ಕೋಟಿಗೊಬ್ಬ 3 ಚಿತ್ರಕ್ಕೆ ಬ್ಲಾಕ್‌ಬಸ್ಟರ್‌ ಹಿಟ್‌ ಆಗುವ ತಾಕತ್ತಿದೆ: ಶಿವಕಾರ್ತಿಕ್‌

By Kannadaprabha News  |  First Published Oct 14, 2021, 8:49 AM IST

ಇಂದು ಸುದೀಪ್‌ ಅಭಿನಯದ, ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ. ಈ ಅದ್ದೂರಿ ಸಿನಿಮಾದ ನಿರ್ದೇಶಕನ ಹೆಸರು ಶಿವಕಾರ್ತಿಕ್‌. ಎಂಬಿಎ, ಎಂಟೆಕ್‌ ಮಾಡಿ ಯುಎಸ್‌ನಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಶಿವಕಾರ್ತಿಕ್‌ ಕೋಟಿಗೊಬ್ಬ 3 ಸಿನಿಮಾದ ನಿರ್ದೇಶಕರಾಗಿದ್ದರ ಹಿಂದೆ ದೊಡ್ಡ ಕತೆ ಇದೆ. ಅವರ ಜೊತೆ ಮಾತುಕತೆ.


 ಪ್ರಿಯಾ ಕೆರ್ವಾಶೆ

ನಿಮ್ಮ ನಿರ್ದೇಶನದ ಮೊದಲ ಸಿನಿಮಾ ಬಿಡುಗಡೆಗೆ ಕ್ಷಣಗಣನೆ. ಈ ಹೊತ್ತಿನ ನಿಮ್ಮ ಮನಸ್ಥಿತಿ?

Tap to resize

Latest Videos

undefined

ನಾನು ಕಾಮ್‌ ಆಗಿದ್ದೇನೆ. ನನ್ನೆಲ್ಲ ಭಾವತೀವ್ರತೆ ಸಿನಿಮಾದಲ್ಲಿದೆ. ಎಲ್ಲವನ್ನೂ ಅಲ್ಲಿ ಹೇಳಿ ಹಗುರಾಗಿದ್ದೇನೆ. ಸಿನಿಮಾಗೆ ಸಂಪೂರ್ಣ ಶರಣಾದ ಮೇಲೆ ನನ್ನೊಳಗೆ ಧನ್ಯತೆಯಷ್ಟೇ ಉಳಿದಿದೆ. ಕೋಟಿಗೊಬ್ಬ 3 ನಿಮಗೆ ಮಾಸ್‌ ಎಂಟರ್‌ಟೈನರ್‌ ಅಂತ ಅನಿಸಬಹುದು. ಆದರೆ ಇದು ಕ್ಲಾಸಿ ಮಾಸ್‌ ಎಂಟರ್‌ಟೈನರ್‌. ಬರೀ ಮನರಂಜನೆ ಮಾತ್ರ ಇಲ್ಲಿಲ್ಲ, ಅದರಾಚೆಗೆ ಮತ್ತೇನೋ ಇದೆ.

ಥೇಟರಲ್ಲೇ ಸಿನಿಮಾ ನೋಡ್ಬೇಕು ಅಂತಿದ್ದಾರೆ ಅಮ್ಮ: ಕಿಚ್ಚ ಜೊತೆ ಮಾತುಕತೆ

ಸುದೀಪ್‌ ಸಿನಿಮಾ ಅಂದಾಕ್ಷಣ ಅಪಾರ ನಿರೀಕ್ಷೆ ಇಟ್ಟು ಜನ ಥೇಟರ್‌ಗೆ ಬರ್ತಾರೆ. ಆ ನಿರೀಕ್ಷೆ ಮುಟ್ಟಲಿಕ್ಕಾಗುತ್ತೋ ಇಲ್ವೋ ಅನ್ನೋ ಟೆನ್ಶನ್‌?

