ಚಿತ್ರರಂಗದ ಪರಿಸ್ಥಿತಿ ನಿಜಕ್ಕೂ ಶೋಚನೀಯ: ಸುಮಲತಾ ಅಂಬರೀಶ್

By Suvarna News  |  First Published May 9, 2021, 2:36 PM IST

ಸುಮಲತಾ ಅವರು ಇಂದು ಏನೇ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರೂ ಅದರ ಹಿಂದೆ ಚಿತ್ರರಂಗದಿಂದ ಪಡೆದ ಗಟ್ಟಿಯಾದ ಬೇರು ಇದೆ. ಆ ಕಾರಣದಿಂದಾಗಿಯೇ ಸಂಸದೆಯ ಸ್ಥಾನದಲ್ಲಿದ್ದುಕೊಂಡು ಕೊರೊನಾ ವಿರುದ್ಧದ ಹೋರಾಟದ ನಡುವೆ ಚಿತ್ರರಂಗದ ಬಗ್ಗೆಯೂ ಯೋಚಿಸಬಲ್ಲರು. ಆದರೆ ಈ ಸಂದರ್ಭ ಹೇಗೆ ಎಲ್ಲರನ್ನು ಅಸಹಾಯಕರನ್ನಾಗಿಸಿದೆ ಎನ್ನುವ ಬಗ್ಗೆ ಅವರು ಸುವರ್ಣ ನ್ಯೂಸ್‌.ಕಾಮ್ ಜೊತೆಗೆ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ.
 


-ಶಶಿಕರ ಪಾತೂರು

ಸಂಸದೆಯಾದ ಮೇಲೆ ಸುಮಲತಾ ಅವರು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದೇ ಅಪರೂಪ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಬಹು ನಿರೀಕ್ಷಿತ ಚಿತ್ರ 
ರಾಜಾ ವೀರ ಮದಕರಿ'ಯಲ್ಲಿ ಸುಮಲತಾ ಅವರು ನಟಿಸಲಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸದ್ಯದ ಮಟ್ಟಿಗೆ ಕೋವಿಡ್‌ 19 ಕಾರಣದಿಂದ ಸಣ್ಣಪುಟ್ಟ ಚಿತ್ರಗಳು ಕೂಡ ಚಿತ್ರೀಕರಣ ಸ್ಥಗಿತಗೊಳಿಸಿವೆ. ಚಿತ್ರರಂಗವನ್ನು ಕೇಳುವವರಿಲ್ಲ. ಚಿತ್ರೋದ್ಯಮಕ್ಕೆ ಯಾಕೆ ಈ ಅನ್ಯಾಯವಾಗುತ್ತಿದೆ? ಸಂಸದೆಯಾಗಿ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಕೆಲವು ರಾಜಕಾರಣಿಗಳು ಹೇಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎನ್ನುವ ಬಗ್ಗೆ ಸುಮಲತಾ ಅವರು ಮನಸು ಬಿಚ್ಚಿ ಮಾತನಾಡಿದ್ದಾರೆ.

Tap to resize

Latest Videos

undefined

ಚಿತ್ರರಂಗದ ಪರಿಸ್ಥಿತಿಯನ್ನು ಕಂಡಾಗ ಏನು ಅನಿಸುತ್ತಿದೆ? 

ನಿಜಕ್ಕೂ ತುಂಬ ಬೇಸರವಾಗುತ್ತಿದೆ. ಕೋವಿಡ್ ಎನ್ನುವ ಮಹಾರೋಗದ ಮುಂದೆ ಎಲ್ಲರ ಪರಿಸ್ಥಿತಿಯೂ ಕಷ್ಟದಲ್ಲಿದೆ. ಆದರೆ ಚಿತ್ರರಂಗವಂತೂ ದಿನೇದಿನೇ ಸತ್ತು ಹೋಗುತ್ತಿದೆ. ಯಾಕೆಂದರೆ ಉಳಿದೆಲ್ಲವುಗಳನ್ನು ಒಂದು ಉದ್ಯಮವಾಗಿ ಪರಿಗಣಿಸಿ ಅದಕ್ಕೇನೊ ಒಂದು ಪ್ಯಾಕೇಜ್, ಇಕಾನಾಮಿಕ್ ಹೆಲ್ಪ್‌ ಎಲ್ಲವೂ ಬರುತ್ತದೆ. ಇವತ್ತಲ್ಲದಿದ್ದರೆ ನಾಳೆ ಅದು ಸರ್ಕಾರದಿಂದ ಅವರಿಗೆ ಲಭ್ಯವಾಗಬಹುದು. ಆದರೆ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಅಂಥ ಯಾವುದೇ ಸಹಾಯ ಯಾವ ಸರ್ಕಾರವೂ ಮಾಡುತ್ತಿಲ್ಲ. ಅಲ್ಲಿಯೂ ಕೂಡ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಯುತ್ತದೆ.

