಳುತ್ತಿದ್ದ ಧನಂಜಯ್ ನನ್ನು ಖಳನಾಯಕನಾಗಿ ಸ್ಟಾರ್ ಮಾಡಿದವರು ನಿರ್ದೇಶಕ ಸೂರಿ. `ಟಗರು' ಚಿತ್ರದ ಮೂಲಕ ಡಾಲಿಯಾಗಿ ಹೆಸರು ಮಾಡಿದ ಧನಂಜಯ್ ಬಳಿಕ ಖಾಲಿಯಾಗಿ ಕುಳಿತಿದ್ದೇ ಇಲ್ಲ. ಅಷ್ಟೊಂದು ಅವಕಾಶಗಳ ಸುರಿಮಳೆಯಾಯಿತು. ಸೂರಿಯವರದೇ ಚಿತ್ರವಾದ `ಪಾಪ್ ಕಾರ್ನ್ ಮಂಕಿ ಟೈಗರ್' ಮೂಲಕ ನಾಯಕನಾಗಿಯೂ ಅಭಿಮಾನಿಗಳನ್ನು ಸಂಪಾದಿಸಿದರು. ಯಶಸ್ಸಿನ ಹುಮ್ಮಸ್ಸು ಕೂಡಿಕೊಂಡಾಗ `ಬಡವ ರ್ಯಾಸ್ಕಲ್' ಎನ್ನುವ ಚಿತ್ರದ ನಿರ್ಮಾಣಕ್ಕೂ ಮುಂದಾಗಿದ್ದ ಧನಂಜಯ್ ಕೊರೊನಾ ಕಾರಣದಿಂದ ಎಲ್ಲರಂತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಅದರ ನಡುವೆ ಕೂಡ ಅವರು ನಡೆಸಿದ ಸಮಾಜ ಸೇವೆ ಮತ್ತು ಇತರ ಚಟುವಟಿಕೆಗಳ ಬಗ್ಗೆ ಸ್ವತಃ ಧನಂಜಯ್ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.
undefined
ನೀವು ಲಾಕ್ಡೌನ್ ದಿನಗಳನ್ನು ಕಳೆದ ರೀತಿ ಹೇಗೆ?
ನಾನು ನಾಲ್ಕು ಜನ ಸ್ನೇಹಿತರ ಜತೆಗೆ ಬೆಂಗಳೂರಲ್ಲೇ ಇದ್ದೆ. ನಾವು ಸಾಕಷ್ಟು ಸಿನಿಮಾ ನೋಡಿದ್ದೇವೆ. ಅವುಗಳಲ್ಲಿ ತುಂಬ ಇಷ್ಟವಾಗಿರುವ ಒಂದರೆಡು ಚಿತ್ರಗಳ ಹೆಸರು ಹೇಳುತ್ತೇನೆ. ಯಾಕೆಂದರೆ ನೋಡದೆ ಇರುವವರು ನೋಡಬೇಕು ಈ ಚಿತ್ರಗಳನ್ನು. ಒಂದು ಮಲಯಾಳಂ ಸಿನಿಮಾ `ಅಯ್ಯಪ್ಪನುಂ ಕೋಶಿಯುಂ' ನನಗೆ ತುಂಬ ಇಷ್ಟವಾಯಿತು. ಅದರಲ್ಲಿ ಒಬ್ಬ ಸ್ಟಾರ್ ನಾಯಕನಾಗಿದ್ದುಕೊಂಡು ಪೃಥ್ವಿರಾಜ್ ಆರಿಸಿಕೊಂಡಿರುವ ನೆಗೆಟಿವ್ ಶೇಡ್ ಪಾತ್ರವನ್ನು ಮೆಚ್ಚಲೇಬೇಕು. ನಮ್ಮ`ಈಗೊ' ಕಾರಣದಿಂದಾಗ ಸಣ್ಣದೊಂದು ಘಟನೆ ಹೇಗೆ ದೊಡ್ಡ ಸಮಸ್ಯೆಯಾಗಿ ಬದಲಾಗಿ ಬಿಡುತ್ತದೆ ಎನ್ನುವುದೇ ಚಿತ್ರ. ಇನ್ನೊಂದು `ಲಿಟ್ಲ್ ವುಮನ್' ಎನ್ನುವ ವಿದೇಶೀ ಚಿತ್ರ. ಅಕ್ಕ ತಂಗಿಯರ ಕತೆ ಹೇಳುವ ಆ ಚಿತ್ರ ಕೂಡ ಇಷ್ಟವಾಗಿತ್ತು. ಇದಲ್ಲದೆ ಸ್ನೇಹಿತರ ಜತೆ ಕಾರ್ಡ್ಸ್ ಆಡಿದ್ದೇನೆ. ಹಾಗಂತ ದುಡ್ಡು ಕಟ್ಟಿ ಕಾರ್ಡ್ಸ್ ಆಡುವ ಹವ್ಯಾಸ ನನಗಿಲ್ಲ.
