ನನ್ನ ಲೈಫ್‌ ಡ್ರೈವ್‌ ಮಾಡುವ ಸಿನಿಮಾ ಸಲಗ : ದುನಿಯಾ ವಿಜಯ್‌

By Kannadaprabha NewsFirst Published Oct 14, 2021, 9:06 AM IST
Highlights

ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿರುವ, ಕೆ.ಪಿ.ಶ್ರೀಕಾಂತ್‌ ನಿರ್ಮಾಣದ ‘ಸಲಗ’ ಚಿತ್ರ ಇಂದು ತೆರೆಗೆ ಬರುತ್ತಿದೆ. ಈ ಹೊತ್ತಿನಲ್ಲಿ ತಮ್ಮ ಮೊದಲ ನಿರ್ದೇಶನದ ಚಿತ್ರದ ಕುರಿತು ವಿಜಯ್‌ ಸಂದರ್ಶನ.

ಆರ್‌. ಕೇಶವಮೂರ್ತಿ

1. ನಿರ್ದೇಶನದ ಅನುಭವ ಹೇಗಿತ್ತು? ನಿಮ್ಮ ಪ್ರಕಾರ ನಟನೆ, ನಿರ್ದೇಶನದಲ್ಲಿ ಯಾವುದು ಸುಲಭ?

ನಿರ್ದೇಶನ ನನಗೆ ಸಿಕ್ಕಿರುವ ಒಳ್ಳೆಯ ಅವಕಾಶ. ಅದನ್ನು ತುಂಬಾ ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಅನುಭವ ಮಾತಿನಲ್ಲಿ ಹೇಳಕ್ಕೆ ಆಗಲ್ಲ. ಆದರೆ, ಪ್ರೇಕ್ಷಕರು ನೋಡಿ ಗುಡ್‌, ಚೆನ್ನಾಗಿದೆ ಎಂದಾಗ ಅದೇ ನಮ್ಮ ಅನುಭವ ಆಗುತ್ತದೆ. ಸುಲಭ ಅಂತ ಯಾವುದೂ ಇಲ್ಲ. ಎರಡೂ ಸವಾಲು. ಅದರಲ್ಲೂ ನನ್ನ ಲೈಫ್‌ನ ಡ್ರೈವ್‌ ಮಾಡೋ ಸಿನಿಮಾ ಇದು. ಹೀಗಾಗಿ ಹೆಚ್ಚಿನ ಸವಾಲುಗಳನ್ನೇ ಎದುರಿಸುತ್ತಾ ಈ ಸಿನಿಮಾ ಮಾಡಿದ್ದೇನೆ.

2. ನಟನೆ ಮತ್ತು ನಿರ್ದೇಶನ ಈ ಎರಡರ ನಡುವೆ ನೀವು ಕಂಡ ವ್ಯತ್ಯಾಸಗಳೇನು?

ಒಂದೇ ಕ್ಷೇತ್ರದ ಎರಡು ವಿಭಾಗ ಇದು. ನಟನಾಗಿದ್ದಾಗ ನಿರ್ದೇಶಕ ಹೇಳಿಕೊಟ್ಟಿದ್ದನು ಮಾಡಿ ಮನೆಗೆ ಬರುತ್ತೇವೆ. ನಿರ್ದೇಶಕನಾಗಿದ್ದಾಗ ಬೇರೆಯವರಿಗೂ ಹೇಳಬೇಕು, ನನಗೂ ಹೇಳಿಕೊಳ್ಳಬೇಕು. ಏಕಕಾಲದಲ್ಲಿ ಎರಡು ಜವಾಬ್ದಾರಿಗಳನ್ನು ನಿಭಾಯಿಸಬೇಕು. ನಿರ್ದೇಶಕ ಅನ್ನೋದು ಮನೆಯ ಯಜಮಾನ ಇದ್ದಂತೆ, ನಟ ಅನ್ನೋದು ಆ ಮನೆಯ ಸದಸ್ಯನಂತೆ.

3. ‘ಸಲಗ’ ಚಿತ್ರಕ್ಕೆ ನೀವು ನಿರ್ದೇಶಕನಾಗಿದ್ದರ ಹಿನ್ನೆಲೆ ಏನು?

