
ಬೆಂಗಳೂರು (ಜುಲೈ 15): ಐಪಿಎಲ್ ಮಾಜಿ ಕಮೀಷನರ್ ಹಾಗೂ ಚೇರ್ಮನ್ ಲಲಿತ್ ಮೋದಿ ಗುರುವಾರ ಒಂದು ಬ್ರೇಕಿಂಗ್ ನ್ಯೂಸ್ ನೀಡಿದರು. ಮಾಜಿ ಭುವನ ಸುಂದರಿ 46 ವರ್ಷದ ಸುಶ್ಮಿತಾ ಸೇನ್‌ರನ್ನು ವಿವಾಹವಾಗಿದ್ದೇನೆ ಎಂದು ಟ್ವಿಟರ್‌ನಲ್ಲಿ ಘೋಷಣೆ ಮಾಡಿದ ಕೆಲ ಸಮಯಕ್ಕೆ ಸ್ಪಷ್ಟನೆ ನೀಡಿದ 56 ವರ್ಷದ ಲಲಿತ್ ಮೋದಿ, ಸದ್ಯ ಡೇಟಿಂಗ್ ಮಾಡುತ್ತಿದ್ದು, ಮುಂದೆ ಮದುವೆ ಆಗಲಿದ್ದೇವೆ ಎಂದು ತಿಳಿಸಿದ್ದರು. ಈ ಸುದ್ದಿ ಬ್ರೇಕ್ ಆಗುತ್ತಿದ್ದಂತೆ ಬಾಲಿವುಡ್ ಲೋಕ ಅಚ್ಚರಿ ಪಟ್ಟಿತ್ತು. ದೇಶಭ್ರಷ್ಟನಾಗಿ ಭಾರತ ಬಿಟ್ಟು ಪಲಾಯನಗೈದಿರುವ ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿರುವುದನ್ನು ಕೆಲವರು ನಂಬಿರಲೇ ಇಲ್ಲ. ಆದರೆ, ಇದನ್ನು ಸುಶ್ಮಿತಾ ಸೇನ್ ಕೂಡ ಅಧಿಕೃತಗೊಳಿಸಿದ್ದಾರೆ. ಇದರ ನಡುವೆ ಲಲಿತ್ ಮೋದಿ ಈಗ ಏನು ಮಾಡುತ್ತಿದ್ದಾರೆ. ಅವರ ಆಸ್ತಿಯೆಷ್ಟು ಎನ್ನುವ ಕುತೂಹಲವೂ ಆರಂಭವಾಗಿದೆ. ಅವರ ಟ್ವಿಟರ್ ಬಯೋ ಪ್ರಕಾರ, ಲಲಿತ್ ಮೋದಿ, ಮೋದಿ ಎಂಟರ್ ಪ್ರೈಸಸ್ ಎನ್ನುವ ಐಷಾರಾಮಿ ಕಂಪನಿಯ ಅಧ್ಯಕ್ಷ ಎಂದು ಬರೆದುಕೊಂಡಿದ್ದಾರೆ. ಮೋದಿ ಎಂಟರ್‌ಪ್ರೈಸಸ್‌ನ ಒಟ್ಟು ನಿವ್ವಳ ಮೌಲ್ಯ 12 ಸಾವಿರ ಕೋಟಿ. ಕಂಪನಿಯು ಆಗ್ರೋ, ತಂಬಾಕು, ಪಾನ್ ಮಸಾಲಾ, ಮೌತ್ ಫ್ರೆಶನರ್, ಮಿಠಾಯಿ, ಚಿಲ್ಲರೆ ವ್ಯಾಪಾರ, ಶಿಕ್ಷಣ, ಸೌಂದರ್ಯವರ್ಧಕ, ಮನರಂಜನೆ ಮತ್ತು ರೆಸ್ಟೋರೆಂಟ್‌ನ ವ್ಯವಹಾರವನ್ನು ಮಾಡುತ್ತದೆ.
ಮೋದಿ ಎಂಟರ್‌ಪ್ರೈಸ್ ಮಾಲೀಕ: ಈ ಕಂಪನಿಯು (Modi Enterprises ) ಭಾರತವಲ್ಲದೆ, ಮಧ್ಯಪ್ರಾಚ್ಯ, ಪಶ್ಚಿಮ ಆಫ್ರಿಕಾ, ಆಗ್ನೇಯ ಆಫ್ರಿಕಾ, ಆಗ್ನೇಯ ಏಷ್ಯಾ, ಪೂರ್ವ ಯುರೋಪ್, ಆಸ್ಟ್ರೇಲಿಯಾ, ದಕ್ಷಿಣ ಅಮೇರಿಕಾ ಮತ್ತು ಮಧ್ಯ ಅಮೆರಿಕದಾದ್ಯಂತ ತನ್ನ ವ್ಯವಹಾರ ಜಾಲವನ್ನುಹರಡಿದೆ.ಅದೇ ಸಮಯದಲ್ಲಿ, ಮಾಧ್ಯಮ ವರದಿಗಳ ಪ್ರಕಾರ, ಲಲಿತ್ ಮೋದಿ ಅವರ ಒಟ್ಟು ಆಸ್ತಿ 4.5 ಸಾವಿರ ಕೋಟಿ (4500 ಕೋಟಿ) ಆಗಿದೆ. ಲಲಿತ್ ಮೋದಿ (Lalit Modi ) ಬಳಿ 15 ಕೋಟಿ ಮೌಲ್ಯದ ಮೂರು ಫೆರಾರಿಗಳಿವೆ.