ರೀಚ್‌ ಆಗ್ತೀನಿ ಅನ್ನೋ ಆತ್ಮವಿಶ್ವಾಸ ಇರುವಾಗ ಟೆನ್ಶನ್‌ ಎಲ್ಲಿರುತ್ತೆ.. ನೀವು ಚಿತ್ರದಲ್ಲಿ ಸುದೀಪ್‌ ಎಂಟ್ರಿ ನೋಡ್ಬೇಕು, ಹಂಗೇ ಸ್ಟನ್‌ ಆಗಿಬಿಡ್ತೀರಿ. ಇಂಟರ್‌ವಲ್‌ ಗ್ಯಾಪ್‌ನಲ್ಲಿ ಕುತೂಹಲ ಹಿಡಿದಿಡೋದು ಕಷ್ಟ. ಮಧ್ಯಂತರದ ಬಳಿಕ ಸಿನಿಮಾ ಮತ್ತೊಂದು ವೇಗ ಪಡೆದುಕೊಳ್ಳುತ್ತೆ. ಹಾಗಂತ ಸಿನಿಮಾ ಮೇಕಿಂಗ್‌ ಫರ್ಫೆಕ್ಟ್ ಅಂತೇನೂ ಹೇಳ್ತಿಲ್ಲ. ಟೈಮ್‌ ಕೊಟ್ರೆ ಇನ್ನಷ್ಟುಫೈನ್‌ಟ್ಯೂನ್‌ ಮಾಡ್ತಾನೇ ಇರ್ತೀನಿ. ಕಳೆದ ಮೂರು ವರ್ಷದಿಂದ ಆ ಕೆಲಸ ಮಾಡ್ತಿದ್ರೂ ಇನ್ನಷ್ಟುತಿದ್ದಿ ತೀಡಬೇಕು ಅನ್ನೋದು ಇದ್ದೇ ಇದೆ. ಅದಕ್ಕೆ ಕೊನೆ ಇಲ್ಲ.

ಮೊದಲ ಚಿತ್ರವೇ ಬಿಗ್‌ ಬಜೆಟ್‌, ಅದೂ ಸುದೀಪ್‌ನಂಥಾ ಪರ್ಫಾರ್ಮರ್‌ ಜೊತೆಗೆ. ಹೇಗಿತ್ತು ಅನುಭವ?

