ಜನಿಸಿದ್ದು ಕುಂದಾಪುರದ ಕರಾವಳಿಯಲ್ಲಿ. ವಿದ್ಯಾಭ್ಯಾಸ ಮಾಡಿದ್ದು ಸ್ಕಾಟ್ಲೆಂಡ್‌ನ ಗ್ಲಾಸ್ಗೊನಲ್ಲಿ. ಗುರುತಿಸಿಕೊಂಡಿದ್ದು ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ. ಆದರೆ ಇಷ್ಟೆಲ್ಲ ಅನುಭವ ಇರುವ ವೈಜಯಂತಿ ಅಡಿಗ ಬಿಗ್‌ಬಾಸ್ ಮನೆಯಲ್ಲಿ ನಾಲ್ಕು ದಿನ ಕೂಡ ಉಳಿದುಕೊಳ್ಳಲಾರದೇ ಹೋಗಿದ್ದೇಕೆ?
- ಶಶಿಕರ ಪಾತೂರು
ಬಿಗ್‌ಬಾಸ್ ಎನ್ನುವ ಶೋ ಅಂದರೇನೇ ಹಾಗೆ! ಅಲ್ಲಿ ಯಾವುದನ್ನು ಕೂಡ ಮೊದಲೇ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ಬಾರಿ ಆ ಮಟ್ಟಿನ ಅನಿರೀಕ್ಷಿತ ಘಟನೆ ನಡೆದಿದ್ದು ನಟಿ ವೈಜಯಂತಿ ಅಡಿಗ ಅಲ್ಲಿಂದ ವಾಪಾಸಾದಾಗ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಸಂಭವಿಸಿದ್ದೇ ಬೇರೆ. ಫಿನಾಲೆ ತಲುಪುವ ಮೊದಲೇ ಸದಸ್ಯರೆಲ್ಲ ತಮ್ಮ ತಮ್ಮ ಮನೆಯ ಪಡಸಾಲೆ ಸೇರಿಕೊಂಡಿದ್ದಾರೆ.
undefined
ಇಂಥದೊಂದು ಸರಿಯಾದ ಅಂತ್ಯ ತಲುಪದ ಶೋನಲ್ಲಿ ಪಾಲ್ಗೊಳ್ಳದೆ, ಮೊದಲೇ ಮನೆ ಸೇರಿಕೊಂಡ ವೈಜಯಂತಿ ಕೂಡ ಬುದ್ಧಿವಂತೆ ಎಂದೇ ಹೇಳಬಹುದು. ಅವರು ಈಗಲೂ ತಮ್ಮ ನಿರ್ಧಾರದಲ್ಲಿ ವಿಜಯವನ್ನೇ ಕಂಡಿದ್ದಾರೆ. ಅದು ಹೇಗೆ ಎನ್ನುವುದನ್ನು ಸ್ವತಃ ವೈಜಯಂತಿ ಅಡಿಗ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.
ಸಂಗೀತ ವಿದ್ಯಾರ್ಥಿಯಾಗಿದ್ದಾರೆ ನಾಗೇಂದ್ರ ಶಾನ್!
ಬಿಗ್‌ಬಾಸ್ ಮನೆಯಿಂದ ಹೊರನಡೆಯಲೇ ಬೇಕು ಅನಿಸಿದ್ದೇಕೆ? ಆ ಬಗ್ಗೆ ಬಳಿಕ ಪಶ್ಚಾತ್ತಾಪವಾಯಿತೇ?
