ಉದ್ಯೋಗ ಕಳೆದುಕೊಂಡ್ರಾ? ಮುಂದೆ ಲೈಫ್‌ ಹೇಗೆ ಅಂತೀರಾ? ಇದನ್ನೊಮ್ಮೆ ಓದಿ

By Suvarna News  |  First Published Jul 23, 2021, 5:19 PM IST

ಕೊರೋನಾ ಆರ್ಭಟಕ್ಕೆ ನಲುಗಿದ ಅರ್ಥವ್ಯವಸ್ಥೆಯಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ದೊಡ್ಡದಿದೆ.ಇಂಥವರು ತಮ್ಮ ಸಂಕಷ್ಟದ ಸಮಯವನ್ನು ಪಾರು ಮಾಡಲು ಸೂಕ್ತ ಯೋಜನೆ ರೂಪಿಸೋದು ಅಗತ್ಯ.


ಕೊರೋನಾ ಕಾರಣಕ್ಕೆ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಕಡಿಮೆಯೇನಿಲ್ಲ. ಉದ್ಯೋಗ ಕಳೆದುಕೊಂಡವರು ಎದುರಿಸೋ ಸಂಕಷ್ಟಗಳು ಒಂದೆರಡಲ್ಲ.ಗೃಹ ಸಾಲದ ಇಎಂಐ, ಮನೆಯ ದೈನಂದಿನ ವೆಚ್ಚಗಳು, ಮಕ್ಕಳ ಶಾಲಾ ಶುಲ್ಕ, ಬಾಡಿಗೆ ಮನೆಯಲ್ಲಿದ್ರೆ ತಿಂಗಳ ಬಾಡಿಗೆ….ಈ ಎಲ್ಲ  ಖರ್ಚು-ವೆಚ್ಚಗಳನ್ನು ನಿಭಾಯಿಸೋದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಇಂಥ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಕೆಲವೊಂದು ಆರ್ಥಿಕ ಯೋಜನೆಗಳನ್ನು ರೂಪಿಸೋದು ಅಗತ್ಯ. 

ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡ್ತೀರಾ?

Tap to resize

Latest Videos

undefined

ಸಾಲ ಏನ್‌ ಮಾಡೋದು?
ಉದ್ಯೋಗ ಕಳೆದುಕೊಂಡ ಸಮಯದಲ್ಲಿ ಇಎಂಐಯನ್ನು ಮುಂದೂಡೋ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ. ಕೋವಿಡ್‌ ಹಿನ್ನೆಲೆಯಲ್ಲಿ ಕೆಲವು ಕಾಲ ಇಎಂಐ ಮುಂದೂಡೋ ಅವಕಾಶವನ್ನು ಬ್ಯಾಂಕ್‌ಗಳು ಈ ಹಿಂದೆ ನೀಡಿದ್ದವು. ಇಎಂಐ ಮುಂದೂಡೋ ಅವಕಾಶ ಸಿಕ್ಕಿದ್ರೆ ಆ ಹಣದಲ್ಲಿ ಇತರ ಅಗತ್ಯ ವೆಚ್ಚಗಳನ್ನು ಭರಿಸಲು ಪ್ರಯತ್ನಿಸಿ.

ವೆಚ್ಚಗಳನ್ನು ಕಡಿತಗೊಳಿಸಿ
ತಿಂಗಳ ಆದಾಯ ನಿಂತಾಗ ಸಾಲದ ಹೊರೆ ಹೆಚ್ಚಬಾರದೆಂದ್ರೆ ವೆಚ್ಚಗಳಿಗೆ ಕಡಿವಾಣ ಹಾಕೋದು ಅನಿವಾರ್ಯ. ದಿನಸಿ, ವಿದ್ಯುತ್ ಬಿಲ್‌, ನೀರಿನ ಶುಲ್ಕ ಸೇರಿದಂತೆ ನಿತ್ಯ ಬಳಕೆಯ ಪ್ರತಿ ವಸ್ತುವಿನ ಮೇಲಿನ ವೆಚ್ಚ ಕಡಿತಗೊಳಿಸಲು ಪ್ರಯತ್ನಿಸಿದ್ರೆ ಒಂದಿಷ್ಟು ಹೊರೆ ಕಡಿಮೆಯಾಗುತ್ತದೆ. ಹೋಟೆಲ್‌, ಪಾರ್ಟಿ, ಪ್ರವಾಸ ಮುಂತಾದ ಜೇಬಿಗೆ ಹೆಚ್ಚಿನ ಹೊರೆಯುಂಟು ಮಾಡೋ ಕಾರ್ಯಕ್ರಮಗಳನ್ನು ಮುಂದೂಡಿ. ನಿಮ್ಮ ಬಳಿಯಿರೋ ಉಳಿತಾಯದ ಹಣವನ್ನು ಜೋಪಾನವಾಗಿ ಖರ್ಚು ಮಾಡೋ ಬಗ್ಗೆ ಯೋಜನೆ ರೂಪಿಸಿ ಹಾಗೂ ಅದಕ್ಕನುಗುಣವಾಗಿ ವ್ಯಯಿಸಿ. 