7000 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಅರಮನೆ: ಭಾರತದಿಂದ ಪಲಾಯನ ಮಾಡಿದ ನಂತರ, ಲಲಿತ್ ಮೋದಿ ಲಂಡನ್‌ನ (London) ಐಕಾನಿಕ್ ಐದು ಅಂತಸ್ತಿನ ಮಹಲು 117, ಸ್ಲೋನ್ ಸ್ಟ್ರೀಟ್‌ನಲ್ಲಿ ( Sloane Street) ವಾಸಿಸುತ್ತಿದ್ದಾರೆ. ಇದು 7000 ಚದರ ಅಡಿ ವಿಸ್ತಾರವಾಗಿದೆ. ಈ ಐಷಾರಾಮಿ ಬಂಗಲೆಯು 8 ಡಬಲ್ ಬೆಡ್‌ರೂಮ್‌ಗಳು, 7 ಸ್ನಾನಗೃಹಗಳು, 2 ಅತಿಥಿ ಕೊಠಡಿಗಳು, 4 ಸ್ವಾಗತ ಕೊಠಡಿಗಳು, 2 ಅಡಿಗೆಮನೆ ಮತ್ತು ಲಿಫ್ಟ್ ಅನ್ನು ಹೊಂದಿದೆ. ಮೋದಿ ಈ ಮನೆಯನ್ನು ಭೋಗ್ಯಕ್ಕೆ ತೆಗೆದುಕೊಂಡಿದ್ದಾರೆ. 2011ರಲ್ಲಿ ಈ ಮನೆಯ ಬಾಡಿಗೆ ತಿಂಗಳಿಗೆ 12 ಲಕ್ಷ ರೂ.ಆಗಿತ್ತು. ಲಂಡನ್ ರಿಯಲ್ ಎಸ್ಟೇಟ್ ಏಜೆಂಟರ ಪ್ರಕಾರ, ಪ್ರಸ್ತುತ ಅದರ ಬಾಡಿಗೆ ತಿಂಗಳಿಗೆ 20 ಲಕ್ಷಕ್ಕಿಂತ ಹೆಚ್ಚು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಐಪಿಎಲ್ ಮಾಜಿ ಕಮೀಷನರ್ ಲಲಿತ್ ಮೋದಿ-ಸುಶ್ಮಿತಾ ಸೇನ್ ವಿವಾಹ?
74 ಕೋಟಿಯ ಒಡತಿ ಸುಶ್ಮಿತಾ ಸೇನ್: ಇನ್ನು ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ (Sushmita Sen), 74 ಕೋಟಿಯ ಒಡತಿ. ಪ್ರತಿ ವರ್ಷ ಇವರ ಆದಾಯ ಅಂದಾಜು 9 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಪ್ರತಿ ತಿಂಗಳಿಗೆ ಇವರು 60 ಲಕ್ಷಕ್ಕೂ ಅಧಿಕ ಹಣವನ್ನು ಕೆಲಸದಿಂದ ಸಂಪಾದನೆ ಮಾಡುತ್ತಾರೆ. ಇನ್ನು ಪ್ರತಿ ಚಿತ್ರಗಳಿಗೆ ಈಕೆ ಪಡೆದುಕೊಳ್ಳುವ ಸಂಭಾವನೆ 3 ರಿಂದ 4 ಕೋಟಿ ಎಂದು ಹೇಳಲಾಗಿದೆ. ಇನ್ನು ಜಾಹೀರಾತುಗಳಿಗಾಗಿ ಸುಶ್ಮಿತಾ ಸೇನ್ 1.5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಮುಂಬೈನ ವೆರ್ಸೋವಾದಲ್ಲಿ ಐಷಾರಾಮಿ ಫ್ಲ್ಯಾಟ್‌ಅನ್ನು ಸುಶ್ಮಿತಾ ಸೇನ್ ಹೊಂದಿದ್ದಾರೆ. ಸುಶ್ಮಿತಾ ಸೇನ್ ಅವರ ಬಳಿ 1.42 ಕೋಟಿ ರೂಪಾಯಿಯ ಬಿಎಂಡಬ್ಲ್ಯು 7 ಸಿರೀಸ್ಎಲ್‌ಡಿ ಕಾರು ಇದೆ.
ಇದನ್ನೂ ಓದಿ: ಲಲಿತ್ ಮೋದಿ ದಂಪತಿಗೆ ಕಪ್ಪು ಹಣದ ಸಂಕಷ್ಟ!
ಇನ್ನು ಅಂದಾಜು 1 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಎಕ್ಸ್6 ಕಾರು ಕೂಡ ಇವರ ಬಳಿ ಇದೆ. ಅದರೊಂದಿಗೆ 90 ಲಕ್ಷದ ಆಡಿ ಕ್ಯೂ7 ಹಾಗೂ 35 ಲಕ್ಷ ರೂಪಾಯಿಯ ಲೆಕ್ಸಸ್ ಎಲ್‌ಎಕ್ಸ್ 470 ಕಾರು ಕೂಡ ಇದ್ದು, ಇಬ್ಬರು ಹೆಣ್ಣುಮಕ್ಕಳಿಗೆ ತಾಯಿಯಾಗಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.