ಹೀರೋ ಆಗಿ ಬೇಡಿಕೆಯಲ್ಲಿದ್ದಾಗಲೇ ನಾನೇ ನಿರ್ದೇಶಕ ಆಗಿದ್ದು ಯಾಕೆ ಎಂಬುದಕ್ಕೆ ಬೇರೆಯದ್ದೇ ಕತೆ ಇದೆ. ಅದನ್ನು ಮುಂದೆ ಹೇಳುತ್ತೇನೆ. ಈಗ ಹೇಳಬೇಕು ಎಂದರೆ ಹಬ್ಬವನ್ನು ಎರಡು ರೀತಿ ಆಚರಿಸಬಹುದು. ಹೊರಗೆ ಮತ್ತು ಮನೆ ಒಳಗೆ. ಹೊರಗೆ ಹಬ್ಬ ಮಾಡಿದರೆ ನಾವು ಅದರ ಒಂದು ಭಾಗ ಅಷ್ಟೆ. ಮನೆಯಲ್ಲೇ ನಮ್ಮ ಹಬ್ಬ ಮಾಡಿ ಬೇರೆಯವರನ್ನು ಆಹ್ವಾನಿಸಿದರೆ ಆ ಸಂಭ್ರಮದ ಸಾರಥಿಯೇ ನಾವು ಆಗಿರುತ್ತೇವೆ. ಹೀಗಾಗಿ ‘ಸಲಗ’ ನಿರ್ದೇಶಕನಾಗಿದ್ದೇನೆ ಎಂದರೆ ನಮ್ಮ ಹಬ್ಬವನ್ನು ನಮ್ಮ ಮನೆಯಲ್ಲಿ ನಾವೇ ಆಚರಿಸಿದ್ದೇವೆ ಎಂದರ್ಥ.

ಜಗಳ ಮಾಡ್ತೀನಿ, ಉಪ್ಪಿ ಜೊತೆ ಮಾತ್ರ ಇಲ್ಲ, ಲವ್ ಯೂ ಉಪ್ಪಿ ಎಂದ ಶಿವಣ್ಣ

4. ಈ ಚಿತ್ರದ ಕತೆಗೆ ಯಾವುದು ಪ್ರೇರಣೆ?

ತುಂಬಾ ಕಾಡುವ ಒಂದು ಘಟನೆ ಮತ್ತು ಒಬ್ಬ ವ್ಯಕ್ತಿ ಇದ್ದಾನೆ. ಅದು ಸಿನಿಮಾ ಬಿಡುಗಡೆ ಆದ ಮೇಲೆ ಬಹಿರಂಗ ಮಾಡುತ್ತೇನೆ. 20 ವರ್ಷದ ಒಬ್ಬ ಹುಡುಗನನ್ನು ನೋಡಿ ಬರೆದ ಕತೆ ಇದು. ಆ ಹುಡುಗ ಯಾರು, ಅವನು ಯಾಕೆ ನನ್ನ ಕಾಡಿದ ಎಂಬುದು ಸಿನಿಮಾ ಬಂದ ಮೇಲೆ ಮಾತನಾಡುತ್ತೇನೆ.

5. ‘ಸಲಗ’ ಚಿತ್ರದ ಮೂಲಕ ಏನು ಹೇಳಲು ಹೊರಟಿದ್ದೀರಿ?

ಒಂದೇ ಸಾಲಿನಲ್ಲಿ ಹೇಳುವುದಾದರೆ ಮಕ್ಕಳು ಹುಷಾರಾಗಿ ಇರಿ ಎಂಬುದು. ಹುಷಾರಾಗಿ ಇರುವುದು ಹೇಗೆ, ಯಾಕೆ, ಅದರ ಹಿನ್ನೆಲೆ ಮತ್ತು ಸಂದರ್ಭಗಳು ಏನು ಎಂಬುದೇ ಇಡೀ ಸಿನಿಮಾ ಕತೆ.

"

6. ‘ಸಲಗ’ ಚಿತ್ರವನ್ನು ಟಗರು ಪಾರ್ಟ್‌ 2 ಅಂತಿದ್ದಾರಲ್ಲ?

ನನ್ನ ಶಿವಣ್ಣ ಅವರ ಜತೆ ಕಂಪೇರ್‌ ಮಾಡಿಕೊಳ್ಳಲಾರೆ. ನಮ್ಮ ಸಲಗ ಚಿತ್ರವೇ ಬೇರೆ, ‘ಟಗರು’ ಚಿತ್ರವೇ ಬೇರೆ. ಒಂದಕ್ಕೊಂದು ಸಂಬಂಧ ಇಲ್ಲ. ತಾಂತ್ರಿಕ ವಿಭಾಗದಲ್ಲಿ ಆ ಚಿತ್ರಕ್ಕೆ ಕೆಲಸ ಮಾಡಿದವರು ಇಲ್ಲಿ ಇರುವ ಕಾರಣ ಹೀಗೊಂದು ಮಾತು ಬರುತ್ತಿರಬಹುದು ಅಷ್ಟೆ.

7. ಇಲ್ಲಿ ಯಾರು ‘ಸಲಗ’, ನೀವಾ ಅಥವಾ ಧನಂಜಯ್‌ ಅವರಾ?

