ಆದಾಯ ಕಡಿಮೆ ಆಗಿ, ಪಾವತಿ ಮಾಡಬೇಕಾದ ಬಡ್ಡಿ ಪ್ರಮಾಣ ಹಲವು ಪಟ್ಟು ಹೆಚ್ಚಿತ್ತು. ಹೀಗಾಗಿ ಬ್ಯಾಂಕ್, ಹೆಚ್ಚುವರಿ ಹಣವನ್ನು, ಅಮೆರಿಕದ ಸರ್ಕಾರಿ ಬಾಂಡ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿತ್ತು. ಆದರೆ ಕಳೆದ ವರ್ಷದ ಮಧ್ಯಭಾಗದ ನಂತರ ಹಣದುಬ್ಬರ ನಿಯಂತ್ರಣಕ್ಕಾಗಿ ಕೇಂದ್ರೀಯ ಬ್ಯಾಂಕ್ ಯಾವಾಗ ಬ್ಯಾಂಕ್ ಬಡ್ಡಿ ದರ ಏರಿಕೆ ಮಾಡಲು ಆರಂಭಿಸಿತೋ ಆಗ ಬಾಂಡ್‌ನ ಬಡ್ಡಿದರ ಇಳಿಯಲು ಆರಂಭವಾಯಿತು.
ನ್ಯೂಯಾರ್ಕ್: ಸ್ಟಾರ್ಟಪ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳಿಗೆ ಸಾಲ ನೀಡಲೆಂದೇ ಸ್ಥಾಪನೆಯಾಗಿದ್ದ ಅಮೆರಿಕದ ‘ಸಿಲಿಕಾನ್ ವ್ಯಾಲಿ ಬ್ಯಾಂಕ್’ ಪತನಗೊಂಡಿದೆ. ಬಾಂಡ್‌ಗಳ ಮೇಲೆ ಮಾಡಿದ ಹೂಡಿಕೆಯಿಂದ ನಷ್ಟಆಗಿರುವ ವಿಷಯ ಹೊರಬೀಳುತ್ತಲೇ ಬ್ಯಾಂಕಿನ ಠೇವಣಿದಾರರು ಹಾಗೂ ಹೂಡಿಕೆದಾರರು ದಿಗ್ಭ್ರಮೆಗೊಂಡಿದ್ದು ಅವರ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಠೇವಣಿದಾರರ ಹಣ ರಕ್ಷಣೆ ನಿಟ್ಟಿನಲ್ಲಿ ಬ್ಯಾಂಕನ್ನು ತಮ್ಮ ವಶಕ್ಕೆ ಪಡೆದಿರುವ ಕ್ಯಾಲಿಫೋರ್ನಿಯಾದ ಬ್ಯಾಂಕಿಂಗ್ ನಿಯಂತ್ರಕರು, ಬ್ಯಾಂಕ್‌ನ ಎಲ್ಲಾ ಆಸ್ತಿಯನ್ನು ಸಾಂತಾ ಕ್ಲಾರಾ ನ್ಯಾಷನಲ್ ಬ್ಯಾಂಕ್‌ನಲ್ಲಿ ವಿಲೀನ ಮಾಡಿದ್ದಾರೆ. ಜೊತೆಗೆ 14 ಲಕ್ಷ ಕೋಟಿ ರೂ. ಮೊತ್ತದ ಠೇವಣಿಯನ್ನು ಠೇವಣಿ ವಿಮಾ ನಿಗಮದ ಅಡಿ ತಂದಿದ್ದು, ಸೋಮವಾರದಿಂದಲೇ ಗ್ರಾಹಕರು ಹೊಸ ಬ್ಯಾಂಕ್‌ನಿಂದ ಹಣ ಪಡೆಯಬಹುದು ಎಂದು ಭರವಸೆ ನೀಡಿದ್ದಾರೆ. ಈ ಮೂಲಕ ಅಮೆರಿಕದ ಇತರೆ ಬ್ಯಾಂಕಿಂಗ್ ವಲಯ ಮತ್ತು ಹೂಡಿಕೆದಾರರು ಆತಂಕಕ್ಕೆ ಒಳಗಾಗುವುದನ್ನು ತಡೆಯುವ ಯತ್ನ ಮಾಡಿದ್ದಾರೆ.