ದುಬಾರಿ ವಸ್ತುಗಳ ಖರೀದಿ ಮುಂದೂಡಿ
ಟಿವಿ, ಫ್ರಿಜ್‌ ಅಥವಾ ಮನೆಗೆ ಅಗತ್ಯವಿರೋ ಫರ್ನಿಚರ್‌ ಇತ್ಯಾದಿ ದುಬಾರಿ ವಸ್ತುಗಳನ್ನು ಖರೀದಿಸಲು ಯೋಚಿಸಿದ್ರೆ, ಇದು ಸೂಕ್ತ ಸಮಯವಲ್ಲ. ಇಂಥ ದುಬಾರಿ ವಸ್ತುಗಳ ಖರೀದಿಯನ್ನು ಸ್ವಲ್ಪ ಸಮಯ ಮುಂದೂಡಿ. ಇದ್ರಿಂದ ಅನಗತ್ಯ ಖರ್ಚುಗಳು ತಗ್ಗುತ್ತವೆ. ಇರೋ ಹಣದಲ್ಲಿ ನಿತ್ಯದ ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ. 

ರಿಯಲ್‌ ಎಸ್ಟೇಟ್‌ನಲ್ಲಿ ಹಣ ತೊಡಗಿಸೋ ಮುನ್ನ ಇವಿಷ್ಟು ವಿಚಾರ ಗಮನಿಸಿ

ವಿಮೆ ಕಂತುಗಳನ್ನು ತಪ್ಪದೇ ಪಾವತಿಸಿ
ಆರೋಗ್ಯ ಹಾಗೂ ಜೀವ ವಿಮಾ ಕಂತುಗಳನ್ನು ಅಗತ್ಯ ವಸ್ತುಗಳ ಸಾಲಿಗೆ ಸೇರಿಸಿ. ಪ್ರಸ್ತುತ ಸಂದರ್ಭದಲ್ಲಿ ಇವೆರಡೂ ಅತ್ಯಗತ್ಯ. ಕೈಯಲ್ಲಿ ಕೆಲಸವಿಲ್ಲದ ಸಮಯದಲ್ಲಿ ನಿಮ್ಮ ಅಥವಾ ಕುಟುಂಬ ಸದಸ್ಯರ ಆರೋಗ್ಯ ಹದಗೆಟ್ರೆ ಆರೋಗ್ಯ ವಿಮೆ ನಿಮ್ಮ ನೆರವಿಗೆ ಬರುತ್ತದೆ. ಹೀಗಾಗಿ ಇವುಗಳಿಗೆ ನಿಮ್ಮ ಉಳಿತಾಯದ ಹಣದಲ್ಲಿ ಒಂದಿಷ್ಟು ಎತ್ತಿಡೋದು ಅನಿವಾರ್ಯ. 


ಶಾಲಾ ಶುಲ್ಕ ಕಂತುಗಳಲ್ಲಿ ಪಾವತಿಸಿ
ಮಕ್ಕಳಿರೋರು ಶೈಕ್ಷಣಿಕ ವೆಚ್ಚದ ಕಡೆಗೂ ಗಮನ ನೀಡಬೇಕಾಗುತ್ತದೆ. ಉದ್ಯೋಗವಿಲ್ಲದಿರೋ ಸಮಯದಲ್ಲಿ ಇರೋ ಹಣದಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ. ಹೀಗಾಗಿ ಮಕ್ಕಳ ಶಾಲಾ ಶುಲ್ಕವನ್ನು ಪೂರ್ಣ ಪಾವತಿ ಮಾಡೋ ಬದಲು ಕಂತುಗಳಲ್ಲಿ ಪಾವತಿಸೋ ಬಗ್ಗೆ ಸಂಬಂಧಪಟ್ಟವರ ಬಳಿ ಮನವಿ ಮಾಡಿ. ಇದ್ರಿಂದ ಸ್ವಲ್ಪ ಮೊತ್ತವನ್ನಷ್ಟೇ ಈ ಸಮಯದಲ್ಲಿ ಪಾವತಿಸಿ, ಉಳಿದದ್ದನ್ನು ಮುಂದೆ ನೋಡಿಕೊಂಡರಾಯಿತು. 

