ಚೀನಾ ಆರ್ಥಿಕತೆಗೆ ಮುಳ್ಳಾದ ಕೋವಿಡ್ ನೀತಿಗಳು; ಜಿಡಿಪಿಯಲ್ಲಿ ದಾಖಲೆ ಕುಸಿತ

By Suvarna NewsFirst Published Jul 15, 2022, 6:56 PM IST
Highlights

*2022ನೇ ಸಾಲಿನ ದ್ವಿತೀಯ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕತೆ  ಶೇ.0.4ಕ್ಕೆ ಕುಸಿತ
*ಕೊರೋನಾ ಕಾರಣಕ್ಕೆ ದೇಶದ ಪ್ರಮುಖ ನಗರಗಳಲ್ಲಿ ಸುದೀರ್ಘ ಕಾಲ ಲಾಕ್ ಡೌನ್ ಹೇರಿದ್ದ ಚೀನಾ ಸರ್ಕಾರ
*2022 ನೇ ಸಾಲಿನಲ್ಲಿ ಚೀನಾದ ಜಿಡಿಪಿ ಪ್ರಗತಿ ಗುರಿ ಶೇ.5.5ಕ್ಕೆ ನಿಗದಿ
 

ಬೀಜಿಂಗ್ (ಜು.15): ಚೀನಾದ ಆರ್ಥಿಕತೆ ಮೇಲೆ ಶೂನ್ಯ ಕೋವಿಡ್ ನೀತಿಗಳು ಪರಿಣಾಮ ಬೀರಿವೆ. ಇದೇ ಕಾರಣದಿಂದ ದ್ವಿತೀಯ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕತೆ  ಶೇ.0.4ಕ್ಕೆ ಕುಸಿದಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲೇ ಇದು ಅತ್ಯಂತ ಕನಿಷ್ಠ ಮಟ್ಟದ ಪ್ರಗತಿಯಾಗಿದ್ದು, ವಿಶ್ವದ ಎರಡನೇ ಅತೀದೊಡ್ಡ ಆರ್ಥಿಕತೆ ಶೂನ್ಯ ಕೋವಿಡ್ ನೀತಿಗಳಿಂದ ಹೊಡೆತ ಅನುಭವಿಸಿದೆ. ಕೊರೋನಾ ಕಾರಣಕ್ಕೆ ದೇಶದ ಪ್ರಮುಖ ನಗರಗಳಲ್ಲಿ ಸುದೀರ್ಘ ಕಾಲ ಲಾಕ್ ಡೌನ್ ಹೇರಲಾಗಿತ್ತು. ಇದ್ರಿಂದ ಉದ್ಯಮಗಳು ಹಾಗೂ ಕೈಗಾರಿಕಾ ಪೂರೈಕೆ ಸರಪಳಿಗಳಿಗೆ ಹಾನಿಯಾಗಿದೆ ಎಂದು ಚೀನಾದ ಅಧಿಕೃತ ದಾಖಲೆಗಳು ತಿಳಿಸಿವೆ. ಚೀನಾದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದೆ. ಹಿಂದಿನ ಸಾಲಿಗೆ ಹೋಲಿಸಿದ್ರೆ 2022ನೇ ಸಾಲಿನ ದ್ವಿತೀಯ ತ್ರೈಮಾಸಿಕದಲ್ಲಿ ಶೇ.0.4 ರಷ್ಟು ಮಾತ್ರ ಪ್ರಗತಿಯಾಗಿದೆ ಎಂದು ನ್ಯಾಷನಲ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್  (NBS) ತಿಳಿಸಿದೆ. ಕೊರೋನಾ ವೈರಸ್ ವುಹಾನ್ ಗೆ ಕಾಲಿರಿಸಿ, ಜಗತ್ತಿನ ಇತರ ಭಾಗಗಳಿಗೆ ಪಸರಿಸಿದ ಬಳಿಕದ 2020 ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕತೆ ಶೇ.6.8ಕ್ಕೆ ಇಳಿಕೆಯಾದ ಬಳಿಕ ಇದು ಅತ್ಯಂತ ಕಡಿಮೆ ಮಟ್ಟದ ಪ್ರಗತಿ ದರವಾಗಿದೆ. 2022 ನೇ ಸಾಲಿನಲ್ಲಿ ಚೀನಾದ ಜಿಡಿಪಿ ಪ್ರಗತಿ ಗುರಿಯನ್ನು ಅಂದಾಜು ಶೇ.5.5ಕ್ಕೆ ನಿಗದಿಪಡಿಸಲಾಗಿತ್ತು. 

ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ 5 ವರ್ಷಗಳಲ್ಲಿ ಒಮ್ಮೆ ನಡೆಯುವ ಸಭೆ ಶೀಘ್ರದಲ್ಲೇ ನಡೆಯುವ ನಿರೀಕ್ಷೆಯಿದೆ. ಇದರಲ್ಲಿ ಚೀನಾದ ಅಧ್ಯಕ್ಷ ಕ್ಸಿ  ಜಿನ್ ಪಿಂಗ್ ಅವರನ್ನು ಮೂರನೇ ಅವಧಿಗೆ ಆಯ್ಕೆ ಮಾಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕತೆಯಲ್ಲಿ ನಿಧಾನಗತಿ ಕಂಡುಬಂದಿದೆ. ಆರ್ಥಿಕತೆಯ ಸಂಕೋಚನಕ್ಕೆ ಸಂಬಂಧಿಸಿ ಮಾತನಾಡಿರುವ ಎನ್ ಬಿಎಸ್ ವಕ್ತಾರ ಫು ಲಿಂಗುಹಿ 'ಆರ್ಥಿಕತೆಯ ಸುಸ್ಥಿರ ಹಾಗೂ ಭದ್ರ ಚೇತರಿಕೆಗೆ ಇನ್ನಷ್ಟೇ ಬುನಾದಿ ಗಟ್ಟಿಗೊಳಿಸಬೇಕಿದೆ ಎಂಬುದು ನಮಗೆ ತಿಳಿದಿರಬೇಕು' ಎಂದು ಹೇಳಿದ್ದಾರೆ.

