
ಪ್ರಿಯಾ ಕೆರ್ವಾಶೆ
ಸಿನಿಮಾ ಟ್ರಾಫಿಕ್ಕು ಜೋರಾಗಿದೆ, ಈ ನಡುವೆಯೇ ನಿಮ್ಮ ಸಿನಿಮಾ ರಿಲೀಸ್. ಹೇಗಿದೆ ಫೀಲ್?
ಲಾಕ್‌ಡೌನ್ ಮುಗಿದ ಕೂಡಲೇ ಜನ ಧಾವಂತದಲ್ಲಿ ಆಚೆ ಬರ್ತಾರಲ್ಲ, ಚಿತ್ರರಂಗದ ಸದ್ಯದ ಸ್ಥಿತಿಯೂ ಅದಕ್ಕಿಂತ ಹೊರತಾಗಿಲ್ಲ. ಆದರೆ ಸಿನಿಮಾದವರಿಗೆ ಅವರದೇ ಆದ ಅನಿವಾರ್ಯತೆಗಳಿರುತ್ತವೆ, ಹೀಗಾಗಿ ಈ ಥರ ಆಗುತ್ತೆ. ಸಿನಿಮಾ ರಿಲೀಸ್ ಆಗ್ತಿರೋದರ ಬಗ್ಗೆ ಖುಷಿ, ಆತಂಕ ಎರಡೂ ಇದೆ. ಈ ಚಿತ್ರ ಪ್ರೇಕ್ಷಕರಿಗೆ ಇಷ್ಟ ಆಗುವ ಆತ್ಮವಿಶ್ವಾಸವೂ ಇದೆ.
ನಿಮ್ಮ ಸಿನಿಮಾ ಬಿಡುಗಡೆ ಆಗುತ್ತಿರುವ ದಿನವೇ ಇನ್ನೆರಡು ಸ್ಟಾರ್ ಸಿನಿಮಾ ರಿಲೀಸ್ ಆಗ್ತಿವೆ. ಇವುಗಳ ನಡುವೆ ನಿಮ್ಮ ಚಿತ್ರವನ್ನು ಗೆಲ್ಲಿಸುವ ಅಂಶಗಳೇನಿವೆ?
ಅದ್ಭುತ ಹಾಡುಗಳಿವೆ. ಎಮೋಶನ್ ಅನ್ನು ಪ್ಲೇ ಮಾಡಿರುವ ರೀತಿಯಲ್ಲಿ ಹೊಸತನವಿದೆ. ವಿಶುವಲೈಸೇಶನ್ ಚೆನ್ನಾಗಿದೆ. ಜನರ ನಿರೀಕ್ಷೆ ಮುಟ್ಟುವ ಭರವಸೆ ನನಗಂತೂ ಇದೆ.
ಜಾಕಿ ಭಾವನಾ ಜೊತೆಗೆ ನಟಿಸಿದ ಅನುಭವ ಹೇಗಿತ್ತು?
ನಾನು ಇಂಡಸ್ಟ್ರಿಗೆ ಬಂದಾಗ ಮೊದಲು ಕೆಲಸ ಮಾಡಿದ್ದು ಜಾಕಿ ಚಿತ್ರಕ್ಕೆ. ಅದರಲ್ಲಿ ಭಾವನಾ ಹೀರೋಯಿನ್ ಆಗಿದ್ರು, ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದೆ. ಈಗ ನನಗೆ ಅವರು ನಾಯಕಿ. ಅವರ ಜೊತೆ ನಟಿಸೋಕೆ ಖುಷಿ ಆಗುತ್ತೆ. ಆದರೆ ಅವ್ರು ಅಲ್ಲಲ್ಲಿ ತಪ್ಪು ತಪ್ಪಾಗಿ ಕನ್ನಡ ಮಾತಾಡುವಾಗ ನಗು ಕಂಟೊ್ರೀಲ್ ಮಾಡೋದೇ ಕಷ್ಟ. ಆಗ ನನ್ನ ಕಡೆ ನೋಡಿ ಆಕೆ ‘ಏನು?’ ಅಂತ ಕೇಳ್ತಿದ್ರು. ‘ಏನಿಲ್ಲ..’ ಅಂತ ಮಾತು ಹಾರಿಸುತ್ತಿದ್ದೆ.