ಸಾಲದ ಬಗ್ಗೆ ಯೋಚಿಸಿ
ನಿಮ್ಮ ಬಳಿ ಉಳಿತಾಯದ ಹಣ ಸಾಕಷ್ಟು ಇರದಿದ್ರೆ ಅಥವಾ ಇರೋ ಹಣ ನಿಧಾನವಾಗಿ ಖರ್ಚಾಗಿ ಹೋಗುತ್ತಿದ್ರೆ, ಸಾಲದ ಬಗ್ಗೆ ಯೋಚಿಸೋದು ಅನಿವಾರ್ಯ. ಈ ಸಮಯದಲ್ಲಿ ನಿಮ್ಮ ಬಳಿಯಿರೋ ಚಿನ್ನ, ಮ್ಯೂಚುವಲ್‌ ಫಂಡ್ಸ್‌, ವಿಮೆ ಅಥವಾ ಎಫ್‌ಡಿ ಮೇಲೆ ಸಾಲ ಪಡೆಯಲು ಪ್ರಯತ್ನಿಸಬಹುದು. ಸಾಲ ಪಡೆಯೋ ಸಮಯದಲ್ಲಿ ಬಡ್ಡಿ ಹಾಗೂ ಸಾಲದ ಅವಧಿಯನ್ನು ಗಮನಿಸೋದು ಅಗತ್ಯ.  ಅಲ್ಲದೆ, ಅತ್ಯಂತ ಆತ್ಮೀಯ ಸ್ನೇಹಿತ ಕೈ ಸಾಲ ನೀಡಲು ಬಂದ್ರೆ ಅದನ್ನು ಕೂಡ ಪಡೆಯೋದು ಒಳ್ಳೆಯದು. ಆದ್ರೆ ನೆನಪಿಡಿ, ಆತ್ಮೀಯ ಸ್ನೇಹಿತನಾಗಿದ್ರೆ ಮಾತ್ರ ಸಾಲ ಪಡೆಯಿರಿ. ಇದ್ರಿಂದ ಬಡ್ಡಿ ಕಟ್ಟೋದು ತಪ್ಪುತ್ತದೆ. 

ವೈದ್ಯಕೀಯ ತುರ್ತು ವೆಚ್ಚಕ್ಕೆ ವಿಮೆ ಬಿಟ್ರೆ ಬೇರೆ ಅವಕಾಶಗಳೇನಿವೆ?

ಹಣ ಹೊಂದಿಸೋ ಮಾರ್ಗ ಶೋಧಿಸಿ
ಉದ್ಯೋಗವಿಲ್ಲ ಎಂಬ ಕಾರಣಕ್ಕೆ ಸುಮ್ಮನೆ ಕಾಲಹರಣ ಮಾಡೋ ಬದಲು ನಿಮ್ಮ ಬುದ್ಧಿವಂತಿಕೆ, ಕೌಶಲ್ಯ ಅಥವಾ ಹವ್ಯಾಸವನ್ನೇ ಬಳಸಿಕೊಂಡು ಒಂದಿಷ್ಟು ಹಣ ಗಳಿಸಲು ಪ್ರಯತ್ನಿಸಿ. ಫ್ರೀಲ್ಯಾನ್ಸಿಂಗ್‌, ಅರೆಕಾಲಿಕಾ ಉದ್ಯೋಗವಾದ್ರೂ ಸರಿ, ಪ್ರಯತ್ನಿಸಿ. ಇದ್ರಿಂದ ಜಾಸ್ತಿಯಲ್ಲದಿದ್ರೂ ಸ್ವಲ್ಪ ಗಳಿಕೆಯಂತೂ ಆಗೇಆಗುತ್ತದೆ. ಇದ್ರಿಂದ ಮನೆಯ ನಿತ್ಯದ ವೆಚ್ಚಗಳನ್ನಾದ್ರೂ ಭರಿಸಬಹುದು. 

ಉದ್ಯೋಗ ಬೇಟೆ ಮುಂದುವರಿಸಿ
ಉದ್ಯೋಗ ಹೋಯ್ತು ಎಂಬ ಬೇಸರದಲ್ಲೇ ದಿನ ದೂಡುತ್ತ ಕೂರಬೇಡಿ. ಉದ್ಯೋಗ ಬೇಟೆ ಮುಂದುವರಿಸಿ. ಪ್ರಸಕ್ತ ಸಮಯದಲ್ಲಿ ಮೊದಲಿಗಿಂತ ಹೆಚ್ಚಿನ ವೇತನ ಮತ್ತಿತರ ಸೌಲಭ್ಯವನ್ನು ಬಯಸೋ ಬದಲು ಹಿಂದಿನಷ್ಟೇ ಸಂಬಳ ಅಥವಾ ತುಸು ಜಾಸ್ತಿ ಸಿಕ್ಕರೆ ಒಪ್ಪಿಕೊಂಡು ಹೋಗೋದು ಜಾಣತನ. ಹೆಚ್ಚಿನ ವೇತನಕ್ಕಾಗಿ ಕಾಯುತ್ತ ಸಿಕ್ಕ ಉದ್ಯೋಗವನ್ನು ಬಿಟ್ಟರೆ ಆರ್ಥಿಕ ಸಂಕಷ್ಟಗಳು ಹೆಚ್ಚುತ್ತ ಹೋಗುತ್ತವೆ.  

click me!