ನನ್ನ ಪ್ರಕಾರ ಇಬ್ಬರು ‘ಸಲಗ’ನೇ. ಆದರೆ, ನೀವು ಸಿನಿಮಾ ನೋಡಿದಾಗ ಯಾರು ನಿಮಗೆ ‘ಸಲಗ’ ಅನಿಸುತ್ತದೆ ಅಂತ ಹೇಳಬೇಕು.

ಶಿವಣ್ಣನಿಗೆ 'ಚರಂಡಿ ಕ್ಲೀನರ್' ಆಗೋ ಆಸೆ, ಸೆಂಚುರಿ ಸ್ಟಾರ್ ಹೇಳಿದ ಕಾರಣ ನೋಡಿ

8. ಪೊಲೀಸ್‌- ರೌಡಿಗಳ ಜಿದ್ದಾಜಿದ್ದಿ ಇಲ್ಲದ ವ್ಯವಸ್ಥೆ ನೋಡಲು ಸಾಧ್ಯವೇ?

ನಮ್ಮ ಸಿನಿಮಾ ಪೊಲೀಸ್‌, ರೌಡಿಗಳು, ಭೂಗತ ಲೋಕದ ಸುತ್ತ ಇದ್ದರೂ ನಾನು ಪೊಲೀಸ್‌ ಹಾಗೂ ರೌಡಿಗಳು ಅಂತ ಕರೆಯಲ್ಲ. ಒಳ್ಳೆಯದು ಮತ್ತು ಕೆಟ್ಟದ್ದು ಅಂತ ಹೇಳುತ್ತೇನೆ. ಸದ್ಯ ಈ ಎರಡೂ ಇದೆ. ಕೆಟ್ಟದ್ದು ಹೋಗಿ ಒಳ್ಳೆಯ ವ್ಯವಸ್ಥೆ ಬರಬೇಕು ಎಂಬುದು ನನ್ನ ಆಸೆ ಕೂಡ. ಇದು ಯಾವಾಗ ಆಗುತ್ತದೆ ಗೊತ್ತಿಲ್ಲ. ನಾವೂ ಯಾರಿಗೂ ಟೀಚಿಂಗ್‌ ಮಾಡಲಾಗದು. ಆದರೆ, ಇರೋದನ್ನು ತೋರಿಸುತ್ತ ಯಾವುದು ತಪ್ಪು, ಯಾವುದು ಸರಿ ಅಂತ ಹೇಳುವುದಕ್ಕೆ ಮಾತ್ರ ಸಾಧ್ಯವಿದೆ.

9. ಸದ್ಯದ ಪರಿಸ್ಥಿತಿಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಾರೆಯೇ?

ನಮ್ಮ ಚಿತ್ರತಂಡ ಅಂಥ ಯಾವುದೇ ರೀತಿಯ ಭಯದಲ್ಲಿ ಇಲ್ಲ. ಯಾಕೆಂದರೆ ಖಂಡಿತ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಾರೆ ಎನ್ನುವ ನಂಬಿಕೆ. ಕನ್ನಡ ಪ್ರೇಕ್ಷಕರು ಕನ್ನಡ ಚಿತ್ರಗಳನ್ನು ಯಾವತ್ತಿಗೂ ಕೈ ಬಿಟ್ಟಿಲ್ಲ ಆ ನಂಬಿಕೆ ಮೇಲೆಯೇ ನಾವು ಚಿತ್ರಮಂದಿರಗಳಿಗೆ ಬರುತ್ತಿದ್ದೇವೆ.

10. ನೀವು ಮತ್ತು ಸುದೀಪ್‌ ಒಟ್ಟಿಗೆ ಬರುತ್ತಿದ್ದೀರಲ್ಲ?

ಒಬ್ಬ ಕಲಾವಿದನಾಗಿ ನಾನು ಬಯಸುವುದು ಇಬ್ಬರ ಸಿನಿಮಾ ಗೆಲ್ಲಬೇಕು. ಯಾಕೆಂದರೆ ಇದೇ ‘ಸಲಗ’ ಚಿತ್ರಕ್ಕೆ ಕ್ಲಾಪ್‌ ಮಾಡಿದ್ದೇ ಸುದೀಪ್‌ ಅವರು. ಹೀಗಾಗಿ ಯಾರೂ ಜಿದ್ದಾಜಿದ್ದಿ ಅಂದುಕೊಂಡು ಬರುತ್ತಿಲ್ಲ. ಪ್ರೇಕ್ಷಕರು ಇಬ್ಬರ ಚಿತ್ರವನ್ನು ನೋಡಿ ಗೆಲ್ಲಿಸುತ್ತಾರೆಂಬ ಭರವಸೆ ಇದೆ.

click me!