ಈ ಬೆಳವಣಿಗೆಯನ್ನು 2008ರ ಅಮೆರಿಕದ ಬ್ಯಾಂಕಿಂಗ್ ವಲಯದ ವೈಫಲ್ಯದ ನಂತರ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯದ ಘಟನೆ ಎಂದು ವಿಶ್ಲೇಷಿಸಲಾಗಿದೆ. ಕೋವಿಡ್ ನಂತರದ ಪರಿಸ್ಥಿತಿಗಳು, ದುಬಾರಿ ಬಡ್ಡಿದರವು ಅಮೆರಿಕ ಸೇರಿದಂತೆ ಹಲವು ದೇಶಗಳನ್ನು ಆರ್ಥಿಕ ಹಿಂಜರಿತಕ್ಕೆ ತಳ್ಳಲಿದೆ ಎಂಬ ವರದಿಗಳ ಬೆನ್ನಲ್ಲೇ ನಡೆದ ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟುಹಾಕಿದೆ.
ಇದನ್ನು ಓದಿ: ಉತ್ತರ ಪ್ರದೇಶದ ತರಕಾರಿ ಮಾರುವವನ ಖಾತೆಗೆ 172 ಕೋಟಿ ರೂ. ಜಮೆ: ಐಟಿ ಇಲಾಖೆ, ಪೊಲೀಸರಿಂದ ತನಿಖೆ
‘ಸಿಲಿಕಾನ್ ವ್ಯಾಲಿ ಬ್ಯಾಂಕ್’ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಸ್ಟಾರ್ಟಪ್‌ಗಳ ಜೊತೆ ನಂಟು ಹೊಂದಿರುವ ಕಾರಣ, ಈ ಬೆಳವಣಿಗೆ ಭಾರತದ ಉದ್ಯಮ ವಲಯದ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗಿದೆ. ಆದರೆ ತಕ್ಷಣಕ್ಕೆ ಈ ಪರಿಣಾಮದ ಆಳ, ಅಗಲ ಬಹಿರಂಗವಾಗಿಲ್ಲ.
ಆಗಿದ್ದೇನು?:
‘ಸಿಲಿಕಾನ್ ವ್ಯಾಲಿ ಬ್ಯಾಂಕ್’ ತಂತ್ರಜ್ಞಾನ ವಲಯದ ಸಂಸ್ಥೆಗಳಿಗೆ ಸಾಲ ನೀಡುವ ಮತ್ತು ಅವುಗಳಿಂದ ಠೇವಣಿ ಸಂಗ್ರಹಿಸುವ ಕೆಲಸ ಮಾಡುತ್ತಿತ್ತು. ಕಳೆದ ಕೆಲ ವರ್ಷಗಳಲ್ಲಿ ಸ್ಟಾರ್ಟಪ್ ವಲಯದ ಕಂಪನಿಗಳು ಭಾರೀ ಲಾಭದಲ್ಲಿದ್ದು, ಅವು ತಮ್ಮಲ್ಲಿದ್ದ ಹೆಚ್ಚಿನ ಹಣವನ್ನು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಠೇವಣಿ ಇಡಲು ಆರಂಭಿಸಿದ್ದವು. ಪರಿಣಾಮ 2017ರಲ್ಲಿ ಬ್ಯಾಂಕ್‌ನ ಠೇವಣಿ ಗಾತ್ರ 3.60 ಲಕ್ಷ ಕೋಟಿ ರು. ಇದ್ದಿದ್ದು, 2021ರ ಅಂತ್ಯದ ವೇಳೆಗೆ 15.50 ಲಕ್ಷ ಕೋಟಿ ರೂ.. ತಲುಪಿತ್ತು. ಆದರೆ ಇದೇ ಅವಧಿಯಲ್ಲಿ ಸಾಲ ನೀಡಿಕೆ ಪ್ರಮಾಣ 1.90 ಲಕ್ಷ ಕೋಟಿ ರು.ನಿಂದ ಕೇವಲ 5.4 ಲಕ್ಷ ಕೋಟಿ ರೂ.ಗೆ ಬೆಳವಣಿಗೆ ಕಂಡಿತ್ತು.
ಇದನ್ನೂ ಓದಿ: ನೀವು ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಾ? ಅಪ್ಪಿತಪ್ಪಿಯೂ ಇಂಥ ಲಿಂಕ್ಸ್ ಮೇಲೆ ಕ್ಲಿಕ್ ಮಾಡ್ಬೇಡಿ!
