ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ

By Suvarna News  |  First Published Jul 23, 2021, 12:22 PM IST

ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡೋ ಮುನ್ನ ಅದರ ಸ್ವರೂಪ, ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಳ್ಳೋದು ಅಗತ್ಯ.ಇಲ್ಲವಾದ್ರೆ ಉತ್ತಮ ರಿಟರ್ನ್ಸ್‌ ಗಳಿಸೋದು ಕಷ್ಟವಾಗಬಹುದು.


ಮ್ಯೂಚುವಲ್‌ ಫಂಡ್ಸ್ನಲ್ಲಿ ಮೊದಲ ಬಾರಿಗೆ ಹೂಡಿಕೆ ಮಾಡೋರಿಗೆ ಅನೇಕ ಗೊಂದಲಗಳು ಕಾಡೋದು ಸಹಜ. ಮ್ಯೂಚುವಲ್‌ ಫಂಡ್‌ ಎಂದ್ರೆ ಗಣಿತದಂತೆ ಕಬ್ಬಿಣದ ಕಡಲೆ, ಇದರ ಸಹವಾಸವೇ ಬೇಡ ಎಂಬ ಅಭಿಪ್ರಾಯ ಮೂಡಿದ್ರೂ ಅಚ್ಚರಿಯಿಲ್ಲ. ಹೀಗಾಗಿ ಮ್ಯೂಚುವಲ್‌ ಫಂಡ್ನಲ್ಲಿ ಹೂಡಿಕೆ ಮಾಡೋ ಮುನ್ನ ಅದರ ಕುರಿತ ಒಂದಿಷ್ಟು ಮೂಲಭೂತ ವಿಷಯಗಳನ್ನು ತಿಳಿದಿರೋದು ಅಗತ್ಯ. 

ರಿಯಲ್‌ ಎಸ್ಟೇಟ್‌ನಲ್ಲಿ ಹಣ ತೊಡಗಿಸೋ ಮುನ್ನ ಇವಿಷ್ಟು ವಿಚಾರ ಗಮನಿಸಿ

Latest Videos

undefined

ಅತೀ ಕಡಿಮೆ ಹೂಡಿಕೆಗೂ ಅವಕಾಶ
ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡಲು ನಿಮ್ಮ ಬಳಿ ದೊಡ್ದ ಮೊತ್ತದ ಹಣವಿರಬೇಕಾದ ಅಗತ್ಯವಿಲ್ಲ. ಎಸ್‌ಐಪಿ ಮೂಲಕ 500 ರೂ. ಕೂಡ ಹೂಡಿಕೆ ಮಾಡಬಹುದು. ಇಂಥ ಅವಕಾಶ ಬೇರೆ ಯಾವುದೇ ಹೂಡಿಕೆ ಕ್ಷೇತ್ರಗಳಲ್ಲೂ ಇಲ್ಲವೆಂದೇ ಹೇಳಬಹುದು. ಅನೇಕ ವಿಧದ ಮ್ಯೂಚುವಲ್‌ ಫಂಡ್ಸ್‌ ಲಭ್ಯವಿದ್ದು, ನಿಮ್ಮ ಆದಾಯ, ನೀವು ಯಾವ ಮಟ್ಟದ ರಿಸ್ಕ್‌ ತೆಗೆದುಕೊಳ್ಳುತ್ತೀರಿ ಎಂಬುದನ್ನು ಆಧರಿಸಿ ಹೂಡಿಕೆ ಮಾಡಬಹುದು.

