ನಾದಕೆ ಮನಸೋತ ನಟ, ನಿರ್ದೇಶಕ ನಾಗೇಂದ್ರ ಶಾನ್

By Suvarna News  |  First Published May 11, 2021, 5:10 PM IST

ನಾಗೇಂದ್ರ ಶಾನ್ ಕನ್ನಡದ ಜನಪ್ರಿಯ ಪೋಷಕ ನಟರಷ್ಟೇ ಅಲ್ಲ; ರಾಜ್ಯ ಪ್ರಶಸ್ತಿ ವಿಜೇತ ಚಿತ್ರದ ನಿರ್ದೇಶಕರೂ ಹೌದು. ಕನ್ನಡ ಕಿರುತೆರೆಯ ಕ್ಲಾಸಿಕ್‌ ಧಾರಾವಾಹಿ `ಮಾಯಾಮೃಗ'ದ ಮೂವರು ನಿರ್ದೇಶಕರಲ್ಲಿ ಇವರೂ ಒಬ್ಬರು. ಜನಪ್ರಿಯ ನಟಿ ಕಾವ್ಯಾ ಶಾಗೆ ತಂದೆಯೂ ಹೌದು. ಕೊರೊನಾ ಕಾಲದ ಈ ಲಾಕ್ಡೌನ್ ಸಂದರ್ಭವನ್ನು ಹೇಗೆ ಕಳೆಯುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಅವರು ತುಂಬ ಆಸಕ್ತಿದಾಯಕವಾದ ಉತ್ತರ ನೀಡಿದ್ದಾರೆ. 
 


ಮೂವತ್ತರ ಬಳಿಕ ಬಳಿಕ ಒಬ್ಬ ವ್ಯಕ್ತಿ ಹೊಸದೇನನ್ನೂ ಕಲಿಯಲಾರ ಎನ್ನುವ ಮಾತಿದೆ. ಆದರೆ ಆಸಕ್ತಿಯೊಂದಿದ್ದರೆ ವಯಸ್ಸು ಅರವತ್ತರ ಆಸುಪಾಸಲ್ಲಿದ್ದರೂ ಕಲೆಗಳನ್ನು ಅರಿತು ಅರಗಿಸಬಲ್ಲೆನೆಂದು ನಟ, ನಿರ್ದೇಶಕ ನಾಗೇಂದ್ರ ಶಾನ್ ಸಾಬೀತು ಮಾಡಿದ್ದಾರೆ. ಅಂದಹಾಗೆ ಅವರು ಕೀಬೋರ್ಡ್ ನುಡಿಸಲು ಕಲಿತಿರುವುದು ಯಾವುದೇ ಸಿನಿಮಾ ಪ್ರಾಜೆಕ್ಟ್‌ಗಾಗಿ ಅಲ್ಲ. ಸ್ವತಃ ನುಡಿಸಬೇಕೆನ್ನುವ ಆಕಾಂಕ್ಷೆಯಿಂದ. ಒಬ್ಬ ನಟನಲ್ಲಿ ಬತ್ತದ ಕಲಿಕೆಯ ಒರತೆ ಇದ್ದರೆ ಅದು ಸುತ್ತಮುತ್ತಲಿನ ಕೊರತೆಗೆ ಕಣ್ಣಾಗದು ಎನ್ನುವುದಕ್ಕೆ ನಾಗೇಂದ್ರ ಶಾನುಭೋಗರು ಉದಾಹರಣೆಯಾಗಿದ್ದಾರೆ. ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ಮಾತುಕತೆ ಇದು.