ಹತ್ತು ಸಿನಿಮಾದಲ್ಲಿ ಕಲಿಯಬಹುದಾದ್ದನ್ನು ಒಂದೇ ಸಿನಿಮಾದಲ್ಲಿ ಕಲಿತಿದ್ದೀನಿ. ಸುದೀಪ್‌ ಎಂಥಾ ಅದ್ಭುತ ನಟ ಎಂದರೆ ನಂಗೆ ಕಟ್‌ ಹೇಳೋಕೆ ಬಾಯಿಯೇ ಬರ್ತಿರಲಿಲ್ಲ. ಪಾತ್ರದೊಳಗೆ ಪಾತ್ರವಾಗುವ ಈ ದೈತ್ಯ ಪ್ರತಿಭೆ ತೆರೆಯಾಚೆ ಎಂಥಾ ಹಂಬಲ್‌ ವ್ಯಕ್ತಿ! ನಂಗೆ ಈಗಲೂ ಆಶ್ಚರ್ಯ ಆಗುತ್ತೆ, ಅವರಂಥಾ ನಟ, ಈವರೆಗೆ ಒಂದೇ ಒಂದು ಸಿನಿಮಾ ಮಾಡಿ ಗೊತ್ತಿಲ್ಲದ ನನ್ನಂಥವನ ಜೊತೆಗೆ ಚಿತ್ರ ಮಾಡೋಕೆ ಒಪ್ಪಿದ್ರಲ್ಲಾ.. ನಾವೆಲ್ಲ ಕಮಲ್‌ ಸಿನಿಮಾಗಳನ್ನು ನೋಡುತ್ತಾ ಬೆಳೆದವರು. ಕಮಲಹಾಸನ್‌ ಸರಿಗಟ್ಟುವ ಪ್ರತಿಭೆ ಸುದೀಪ್‌ ಅವರಲ್ಲಿ ಕಂಡಿದ್ದೀನಿ. ‘ಕೋಟಿಗೊಬ್ಬ 3’ ತಮಿಳು ವರ್ಶನ್‌ ಚಿತ್ರಕ್ಕೆ ಸಂಬಂಧಿಸಿದ ಸಮಾರಂಭವೊಂದರಲ್ಲಿ ಕಾಲಿವುಡ್‌ ಸ್ಟಾರ್‌ ಧನುಷ್‌ ಹೇಳ್ತಿದ್ರು, ನಾನೇನಾದ್ರೂ ಅಧಿಕಾರದಲ್ಲಿದ್ದಿದ್ರೆ ‘ಈಗ’ ಚಿತ್ರದ ಸುದೀಪ್‌ ನಟನೆಗೆ ಖಂಡಿತಾ ನ್ಯಾಶನಲ್‌ ಅವಾರ್ಡ್‌ ಕೊಡುತ್ತಿದ್ದೆ ಅಂತ. ಸುದೀಪ್‌ ಬಗ್ಗೆ ಮಾತಾಡಿದಷ್ಟೂಕಡಿಮೆ. ಇದೆಲ್ಲದರ ಜೊತೆಗೆ ಅವರೊಬ್ಬ ನಿರ್ದೇಶಕರ ಪ್ರೀತಿಯ ನಟ. ನಾನು ಬಯಸಿದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಕೊಟ್ಟಿದ್ದಾರೆ. ಜೊತೆಗೆ ಸೂರಪ್ಪ ಬಾಬು ಅವರು ನನ್ನಂಥಾ ಅನನುಭವಿಗೆ ಬೆನ್ನುಲುಬಾಗಿ ನಿಂತದ್ದು ನನ್ನ ಸುದೈವ. ಸಂಗೀತ ನೀಡಿದ ಅರ್ಜುನ್‌ ಜನ್ಯಾ, ಅದ್ಭುತ ಸಿನಿಮಾಟೋಗ್ರಫಿ ಮಾಡಿದ ಶೇಖರ್‌ ಚಂದ್ರು, ಅಂಥಾ ಪ್ರತಿಭಾವಂತ ಕಲಾವಿದರ ಗಡಣ.. ಎಲ್ಲವೂ ಕೋಟಿಗೊಬ್ಬ 3ಯನ್ನು ಮತ್ತೊಂದು ಎತ್ತರಕ್ಕೇರಿಸಿದೆ.

ಸುದೀಪ್ ನಿಮಗೆ ವಯಸ್ಸೇ ಆಗೋಲ್ವಾ?ಕೋಟಿಗೊಬ್ಬ 3ಗೆ ರಮ್ಯಾ ಫಿದಾ!

ಸತ್ಯ, ಶಿವ ಮತ್ತು ಗೋಸ್ಟ್‌ ಮೂರೂ ಪಾತ್ರಗಳ ಜೊತೆ ಸ್ಕಿ್ರಪ್ಟ್‌ ಮಾಡುವಾಗಿನ ಚಾಲೆಂಜ್‌?