ಹೇಗೆ ಕಾರ್ಯನಿರ್ವಹಿಸುತ್ತದೆ?
ಬಹುತೇಕರು ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್‌ ಫಂಡ್ಸ್‌ ಎರಡೂ ಒಂದೇ ಎಂದು ಭಾವಿಸಿ, ಹೂಡಿಕೆ ಮಾಡಲು ಹೆದರುತ್ತಾರೆ. ಆದ್ರೆ ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಷೇರು ಮಾರುಕಟ್ಟೆಗೆ ಹೋಲಿಸಿದ್ರೆ ಮ್ಯೂಚುವಲ್‌ ಫಂಡ್‌ ತುಂಬಾ ಸುರಕ್ಷಿತ. ಸರಳವಾಗಿ ಹೇಳೋದಾದ್ರೆ ಮ್ಯೂಚುವಲ್‌  ಫಂಡ್‌ ಅನೇಕ ವ್ಯಕ್ತಿಗಳ ಹಣದಿಂದ ನಿರ್ಮಾಣವಾಗಿರೋ ಫಂಡ್‌. ಈ ಫಂಡ್ ಅನ್ನು ಆಸ್ತಿ ನಿರ್ವಹಣಾ ಸಂಸ್ಥೆ (ಎಎಂಸಿ) ಅಥವಾ ಫಂಡ್‌ ಹೌಸ್ ನಿರ್ವಹಿಸುತ್ತದೆ. ಈ ಸಂಸ್ಥೆ ಭಾರತ ಸರ್ಕಾರದ ಸೆಬಿಯಲ್ಲಿ ನೋಂದಾಯಿಸಲ್ಪಟ್ಟಿರುತ್ತದೆ.  ವಿವಿಧ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಸಂಗ್ರಹಿಸಿದ  ಬಂಡವಾಳವನ್ನು ಫಂಡ್‌ ಮ್ಯಾನೇಜರ್‌ ವಿವಿಧ ಕಂಪನಿಗಳ ಷೇರುಗಳಲ್ಲಿ ತೊಡಗಿಸುತ್ತಾನೆ ಫಂಡ್‌ ಮ್ಯಾನೇಜರ್‌ ಷೇರು, ಮಾರುಕಟ್ಟೆ ವಿಷಯಗಳಲ್ಲಿ ಪರಿಣಿತನಾಗಿದ್ದು, ಹೂಡಿಕೆದಾರರಿಗೆ ಗರಿಷ್ಠ ರಿಟರ್ನ್ಸ್‌ ಬರೋ ರೀತಿಯಲ್ಲಿ ಬಂಡವಾಳವನ್ನು ಜಾಣತನದಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸುತ್ತಾನೆ. ಉದಾಹರಣೆಗೆ ಹಣವನ್ನು ಷೇರ್‌ ಮಾರ್ಕೆಟ್‌, ಸರ್ಕಾರಿ ಬಾಂಡ್‌ಗಳು, ರಿಯಲ್‌ ಎಸ್ಟೇಟ್, ಎಫ್ಡಿ, ಬಂಗಾರ, ಸೆಕ್ಯುರಿಟಿ…. ಹೀಗೆ ವಿವಿಧ ಕ್ಷೇತ್ರಗಳಿಗೆ ಹಂಚಿ ಹೂಡಿಕೆ ಮಾಡುತ್ತಾನೆ. ಇದ್ರಿಂದ ಒಂದರಲ್ಲಿ ನಷ್ಟವಾದ್ರೂ ಇನ್ನೊಂದರಲ್ಲಿ ಲಾಭ ಬರುತ್ತದೆ. ಫಂಡ್‌ ಹೌಸ್‌ಗಳು ಮ್ಯೂಚುವಲ್‌ ಫಂಡ್‌ ನಿರ್ವಹಣೆಗಾಗಿ ನಿಗದಿತ ವಾರ್ಷಿಕ ಶುಲ್ಕ ವಿಧಿಸುತ್ತವೆ. ರೆಗ್ಯುಲರ್‌ ಡಿವಿಡೆಂಡ್ಸ್‌, ಬಡ್ಡಿ ಹಾಗೂ ಕ್ಯಾಪಿಟಲ್‌ ಅಪ್ರಿಸಿಯೇಷನ್‌ ಮೂಲಕ ಹೂಡಿಕೆದಾರರು ಹಣ ಗಳಿಸುತ್ತಾರೆ.  
 

ಹೂಡಿಕೆ ಗುರಿ ನಿಗದಿಪಡಿಸಿ
ನಿಮ್ಮ ಹಣಕಾಸಿನ ಗುರಿಗಳು, ಬಜೆಟ್‌ ಹಾಗೂ ಸಮಯ ಮಿತಿ ನಿಮ್ಮ ಹೂಡಿಕೆ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಹೀಗಾಗಿ ಇವುಗಳ ಬಗ್ಗೆ ಸೂಕ್ತ ಯೋಜನೆ ರೂಪಿಸೋದು ಅಗತ್ಯ. ಇದ್ರಿಂದ ಹೂಡಿಕೆಗೆ ನೀವು ಎಷ್ಟು ಹಣ ತೆಗೆದಿರಿಸಬೇಕು ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ. ನಿಮ್ಮ ರಿಸ್ಕ್‌ ಪ್ರೋಫೈಲ್‌ ಆಧರಿಸಿ ಹೂಡಿಕೆ ಮಾಡೋದು ಕೂಡ ಅಗತ್ಯ. ನಿರ್ದಿಷ್ಟ ಉದ್ದೇಶವಿದ್ದಾಗ ಮಾತ್ರ ಯಾವುದೇ ಹೂಡಿಕೆ ಉತ್ತಮ ರಿಟರ್ನ್ಸ್‌ ತರಬಲ್ಲದು.