ಎರಡು ಕೋಟಿಗೆ ಡಾಲಿ ಧನಂಜಯ್ ಚಿತ್ರ ಮಾರಾಟ
ಆದರೆ ನಿಮಗೆ ಸಮಾಜ ಸೇವೆಯ ಒಳ್ಳೆಯ ಹವ್ಯಾಸ ಇದೆಯಂತೆ?
ಅದು ಸಹವಾಸ ದೋಷ! ಕಳೆದ ಬಾರಿ ಪ್ರವಾಹ ಆಗಿದ್ದಾಗ ನನ್ನ ಸ್ನೇಹಿತರು ಕೊಡಗು, ಉತ್ತರ ಕರ್ನಾಟಕಕ್ಕೆ ಹೋಗಿ ಅವರಿಗೆ ಸಹಾಯ ಮಾಡಿದ್ದರು. ಆದರೆ ನನಗೆ ಆಗ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಅವರು ಬಂದು ಅಲ್ಲಿನ ಪರಿಸ್ಥಿತಿಯನ್ನು ನನ್ನಲ್ಲಿ ವಿವರಿಸುವಾಗ ನಾನು ಕೂಡ ಭಾಗಿಯಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಿದ್ದೆ. ಹಾಗಾಗಿ ಈ ಬಾರಿ ಕೊರೊನಾ ಸಂಕಷ್ಟ ಎದುರಾದಾಗ ನಾನು ಹೆಚ್ಚು ಯೋಚಿಸಲೇ ಇಲ್ಲ. ಯಾಕೆಂದರೆ ಬಡವರ ಬದುಕು ನನ್ನ ಕಣ್ಣೆದುರಲ್ಲೇ ಇತ್ತು. ಮನೆ ಹತ್ತಿರದ ಪೆಟ್ಟಿಗೆ ಅಂಗಡಿಯವರು ಅನಿವಾರ್ಯವಾಗಿ ಅದನ್ನು ಮುಚ್ಚಿದ್ದರು. ಬಳಿಕ ತರಕಾರಿ ಗಾಡಿ ಹಾಕಿ ವ್ಯಾಪಾರ ಮಾಡುತ್ತಿದ್ದುದನ್ನು ಕಣ್ಣಾರೆ ನೋಡಿದ್ದೆ. ಹಾಗಾಗಿ ನಾನಿರುವ ಸುತ್ತಮುತ್ತಲ ಏರಿಯಾಗಳಿಂದಲೇ ನನ್ನಿಂದಾಗುವ ರೀತಿಯಲ್ಲಿ, ಆರ್ಥಿಕವಾಗಿ ಸಹಾಯ ಮಾಡಿದ್ದೇನೆ.
ಸ್ವತಃ ಬೀದಿಗೆ ಇಳಿದು ಸೇವಾನಿರತನಾದ ಅನುಭವ ಹೇಗಿತ್ತು?
ನಾನು ಚಿಕ್ಕದಾಗಿ ಡೊನೇಶನ್ ಶುರು ಮಾಡಿದರೂ, ಅದು ಅವರ ಕೈಸೇರುವುದನ್ನು ಕಣ್ಣಾರೆ ಕಾಣುವ ಆಕಾಂಕ್ಷೆ ಇತ್ತು. ಹಾಗಾಗಿ ಕಿಟ್ ವಿತರಣೆಯ ಸಂದರ್ಭದಲ್ಲಿ ಕೂಡ ಸ್ನೇಹಿತರೊಂದಿಗೆ ಸೇರಿ ನಾನೇ ಅವರ ಮುಂದೆ ಹಾಜರಾಗಿದ್ದೆ. ಆದರೆ ಒಮ್ಮೆಲೆ ಹಸಿದ ಕ್ರೌಡ್ ಬಂದಾಗ ಅವರನ್ನು ಕಂಟ್ರೋಲ್ ಮಾಡುವುದು ಎಷ್ಟು ಕಷ್ಟವಾಗಿರುತ್ತದೆ ಎನ್ನುವುದು ನನಗೆ ಅರ್ಥವಾಯಿತು. ರಾಯಚೂರು, ಯಾದಗಿರಿಯಿಂದ ಇಲ್ಲಿಗೆ ಕೆಲಸಕ್ಕೆಂದು ಬಂದಿದ್ದಾಗ ಅವರಿಗೆ ಸಹಾಯ ಮಾಡೋಕೆ ಹೋಗಿದ್ದೆವು. ಆದರೆ ಸ್ಥಳೀಯವಾಗಿ ಬೆಂಗಳೂರಲ್ಲೇ ಬಾಡಿಗೆಗೆ ಇರುವ ಕೆಳಮಧ್ಯಮ ವರ್ಗದವರು ಕೂಡ ತಮ್ಮ ಕಷ್ಟ ಹೇಳಿಕೊಂಡು ಬರುತ್ತಿದ್ದರು. ಅವರಿಗೂ ಕಷ್ಟವಿರುವುದು ನಿಜ. ಆದರೆ ಅಗತ್ಯ ಇರುವ ಎಲ್ಲರಿಗೂ ನೀಡಲಾಗದೇ ಇರುವಾಗ ನಮ್ಮೊಳಗೆ ಆಗುವ ತಾಕಲಾಟ ನೀಡಿದಾಗ ಸಿಕ್ಕ ಸಂತೃಪ್ತಿಯನ್ನೂ ಮೀರಿತ್ತು.