ಒಂಚೂರೂ ಕಷ್ಟಆಗಲಿಲ್ಲ. ನಾನು ಮೂರೇ ದಿನದಲ್ಲಿ ಸ್ಕಿ್ರಪ್ಟ್‌ ವರ್ಕ್ ಮುಗಿಸಿದ್ದೆ. ಅಷ್ಟುಸಹಜವಾಗಿ ಈ ಕತೆಯ ಹರಿವು ಇದೆ. ಐದು ದಿನದಲ್ಲಿ ಸ್ಕಿ್ರಪ್ಟ್‌ ಫೈನಲ್‌ ಆಗಿದೆ. ಹತ್ತನೇ ದಿನ ಸುದೀಪ್‌ ಮುಂದೆ ಕೂತು ಕತೆ ಹೇಳಿದೆ. ‘ವ್ಹಾ.. ಫೆಂಟಾಸ್ಟಿಕ್‌, ನೀನು ಮಾಡು ಈ ಸಿನಿಮಾ, ನಾನಿರ್ತೀನಿ ನಿನ್ನ ಜೊತೆಗೆ’ ಅಂದರು. ಆಮೇಲೆ ಸ್ಕಿ್ರಪ್ಟ್‌ ಬೆಳೆಸೋದಕ್ಕೂ ಅವರು ಐಡಿಯಾಗಳನ್ನು ಕೊಡುತ್ತಾ ಬಂದರು. ಹೀಗೆ ಲೀಲಾಜಾಲವಾಗಿ ಸ್ಕಿ್ರಪ್ಟ್‌ ವರ್ಕ್ ಮುಗಿಸಿದೆ. ಯುರೋಪ್‌ ದೇಶಗಳಲ್ಲಿ ಶೂಟಿಂಗ್‌ ಮಾಡಿದ ಅನುಭವವೂ ಸೂಪರ್‌.

ನಿಮ್ಮ ಹಿನ್ನೆಲೆ?

ನಾನು ಎಂಟೆಕ್‌, ಎಂಬಿಎ ಮಾಡಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದೆ. ಕೆಲವು ವರ್ಷ ಅಮೆರಿಕಾದಲ್ಲೂ ಕೆಲಸ ಮಾಡಿದೆ. ಈ ನಡುವೆ ಸಿನಿಮಾ ಜಪ ನಿರಂತರವಾಗಿರುತ್ತಿತ್ತು. ವೀಕೆಂಡ್‌ಗಳಲ್ಲಿ ಫಿಲಂ ಮೇಕಿಂಗ್‌ ತರಬೇತಿಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ನನ್ನ ಹೆತ್ತವರಿಗೆ ನಾನು ಚಿತ್ರಜಗತ್ತಿಗೆ ಬರುವುದು ಇಷ್ಟಇರಲಿಲ್ಲ. ಎಂಜಿನಿಯರ್‌ ಆಗಿ ಉದ್ಯೋಗದಲ್ಲಿ ಮೇಲೆ ಹೋಗ್ಬೇಕು ಅನ್ನೋದು ಅವರ ಕನಸಾಗಿತ್ತು. ಅವರಿಗೆ ನಿರಾಸೆ ಮಾಡಬಾರದು ಅಂತ ಒಂದಿಷ್ಟುಸಮಯ ಆ ಫೀಲ್ಡ್‌ನಲ್ಲಿದ್ದೆ. ಒಂದು ಹಂತದಲ್ಲಿ ತಡೆಯಲಾಗದೇ ಆ ಕೆಲಸ ಬಿಟ್ಟು ನನ್ನಿಷ್ಟದ ಸಿನಿಮಾ ಕ್ಷೇತ್ರಕ್ಕೆ ಬಂದೆ. ಆರಂಭದ ದಿನಗಳು ಕಷ್ಟಕರವಾಗಿದ್ದವು. ಆಗ ಡಾಕ್ಯುಮೆಂಟರಿ, ಶಾರ್ಟ್‌ ಫಿಲಂ ಮಾಡುತ್ತಿದ್ದೆ. ಒಂದು ಹಂತದಲ್ಲಿ ಕೋಟಿಗೊಬ್ಬ 3 ತಂಡ ಸೇರಿಕೊಂಡೆ.

"

ಸಿನಿಮಾ ನಿಮಗೆ ಅಷ್ಟುಆಪ್ತವಾಗಿದ್ದು ಹೇಗೆ?

