ಅರಸು ಮನೆತನದ ಅಭಿನೇತ್ರಿ- ಸಾರಿಕಾ ರಾಜೇ ಅರಸ್ ಅಂತರಾಳ

By Suvarna News  |  First Published Sep 30, 2021, 8:26 PM IST

ಧಾರಾವಾಹಿಗಳಲ್ಲಿ ಕೆಲವೊಂದು ಪಾತ್ರಗಳಿಗೆ ಮಾತ್ರ ಘನತೆ ಇರುತ್ತವೆ. ಆದರೆ ಕೆಲವು ಕಲಾವಿದರು ತಾವು ಯಾವ ಪಾತ್ರ ಮಾಡಿದರೂ ಅವುಗಳಿಗೊಂದು ಘನತೆ ತಂದು ಕೊಡುತ್ತಾರೆ. ಅಂಥ ವಿರಳ ಕಲಾವಿದೆಯರಲ್ಲೊಬ್ಬರು ಸಾರಿಕಾ ರಾಜೇ ಅರಸ್.


ಸಾರಿಕಾ ರಾಜೇ ಅರಸ್ (Sarika Raje Urs) ಎನ್ನುವ ಹೆಸರೇ ಹೇಳುವಂತೆ ಇವರದು ಅರಸು ಮನೆತನ. ಪೊಲೀಸ್ ಅಧಿಕಾರಿ ಲಿಂಗರಾಜೇ ಅರಸ್ ಮತ್ತು ರೇವತಿ ಅರಸ್ ದಂಪತಿಗೆ ಪುತ್ರಿಯಾಗಿ ಜನಿಸಿದ ಸಾರಿಕಾ ಬಾಲನಟಿಯಾಗಿ ಕಿರುತೆರೆಗೆ (Small Screen) ಕಾಲಿಟ್ಟವರು. ಡಿಡಿ ವಾಹಿನಿಯಲ್ಲಿ `ಗಂಗ’ ಎನ್ನುವ  ಹಿಂದಿ ಧಾರಾವಾಹಿ (Serial) ಪ್ರಸಾರವಾಗುತ್ತಿದ್ದ ಸಂದರ್ಭ. ಆಗ ಎಂಟು ವರ್ಷದ ಸಾರಿಕಾಗೆ ಅದು ಮೊದಲ ಧಾರಾವಾಹಿ.  ಈಗ ವೃತ್ತಿ ಬದುಕಿ (Career)ನಲ್ಲಿ ಮೂರು ದಶಕಗಳು ದಾಟಿವೆ. 400ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಂದಿಗೂ ವಿಭಿನ್ನ ಪಾತ್ರಗಳಲ್ಲಿ ಅತ್ಯಂತ ಹಚ್ಚು ಸಕ್ರಿಯರಾಗಿರುವ ಸಾರಿಕಾ ಅವರೊಂದಿಗೆ ಏಷ್ಯಾನೆಟ್  ಸುವರ್ಣ ನ್ಯೂಸ್.ಕಾಮ್ ನಡೆಸಿರುವ ಮಾತುಕತೆ ಇದು.

 

Latest Videos

undefined

ಶಶಿಕರ ಪಾತೂರು

ಒಂದೇ ಬಾರಿ ನಾಲ್ಕು ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಿಮ್ಮ ಖುಷಿ ಹೇಗಿದೆ?
ಖಂಡಿತವಾಗಿ ಖುಷಿ ಇದೆ. ಯಾಕೆಂದರೆ ನಾನು ದಿನಾ ದೇವರಿಗೆ ಕೈ ಮುಗಿಯುವಾಗ 'ಸಾಯೋವರೆಗೆ ಕೆಲಸ ಕೊಡು' ಎಂದಷ್ಟೇ ಬೇಡುತ್ತೇನೆ. ಸದ್ಯದ ಮಟ್ಟಿಗೆ ದೇವರು (God) ಆ ಬೇಡಿಕೆಗೆ ಕಿವಿಗೊಟ್ಟಿದ್ದಾನೆ ಎನ್ನುವ ಸಂತೃಪ್ತಿ (Satisfaction) ಇದೆ. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿ (Colors Kannada)ಯಲ್ಲಿ `ನನ್ನರಸಿ ರಾಧೆ’, ಸುವರ್ಣ ವಾಹಿನಿಯಲ್ಲಿ `ಜೀವ ಹೂವಾಗಿದೆ’, ಉದಯ ವಾಹಿನಿಯಲ್ಲಿ `ಸೇವಂತಿ’ ನಾನು ನಟಿಸುತ್ತಿರುವ ಧಾರಾವಾಹಿಗಳು. ಜೀ ವಾಹಿನಿ (Zee TV)ಯಲ್ಲಿ ಪ್ರಸಾರವಾಗಲಿರುವ `ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಚಿತ್ರೀಕರಣ ಶುರುವಾಗಿದೆ. ಶೀಘ್ರದಲ್ಲೇ ಅದರ ಪ್ರಸಾರ ಆರಂಭವಾಗಬಹುದು.