ಅರ್ಜೆಂಟ್ ಪ್ಲೀಸ್ ಎಂದರೂ ಸಹಾಯ ಸಿಗಲಿಲ್ಲ- ತಾರಾ

ಲಕ್ಷಾಂತರ ಜನರು ಅದರಿಂದ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಅವರ ಜಿವನ ಏನಾಗುತ್ತಿದೆ ಎನ್ನುವ ಬಗ್ಗೆ ಯಾರಿಗೂ ಯೋಚನೆಯಿಲ್ಲ. ಈಗಂತೂ ಡೈಲಿ ಪೇಮೆಂಟ್ ಮೇಲೆ ಕೆಲಸ ಮಾಡುವ ಸಾವಿರಾರು ಮಂದಿ ಇದ್ದಾರೆ. ಅವರಿಗೆಲ್ಲ ಈಗ ಮನೆಯಲ್ಲಿ ಎರಡು ಹೊತ್ತಿನ ಊಟಕ್ಕೂ ಕಷ್ಟವೆನಿಸುವ ಸಂದರ್ಭ ಇದು. ಸದ್ಯಕ್ಕೆ ಚುನಾಯಿತ ಪ್ರತಿನಿಧಿಯಾಗಿ ಮಂಡ್ಯ ಜಿಲ್ಲೆಯತ್ತ ನನ್ನ ಸಂಪೂರ್ಣ ಗಮನವಿದೆ. ಅಲ್ಲಿನ ಸಾವಿಗೆ ಆಕ್ಸಿಜನ್‌ ಕೊರತೆ ಖಂಡಿತವಾಗಿ ಕಾರಣವಾಗಬಾರದು ಎನ್ನುವ ಉದ್ದೇಶ ನನ್ನದಾಗಿದೆ.

ಉಚಿತವಾಗಿ ಆಕ್ಸಿಜನ್ ಕಳಿಸಿದ ನಿಮ್ಮ ಮೇಲೆ  ಆರೋಪ ನಡೆಸಿದವರ ಬಗ್ಗೆ ಏನು ಹೇಳುತ್ತೀರಿ? 

ನಾನು ಹೇಳಿದ್ದು ಸತ್ಯವೆನ್ನುವುದನ್ನು ಈಗಾಗಲೇ ಜಿಲ್ಲಾಡಳಿತ ಸಾಕ್ಷಿ ಸಮೇತ ಸಾಬೀತು ಪಡಿಸಿದೆ. ಆರೋಪ ನಡೆಸುವವರು ಎಲ್ಲ ಕಡೆಯೂ ಇರುತ್ತಾರೆ. ಜನರಿಗೆ ನನ್ನ ಮೇಲೆ ನಂಬಿಕೆ ಇದೆ. ನಾನು ಏನೇ ಕೆಲಸ ಮಾಡಿದರೂ ನಿಷ್ಠೆಯಿಂದ ಮಾಡುತ್ತೇನೆ ಎನ್ನುವ ನಂಬಿಕೆ ಅವರಿಗೆ ಇದೆ. ನಾನು 50ದಿನಗಳಿಂದ ಕ್ಷೇತ್ರದಲ್ಲಿ ಕಾಣಿಸಲಿಲ್ಲ ಎಂದು ಆರೋಪಿಸುವ ಶಾಸಕರೊಬ್ಬರಿಗೆ ಮಾರ್ಚ್ ಮತ್ತು ಅದಕ್ಕೆ ಹಿಂದಿನ ನಲವತ್ತು ದಿನಗಳು ನಾನು ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿರುವ ಬಗ್ಗೆ ಅರಿವಿಲ್ಲ.