ಟೀನೇಜ್‌ನಲ್ಲೇ ತಂದೆಯನ್ನು ಕಳೆದುಕೊಂಡವನು ನಾನು. ಹದಿಮೂರರಲ್ಲಿ ತಂದೆಯನ್ನು ಕಳೆದುಕೊಂಡ ಹುಡುಗರ ಕಷ್ಟಅವರಿಗೇ ಗೊತ್ತು. ಅನಾಥಪ್ರಜ್ಞೆ, ಅಭದ್ರತೆ, ನಿದ್ದೆಯಿಲ್ಲದ ರಾತ್ರಿಗಳು.. ಆಗ ಅಪ್ಪ ತುಂಬಬೇಕಿದ್ದ ಸ್ಫೂರ್ತಿಯನ್ನು ನನ್ನೊಳಗೆ ತುಂಬಿದ್ದು ಸಿನಿಮಾಗಳು. ಕೆಲವು ಹುಡುಗರು ಅಂಥ ದುಃಖದ ದಿನಗಳಲ್ಲಿ ಕುಡಿತ, ಸಿಗರೇಟು ಇನ್ನಿತರ ಚಟಕ್ಕೆ ಬೀಳುತ್ತಾರೆ. ನಾನು ಸಿನಿಮಾ ಚಟ ಹತ್ತಿಸಿಕೊಂಡೆ, ಅದು ನನ್ನನ್ನು ಮೇಲೆತ್ತಿತು. ನಾಯಗನ್‌ ಚಿತ್ರದಲ್ಲಿ ಕಮಲಹಾಸನ್‌ ಹೇಳುತ್ತಿದ್ದ ಮಾತುಗಳು ನನ್ನೊಳಗೆ ವಿಚಿತ್ರ ಭಾವ ಹುಟ್ಟುಹಾಕುತ್ತಿತ್ತು. ಆಗ ಅಂದುಕೊಳ್ಳುತ್ತಿದ್ದೆ, ಒಂದು ದಿನ ನಾನೂ ಇಂಥಾ ಸಿನಿಮಾ ಮಾಡಬೇಕು, ಅದರಲ್ಲಿ ನನ್ನಂತೆ ದುಃಖ ಅನುಭವಿಸಿದ ಹುಡುಗರಿಗೆ ಧೈರ್ಯ ತುಂಬುವ ಮಾತುಗಳಿರಬೇಕು ಅಂತ. ಅದು ‘ಕೋಟಿಗೊಬ್ಬ 3’ಯಲ್ಲಿ ಸಾಕಾರಗೊಂಡಿದೆ.

ಕೊನೆಯದಾಗಿ ಪ್ರೇಕ್ಷಕರಿಂದ ನೀವು ನಿರೀಕ್ಷಿಸೋದು, ನಿಮ್ಮಿಂದ ಪ್ರೇಕ್ಷಕರು ನಿರೀಕ್ಷಿಸೋದು?

ಕೋಟಿಗೊಬ್ಬ 3 ಬ್ಲಾಕ್‌ ಬಾಸ್ಟರ್‌ ಹಿಟ್‌ ಆಗ್ಬೇಕು, ಆ ತಾಕತ್ತು ಸಿನಿಮಾಕ್ಕಿದೆ. ಸುದೀಪ್‌ ಸಿನಿಮಾ ಅಂದಾಗ ಜನರ ನಿರೀಕ್ಷೆ ಇದ್ದೇ ಇರುತ್ತೆ. ನನ್ನದು ಮೊದಲ ಚಿತ್ರವಾದ ಕಾರಣ ಕೆಲವೊಂದು ಕಡೆ ಸಣ್ಣಪುಟ್ಟತಪ್ಪುಗಳಿರಬಹುದು. ಉಳಿದಂತೆ ಸುದೀಪ್‌ ಅವರಿಂದ ನೀವೇನು ನಿರೀಕ್ಷಿಸುತ್ತೀರೋ ಅದಕ್ಕಿಂತ ಹೆಚ್ಚಿನದನ್ನೇ ಅವರು ನೀಡಿದ್ದಾರೆ. ಒಂದೊಂದು ಸಿನಿಮಾವೂ ಅವರ ಪ್ರತಿಭೆಯ ಒಂದೊಂದು ಮುಖವನ್ನು ಪರಿಚಯಿಸುತ್ತದೆ. ಕೋಟಿಗೊಬ್ಬ 3 ಅದಕ್ಕೆ ಹೊರತಾಗಿಲ್ಲ.

click me!