- ಶಶಿಕರ ಪಾತೂರು

Tap to resize

Latest Videos

undefined

ಕೀಬೋರ್ಡ್ ನುಡಿಸಬೇಕು ಎನ್ನುವ ಹಂಬಲ ಮೂಡಿದ್ದು ಹೇಗೆ?
ನಾನು ಸಂಗೀತಜ್ಞ ಅಲ್ಲ. ಸಂಗೀತಕ್ಕೆ ಒಬ್ಬ ಶ್ರೋತೃ ಎನ್ನುವುದನ್ನು ಬಿಟ್ಟರೆ ಸಂಗೀತದ ಜೊತೆಗೆ ನನಗೆ ಸಂಬಂಧವೇ ಇಲ್ಲ. ನಾನಾಉ ಯಾಕೆ ನುಡಿಸಬಾರದು ಎನ್ನುವ ಪ್ರಶ್ನೆ ಮೂಡಿದ ಸಂದರ್ಭದಲ್ಲಿಯೇ ಉತ್ತರವಾಗಿ ಯೂಟ್ಯೂಬ್‌ ವಿಡಿಯೋಗಳು ಅದು ನಿನ್ನಿಂದ ಸಾಧ್ಯ ಎಂದು ಸಾರುತ್ತಿದ್ದವು. ಮತ್ತೆ ತಡ ಮಾಡದೆ ಕೀಬೋರ್ಡ್ ಕೊಂಡುಕೊಂಡೆ. ಯೂಟ್ಯೂಬ್‌ ನೋಡಿ ಒಂದಷ್ಟು ಕಲಿತುಕೊಂಡಿದ್ದೇನೆ. ವೃತ್ತಿಪರವಾಗಿ ನುಡಿಸಲು ಸಾಧ್ಯವಿರದಿದ್ದರೂ ನನ್ನ ಸಂತೋಷಕ್ಕೆ ಬೇಕಾದಷ್ಟು ನುಡಿಸುತ್ತಿದ್ದೇನೆ.

ಕೊರೋನಾ ತಡೆಯಲು ಎಚ್ಚರಿಕೆ ಅಗತ್ಯ: ಗಿಣಿರಾಮ ನಟಿ

ನಿಮ್ಮ ಸಂಗೀತಾಸಕ್ತಿಯ ಮೂಲ ಏನು?
ಚಿತ್ರಗೀತೆಗಳು. `ಏಕ್ ದುಜೇ ಕೇಲಿಯೆ' ಚಿತ್ರದ `ತೆರೆ ಮೇರೇ ಬೀಚ್‌ ಮೆ' ಹಾಡುಗಳನ್ನು ತುಂಬಾನೇ ಇಷ್ಟಪಡುತ್ತಾ ಚಿತ್ರ ಸಂಗೀತ ಲೋಕದ ಅಭಿಮಾನಿಯಾದೆ. ಅದೇ ರೀತಿ `ಹಮೆ ತುಮ್ಸೆ ಪ್ಯಾರ್‌ ಕಿತ್ನಾ...' ಗೀತೆ ಕೂಡ ನನ್ನ ಆಲ್‌ಟೈಮ್‌ ಫೇವರಿಟ್‌. ಈಗ ಸಂಗೀತ ಕಲಿಯಲು ಆರಂಭಿಸಿದ ಮೇಲೆ ನನ್ನ ಇಷ್ಟದ ಗೀತೆಗಳೆಲ್ಲವೂ ಶಿವರಂಜಿನಿ ರಾಗದಲ್ಲೇ ಮೂಡಿ ಬರುತ್ತಿತ್ತು ಎನ್ನುವುದರ ಅರಿವಾಯಿತು. ಹಾಡುವುದು ದೈವದತ್ತ ಕಲೆ. ಎಲ್ಲರ ಮನಗೆಲ್ಲುವಂತೆ ಕೆಲವರಿಗಷ್ಟೇ ಹಾಡಲು ಸಾಧ್ಯ. ನಮ್ಮ ಹಾಡು ನಮಗಷ್ಟೇ ಇಷ್ಟ. ಆದರೆ ಉಪಕರಣದ ಮೂಲಕ ಸಂಗೀತ ಕಲಿಯುವ ಅವಕಾಶ ಎಲ್ಲರಿಗೂ ಇದೆ. ಬುದ್ಧಿಶಕ್ತಿ, ಆಸಕ್ತಿ, ತಾಳ್ಮೆ ಮತ್ತು ಕುತೂಹಲ ಇದ್ದರೆ ವಯಸ್ಸು ಒಂದು ವಿಚಾರವೇ ಅಲ್ಲ. ಸಾಯುವ ತನಕ ಕಲಿಯಬಹುದು.

ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ವಿಲನ್ ರೋಲ್ ಮಾಡುತ್ತಾರಾ ಕಿಚ್ಚ?

ಸಂಗೀತದ ಹೊರತು ಬೇರೆ ಏನೆಲ್ಲ ಹವ್ಯಾಸವಿದೆ ನಿಮಗೆ?
ಸದ್ಯಕ್ಕೆ ಸಂಗೀತವೇ ಪ್ರಮುಖ. ಕೊರೊನಾ ಎರಡನೇ ಅಲೆ ಶುರುವಾಗುವ ಮೊದಲು ಒಬ್ಬ ತಬಲಾ ಮೇಷ್ಟ್ರನ್ನು ಗೊತ್ತು ಮಾಡಿಕೊಂಡಿದ್ದೆ! ಆದರೆ ಅದು ಕಾರ್ಯರೂಪಗೊಳ್ಳಲಿಲ್ಲ. ಆದರೆ ಆರು ತಿಂಗಳ ಹಿಂದೆ ನಾನೇ ಶುರುಮಾಡಿರುವ ಕೀಬೋರ್ಡ್ ಕಲಿಕೆ ಒಂದು ಹಂತಕ್ಕೆ ನನ್ನನ್ನು ಸಂಗೀತಗಾರನನ್ನಾಗಿಸಿದೆ. ಹೊಸತನ್ನ ಕಲಿಯುವುದೇ ನನಗೆ ಉತ್ಸಾಹದ ವಿಚಾರ. ಉದಾಹರಣೆಗೆ ನಾನು ಕಂಪ್ಯೂಟರ್ ಕಲಿತಿರುವುದೇ ನನಗೆ ಐವತ್ತು ವರ್ಷಗಳಾದ ಮೇಲೆ! ಅದು ನನಗೆ ಸಂಬಂಧವೇ ಇರದ ಸಬ್ಜೆಕ್ಟ್! ಆದರೆ ಆನಂತರ ತುಂಬಾ ಮಂದಿಗೆ ನಾನೇ ಕನ್ನಡ ಟೈಪಿಂಗ್ ಕಲಿಸಿದ್ದೇನೆ! ಅನಿವಾರ್ಯತೆ ಮತ್ತು ಆಸಕ್ತಿ ಜೊತೆಯಾದಾಗ ಮನುಷ್ಯ ಎಲ್ಲವನ್ನು ಕಲಿಯಬಲ್ಲ. ಇನ್ನು ಓದು ಕೂಡ ಬಾಲ್ಯದಿಂದಲೇ ನನ್ನ ಮೆಚ್ಚಿನ ಹವ್ಯಾಸವೇ ಆಗಿದೆ. ತುಂಬಾ ಹಿಂದೆ ಚಾಮರಾಜಪೇಟೆಯ ಮನೆಯಿಂದ ನಡೆದುಕೊಂಡು ಜಯನಗರ ಸೆಂಟ್ರಲ್ ಲೈಬ್ರೆರಿಗೆ ಹೋಗಿ ಕುಳಿತರೆ ಸಂಜೆ ವೇಳೆಗೆ ನಾಲ್ಕೈದು ಪುಸ್ತಕ ಓದುತ್ತಿದ್ದೆ. `ಪರ್ವ' ಕಾದಂಬರಿಯನ್ನು ಕಾಲೇಜ್ ದಿನಗಳಲ್ಲಿ ಓದಿದ್ದೆ. ಇತ್ತೀಚೆಗೆ ರಂಗಾಯಣದಲ್ಲಿ ಹತ್ತು ಗಂಟೆಯ ನಾಟಕವಾಗಿ `ಪರ್ವ'ವನ್ನು ವೀಕ್ಷಿಸಿದೆ. ಚೆನ್ನಾಗಿತ್ತು, ಈಗ ಮತ್ತೆ ಕಾದಂಬರಿ ಓದತೊಡಗಿದ್ದೇನೆ.

