
ಜಗತ್ತಲ್ಲಿ ಯಾರೂ ಊಹಿಸದೇ ಇದ್ದ ಎಷ್ಟೆಷ್ಟೋ ಸಂಗತಿಗಳು ನಡೀತಾವೆ.. ಆದ್ರೆ, ಈಗ ನಡೀತಿರೊ ವಿಚಿತ್ರ ಮಾತ್ರ ಯಾರೂ ಊಹಿಸಿರ್ಲಿಲ್ಲ.. ಮೊನ್ ಮೊನ್ನೆ ತನಕ ಯಾರ ಗಮನಕ್ಕೂ ಬೀಳದೇ ಇದ್ದ ಲೋಹ, ಈಗ ನೆಲದಿಂದ ಆಕಾಶದ ತನಕ ಬೆಲೆ ಏರಿಸಿಕೊಂಡಿದೆ.. ಇಲ್ಲ.. ಅದು ಬಂಗಾರಾನೂ ಅಲ್ಲ.. ವಜ್ರವೈಢೂರ್ಯದಂಥಾ ಅಪರೂಪದ ವಸ್ತುನೂ ಅಲ್ಲ.. ಪ್ಲಾಟಿನಮ್ ಲೀಥಿಯಮ್ ಥರ ರೇರ್ ಅರ್ತ್ ಮೆಟಿರಿಯಲ್ಲೂ ಅಲ್ಲ.. ನಾವೂ ನೀವೂ ಅಗ್ಗವಾಗಿ ನೋಡ್ತಾ ಇದ್ದ, ಬೆಳ್ಳಿ.. ಆ ಬೆಳ್ಳಿಗೇ ಈಗ ಬಂಗಾರದ ಸಮಯ ಬಂದಿದೆ.. ಅದಕ್ಕೆ ಕಾರಣ ಏನು? ನಮ್ಮ ನಿಮ್ಮ ಮೇಲೆ ಅದರ ಪರಿಣಾಮ ಏನು? ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ..
ಇಷ್ಟು ದಿನ ಚಿನ್ನ ಇಲ್ಲದಿದ್ದರೆ ಕನಿಷ್ಠ ಬೆಳ್ಳಿಯನ್ನಾದರೂ ಅನೇಕರು ಖರೀದಿಸುತ್ತಿದ್ದರು. ಉಡುಗೊರೆ ನೀಡುವಾಗಲೂ ಅಷ್ಟೇ ಚಿನ್ನ ನೀಡಲಾಗದವರು ಕನಿಷ್ಠ ಬೆಳ್ಳಿಯನ್ನಾದರು ಉಡುಗೊರೆ ನೀಡುತ್ತಿದ್ದರು. ಆದರೆ ಗಗನಕ್ಕೇರುತ್ತಿರುವ ಬೆಳ್ಳಿಯ ಬೆಲೆ ನೋಡಿದರೆ ನಿನ್ನೆ ನನ್ ಚಿನ್ನ ಅನ್ನೋರು ಇನ್ಮೇಲೆ ನೀನೆ ನನ್ನ ಬೆಳ್ಳಿ ಅನ್ನಲು ಶುರು ಮಾಡಬಹುದು. ಅಷ್ಟೊಂದು ಏರಿಕೆ ಆಗ್ತಿದೆ ಬೆಳ್ಳಿ ದರ ಮೂರು ವರ್ಷದಲ್ಲಿ ಆರು ಪಟ್ಟು ಏರಿಕೆ ಆಗಿದ್ದು, ಈಗ ಜನರಿಗೆ ಬರೀ ಚಿನ್ನ ಅಲ್ಲ ಬೆಳ್ಳಿಯ ಮೇಲೂ ವ್ಯಾಮೋಹ ತೀವ್ರವಾಗಿದೆ. ಹೂಡಿಕೆಯ ವಸ್ತುವಾಗಿಯೂ ಈಗ ಜನ ಬೆಳ್ಳಿಯನ್ನು ನೋಡುತ್ತಿದ್ದಾರೆ. ಬೆಳ್ಳಿಯ ಒಡವೆಗಳಿಗೂ ಡಿಮಾಂಡ್ ಹೆಚ್ಚಾಗಿದೆ.