ಬಹುಶಃ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬರುವ ಯಾರನ್ನು ಕೂಡ ಅದುವರೆಗೆ ಮನೆಯೊಳಗೆ ಒಂದಾಗಿದ್ದ ಸದಸ್ಯರು ಚೆನ್ನಾಗಿ ಸ್ವೀಕರಿಸುವ ಸಂದರ್ಭ ಇರುವುದಿಲ್ಲ. ನಾನು ಅರ್ಧದಿಂದ ಸ್ಪರ್ಧೆಗೆ ಸೇರಿಕೊಂಡಿದ್ದರೂ ಬಿಗ್‌ಬಾಸ್ ರಿಯಾಲಿಟಿ ಶೋಗೆ ನಿರಂತರ ಫಾಲೋಯರ್ ಏನೂ ಅಲ್ಲ. ಹಾಗಾಗಿ ಮನೆಯೊಳಗೆ ನಿರೀಕ್ಷೆಗಿಂತ ಅಧಿಕ ಒಂಟಿತನ ಕಾಡಿತ್ತು. ನನಗೆ ಕಾಡು ಹರಟೆ ಹೊಡೆದು ಅಭ್ಯಾಸವಿಲ್ಲ. ಏನಾದರೂ ಮೌಲ್ಯಯುತವಾಗಿರುವ ವಿಚಾರ ಮಾತನಾಡುವುದಾದರೆ ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಬರ್ಗಿಯವರ ಹೊರತಾಗಿ ಅಲ್ಲಿ ನನಗೆ ಮಾತಿನಲ್ಲಿ ಮಾಹಿತಿ ನೀಡಬಲ್ಲಂಥವರು ಯಾರೂ ಇದ್ದಹಾಗೆ ಅನಿಸಿರಲಿಲ್ಲ. ಹಾಗಾಗಿಯೇ ಅವರೊಂದಿಗೆ ಮಾತನಾಡುವಾಗ ಮನೆಗೆ ಮರಳಿ ಬಿಡಬೇಕು ಎನ್ನುವಂತೆ ನನ್ನೊಳಗೆ ಆದ ಆವೇಗವನ್ನು ಹಂಚಿಕೊಂಡಿದ್ದೆ. ಅದನ್ನೇ ಅಷ್ಟೊಂದು ಗಂಭೀರವಾಗಿ ಪರಿಗಣಿಸಿ ಎಲಿಮಿನೇಶನ್ ಪಟ್ಟಿಯಲ್ಲೇ ಇರದ ನನಗೂ ಮನೆಯಿಂದ ಹೊರನಡೆಯುವ ಅವಕಾಶ ಕೊಟ್ಟರು! ಆ ಮನೆಯ ಸದಸ್ಯರು ಸಹಜವಾಗಿ ಶಮಂತ್ ಇರಬೇಕೆಂದೇ ಬಯಸಿದ್ದರು. ಆ ಕ್ಷಣಕ್ಕೆ ಯಾರಿಗೂ ನಾನು ಇರಬೇಕು ಎನ್ನುವ ಉತ್ಸಾಹ ಕಾಣಿಸದ ಆ ಮನೆಯಲ್ಲಿ ಉಳಿಯುವುದಕ್ಕಿಂತ ಹೊರಗಡೆ ಬದುಕಿನ ಆಯ್ಕೆಯೇ ಉತ್ತಮ ಅನಿಸಿತು. ಅಂದಿನ ಆ ಆಯ್ಕೆಯ ಬಗ್ಗೆ ಈಗಲೂ ನನ್ನಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ.
ಚಿತ್ರರಂಗದ್ದು ಶೋಚನೀಯ ಪರಿಸ್ಥಿತಿ- ಸುಮಲತಾ ಅಂಬರೀಷ್
ಇದೀಗ ಮನೆಯ ಸದಸ್ಯರೆಲ್ಲ ಮನೆಯ ಹೊರಗಡೆ ಭೇಟಿಯಾಗುವುದಾದರೆ ಅಲ್ಲಿ ನೀವು ಪಾಲ್ಗೊಳ್ಳುತ್ತೀರ?
