ಥೇಟರಲ್ಲೇ ಸಿನಿಮಾ ನೋಡ್ಬೇಕು ಅಂತಿದ್ದಾರೆ ಅಮ್ಮ: ಕಿಚ್ಚ ಜೊತೆ ಮಾತುಕತೆ

By Suvarna News  |  First Published Oct 13, 2021, 9:36 AM IST
  • ಅಮ್ಮ ಥಿಯೇಟರಲ್ಲಿ ಕೋಟಿಗೊಬ್ಬ 3 ನೋಡಬೇಕು ಎಂದಿದ್ದಾರೆ! ಕಿಚ್ಚ ಸ್ಪೀಕಿಂಗ್‌!
  • ಕೋಟಿಗೊಬ್ಬ 3 ಬಿಡುಗಡೆಯ ನೆಪದಲ್ಲಿ ಸುದೀಪ್‌ ಮಾತಾಡಿದ್ದಾರೆ. ಅವರ ಮಾತುಗಳ ಝಲಕ್‌ ಇಲ್ಲಿದೆ.

- ಆರ್‌. ಕೇಶವಮೂರ್ತಿ

1. ಮತ್ತೆ ಸಿನಿಮಾ ಸಂಭ್ರಮ ಆರಂಭ

Latest Videos

undefined

ಕೊರೋನಾ ಸಂಕಷ್ಟದಿಂದ ಯಾವಾಗ ಆಚೆ ಬರುತ್ತೇವೆ ಎನ್ನುವ ಯೋಚನೆಯೇ ಇಷ್ಟುದಿನ ಇತ್ತು. ಕಳೆದ ಎರಡು ವಾರಗಳಿಂದ ಸಿನಿಮಾ ಸಂಭ್ರಮ ಆರಂಭವಾಗಿದೆ. ಮುಂದೆ ಎಂದಿನಂತೆ ಚಿತ್ರರಂಗ ಖುಷಿಯ ದಿನಗಳನ್ನು ನೋಡಲಿದೆ. ಇಂಥ ಹಬ್ಬದ ವಾತಾವಾರಣದಲ್ಲಿ ನಮ್ಮ ‘ಕೋಟಿಗೊಬ್ಬ 3’(Kotigobba 3) ಪ್ರೇಕ್ಷಕರ ಮುಂದೆ ಬರುತ್ತಿದೆ.

2. ಐಡಿಯಾ ನನ್ನದು, ಕನಸು ಅವರದ್ದು

ನಿರ್ಮಾಪಕ ಸೂರಪ್ಪ ಬಾಬು ಹಾಗೂ ನಿರ್ದೇಶಕ ಶಿವಕಾರ್ತಿಕ್‌ ನನ್ನ ಬಳಿ ಬಂದಾಗ ನಾನು ಒಂದು ಐಡಿಯಾ ಹೇಳಿದೆ. ನನ್ನ ಐಡಿಯಾವನ್ನೇ ಇಟ್ಟುಕೊಂಡು ‘ಕೋಟಿಗೊಬ್ಬ 2’ ಮುಂದುವರಿದ ಕತೆಯಾಗಿ ‘ಕೋಟಿಗೊಬ್ಬ 3’ಗೆ ಕತೆ ಮಾಡಿಕೊಂಡು ಬಂದರು. ಹೀಗಾಗಿ ಕತೆಯ ಐಡಿಯಾ ಮಾತ್ರ ನನ್ನದು. ಉಳಿದಂತೆ ಕತೆ, ಚಿತ್ರಕಥೆ, ಸಂಭಾಷಣೆ ಸೇರಿ ಇಡೀ ಸಿನಿಮಾದ ಕನಸು ನಿರ್ದೇಶಕ ಹಾಗೂ ನಿರ್ಮಾಪಕರದ್ದು.