ನಿರ್ದೇಶನಕ್ಕೆ ತಯಾರಾಗುತ್ತಿರುವೆ- ಪಾಪ ಪಾಂಡು ಚಿದಾನಂದ್ 

ವಿದ್ಯಾಭ್ಯಾಸ, ತಿಳುವಳಿಕೆ ಇರುವವರಿಗೆ ಆ ನಲವತ್ತು ದಿನಗಳಲ್ಲಿ ಏನಾಯಿತು ಎನ್ನುವುದು ಗೊತ್ತಾಗದೆ? ಪಾರ್ಲಿಮೆಂಟಲ್ಲಿ ನಾನು ಎಷ್ಟು ಬಾರಿ ಸಮಸ್ಯೆಗಳ ಬಗ್ಗೆ ಮಾತನಾಡಿದ್ದೇನೆ ಎನ್ನುವುದು ಯೂಟ್ಯೂಬಲ್ಲಿ ಕೂಡ ಲಭ್ಯವಿದೆ. ಮೊನ್ನೆ ಒಬ್ಬರು ನಾಯಕರು ಎಲ್ಲ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ಒಂದೂವರೆ ಸಾವಿರ ಜನರನ್ನು ದೇವಸ್ಥಾನದ ಬಳಿ ಸೇರಿಸಿ ಸಭೆ ಮಾಡಿದ್ರು. ಅದಾದ ಮೇಲೆ ಅಲ್ಲಿ ಸಾವಿರಾರು ಮಂದಿಗೆ ಕೊರೊನಾ ಆಯ್ತು. ಅದಕ್ಕೆ ಕಾರಣ ಯಾರು? ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಜನ ಸೇರಿಸಿ ಅಂಥ ಬೇಜವಬ್ದಾರಿ ವರ್ತನೆ ನಡೆಸುವುದಕ್ಕಿಂತ ಆಗಬೇಕಾದ ಕರ್ತವ್ಯ ಮಾಡುವುದು ಮುಖ್ಯವಾಗುತ್ತದೆ.

ಸಿನಿಮಾರಂಗಕ್ಕಿಂತ ಹೆಚ್ಚು ಗಾಸಿಪ್‌, ಅಪಪ್ರಚಾರಗಳು ರಾಜಕೀಯದಲ್ಲೇ ಇದೆ ಎನ್ನುತ್ತೀರ?  

ನಾವು ಇಂಡಸ್ಟ್ರಿಯಲ್ಲಿದ್ದಾಗ ಈ ರೀತಿಯಲ್ಲಿ ಸೋಶಿಯಲ್ ಮೀಡಿಯ, ಟ್ರೋಲ್ಸ್ ಇರಲಿಲ್ಲ. ಟಿವಿ ಕೂಡ ಇರಲಿಲ್ಲ. ದೂರದರ್ಶನ ಇತ್ತು. ಕೊನೆಗೆ ಒಂದೆರಡು ಚಾನೆಲ್ಸ್‌ ಇದ್ದವು. ಆದರೆ ಅವರಿಗೆ ಲಿಮಿಟ್ ಚೆನ್ನಾಗಿ ಗೊತ್ತಿತ್ತು. ಎಲ್ಲರಿಗೂ ಒಂದು ಖಾಸಗಿತನ ಇತ್ತು. ಬಹುಶಃ ಒಂದೆರಡು ಟಾಬ್ಲಾಯ್ಡ್‌ ಪತ್ರಿಕೆಗಳು `ಯೆಲ್ಲೊ ಜರ್ನಲಿಸಮ್‌' ಮಾಡುತ್ತಿದ್ದವು. ಆದರೆ ಈಗ ಹಾಗಲ್ಲ, ಸಾರ್ವಜನಿಕ ಸೇವೆಯಲ್ಲಿದ್ದಾಗ ಎದುರಿಸುವುದು ಅನಿವಾರ್ಯ ಎಂದು ಸಹಿಸಬೇಕಾಗಿದೆ. ಅದರಲ್ಲಿಯೂ ರಾಜಕಾರಣವನ್ನು ಬಿಸ್‌ನೆಸ್‌ ತರಹ ನೋಡಿಕೊಂಡು ಬಂದವರನ್ನು ಬದಲಾಯಿಸಲು ಸಾಧ್ಯವೇ ಇಲ್ಲ.

ಸದ್ಯದ ಸ್ಥಿತಿಗತಿಯ ಬಗ್ಗೆ ತಿಥಿ ಪೂಜಾ ಅವಲೋಕನ

ಶ್ರೀರಂಗಪಟ್ಟಣದ ಕಾಲನಹಳ್ಳಿ ಎನ್ನುವ ಫಾರೆಸ್ಟ್‌ನಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಮೈನಿಂಗ್‌ಅನ್ನು ನಾನೇ ಬಿಚ್ಚಿಟ್ಟೆ. ನಮ್ಮ ಸಚಿವರೊಂದಿಗೆ ಅಲ್ಲಿಗೆ ಹೋದಾಗ ಅವರೇ ಬೆಚ್ಚಿದ್ದರು. ಅಲ್ಲಿಂದ ಸರ್ಕಾರಕ್ಕೆ ಬರಬೇಕಾಗಿದ್ದ ರಾಯಲ್ಟಿ ಬಂದಿಲ್ಲ. ಆ ಸಂಸ್ಥೆಯ ಮೇಲೆ 60 ಕೋಟಿ ಫೈನ್ ಹಾಕಲಾಗಿದೆ. ಆಗ ನಾನು ಒಂದು ಸಂಸ್ಥೆಯನ್ನು ಟಾರ್ಗೆಟ್ ಮಾಡುತ್ತಿದ್ದನೆ ಎನ್ನುವ ಮಾತು ಕೇಳಿಸಿಕೊಳ್ಳಬೇಕಾಯಿತು. ಸರ್ಕಾರಕ್ಕೆ ಆ ದುಡ್ಡು ಬಂದಿದ್ದಲ್ಲಿ ಅದು ಮಂಡ್ಯಕ್ಕೆ ಸೇರಬೇಕಾಗಿದ್ದ ಹಣ. ನಾನು ಆ ಕೆಲಸ ಮಾಡಿದಾಗ ಕೋವಿಡ್‌ ಎರಡನೇ ಅಲೆ ಶುರುವಾಗಿರಲಿಲ್ಲ. ಆ ಹಣ ವಸೂಲಾಗಿದ್ದರೆ ಈ ಸಂದರ್ಭದಲ್ಲಿ ನಮಗೆ ಎಷ್ಟೊಂದು ಉಪಯೋಗವಾಗುತ್ತಿತ್ತು? ಈಗ ಆಕ್ಸಿಜನ್‌ ಸಿಲಿಂಡರ್‌ಗಳಿಗೆ ಬೇರೆಯವರಲ್ಲಿ ಕೈಚಾಚುವಂತಾಗಿದೆ.