ನಾನೇಕೆ ಯೂಟ್ಯೂಬ್ ವಾಹಿನಿ ಆರಂಭಿಸಿದೆ?: ಅದಿತಿ ಪ್ರಭುದೇವ

ನಿಮ್ಮನ್ನು ಖಳನಟಿಯಾಗಿ ಬ್ರ್ಯಾಂಡ್ ಮಾಡಲಾಗಿದೆ ಅನಿಸಿದೆಯೇ?
ನನಗೆ ಖಳನಟಿಯಾಗಿ ಹೆಸರಿರುವುದು ಹೌದು. ಆದರೆ ನನ್ನ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಉದಾಹರಣೆ ಸಾಕಷ್ಟು ಇವೆ. ಉದಾಹರಣೆಗೆ ಈಗ ನಟಿಸುತ್ತಿರುವ ನನ್ನರಸಿ ರಾಧೆಯಲ್ಲಿ ರಾಕ್ಷಸಿಯಂಥ ಪಾತ್ರವಾದರೆ, ಜೀವ ಹೂವಾಗಿದೆ ಧಾರಾವಾಹಿಯಲ್ಲಿ ವಿಲನ್ ಆಗಿದ್ದವಳು ಒಳ್ಳೆಯವಳಾಗಿ ಬದಲಾಗುತ್ತಿರುವ ಪಾತ್ರ ಮಾಡುತ್ತಿದ್ದೇನೆ. ಶೂಟಿಂಗ್‌ (Shooting) ಹಂತದಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಜಾರಿಯ ಪಾತ್ರವಾದರೆ, ಪ್ರಸ್ತುತ ಪ್ರಸಾರವಾಗುತ್ತಿರುವ `ಸೇವಂತಿ’ಯಲ್ಲಿ ತುಂಬ ಒಳ್ಳೆಯವಳಾದ ಅಸಿಸ್ಟೆಂಟ್ ಕಮಿಷನರ್ (Assistant Commissioner) ಪಾತ್ರ ಮಾಡುತ್ತಿದ್ದೇನೆ. ನಾನು ನೆಗೆಟಿವ್ ಪಾತ್ರಗಳನ್ನು (Negative Role) ಮಾಡಿದಷ್ಟೇ ಚೆನ್ನಾಗಿ ಪಾಸಿಟಿವ್ ಪಾತ್ರ (Positive Character) ಕೂಡ ಮಾಡಬಲ್ಲೆ. ಉದಾಹರಣೆಗೆ `ನಿತ್ಯ’ ಧಾರಾವಾಹಿಯಲ್ಲಿ ಮಾಡಿದ್ದ ಪಾತ್ರಕ್ಕೆ `ಆರ್ಯಭಟ’ ಪ್ರಶಸ್ತಿಯೇ ದೊರಕಿದ್ದನ್ನು ನೆನಪಿಸಿಕೊಳ್ಳಬಹುದು.