3. ಹಿಂದಿನ ಪಾರ್ಟ್‌ ಗೆಲುವು, ಮುಂದಿನ ಕತೆಗೆ ಪ್ರೇರಣೆ

ಯಾವುದೇ ಒಂದು ಚಿತ್ರದ ಹೆಸರಿನಲ್ಲಿ ಸರಣಿ ಮುಂದುವರಿಯಬೇಕು ಎಂದರೆ ಅದರ ಹಿಂದಿನ ಪಾರ್ಟ್‌ ಗೆಲ್ಲಬೇಕು. ಹಿಂದಿನ ಪಾರ್ಟ್‌ ಗೆಲ್ಲದೆ ಮುಂದಿನ ಪಾರ್ಟ್‌ ಕತೆ ಮಾಡಲಾಗದು. ‘ಕೋಟಿಗೊಬ್ಬ 2’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಅದರ ಜತೆಗೆ ಹಿಂದಿನ ಭಾಗದ ಕತೆಯ ಕ್ಲೈಮ್ಯಾಕ್ಸ್‌ನಿಂದಲೇ ಕತೆಯ ಎಳೆ ಹುಟ್ಟಿಕೊಂಡು ತುಂಬಾ ದೊಡ್ಡದಾಗಿ ವಿಸ್ತರಿಸಿದಾಗ ‘ಕೋಟಿಗೊಬ್ಬ 3’ ಆಯಿತು.

4. ನಿಜವಾದ ಕೋಟಿಗೊಬ್ಬ ಡಾ.ವಿಷ್ಣುವರ್ಧನ್‌

‘ಕೋಟಿಗೊಬ್ಬ 3’ ನಾನು ಮಾಡಿದ್ದೇನೆ, ನನ್ನಿಂದ ಆಗಿದೆ ಎಂದು ನಾನು ಹೇಳಲಾರೆ. ಇದು ಎಲ್ಲರೂ ಸೇರಿದ ಮೇಲೆ ಆಗಿದ್ದು. ನಿಜವಾದ ‘ಕೋಟಿಗೊಬ್ಬ’ ನಾನಲ್ಲ, ಅದು ಸಾಹಸಸಿಂಹ ಡಾ ವಿಷ್ಣುವರ್ಧನ್‌. ಅವರು ‘ಕೋಟಿಗೊಬ್ಬ’ ಹೆಸರಿನಲ್ಲಿ ಸಿನಿಮಾ ಮಾಡಿದ್ದಕ್ಕೆ, ಜನ ಅದನ್ನು ನೋಡಿ ಗೆಲ್ಲಿಸಿದ್ದಕ್ಕೆ, ಅವರ ಹೆಸರಿನಲ್ಲಿ ನಾವು ಎರಡು ಹೆಜ್ಜೆ ಇಟ್ಟಿದ್ದೇವೆ. ಹೀಗಾಗಿ ‘ಕೋಟಿಗೊಬ್ಬ’ ಎನ್ನುವ ಹೆಸರು ವಿಷ್ಣು ದಾದಾ ಅವರಿಗೇ ಸೇರಬೇಕು. ಯಾಕೆಂದರೆ ಬಾಸ್‌ ಈಸ್‌ ಬಾಸ್‌ ಆಲ್ವೇಸ್‌.

5. ಬ್ರಿಲಿಯಂಟ್‌ ಡೈರೆಕ್ಟರ್‌, ಅದ್ದೂರಿ ನಿರ್ಮಾಪಕ

ನಿರ್ದೇಶಕ ಶಿವಕಾರ್ತಿಕ್‌ ಹೊಸಬರು ಇರಬಹುದು. ಆದರೆ, ನನಗೆ ಚಿತ್ರಕತೆ ಒಪ್ಪಿಸಿದ್ದು, ಅವರ ಟೇಕಿಂಗ್‌ ನೋಡಿದಾಗ ಬ್ರಿಲಿಯಂಟ್‌ ಡೈರೆಕ್ಟರ್‌ ಅನಿಸಿತು. ಟೀಸರ್‌, ಟ್ರೇಲರ್‌ನಲ್ಲೇ ಅವರ ಪ್ರತಿಭೆ ತೋರಿಸಿದ್ದಾರೆ. ಇಂಥ ಯುವ ನಿರ್ದೇಶಕನಿಗೆ ಅದ್ದೂರಿ ನಿರ್ಮಾಪಕ ಸೂರಪ್ಪ ಬಾಬು ಜತೆ ಆದರೆ ಹೇಗಿರುತ್ತದೆ ಎಂಬುದು ‘ಕೋಟಿಗೊಬ್ಬ 3’ ಚಿತ್ರ ನೋಡಿ ಹೇಳಬಹುದು.