ಈಗಾಗಲೇ ಕೋವಿಡ್‌ ಮೂರನೇ ಅಲೆಯ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆಯಲ್ಲ? 

ಹೌದು. ಎರಡನೇ ಅಲೆಯನ್ನು ಎದುರಿಸಲು ಸೂಕ್ತ ತಯಾರಿ ನಡೆಸದೆ ಈಗಾಗಲೇ ಸರ್ಕಾರ ದೊಡ್ಡ ತಪ್ಪು ಮಾಡಿದೆ. ಮೊದಲ ಅಲೆಯಲ್ಲಿ ಸೀನಿಯರ್ ಸಿಟಿಜನ್ಸ್‌ ಅಷ್ಟೇ ಹೆಚ್ಚು ಪೀಡಿತರಾಗಿದ್ದರು. ಎರಡನೇ ಅಲೆಯಲ್ಲಿ ಯುವ ಸಮುದಾಯವನ್ನು ಬಲಿ ತೆಗೆದುಕೊಳ್ಳುತ್ತಾ ಹೋಯಿತು. ಇಪ್ಪತ್ತು, ಇಪ್ಪತ್ತೈದು ವರ್ಷದವರು ಕೂಡ ಹೇಗೆ ನಮ್ಮ ಕಣ್ಣಮುಂದೆಯೇ ಅಸು ನೀಗಿದ್ದಾರೆ ಎನ್ನುವುದು ನಮಗೆಲ್ಲ ಗೊತ್ತು. ಈಗ ಮುಂದೆ ಬರುವ ಅಲೆಯ ಬಗ್ಗೆ ಭಯದ ವಿಚಾರ ಏನೆಂದರೆ ಅದು ಮಕ್ಕಳನ್ನು ಕೂಡ ಕಾಡಲಿದೆಯಂತೆ! ಅದಕ್ಕೆ ಯಾವ ಮಟ್ಟದಲ್ಲಿ ತಯಾರಿರಬೇಕು ಎನ್ನುವುದರ ಬಗ್ಗೆ ಈಗಿನಿಂದಲೇ ಯೋಜನೆ ರೂಪಿಸಬೇಕಿದೆ. ಡಾಕ್ಟರ್ಸ್‌, ಹೆಲ್ತ್ ಸ್ಟಾಫ್‌ಗಳ ಹೆಚ್ಚಳ ಮಾಡುವುದು, ಕೋವಿಡ್ ಸೇವೆ ಮಾಡುವವರಿಗೆ ಸ್ಪೆಷಲ್‌ ಪ್ರೋತ್ಸಾಹ ಧನ, ಪ್ರಶಸ್ತಿ ನೀಡುವುದು, ಹೆಚ್ಚುಮಂದಿ ಸ್ವಯಂಸೇವಕರನ್ನು ನೇಮಕಾತಿ ಮಾಡಿಕೊಳ್ಳುವುದು.. ಇವೆಲ್ಲವನ್ನು ಮಾಡದಿದ್ದರೆ ಈಗ ಆಕ್ಸಿಜನ್‌ಗೆ ಹೇಗೆ ಒದ್ದಾಡಿದ್ದೇವೆಯೋ ಅದೇ ರೀತಿ ವೈದ್ಯರುಗಳು ಕೊರತೆ ಕಾಡಲಿದೆ. ಬೆಡ್, ಆಕ್ಸಿಜನ್ ಸಿಕ್ಕು ಸೇವೆ ಸಲ್ಲಿಸಲು ವೈದ್ಯರೇ ಇರದಿದ್ದರೆ ಮಾಡುವುದೇನು? 

click me!