ವೈದ್ಯಕೀಯ ತುರ್ತು ವೆಚ್ಚಕ್ಕೆ ವಿಮೆ ಬಿಟ್ರೆ ಬೇರೆ ಅವಕಾಶಗಳೇನಿವೆ?

ಸರಿಯಾದ ಫಂಡ್‌ ಆರಿಸಿ
ಮ್ಯೂಚುವಲ್‌ ಫಂಡ್‌ನಲ್ಲಿ ಅನೇಕ ವರ್ಗಗಳಿವೆ. ಇವುಗಳಲ್ಲಿ ನೀವು ಯಾವ ವರ್ಗ ಆರಿಸಿಕೊಳ್ಳುತ್ತೀರಿ ಅನ್ನೋದು ಮುಖ್ಯ. ಸರಿಯಾದ ವರ್ಗವನ್ನು ಆಯ್ಕೆ ಮಾಡೋದು ಅಷ್ಟು ಸುಲದ ಕೆಲಸವಂತೂ ಅಲ್ಲ. ಇದೇ ಕಾರಣಕ್ಕೆ ತಜ್ಞರು ಮ್ಯೂಚುವಲ್‌ ಫಂಡ್‌ನ ಪ್ರಾರಂಭಿಕ ಹೂಡಿಕೆದಾರರಿಗೆ ಕಡಿಮೆ ಅಪಾಯ ಹೊಂದಿರೋ ಹಾಗೂ ನಿಧಾನಗತಿಯ ರಿಟರ್ನ್ಸ್‌ ತರೋ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಸಲಹೆ ನೀಡುತ್ತಾರೆ. ಕೆಲವು ಸಮೀಕ್ಷೆಗಳ ಪ್ರಕಾರ ಮೊದಲ ಬಾರಿಗೆ ಹೂಡಿಕೆ ಮಾಡೋರಿಗೆ ಲಾರ್ಜ್‌ ಕ್ಯಾಪ್‌ ಫಂಡ್‌ ಹಾಗೂ ಇಂಡೆಕ್ಸ್‌ ಫಂಡ್‌ಗಳು ಉತ್ತಮ ಆಯ್ಕೆಗಳಾಗಿವೆ. ಲಾರ್ಜ್‌ ಕ್ಯಾಪ್‌ ಫಂಡ್‌ಗಳನ್ನು ಫಂಡ್‌ ಮ್ಯಾನೇಜರ್‌ ಪ್ರತಿಷ್ಠಿತ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಲ್ಲದೆ, ಇದ್ರಲ್ಲಿ ಡಿವಿಯೇಷನ್‌ ಕಡಿಮೆಯಿರೋ ಕಾರಣ ಅಪಾಯ ಕೂಡ ಕಡಿಮೆಯಿರುತ್ತದೆ. 

ಆಯ್ಕೆಗೂ ಮುನ್ನ ಶಾರ್ಟ್‌ಲಿಸ್ಟ್‌ ಮಾಡಿ
ವಿವಿಧ ಮ್ಯೂಚುವಲ್ ಫಂಡ್ಗಳ ಬಗ್ಗೆ ತಿಳಿದುಕೊಂಡು ನೀವು ಎಷ್ಟು ಹೂಡಿಕೆ ಮಾಡುತ್ತೀರಿ, ಎಷ್ಟು ಅವಧಿಗೆ ಹಾಗೂ ರಿಸ್ಕ್‌ ಮಟ್ಟ ಆಧರಿಸಿ ಯೋಜನೆಗಳನ್ನು ಶಾರ್ಟ್‌ಲಿಸ್ಟ್‌ ಮಾಡಿ. ಆ ಬಳಿಕ ಅದ್ರಲ್ಲಿ ನಿಮಗೆ ಸರಿ ಹೊಂದೋ ಒಂದು ಮ್ಯೂಚುವಲ್‌ ಫಂಡ್‌ ಆಯ್ಕೆ ಮಾಡಿ. 

ವಿವಿಧ ಪ್ಲ್ಯಾನ್‌ಗಳಲ್ಲಿ ಹೂಡಿಕೆ
ಒಂದೇ ಮ್ಯೂಚುವಲ್‌ ಫಂಡ್‌ ಸ್ಕೀಮ್‌ನಲ್ಲಿ ಹೂಡಿಕೆ ಮಾಡೋ ಬದಲು ವಿವಿಧ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡೋದ್ರಿಂದ ಉತ್ತಮ ರಿಟರ್ನ್ಸ್‌ ಪಡೆಯಬಹುದು. ಅಲ್ಲದೆ, ರಿಸ್ಕ್‌ ಕೂಡ ಕಡಿಮೆ. 