6. ಇಬ್ಬರಲ್ಲಿ ಯಾರು ಕಿಲಾಡಿ?

ಸತ್ಯ ಮತ್ತು ಶಿವ ಹೆಸರಿನ ಪಾತ್ರಗಳು ಈ ಚಿತ್ರದ ಎರಡು ಪಿಲ್ಲರ್‌ಗಳು. ಇವರಲ್ಲಿ ಯಾರು ಕಿಲಾಡಿ ಎಂದರೆ ಅದೇ ಸಿನಿಮಾ ಕತೆ. ಇಬ್ಬರು ಒಬ್ಬನೇ ಆಗಲು ಸಾಧ್ಯವೇ ಎಂದಾಗ ಅದೇ ಥ್ರಿಲ್ಲಿಂಗ್‌ ಪಾಯಿಂಟ್‌. ಇನ್ನು ಈ ಇಬ್ಬರಲ್ಲಿ ಯಾರು ಅಮಾಯಕ ಎಂದರೆ ಪ್ರೇಕ್ಷಕರು... ಹ್ಹಹ್ಹಹ್ಹ. ಎರಡು ಪಾತ್ರಗಳನ್ನು ಒಬ್ಬನೇ ನಿಭಾಯಿಸಿದ್ದು ಕೂಡ ತುಂಬಾ ಖುಷಿ ಕೊಟ್ಟಿತು. ಆದರೆ, ಇವರ ಜತೆಗೆ ರವಿಶಂಕರ್‌ ಪಾತ್ರ ತುಂಬಾ ಮಹತ್ವ ಪಡೆದುಕೊಳ್ಳುತ್ತದೆ.

7. ಕೋಟಿಗೊಬ್ಬ ಸರಣಿ ಮುಂದುವರಿಯಬಹುದು

ನಿರ್ಮಾಪಕರು, ನಿರ್ದೇಶಕ ಮಾಡಿಕೊಳ್ಳುವ ಕತೆ, ನಾವು ಅರ್ಥ ಮಾಡಿಕೊಳ್ಳುವ ರೀತಿ, ಆಗಿನ ಸಂದರ್ಭ, ಪ್ರೇಕ್ಷಕರು- ಅಭಿಮಾನಿಗಳ ಆಸೆ, ಹಿಂದಿನ ಪಾರ್ಟ್‌ ಗೆಲುವು ಇವೆಲ್ಲವೂ ಸರಣಿಗಳನ್ನು ನಿರ್ಧರಿಸುತ್ತದೆ. ಇದೆಲ್ಲವೂ ಕೂಡಿ ಬಂದರೆ ಮುಂದೆ ಕೋಟಿಗೊಬ್ಬ 4, 5, 6 ಹೀಗೆ ಹಲವು ಪಾರ್ಟ್‌ಗಳಲ್ಲಿ ಬಂದರೂ ಅಚ್ಚರಿ ಪಡಬೇಕಿಲ್ಲ.