ಕಾವ್ಯಾ ಶಾ ಫೋಟೋಸ್ ನೋಡಿ

ನೀವು ಚಿತ್ರರಂಗದಲ್ಲೇ ಇದ್ದರೂ ಸಿನಿಮಾ ನೋಡುವುದೇ ಕಡಿಮೆ ಎನ್ನಬಹುದೇ? 
ಖಂಡಿತವಾಗಿ ಇಲ್ಲ. ಸಾಧ್ಯವಾದಾಗಲೆಲ್ಲ ಸಿನಿಮಾ ನೋಡುವ ಅಭ್ಯಾಸ ಇದೆ. ಸದ್ಯಕ್ಕೆ ಸಿನಿಮಾದಲ್ಲಿ ನಟನೆಗೆ ಹೆಚ್ಚಿನ ಅವಕಾಶಗಳು ದೊರಕುತ್ತಿವೆ. ಹಲವು ಬಾರಿ ನಾನು ನಟಿಸಿರುವ ಚಿತ್ರಗಳನ್ನೇ ನಾನು ಥಿಯೇಟರ್‌ಗೆ ಹೋಗಿ ನೋಡಿಲ್ಲ. ಆದರೆ ಸಿನಿಮಾ ಫೆಸ್ಟಿವಲ್‌ಗಳಲ್ಲಿ ನಾನು ಖಾಯಂ ಪ್ರೇಕ್ಷಕ. ಈಗ ಮನೆಯಲ್ಲಿದ್ದುಕೊಂಡು ಹಳೆಯ ಸಿನಿಮಾಗಳನ್ನು ವೀಕ್ಷಿಸುವುದರಲ್ಲಿ ಖುಷಿ ಇದೆ.  `ಬಂಗಾರದ ಮನುಷ್ಯ' ಚಿತ್ರ ನನಗೆ ಅಂದು ನೋಡುವಾಗ ಸಿಕ್ಕಷ್ಟೇ ಸಂತಸ ಈಗಲೂ ಸಿಗುತ್ತದೆ. ಹಾಗಂತ ಅದೇ ಚಿತ್ರ ಇಗ ಅದೇ ಮಾದರಿಯಲ್ಲಿ ತೆರೆಗೆ ತಂದರೆ ನನಗು ಇಷ್ಟವಾಗಲಾರದು. ಯಾಕೆಂದರೆ ಆ ಹಳೆಯ ಚಿತ್ರವನ್ನು ಅಂದಿನ ಕಾಲದ ಸಿನಿಮಾ ಎನ್ನುವ ಭಾವದೊಂದಿಗೆ, ಅಂದಿನ ನೆನಪುಗಳೊಂದಿಗೆ ನೋಡುವ ಕಾರಣ ಇಷ್ಟವಾಗುತ್ತಿದೆ ಎನ್ನಬಹುದು. ಮ್ಯಾಟಿನಿ, ಫಸ್ಟ್ ಶೋ, ಸೆಕೆಂಡ್‌ ಶೋ.. ಹೀಗೆ ಒಂದೇ ದಿನ ಮೂರು ಬಾರಿ ಆ ಸಿನಿಮಾ ನೋಡಿದ್ದೆ. ಹಿಂದಿಯ `ಶೋಲೆ' ಸಿನಿಮಾ ಕೂಡ ಅದೇ ರೀತಿ ನೋಡಿದ್ದೆ.