ಎಸ್‌ಐಪಿ ಮೂಲಕ ಹೂಡಿಕೆ
ಮೊದಲ ಬಾರಿಗೆ ಇಕ್ವಿಟಿ ಇನ್ಸ್ಟ್ರುಮೆಂಟ್‌ನಲ್ಲಿ ಹೂಡಿಕೆ ಮಾಡೋರು ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಹೂಡಿಕೆ ಮಾಡೋದು ಉತ್ತಮ. ದೊಡ್ಡ ಮೊತ್ತವನ್ನು ಒಮ್ಮೆಗೆ ಹೂಡಿಕೆ ಮಾಡೋದ್ರಿಂದ ಹೆಚ್ಚಿನ ಅಪಾಯ ಎದುರಿಸಬೇಕಾಗಬಹುದು.  ಆದ್ರೆ ಎಸ್‌ಐಪಿ ಮೂಲಕ ಹಣ ಹೂಡಿಕೆ ಮಾಡಿದ್ರೆ ಒಂದೇ ಕಡೆ ಹೂಡಿಕೆ ಆಗದೇ ಮಾರುಕಟ್ಟೆಯ ವಿವಿಧ ಹಂತಗಳಲ್ಲಿ ಹೂಡಿಕೆ ಆಗುತ್ತದೆ. ಅಲ್ಲದೆ, ದೀರ್ಘಾವಧಿಯಲ್ಲಿ ಹೆಚ್ಚಿನ ರಿಟರ್ನ್ಸ್‌ ಗಳಿಸಲು ಎಸ್‌ಐಪಿ ನೆರವು ನೀಡುತ್ತದೆ. 

ಮ್ಯೂಚುವಲ್‌ ಫಂಡ್‌ ಮೇಲೆ ಸಾಲ ಪಡೆಯೋದು ಹೇಗೆ?

ಕೆವೈಸಿ ದಾಖಲೆ ಅಗತ್ಯ
ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೇ ಮ್ಯೂಚುವಲ್‌ ಫಂಡ್‌ನಲ್ಲಿ ನೀವು ಹೂಡಿಕೆ ಮಾಡಲು ಸಾಧ್ಯವಿಲ್ಲ. ಭಾರತದಲ್ಲಿ ಬಹುತೇಕ ಎಲ್ಲ ಹಣಕಾಸು ವ್ಯವಹಾರಗಳಿಗೆ ಸರ್ಕಾರ ಕೆವೈಸಿ ಕಡ್ಡಾಯಗೊಳಿಸಿದೆ.  ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ನಿಮ್ಮ ಬಳಿ ಪ್ಯಾನ್‌ ಕಾರ್ಡ್‌ ಹಾಗೂ ವಿಳಾಸ ದೃಢೀಕರಣ ದಾಖಲೆಯಿರೋದು ಅಗತ್ಯ.

ನೆಟ್‌ ಬ್ಯಾಂಕಿಂಗ್‌ ಖಾತೆ ತೆರೆಯಿರಿ
ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡಲು ನೀವು ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಇಂಟರ್ನೆಟ್‌ ಬ್ಯಾಂಕಿಂಗ್ ಸೌಲಭ್ಯ ಹೊಂದಿರೋದು ಅಗತ್ಯ. ಡೆಬಿಟ್‌ ಕಾರ್ಡ್ ಹಾಗೂ ಚೆಕ್‌ ಮೂಲಕ ಕೂಡ ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡಲು ಅವಕಾಶವಿದ್ದರೂ ನೆಟ್‌ ಬ್ಯಾಂಕಿಂಗ್‌ ಮೂಲಕ ಮಾಡೋದ್ರಿಂದ ಸುರಕ್ಷಿತ ಹಾಗೂ ತ್ವರಿತವಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದು. 

ತಜ್ಞರ ಸಲಹೆ ಪಡೆಯಿರಿ
ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡೋದು ಅಷ್ಟು ಸರಳ ವಿಷಯವಲ್ಲ. ಹೀಗಾಗಿ ಹೂಡಿಕೆಗೂ ಮುನ್ನ ಅಗತ್ಯವೆನಿಸಿದ್ರೆ ತಜ್ಞರ ಸಲಹೆ ಪಡೆಯಿರಿ. 
 

click me!