8. ಯೂರೋಪ್‌ ಶೂಟಿಂಗ್‌ ರೋಚಕವಾಗಿತ್ತು

ಚಿತ್ರೀಕರಣದ ಬಗ್ಗೆ ಹೇಳುವುದಾದರೆ ಯೂರೋಪ್‌ನಲ್ಲಿ ಶೂಟಿಂಗ್‌ ಮಾಡಿದ್ದು ತುಂಬಾ ರೋಚಕವಾಗಿತ್ತು. ಅಲ್ಲಿನ ವ್ಯವಸ್ಥೆ, ಪ್ರೋಟೋಕಾಲ್‌, ಇಡೀ ರಸ್ತೆಗಳನ್ನೇ ನಮಗಾಗಿ ಬ್ಲಾಕ್‌ ಮಾಡಿದ್ದು, ಯೂರೋಪ್‌ನ ರಸ್ತೆಗಳಲ್ಲಿ ನಮ್ಮದೇ ಕಾರುಗಳು ಓಡಾಡಿಕೊಂಡಿದ್ದು, ಅಲ್ಲಿನ ರಸ್ತೆಗಳಲ್ಲಿ ಚೇಸಿಂಗ್‌ ಮಾಡಿದ್ದು... ತುಂಬಾ ಅದ್ಭುತವಾಗಿತ್ತು. ನನಗೆ ಅಲ್ಲಿನ ವ್ಯವಸ್ಥೆ ನೋಡಿಯೇ ಖುಷಿ ಆಯಿತು. ಮರೆಯಲಾಗದ ಸಂದರ್ಭಗಳು ಅಂದರೆ ಯೂರೋಪ್‌ನ ಶೂಟಿಂಗ್‌ ದಿನಗಳು.

9. ನನ್ನ ತಾಯಿಯ ಹಠ

ಚಿತ್ರದ ಟ್ರೇಲರ್‌ ತುಂಬಾ ಕಿಕ್‌ ಕೊಟ್ಟಿದೆ. ಎಲ್ಲರು ಚಿತ್ರದ ಮೇಕಿಂಗ್‌, ತಾಂತ್ರಿಕತೆ ಬಗ್ಗೆ ಮಾತನಾಡುತ್ತಿದ್ದಾರೆ. ವಿಶುವಲ್‌ ಸೂಪರ್‌ ಎನ್ನುತ್ತಿದ್ದಾರೆ. ತುಂಬಾ ವರ್ಷಗಳ ನಂತರ ನನ್ನ ತಾಯಿ ಕೂಡ ಥಿಯೇಟರ್‌ನಲ್ಲಿ ಈ ಸಿನಿಮಾ ನೋಡಬೇಕು ಎನ್ನುತ್ತಿದ್ದಾರೆ. ಅದು ‘ಕೋಟಿಗೊಬ್ಬ 3’ ಉಂಟು ಮಾಡಿರುವ ಪ್ರಭಾವ. ಆದರೆ, ಜನರ ನಡುವೆ ಅವರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಲು ಸಾಧ್ಯವೇ ಎಂಬುದೇ ನನ್ನ ಯೋಚನೆ.

10. ಪ್ಲಾನ್‌ ಮಾಡಿದರೆ ಪ್ಯಾನ್‌ ಇಂಡಿಯಾ ಆಗಲ್ಲ

ಪ್ಲಾನ್‌ ಮಾಡಿಕೊಂಡು ನಾವೇ ಘೋಷಣೆ ಮಾಡಿದರೆ ಪ್ಯಾನ್‌ ಇಂಡಿಯಾ ಸಿನಿಮಾ ಆಗಲ್ಲ. ಕಂಟೆಂಟ್‌ ಏನು, ಜನ ಅದನ್ನು ಹೇಗೆ ನೋಡುತ್ತಾರೆ ಎಂಬುದರ ಮೇಲೆ ಅದು ಯಾವ ರೀತಿ ಸಿನಿಮಾ ಎಂಬುದು ನಿರ್ಧಾರ ಆಗುತ್ತದೆ. ಪ್ರೇಕ್ಷಕರು ನೋಡಿ ಗೆಲ್ಲಿಸಿದಾಗ, ಬೇರೆ ಭಾಷೆಯ ಜನ ಕೂಡ ನೋಡುತ್ತಿದ್ದಾರೆ ಎಂದಾಗ ನಮ್ಮ ಚಿತ್ರದ ಕತೆ ಅವರಿಗೂ ಕನೆಕ್ಟ್ ಆಗುತ್ತಿದೆ ಎನಿಸಿದಾಗ ಅದು ಪ್ಯಾನ್‌ ಇಂಡಿಯಾ ಸಿನಿಮಾ ಆಗುತ್ತದೆ. ‘ವಿಕ್ರಾಂತ್‌ ರೋಣ’ ಶುರುವಾಗಿದ್ದು ಚಿಕ್ಕದಾಗಿ ಆದರೆ, ಅದರ ಕತೆ ಯೂನಿವರ್ಸಲ್ಲಾಗಿತ್ತು. ಹೀಗಾಗಿ ಅದು ಹೋಗ್ತಾ ಹೋಗ್ತಾ ಪ್ಯಾನ್‌ ಇಂಡಿಯಾ ಸಿನಿಮಾ ಅನಿಸಿಕೊಂಡಿತು.