ನಿಮ್ಮ ಪಾತ್ರ, ಅದರ ಜರ್ನಿ?
ಇದ್ರಲ್ಲಿ ನಾನು ಸ್ಟಾರ್ ಹೊಟೇಲಿನ ವೈಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಲೋವರ್ ಮಿಡ್‌ಲ್ ಕ್ಲಾಸ್ ಹಿನ್ನೆಲೆಯಿಂದ ಬಂದ ಯುವಕ ಅಂಥಾ ಶ್ರೀಮಂತ ಪರಿಸರದಲ್ಲಿ ಹೇಗಿರ್ತಾನೆ ಅನ್ನೋದು, ಇದರ ಜೊತೆಗೆ ಒಂದು ಮಗು, ಅದರೊಂದಿಗಿನ ಎಮೋಶನಲ್ ಕನೆಕ್ಷನ್, ಭಾವನಾ ಜೊತೆಗಿನ ಸಂಬಂಧ, ಅನೇಕ ತಿರುವು.. ಎಲ್ಲವೂ ಸಿನಿಮಾದುದ್ದಕ್ಕೂ ಕುತೂಹಲ ಹೆಚ್ಚಿಸುತ್ತವೆ.
ಇಷ್ಟೊಂದು ಚಿತ್ರಗಳು ಕೈಯಲ್ಲಿವೆ. ನಿಮ್ಮ ಅಪ್ಪಟ ಲವ್ ಮಾಕ್‌ಟೇಲ್ ಫ್ಯಾನ್‌ಸ್ಗೆ ಹತ್ತಿರವಾಗುವಂಥಾ ಚಿತ್ರಗಳಿವೆಯಾ?
ಅವರು ಲವ್ ಮಾಕ್‌ಟೇಲ್ 2ಗೆ ಕಾಯಬೇಕು. ಶ್ರೀಕೃಷ್ಣ ಎಟ್ ಜೀಮೇಲ್ ಡಾಟ್ ಕಾಮ್ ಅಂತೂ ಅದಕ್ಕಿಂತ ಕಂಪ್ಲೀಟ್ ಭಿನ್ನವಾಗಿದೆ. ಮಿ. ಬ್ಯಾಚುಲರ್, ಲಕ್ಕಿ ಮ್ಯಾನ್, ಲವ್ ಮಿ ಆರ್ ಹೇಟ್ ಮಿ, ದಿಲ್‌ಪಸಂದ್ ಇತ್ಯಾದಿ ಚಿತ್ರಗಳು, ಪಿಸಿ ಶೇಖರ್ ಅವರ ನಿರ್ದೇಶನದ ಹೊಸ ಸಿನಿಮಾದ ಪಾತ್ರ.. ಎಲ್ಲಾ ಒಂದಕ್ಕಿಂತ ಒಂದು ಭಿನ್ನ.
ಮಿಲನಾ ಜೊತೆಗಿನ ನಿಮ್ಮ ಸಿನಿಮಾ?
ಅದನ್ನು ನಾನೇ ನಿರ್ದೇಶಿಸುವುದು. ಬಹಳ ಚೆನ್ನಾಗಿ ಈ ಸಿನಿಮಾ ಮಾಡಬೇಕು ಅನ್ನುವ ಕನಸಿದೆ. ಜನರ ನಿರೀಕ್ಷೆಯೂ ಹೆಚ್ಚಿರುತ್ತಲ್ವಾ. ಇದಕ್ಕೆ ಕತೆಯ ವರ್ಕ್ ನಡೆಯುತ್ತಿದೆ. ಒಮ್ಮೆ ಕಥೆ ಫೈನಲ್ ಆದ್ರೆ ಉಳಿದ ಕೆಲಸಗಳೆಲ್ಲ ಸರಾಗ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.