ಇದನ್ನೂ ಓದಿ: ಅಪ್ಪ ಮಗನ ಮೇಲೆ ಚಿರತೆ ದಾಳಿ : ಮಗನ ಜೀವ ಉಳಿಸಲು ಚಿರತೆಯ ಕೊಂದ ರೈತನ ವಿರುದ್ಧ ಅರಣ್ಯ ಇಲಾಖೆ ಕೇಸ್
ಇದಕ್ಕೇನು ಕಾರಣ? ಯುದ್ಧ ಹೌದು ಯುದ್ಧ ನೀವೆಲ್ಲಾ ಬಟರ್ ಫ್ಲೈ ಎಫೆಕ್ಟ್ ಬಗ್ಗೆ ಕೇಳಿರ್ತೀರಿ ಅಲ್ವಾ? ಎಲ್ಲೋ, ಚಿಟ್ಟೆ ರೆಕ್ಕೆ ಬಡಿದರೆ, ಅದೇ ಕಾರಣಕ್ಕೆ ಇನ್ನೆಲ್ಲೋ ಪ್ರವಾಹ ಉಂಟಾಗುತ್ತಂತೆ.. ಅಂಥದ್ರಲ್ಲಿ, ಜಗತ್ತಿನ ಮೂಲೆ ಮೂಲೆಯಲ್ಲೂ ಯುದ್ಧಗಳಾಗ್ತಾ ಇರುವಾಗ, ಅದರ ಪ್ರಭಾವ ನಮ್ಮ ಮೇಲೆ ಆಗದೇ ಇರುತ್ತಾ? ಖಂಡಿಯಾ ಆಗುತ್ತೆ.. ಅಂಥದ್ದೇ ಒಂದು ವಿಲಕ್ಷಣ ಬದಲಾವಣೆ, ಬೆಳ್ಳಿ ವಿಚಾರದಲ್ಲೂ ಆಗ್ತಾ ಇದೆ..
2025 ಮುಗಿದು 2026 ಆರಂಭವಾಗುತ್ತಿದ್ದಂತೆ ಜಗತ್ತಿನಲ್ಲಿ ಹಿಂದೆಂದೂ ಆಗದಂತಹ ವಿಲಕ್ಷಣ ಬದಲಾವಣೆಗಳು ಆಗ್ತಾ ಇದೆ. ದೇಶ ದೇಶಗಳ ಮಧ್ಯೆ ನಡೆಯುತ್ತಿರುವ ಸಂಘರ್ಷಗಳು ಯುದ್ಧದ ಕಾರ್ಮೋಡವೇ ಬೆಳ್ಳಿ ಬೆಲೆ ಏರಿಕೆಗೆ ಮುಖ್ಯ ಕಾರಣ. ಇರಾನ್ ಮತ್ತು ಅಮೆರಿಕಾ ನಡುವಣ ಯುದ್ಧದ ಭೀತಿ ಬಂಡವಾಳ ಹೂಡಿಕೆದಾರರಲ್ಲಿ ನಡುಕ ಹುಟ್ಟಿಸಿದೆ. ಹೀಗಾಗಿಯೇ ರಿಸ್ಕ್ ತೆಗೆದುಕೊಳ್ಳಲು ಬಯಸದ ಜನ ಚಿನ್ನ ಹಾಗೂ ಬೆಳ್ಳಿ ಮೇಲೆ ಹಣ ಸುರಿಯೋಕೆ ಶುರು ಮಾಡಿದರು. ಇದು ಸಹಜವಾಗಿಯೇ ಬೆಳ್ಳಿಯ ಡಿಮ್ಯಾಂಡ್ ಹೆಚ್ಚಿಸಲು ಕಾರಣವಾಯ್ತು. ಜನ ಆಪತ್ಕಾಲದ ಬೆಸ್ಟ್ ಫ್ರೆಂಡ್ ಎಂಬಂತೆ ಬೆಳ್ಳಿ ಮೇಲೆ ಹಣ ಹೂಡಿಕೆ ಮಾಡುವುದಕ್ಕೆ ಶುರು ಮಾಡಿದರು. ಇದೇ ರೀತಿಯ ಹಲವು ಭೌಗೋಳಿಕ ರಾಜಕಾರಣವೂ ಬೆಳ್ಳಿ ಬೆಲೆಯನ್ನು ಗಗನಕ್ಕೇರುವಂತೆ ಮಾಡಿದೆ.