11. ಪ್ರತಿ ದೊಡ್ಡ ಚಿತ್ರದಲ್ಲೂ ನನ್ನ ಹೆಸರು

ಇತ್ತೀಚೆಗೆ ಶುರುವಾಗುವ ಯಾವುದೇ ಬಹುಭಾಷೆಯ ಸಿನಿಮಾದಲ್ಲಿ ನನ್ನ ಹೆಸರು ಕೇಳಿ ಬರುತ್ತದೆ. ತಮಿಳು, ತೆಲುಗು, ಹಿಂದಿ, ಮಲಯಾಳಂ ಹೀಗೆ ಬೇರೆ ಬೇರೆ ಭಾಷೆಯ ನಿರ್ದೇಶಕರು ನನ್ನ ಹುಡುಕಿಕೊಂಡು ಬರುತ್ತಿದ್ದಾರೆ. ಹೀಗೆ ಬರುವ ಎಲ್ಲಾ ಚಿತ್ರಗಳಲ್ಲೂ ನಾನು ನಟಿಸುತ್ತೀನೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರ ಯೋಚನೆಗಳಲ್ಲಿ ನನ್ನ ಹೆಸರು ಇದೆಯಲ್ಲ, ಇದಕ್ಕಿಂತ ದೊಡ್ಡ ಗೌರವ ಬೇರೆ ಏನು ಬೇಕು? ಒಬ್ಬ ನಟ ಜೀವಂತವಾಗಿರುವುದು ಹೀಗೆಯೇ.

ನನ್ನ ನಿರ್ದೇಶನದಲ್ಲಿ ಸಲ್ಮಾನ್‌ ಖಾನ್‌ ಸಿನಿಮಾ

ನಾನು ನಿರ್ದೇಶನ ಮಾಡುವ ಕತೆ ರೆಡಿಯಾಗುತ್ತಿದೆ. ಈ ಕತೆಯಲ್ಲಿ ನಟ ಸಲ್ಮಾನ್‌ ಖಾನ್‌ ನಟಿಸಿದರೆ ಚೆನ್ನಾಗಿರುತ್ತದೆ ಎಂದುಕೊಂಡು ಅವರನ್ನು ನಾನು ಅಪ್ರೋಚ್‌ ಮಾಡಿದ್ದೇನೆ. ನಾವಿಬ್ಬರು ಸ್ನೇಹಿತರು. ಹಾಗಂತ ಅವರು ಕೂಡಲೇ ಒಪ್ಪಿಬಿಡುತ್ತಾರೆಯೇ ಎಂಬುದು ಗೊತ್ತಿಲ್ಲ.

ಆದರೆ, ಕತೆ ಇಷ್ಟವಾದರೆ ಖಂಡಿತ ನನ್ನ ನಿರ್ದೇಶನದಲ್ಲಿ ಸಲ್ಮಾನ್‌ ಖಾನ್‌ ನಟಿಸುತ್ತಾರೆ ಎನ್ನುವ ಭರವಸೆ ಇದೆ. ಈಗಷ್ಟೆಈ ಬಗ್ಗೆ ಅವರಿಗೆ ಹೇಳಿ, ಕತೆ ಕೂಡ ಹೇಳಿ ಬಂದಿದ್ದೇನೆ. ಮುಂದೆ ನೋಡೋಣ.

click me!