ಖಂಡಿತವಾಗಿ. ಯಾಕಾಗಬಾರದು? ಆ ಸಂದರ್ಭ, ಆ ಮನೆ ನನಗೆ ಕಷ್ಟವಾಗಿತ್ತೇ ಹೊರತು ವೈಯಕ್ತಿಕವಾಗಿ ನನಗೆ ಅಲ್ಲಿ ಯಾರೂ ಶತ್ರುಗಳಿರಲಿಲ್ಲವಲ್ಲ? ಅಲ್ಲಿ ಕೂಡ ಸ್ಪರ್ಧೆ ಎನ್ನುವುದು ಇರದಿದ್ದರೆ ಪ್ರತಿಯೊಬ್ಬರೂ ಆತ್ಮೀಯರೇ. ಹಾಗಾಗಿ ಮನೆಯಿಂದಾಚೆ ಎಲ್ಲರೂ ಸಹಜ ರೀತಿಯ ವರ್ತನೆಗಳಲ್ಲೇ ಇರುತ್ತೇವೆ. ಹಾಗಾಗಿ ಮರುಭೇಟಿಗೆ ಯಾವುದೇ ತೊಂದರೆಗಳಿರುವುದಿಲ್ಲ. ನಿಜ ಹೇಳಬೇಕೆಂದರೆ ನನಗೆ ಅಲ್ಲಿಂದ ಹೊರ ಬಂದ ಮೇಲೆ ಮನೆ ಒಳಗಿರುವ ಅವರಿಗಿಂತ ಹೊರಗಡೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುವ ಹಲವರನ್ನು ಕಂಡು ಅಸಹ್ಯವಾಗಿದೆ. ಮೂರು ದಿನ ಇದ್ದ ನನ್ನನ್ನು ಸೇರಿದಂತೆ ಅಲ್ಲಿದ್ದ ಮನೆಯ ಮಹಿಳಾ ಸದಸ್ಯೆಯರ ಬಗ್ಗೆ ಅಸಭ್ಯವಾಗಿ ಬರೆಯುವವರ ಮನಸ್ಥಿತಿ ಬಗ್ಗೆ ನಿಜಕ್ಕೂ ಬೇಜಾರಿದೆ. ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯೋಕೆ ಕೆಟ್ಟದನ್ನೇ ಹೇಳಬೇಕಾ? ಬದುಕಿ-ಬದುಕಲು ಬಿಡಿ ಎನ್ನುವ ಜಾಯಮಾನ ನನ್ನದು.
ಅರ್ಜೆಂಟ್ ಪ್ಲೀಸ್ ಎಂದರೂ ಸಹಾಯ ಸಿಗಲಿಲ್ಲ!- ತಾರಾ ಅನುರಾಧ
ಮತ್ತೆ ಸಿಕ್ಕ ಜನಪ್ರಿಯತೆಯಿಂದ ಹೊಸ ಸಿನಿಮಾ ಅವಕಾಶಗಳನ್ನು ಒಪ್ಪಿಕೊಂಡಿದ್ದೀರಾ ಹೇಗೆ?
ಸಿನಿಮಾ ಅವಕಾಶಗಳು ನನಗೆ `ಅಮ್ಮಚ್ಚಿಯೆಂಬ ನೆನಪು' ಎನ್ನುವ ಚಿತ್ರಕ್ಕೂ ಮೊದಲೂ ಸಿಕ್ಕಿತ್ತು. ಆನಂತರವೂ ಸಿಕ್ಕಿದೆ. ಅದೇ ರೀತಿ ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರವೂ ಆಫರ್ಸ್ ಬಂದಿವೆ. ಆದರೆ ನನಗೆ ಸಿನಿಮಾ ಆಗಲೀ, ನಾಟಕವೇ ಆಗಲೀ ನನ್ನ ಪಾತ್ರ ಚೆನ್ನಾಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಅಮ್ಮಚ್ಚಿಯೆಂಬ ನನೆಪು ಚಿತ್ರದ ಬಳಿಕ ಸಿಕ್ಕಂಥ ಯಾವ ಸಿನಿಮಾದಲ್ಲಿಯೂ ಅದರಷ್ಟು ಆಕರ್ಷಕ ಪಾತ್ರ ದೊರಕಿರಲಿಲ್ಲ ಎನ್ನುವುದು ಸತ್ಯ. ಜೀವನದಲ್ಲಿ ಎರಡೇ ಸಿನಿಮಾ ಮಾಡಿದರೂ ಪರವಾಗಿಲ್ಲ, ಆದರೆ ಆ ಚಿತ್ರಗಳು ಚೆನ್ನಾಗಿರಬೇಕು ಎನ್ನುವುದೇ ನನ್ನ ಧ್ಯೇಯ. ಬಹುಶಃ ನಾನು ಕಲಿತಿರುವ ಭರತನಾಟ್ಯ, ಕಥಕ್ ನೃತ್ಯವನ್ನು ಬಳಸಿಕೊಳ್ಳುವಂಥ ಒಂದೊಳ್ಳೆಯ ಪಾತ್ರ ದೊರಕಿದರೆ ನಾನು ಚಿತ್ರ ಮಾಡಬಹುದೇನೋ. ಸದ್ಯಕ್ಕೆ ಚಿತ್ರರಂಗವೇ ಸಮಸ್ಯೆಯಲ್ಲಿದೆ. ಮುಖ್ಯವಾಗಿ ಕೊರೊನಾ ಸಮಸ್ಯೆಯಲ್ಲ ದೂರಾಗುವಂತಾಗಲಿ.