ಸಂಗೀತ ಸಾಧನೆಯೇ ನನ್ನ ಗುರಿ - ಸಂದೇಶ್ ನೀರ್ ಮಾರ್ಗ

ನಿಮಗೆ ನಟನೆಯಲ್ಲಿ ಆಸಕ್ತಿ ಮೂಡಿದ್ದು ಹೇಗೆ?
ನಿಜ ಹೇಳಬೇಕೆಂದರೆ ನನಗೆ ನಟನೆಗಿಂತಲೂ ಹೆಚ್ಚು ಛಾಯಾಗ್ರಹಣದಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಪೂನಾದಲ್ಲಿ ಸಿನೆಮಾಟೊಗ್ರಫಿ ಕೋರ್ಸ್ (cinematography course) ಕೂಡ ಮಾಡಿದ್ದೇನೆ! ಕನ್ನಡದ ಮೊದಲ ಸಿನಿಮಾ ಛಾಯಾಗ್ರಾಹಕಿಯಾಗಿ ಹೆಸರು ಮಾಡಬೇಕು ಎಂದುಕೊಂಡಿದ್ದೆ. ಮಾಪಾಕ್ಷಿ ಎನ್ನುವ ಛಾಯಾಗ್ರಾಹಕರೊಡನೆ ಸಹಾಯಕಿಯಾಗಿ ಕೆಲಸ ಮಾಡಿದ್ದೆ. ಆದರೆ ಆ ಸಮಯದಲ್ಲಿ ನನಗೆ ಬೇಕಾದ ಪ್ರೋತ್ಸಾಹ, ಅವಕಾಶ ದೊರಕಲಿಲ್ಲ. ಆ ದಿನಗಳಲ್ಲಿ ಹೆಚ್ಚಾಗಿ ತಡರಾತ್ರಿ ತನಕ ಚಿತ್ರೀಕರಣ ನಡೆಯುತ್ತಿತ್ತು. ಅಂದು ಇಂದಿನಂತೆ ಕ್ಯಾಬ್ ಸಿಗುತ್ತಿರಲಿಲ್ಲ. ಓಡಾಟ ಕಷ್ಟವಾಗಿತ್ತು. ಆದರೆ ಕಲಾವಿದೆಯರನ್ನು ಪಿಕಪ್ ಡ್ರಾಪ್ ಮಾಡಲಾಗುತ್ತಿತ್ತು. ಹಾಗಾಗಿ ನಾನು ಕೂಡ ಮತ್ತೆ ನಟನೆಯ ಕಡೆಗೆ ಮುಖ ಮಾಡಿದೆ. ಈಗ ಕನ್ನಡದ ಜನಪ್ರಿಯ ಛಾಯಾಗ್ರಾಹಕರಾದ ಮ್ಯಾಥ್ಯು ರಾಜನ್ ಅವರನ್ನು ವಿವಾಹವಾಗಿದ್ದೇನೆ. ಗ್ರೀಷ್ಮಾ ಎನ್ನುವ ಮಗಳಿದ್ದಾಳೆ. ನನ್ನ ನಟನಾಸಕ್ತಿಗೆ ಸದಾ ಪತಿಯ ಪ್ರೋತ್ಸಾಹ ಜೊತೆಗಿದೆ.

ಮುಂದಿನ ಚಿತ್ರದಲ್ಲಿ ನನಗೂ ಪ್ರಶಸ್ತಿ ಬರಬಹುದು! - ಇಳಾ ವಿಟ್ಲ

'ಕೋವಿಡ್ 19’ (Covid19) ಕಾಡಿದ ಬಳಿಕ ಬಹುತೇಕ ಕಲಾವಿದರ ಬದುಕು ಶೋಚನೀಯವಾಗಿದೆ ಅಲ್ಲವೇ?
ಹೌದು. ಹೀರೋ ಹೀರೋಯಿನ್ ಎನ್ನುವ ಪ್ರಧಾನ ಪಾತ್ರಧಾರಿಗಳನ್ನು ಬಿಟ್ಟರೆ ಬಹಳಷ್ಟು ಕಲಾವಿದರು ಮಧ್ಯಮ ವರ್ಗದವರೇ ಆಗಿದ್ದಾರೆ. ಅವರಲ್ಲಿ ಹೆಚ್ಚಿನವರು ಕೆಲಸವಿರದೆ ಮನೆ ಸೇರಿಕೊಂಡಿದ್ದಾರೆ. ಮೊದಲೆಲ್ಲ ಕಲಾವಿದರಿಗೆ ನಿರ್ದೇಶಕ, ನಿರ್ಮಾಪಕರು ಕರೆದು ಅವಕಾಶ ನೀಡುತ್ತಿದ್ದರು. ಈಗ ಯಾರಿಗೆ ಕೆಲಸ ಕೊಡಬೇಕು ಎನ್ನುವುದನ್ನು ಚಾನೆಲ್‌ನವರೇ ನಿರ್ಧರಿಸುತ್ತಾರೆ.  ಈ ಹಿಂದೆ ವಯಸ್ಸಾದ ಪಾತ್ರಗಳಿಗೂ ಹೊಸ ಮುಖಗಳೇ ಬೇಕು ಎನ್ನುವ ಹುಡುಕಾಟವಿತ್ತು. ಈಗ ಮದುವೆಯಾಗಿ ನಟನೆ ಬಿಟ್ಟಿದ್ದವರಿಗೆ ಎರಡನೇ ಇನ್ನಿಂಗ್ಸ್ ಗೆ ಅವಕಾಶ ನೀಡಲಾಗುತ್ತಿದೆ. ಅದೇ ರೀತಿ ಸಿನಿಮಾ ನಟರನ್ನು ಧಾರಾವಾಹಿಗಳಿಗೆ ತರಲು ಆದ್ಯತೆ ತೋರಿಸಲಾಗುತ್ತಿದೆ. ಆದರೆ ಕಿರುತೆರೆಯನ್ನೇ ನಂಬಿದ ಸಾಕಷ್ಟು ಸ್ವಾಭಿಮಾನಿ ಕಲಾವಿದರು ಅವಕಾಶ ಸಿಗದೆ ಕಷ್ಟಪಡುತ್ತಿರುವುದು ಮಾತ್ರ ಸತ್ಯ.

 

click me!