ಅಂದರೆ ಆದಾಯ ಕಡಿಮೆ ಆಗಿ, ಪಾವತಿ ಮಾಡಬೇಕಾದ ಬಡ್ಡಿ ಪ್ರಮಾಣ ಹಲವು ಪಟ್ಟು ಹೆಚ್ಚಿತ್ತು. ಹೀಗಾಗಿ ಬ್ಯಾಂಕ್, ಹೆಚ್ಚುವರಿ ಹಣವನ್ನು, ಅಮೆರಿಕದ ಸರ್ಕಾರಿ ಬಾಂಡ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿತ್ತು. ಆದರೆ ಕಳೆದ ವರ್ಷದ ಮಧ್ಯಭಾಗದ ನಂತರ ಹಣದುಬ್ಬರ ನಿಯಂತ್ರಣಕ್ಕಾಗಿ ಕೇಂದ್ರೀಯ ಬ್ಯಾಂಕ್ ಯಾವಾಗ ಬ್ಯಾಂಕ್ ಬಡ್ಡಿ ದರ ಏರಿಕೆ ಮಾಡಲು ಆರಂಭಿಸಿತೋ ಆಗ ಬಾಂಡ್‌ನ ಬಡ್ಡಿದರ ಇಳಿಯಲು ಆರಂಭವಾಯಿತು. ಇದೇ ಹೊತ್ತಿಗೆ ಅತ್ತ ಟೆಕ್ ವಲಯದ ಕಂಪನಿಗಳಿಗೂ ಹೊಸ ಹೂಡಿಕೆ ಕಡಿಮೆಯಾದ ಕಾರಣ, ಅವು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿದ್ದ ಠೇವಣಿ ಹಿಂದಕ್ಕೆ ಪಡೆಯಲು ಮುಂದಾದವು. ಆಗ ಬ್ಯಾಂಕ್ ಅನಿವಾರ್ಯವಾಗಿ ಬಾಂಡ್‌ಗಳನ್ನು ತಾನು ಖರೀದಿಸಿದ ದರಕ್ಕಿಂತ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಬೇಕಾಗಿ ಬಂತು. ಇದರ ಪರಿಣಾಮ ಕೆಲವೇ ದಿನಗಳಲ್ಲಿ ಬ್ಯಾಂಕ್ 16000 ಕೋಟಿ ರೂ. ನಷ್ಟ ಅನುಭವಿಸಿತು.
ಈ ನಷ್ಟ ಭರಿಸಲು ಮಾರುಕಟ್ಟೆಯಿಂದ 20,000 ಕೋಟಿ ರೂ. ಸಂಗ್ರಹಣೆಗೆ ಮುಂದಾಗಿರುವುದಾಗಿ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಮಾತೃ ಸಂಸ್ಥೆ ಎಸ್‌ವಿಬಿ ಫೈನಾನ್ಷಿಯಲ್ ಗ್ರೂಪ್ ಘೋಷಣೆ ಮಾಡಿತು. ಆಗ ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿರುವ ಸುದ್ದಿ ಹೊರಬಿತ್ತು. ಇದರಿಂದ ಭೀತರಾದ ಬ್ಯಾಂಕ್‌ನ ಠೇವಣಿದಾರರು ಗುರುವಾರ ಹಾಗೂ ಶುಕ್ರವಾರ ಬ್ಯಾಂಕ್‌ನಿಂದ ಹಣ ಹಿಂಪಡೆಯಲು ಏಕಾಏಕಿ ಮುಗಿಬಿದ್ದರು.
- ಐಟಿ, ಸ್ಟಾರ್ಟಪ್ ಕಂಪನಿಗಳಿಗೆ ಸಾಲ ನೀಡಲೆಂದೇ ಸ್ಥಾಪನೆ ಆಗಿದ್ದ ಬ್ಯಾಂಕ್
- ಲಾಭ ಬರುತ್ತಿದ್ದಂತೆ ಬ್ಯಾಂಕ್‌ನಲ್ಲಿ ಭಾರೀ ಠೇವಣಿ ಇರಿಸಿದ ಕಂಪನಿಗಳು
- ಈ ಹಣವನ್ನು ಬಾಂಡ್‌ನಲ್ಲಿ ಹೂಡಿಕೆ ಮಾಡಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್
- ಹಣದುಬ್ಬರ ಹತ್ತಿಕ್ಕಲು ಬಡ್ಡಿ ದರ ಏರಿಸಿದ ಅಮೆರಿಕ ಕೇಂದ್ರೀಯ ಬ್ಯಾಂಕ್
- ಇದರಿಂದ ಬಾಂಡ್ ಬಡ್ಡಿ ದರ ಕುಸಿತ. ಸಿಲಿಕಾನ್ ವ್ಯಾಲಿ ಬ್ಯಾಂಕಿಗೆ ಭಾರಿ ನಷ್ಟ