ಚಿತ್ರರಂಗದ ಸ್ಥಿತಿ ನಿಜಕ್ಕೂ ಶೋಚನೀಯ

ನಾಗೇಂದ್ರ ಶಾನ್ ಅವರನ್ನು ನಿರ್ದೇಶಕರಾಗಿ ಯಾವಾಗ ನೋಡಬಹುದು?
ನನ್ನ ಚಿಂತನೆಗಳಿಗೆ ಹೊಂದುವಂಥ ಒಬ್ಬ ನಿರ್ಮಾಪಕರು ಸಿಕ್ಕರೆ ಈಗಲೂ ನನ್ನನ್ನು ಒಬ್ಬ ಚಿತ್ರ ನಿರ್ದೇಶಕನಾಗಿ ನೀವು ನೋಡುವ ಅವಕಾಶ ಇದೆ. ಆದರೆ ಧಾರಾವಾಹಿಗಳ ವಿಚಾರಕ್ಕೆ ಬಂದರೆ ಮಾತ್ರ ತುಂಬ ಕಷ್ಟ ಇದೆ. ಈ ಹಿಂದೆ ನಾನು ನಿರ್ದೇಶಿಸಿದ `ಮತ್ತೆ ಬರುವನು ಚಂದಿರ' ಮೊದಲಾದ ನನ್ನ ಧಾರಾವಾಹಿಗಳನ್ನು ಇಂದಿಗೂ ಮೆಚ್ಚಿ ಮಾತನಾಡುವ ಪ್ರೇಕ್ಷಕರನ್ನು ಕಂಡಿದ್ದೇನೆ. ಆದರೆ ಟಿ.ವಿ ವಾಹಿನಿಗಳ ದೃಷ್ಟಿಕೋನ ಮಾತ್ರ ಬದಲಾಗಿವೆ. ಅಂದು ನಿರ್ದೇಶಕರಿಗೆ ಹೆಚ್ಚಿನ ಮಹತ್ವ ಇತ್ತು. ನಮ್ಮ ನಿರ್ಧಾರಗಳೇ ನಡೆಯುತ್ತಿದ್ದವು. ಈಗ ನಾಲ್ಕು ಪ್ರಮುಖ ಚಾನೆಲ್‌ಗಳು  ಆಯಾ ಟೈಮ್‌ ಬ್ಯಾಂಡಲ್ಲಿ ನೀಡುವುದೇ ಸಕ್ಸಸ್‌ ಸೂತ್ರ ಎನ್ನುವಂತಾಗಿದೆ. ಕತೆಯಲ್ಲಿ ಏನೇ ವ್ಯತ್ಯಾಸ ಇರಲಿ, ಟಿಆರ್‌ಪಿ ಬಂದ ಧಾರಾವಾಹಿಯ ದೃಶ್ಯಗಳನ್ನು ಅದೇ ಸಮಯದಲ್ಲಿ ಪ್ರಸಾರವಾಗುವ ಮತ್ತೊಂದು ವಾಹಿನಿಯ ಧಾರಾವಾಹಿಯಲ್ಲೂ ಬೇಕು ಎಂದು ಪಟ್ಟು ಹಿಡಿಯುವವರ ನಡುವೆ ನಿರ್ದೇಶಕರು ತೊಳಲಾಡಬೇಕಾಗುತ್ತದೆ. ಇಂದು ವಾಹಿನಿಗಳು ನಿರ್ಮಾಪಕರನ್ನೇ ಬದಲಾಯಿಸುವ ಶಕ್ತಿ ಹೊಂದಿವೆ. ಉದಾಹರಣೆಗೆ ನಾನು ಟಿ.ಎನ್‌ ಸೀತಾರಾಮ್‌ ಸೇರಿ ಹಿಂದಿನಂತೆ ಮತ್ತೆ ಮಾಯಾಮೃಗ ಮಾಡುವ ಯೋಜನೆ ಹಾಕಿದ್ದೆವು. ಆದರೆ ಅದು ವರ್ಕೌಟ್‌ ಆಗಲಿಲ್ಲ. ಬಹುಶಃ ನಮ್ಮ ಕಾಲದವರಲ್ಲಿ ಇಂದಿಗೂ ನಿರ್ದೇಶಕರ ಘನತೆ ಉಳಿಸಿಕೊಂಡು ಫೀಲ್ಡಲ್ಲಿರುವುದು ಸೀತಾರಾಮ್ ಒಬ್ಬರೇ ಎನ್ನಬಹುದು.
 

click me!