
'ಕಾನ್ಫಿಡೆಂಟ್' ಎಂದರೆ ಆತ್ಮವಿಶ್ವಾಸ. ಆದರೆ ಇಂಥದ್ದೊಂದು ಅದ್ಭುತ ಹೆಸರು ಇಟ್ಟುಕೊಂಡು ಆತ್ಮವಿಶ್ವಾಸವನ್ನೇ ಕಳೆದುಕೊಂಡು ಸಾವಿನ ಹಾದಿ ಹಿಡಿದವರು ಕಾನ್ಫಿಡೆಂಟ್ ಗ್ರೂಪ್ನ ಸಿ.ಜೆ.ರಾಯ್. ಇವರ ಸಾವಿನ ಸುತ್ತ ಹಲವಾರು ವಿಧವಾದ ಸಂದೇಹಗಳು ಸುತ್ತಿಕೊಂಡಿವೆ. ಇಂಥದ್ದೊಂದು ತೀವ್ರ ಸ್ವರೂಪದ ನಿರ್ಧಾರ ತೆಗೆದುಕೊಳ್ಳುವ ಕಾರಣದ ಬಗ್ಗೆ ವಿವಿಧ ರೀತಿಯಲ್ಲಿ, ತಮ್ಮದೇ ಆದ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಸಾವಿರಾರು ಕೋಟಿ ರೂಪಾಯಿಗಳ ಸಾಮ್ರಾಜ್ಯ ಕಟ್ಟಿ, ಹಲವಾರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿ.ಜೆ.ರಾಯ್ ಅವರ ಸಂದರ್ಶನಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಆಲ್ರೌಡಂರ್ ಎನ್ನುವ ಯುಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಬದುಕಿನ ಹಲವು ವಿಷಯಗಳ ಬಗ್ಗೆ ಸಿ.ಜೆ.ರಾಯ್ ಅವರು ಮಾತನಾಡಿದ್ದರು. ಅದರಲ್ಲಿ ಅವರು, ತಮ್ಮ ಬಿಜಿನೆಸ್ಗೆ ಕಾನ್ಫಿಡೆಂಟ್ ಎಂದು ಹೆಸರು ಬಂದ ಬಗೆಯನ್ನು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ. ಯಾವುದೇ ಉದ್ಯಮ ಶುರು ಮಾಡುವಾಗ ಹೆಸರು ಬಹಳ ಮುಖ್ಯವಾಗುತ್ತದೆ. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಾಗ ಎಲ್ಲಾ ಭಾಷಿಕರಿಗೂ, ಎಲ್ಲಾ ದೇಶದವರಿಗೂ ಸುಲಭದಲ್ಲಿ ತಿಳಿಯುವಂತೆ, ಅವರಿಗೆ ಸುಲಭದಲ್ಲಿ ಉಚ್ಚಾರಣೆ ಮಾಡುವಂತೆ ಅನುಕೂಲ ಆಗುವ, ಎಲ್ಲಿಯೂ ಅಪಭ್ರಂಶ ಎನಿಸದ ಹೆಸರನ್ನು ಇಡಲು ನಾನು ಯೋಚಿಸುತ್ತಿದ್ದೆ. ಅದರ ಬಗ್ಗೆ ತೀವ್ರವಾಗಿ ತಲೆಕೆಡಿಸಿಕೊಂಡಿದ್ದೆ ಎಂದು ಸಿ.ಜೆ. ರಾಯ್ ಅವರು ಹೇಳಿದ್ದಾರೆ.
'ನಮ್ಮ ಫ್ಯಾಮಿಲಿ ಹೆಸರಾಗಿರುವ ರಾಯ್ ಗ್ರೂಪ್ ಅಂತ ಇಡೋಣ ಎಂದುಕೊಂಡೆ. ಅದ್ಯಾಕೋ ಸರಿ ಎನ್ನಿಸಲಿಲ್ಲ. ಕೊನೆಗೆ ಪತ್ನಿ, ಮಕ್ಕಳ ಹೆಸರು ಎಲ್ಲವನ್ನೂಯೋಚಿಸಿ ನೋಡಿದೆ. ಆದರೆ ಅದ್ಯಾಕೋ ಅಷ್ಟು ಅಟ್ರ್ಯಾಕ್ಟಿವ್ ಎನ್ನಿಸಲಿಲ್ಲ. ಪ್ರೆಸ್ಟೀಜ್ ಗ್ರೂಪ್ ಇಂಥ ಕೆಲವು ಹೆಸರುಗಳು ಗಮನಕ್ಕೆ ಹೋದವು. ಕೇಳಲು ಹಿತವಾಗಿರಬೇಕು ಹಾಗೂ ಎಲ್ಲರಿಗೂ ಅರ್ಥವಾಗುವ ಇಂಥ ಹೆಸರು ಇಡಬೇಕು ಎಂದು ತುಂಬಾ ಯೋಚನೆ ಮಾಡಿ, ನೂರಾರು ಹೆಸರುಗಳನ್ನು ಬರೆದುಕೊಂಡೆ. ಆದರೆ ಯಾವುದೂ ಅಷ್ಟು ಮನಸ್ಸಿಗೆ ಹೋಗಲಿಲ್ಲ' ಎಂದು ಸಿ.ಜೆ.ರಾಯ್ ಸಂದರ್ಶನದಲ್ಲಿ ಹೇಳಿದ್ದಾರೆ.
'ನಾನು ವಿದೇಶಗಳಿಗೆ ಪ್ರಯಾಣಿಸುತ್ತೇನೆ. ವಿಮಾನಗಳಲ್ಲಿ ಗಗನಸಖಿಯರು ಮಾತನಾಡಿಸುತ್ತಾರೆ. ಅಂಥ ಸಂದರ್ಭಗಳಲ್ಲಿ ನಾನು ಇಂಥ ಗ್ರೂಪ್ನ ಓನರ್ ಎಂದು ಹೇಳುವಾಗ ಹೆಮ್ಮೆ ಪಡಬೇಕು, ಅಂಥ ಹೆಸರು ಯೋಚಿಸುತ್ತಾ ಟಾಯ್ಲೆಟ್ಗೆ ಹೋದೆ. ಜೀವನದಲ್ಲಿ ಅತ್ಯಂತ ಸಮಾಧಾನ ತರುವ ಜಾಗ ಎಂದರೆ ಅದೇ ಎಂದು ಜೋರಾಗಿ ನಕ್ಕು ಹೇಳಿದ್ದ ಸಿ.ಜೆ.ರಾಯ್ ಅವರು, ಅಲ್ಲಿಯೂ ಯೋಚಿಸುತ್ತಿದ್ದಾಗ ಹೊಳೆದದ್ದೇ ಕಾನ್ಫಿಡೆಂಟ್ ಎನ್ನುವ ಹೆಸರು. ಸಿಕ್ಕಾಪಟ್ಟೆ ಖುಷಿಯಾಯ್ತು. ನಾನು ಕಾನ್ಫಿಡೆಂಟ್ ಗ್ರೂಪ್ನ ಓನರ್ ಎಂದು ಹೇಳಲು ಹೆಮ್ಮೆ ಎನ್ನಿಸ್ತು. ಅದೇ ಹೆಸರನ್ನು ಫೈನಲ್ ಮಾಡಿದೆ' ಎಂದು ತಿಳಿಸಿದ್ದರು. ಆದರೆ ಇದೀಗ ಅವರು ದುರಂತ ಅಂತ್ಯ ಕಂಡರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.