ನಿಮ್ಮನ್ನುಸಿನಿಮಾಗಳ ಮೂಲಕ ಎದುರು ನೋಡುತ್ತಿರುವವರಿಗೆ ಏನು ಹೇಳುತ್ತಿರಿ?
ಎಲ್ಲರಂತೆ ನನಗೂ ಸಿನಿಮಾ ಚಿತ್ರೀಕರಣ ಯಾವಾಗ ಶುರುವಾದೀತು ಎನ್ನುವ ಬಗ್ಗೆ ಯಾವುದೇ ಅರಿವಿಲ್ಲ. ಧಾರಾವಾಹಿಗಳ ಚಿತ್ರೀಕರಣ ಯಶಸ್ವಿಯಾಗಿ ನಡೆದಿದೆ ಎನ್ನುವಾಗ , ಕನಿಷ್ಠ ಅದೇ ನಿಬಂಧನೆಗಳಲ್ಲಿ ಚಿತ್ರೀಕರಿಸಬಲ್ಲ ಸಿನಿಮಾಗಳಿದ್ದರೆ ಅವುಗಳಿಗಾದರೂ ಸರ್ಕಾರ ಅನುವು ಮಾಡಿದ್ದರೆ ಚೆನ್ನಾಗಿತ್ತು. ಯಾಕೆಂದರೆ ಅರ್ಧದಲ್ಲಿರುವ ಸಿನಿಮಾಗಳ ನಿರ್ಮಾಪಕರು ಹೆಚ್ಚು ದಿನ ಕಾಯುವುದು ಕಷ್ಟ. ಯಾಕೆಂದರೆ ಸಾಮಾನ್ಯವಾಗಿ ಎಲ್ಲ ನಿರ್ಮಾಪಕರು ಕೂಡ ಬಡ್ಡಿಗೆ ಸಾಲ ಮಾಡಿಯೇ ಚಿತ್ರ ಮಾಡುತ್ತಿರುತ್ತಾರೆ. ಒಂದಕ್ಕಿಂತ ಹೆಚ್ಚು ಚಿತ್ರಗಳಿಗೆ ದುಡ್ಡು ಹಾಕಿರುತ್ತಾರೆ. `ಬಡವ ರ್ಯಾಸ್ಕಲ್' ಚಿತ್ರಕ್ಕೆ ನಾನೇ ನಿರ್ಮಾಪಕನಾದ ಕಾರಣ ನನಗೂ ಒಂದಷ್ಟು ಅನುಭವಗಳಿವೆ. ಅದರ ಕ್ಲೈಮ್ಯಾಕ್ಸ್ ಮಾತ್ರ ಬಾಕಿ ಇದೆ. ಎಲ್ಲ ಸರಿಯಾಗಿದ್ದರೆ ಈಗಾಗಲೇ `ಸಲಗ' ತೆರೆಕಂಡಿರಬೇಕಿತ್ತು. `ಯುವರತ್ನ'ದಲ್ಲಿಯೂ ನಟಿಸಿದ್ದೇನೆ. ಅಲ್ಲು ಅರ್ಜುನ್ ಜತೆಗಿನ ತೆಲುಗು ಚಿತ್ರ `ಪುಷ್ಪ'ದಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಅಷ್ಟರಲ್ಲಿ ಹೀಗೆಲ್ಲ ಕೊರೋನಾ ಕಾರಣಕ್ಕೆ ಲಾಕ್ ಡೌನ್ ಆಗಿದೆ.