ಇದನ್ನೂ ಓದಿ: ವೇಟರ್ ವೇಷದಲ್ಲಿ ಮದುವೆ ಮನೆಗೆ ಬಂದು ಕಳ್ಳನ ಕೈಚಳಕ: ಕೋಟಿ ಮೌಲ್ಯದ ಹಣ ಚಿನ್ನಾಭರಣದೊಂದಿಗೆ ಪರಾರಿ
ಬೆಳ್ಳಿ ಉತ್ಪಾದನೆಯಲ್ಲಿ ರಷ್ಯಾದ ಪಾಲು ಬಹಳ ದೊಡ್ಡದಿದೆ. ಜಗತ್ತಿನಲ್ಲಿ ದೊರೆಯುವ ಬೆಳ್ಳಿಯ ಪಾಲಿನಲ್ಲಿ ಸುಮಾರು 20ರಿಂದ 21ರಷ್ಟು ಪಾಲು ರಷ್ಯಾದಿಂದಲೇ ಬರುತ್ತಿದೆ. ಹಾಗಾಗಿ ಯುದ್ಧದ ಕಾರಣ ಪೂರೈಕೆಯಲ್ಲಿ ತೊಂದರೆಯಾಗಬಹುದು ಎಂಬ ಕಾರಣದಿಂದ ಬೆಳ್ಳಿಯ ಬೆಲೆ ಇಳಿಯದಿರುವುದಕ್ಕೆ ಕಾರಣವಾಗಿದೆ. ಇದರ ಜೊತೆಗೆ ಕೆನಡಾ ಸೌತ್ ಕೊರಿಯಾದಂತಹ ದೇಶಗಳ ಮೇಲೆ ಅಮೆರಿಕಾ ಅಧ್ಯಕ್ಷ ಟ್ರಂಪ್ 25 ಶೇಕಡಾ ಟ್ಯಾಕ್ಸ್ ಹಾಕ್ತಿನಿ ಎಂದು ಬೆದರಿಸಿರುವುದು ಕೂಡ ಇಡೀ ಜಾಗತಿಕ ವ್ಯಾಪಾರದಲ್ಲಿ ಅಸ್ಥಿರತೆ ಕಾಣುವುದಕ್ಕೆ ಕಾರಣವಾಗಿದೆ. ಈ ಟ್ಯಾರಿಫ್ ಕರೆನ್ಸಿ ವ್ಯಾಟಲಿಟಿ ಮಧ್ಯೆ ಡಾಲರ್ ಆಟವಾಡುವಾಗ ಹೂಡಿಕೆದಾರರು ಭಯಗೊಂಡು ಸಂಪ್ರದಾಯಿಕ ಷೇರುಗಳ ಮೇಲೂ ವಿಶ್ವಾಸ ಕಳೆದುಕೊಂಡರು. ಹಾಗೂ ಚಿನ್ನ ಬೆಳ್ಳಿಯಂತಹವುಗಳ ಮೇಲೆ ಹೂಡಿಕೆ ಮಾಡುವುದಕ್ಕೆ ಶುರು ಮಾಡಿದರು. ಹೀಗಾಗಿ ನಿನ್ನೆ ಮೊನ್ನೆ ತನಕ ಬಡವರ ಬಂಗಾರವಾಗಿದ್ದ ಬೆಳ್ಳಿ, ಈಗ ಬಂಗಾರಕ್ಕೇ ಸವಾಲು ಹಾಕಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.