ಅಮೆರಿಕದ ಹಣದುಬ್ಬರ 41 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ; ಭಾರತಕ್ಕೂ ತಟ್ಟಲಿದೆ ಬಿಸಿ

ಬಾಹ್ಯ ಸಂಗತಿಗಳ ಕಾರಣಕ್ಕೆ ಹೀಗೆ ಆಗುತ್ತಿದೆ. ಜಗತ್ತಿನ ಆರ್ಥಿಕತೆಯಲ್ಲಿ ನಿಂತುಬ್ಬರದ ಅಪಾಯ ಹೆಚ್ಚುತ್ತಿದೆ. ಪ್ರಮುಖ ಆರ್ಥಿಕ ನೀತಿಗಳನ್ನು ಬಿಗಿಗೊಳಿಸಬೇಕಾದ ಅಗತ್ಯವಿದೆ. ಬಾಹ್ಯ ಅಸ್ಥಿರತೆಗಳು ಹಾಗೂ ಅನಿರ್ದಿಷ್ಟತೆಗಳು ಖಂಡಿತವಾಗಿಯೂ ದೇಶೀಯ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದ್ದಾರೆ.ದೇಶೀಯ ಮಾರುಕಟ್ಟೆ ಮೇಲೂ ಬಾಹ್ಯ ಬೆಳವಣಿಗೆಗಳು ಪರಿಣಾಮ ಬೀರುತ್ತಿವೆ. ಬೇಡಿಕೆ ಕುಗ್ಗುತ್ತಿದೆ. ಜೊತೆಗೆ ಪೂರೈಕೆಯಲ್ಲಿಯೂ ವ್ಯತ್ಯಾಸವಾಗಿದೆ ಎಂದು ಲಿಂಗುಹಿ ತಿಳಿಸಿದ್ದಾರೆ.

ಚೀನಾದ ಆರ್ಥಿಕತೆ ಒತ್ತಡಯುಕ್ತ ಸಮಯದಲ್ಲಿ ಸಾಗುತ್ತಿದೆ ಎಂದು ಚೀನಾದ ಸಿಪಿಸಿಯ ಎರಡನೇ ಶ್ರೇಣಿಯ ನಾಯಕ ಲಿ ಕೆಕಿಯಾಂಗ್ ಎಚ್ಚರಿಸಿದ್ದಾರೆ. ಆರ್ಥಿಕತೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಗಳನ್ನು ಮಾಡುವಂತೆ ಅವರು ಕರೆ ನೀಡಿದ್ದಾರೆ. 

LIC EV Rise; ಎಲ್‌ಐಸಿ ಆಸ್ತಿ .5.41 ಲಕ್ಷ ಕೋಟಿ

ಚೀನಾದ ಶೂನ್ಯ ಕೋವಿಡ್ ನೀತಿಗೆ ದೇಶ ಹಾಗೂ ಜಗತ್ತಿನಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಒಮಿಕ್ರಾನ್ ಹರಡುವಿಕೆ ತಡೆಯಲು ಚೀನಾ ಸರ್ಕಾರ ಚೀನಾದ ಅತೀದೊಡ್ಡ ಉದ್ಯಮ ಹಾಗೂ ಕೈಗಾರಿಕ ವಲಯವಾದ ಶಾಂಗೈ ಅನ್ನು ಎರಡು ತಿಂಗಳಿಗೂ ಹೆಚ್ಚು ಕಾಲ ಮುಚ್ಚಿತ್ತು. ಇಲ್ಲಿ 2.5 ಕೋಟಿ ಜನರು ಕಾರ್ಯ ನಿರ್ವಹಿಸುತ್ತಿದ್ದರು. ಈ ನಗರ ಇನ್ನಷ್ಟೇ ಸಹಜ ಸ್ಥಿತಿಗೆ ಮರಳಬೇಕಿದೆ. ಅದೇರೀತಿ ಬೀಜಿಂಗ್ ಹಾಗೂ ಇತರ ಅನೇಕ ನಗರಗಳು ಕೂಡ ಪ್ರವಾಸ ಹಾಗೂ ಉದ್ಯಮ ಸಂಬಂಧಿ ಸುದೀರ್ಘ ನಿರ್ಬಂಧಗಳಿಂದ ತೊಂದರೆ ಅನುಭವಿಸಿವೆ. ಚೀನಾ ಸರ್ಕಾರದ ಈ ನೀತಿಯಿಂದ ಅಲ್ಲಿನ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. 
ಶುಕ್ರವಾರ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ ಚೀನಾದಲ್ಲಿ ಗ್ರಾಹಕ ಸರಕುಗಳ ಚಿಲ್ಲರೆ ಮಾರಾಟ ಜೂನ್ ನಲ್ಲಿ ಶೇ.3.1 ಕ್ಕೆ ಏರಿಕೆಯಾಗಿದೆ. ಇನ್ನು ಚೀನಾದ ನಗರ ಪ್ರದೇಶದಲ್ಲಿನ ನಿರುದ್ಯೋಗ ದರ ಮೇನಲ್ಲಿ ಶೇ.5.9ರಷ್ಟಿದ್ದು, ಜೂನ್ ನಲ್ಲಿ ಶೇ.5.5ಕ್ಕೆ ಇಳಿಕೆಯಾಗಿದೆ. 

click me!