
ನವದೆಹಲಿ (ಮಾ.11): ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೋಹಿತ್ ಜೋಶಿ ಟೆಕ್ ಮಹೀಂದ್ರಾ ಕಂಪನಿ ಸೇರಿದ್ದಾರೆ. ಈ ಮೂಲಕ ಇನ್ಫೋಸಿಸ್ ಜೊತೆಗಿನ ತಮ್ಮ 22 ವರ್ಷಗಳ ಪ್ರಯಾಣವನ್ನು ಕೊನೆಗೊಳಿಸಿದ್ದಾರೆ. ಟೆಕ್ ಮಹೀಂದ್ರಾದ ನೂತನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಮೋಹಿತ್ ಜೋಶಿ ಅಧಿಕಾರ ಸ್ವೀಕರಿಸಲಿದ್ದಾರೆ. ಮೋಹಿತ್ ಜೋಶಿ ಅವರನ್ನು ಉಳಿಸಿಕೊಳ್ಳಲು ಇನ್ಫೋಸಿಸ್ ಅಂತಿಮ ಕ್ಷಣದ ತನಕ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ, ಜೋಶಿ ಉನ್ನತ ಜವಾಬ್ದಾರಿ ನಿರ್ವಹಣೆ ಬಯಸಿದ ಹಿನ್ನೆಲೆಯಲ್ಲಿ ಸೂಕ್ತ ನಿರ್ಧಾರಕ್ಕೆ ಬರಲು ಇನ್ಫೋಸಿಸ್ ಆಡಳಿತ ಮಂಡಳಿಗೆ ಸಾಧ್ಯವಾಗಿರಲಿಲ್ಲ. ಇನ್ನು ಟೆಕ್ ಮಹೀಂದ್ರಾ ಎಂಡಿ ಹಾಗೂ ಸಿಇಒ ಸಿಪಿ ಗುರ್ನಾನಿ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಜೋಶಿ ಸೂಕ್ತವಾದ ಆಯ್ಕೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಇನ್ಫೋಸಿಸ್ ನಿಂದ ಜೋಶಿ ನಿರ್ಗಮನವನ್ನು ದೊಡ್ಡ ನಷ್ಟ ಎಂದೇ ಬಿಂಬಿಸಲಾಗಿದ್ದು, ಇದನ್ನು ತುಂಬಿಸಲು ಸೂಕ್ತ ವ್ಯಕ್ತಿಯ ಅಗತ್ಯವಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಮೋಹಿತ್ ಜೋಶಿ ಯಾರು? ಅವರ ವೇತನ ಎಷ್ಟು? ನೋಡೋಣ.
ಯಾರು ಈ ಮೋಹಿತ್ ಜೋಶಿ?
ಸಾಫ್ಟ್ ವೇರ್ ಹಾಗೂ ಕನ್ಸಲ್ಟಿಂಗ್ ವಲಯದಲ್ಲಿ ಮೋಹಿತ್ ಜೋಶಿ ಅವರಿಗೆ ಎರಡು ದಶಕಕ್ಕೂ ಅಧಿಕ ಅನುಭವವಿದೆ. ಭಾರತದ ಐಟಿ ಕ್ಷೇತ್ರದಲ್ಲಿ ಇವರ ಹೆಸರು ಜನಪ್ರಿಯ. ಇನ್ಫೋಸಿಸ್ ಸಂಸ್ಥೆಯಲ್ಲಿ ಜೋಶಿ 22 ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ಫೋಸಿಸ್ ಸೇರುವ ಮುನ್ನ ಜೋಶಿ ಎನ್ಝುಡ್ ಗ್ರೈಂಡ್ ಲೇಸ್ ಹಾಗೂ ಎಬಿಎನ್ ಅಮ್ರೋ ಬ್ಯಾಂಕ್ ಮುಂತಾದ ಕೆಲವು ದೊಡ್ಡ ಸಂಸ್ಥಗಳಲ್ಲಿ ಕಾರ್ಯನಿರ್ವಹಿಸಿದ್ದರು. ವಿಶ್ವ ಆರ್ಥಿಕ ವೇದಿಕೆ (WEF) 2014ರಲ್ಲಿ ಜೋಶಿ ಅವರನ್ನು ಯುವ ಜಾಗತಿಕ ನಾಯಕ ಎಂದು ಆಯ್ಕೆ ಮಾಡಿತ್ತು.ಇನ್ಫೋಸಿಸ್ ನಲ್ಲಿ ಮೋಹಿತ್ ಜೋಶಿ ಬ್ಯಾಂಕಿಂಗ್ ಪ್ಲ್ಯಾಟ್ಫಾರ್ಮ್, ಎ1/ಅಟೋಮೇಷನ್ ಪೋರ್ಟ್ ಪೋಲಿಯೋ, ಸೇಲ್ಸ್ ಆಪರೇಷನ್ಸ್, ಟ್ರಾನ್ಸ್ ಫಾರ್ಮೇಷನ್, ಸಿಐಒ ಫಂಕ್ಷನ್ ಹಾಗೂ ಇನ್ಫೋಸಿಸ್ ನಾಲೆಜ್ ಇನ್ಸ್ ಟಿಟ್ಯೂಟ್ ನೇತೃತ್ವ ವಹಿಸಿದ್ದರು.
ಹತ್ತೇ ದಿನದಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 13 ಸ್ಥಾನ ಜಿಗಿದ ಗೌತಮ್ ಅದಾನಿ
ಶಿಕ್ಷಣ
ಮೋಹಿತ್ ಜೋಶಿ ದೆಹಲಿ ಮೂಲದವರಾಗಿದ್ದು, ಇಲ್ಲಿನ ಆರ್.ಕೆ.ಪುರಂ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು. ಆ ಬಳಿಕ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿ ಪಡೆದಿದ್ದರು. ಆ ಬಳಿಕ ಫ್ಯಾಕಲ್ಟಿ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನಿಂದ (ಎಫ್ ಎಂಎಸ್) ಎಂಬಿಎ ಪದವಿ ಪಡೆದಿದ್ದಾರೆ. ಅಮೆರಿಕದ ಹಾರ್ವರ್ಡ್ ಕೆನೆಡೆ ಸ್ಕೂಲ್ ನಿಂದ ಜಾಗತಿಕ ನಾಯಕತ್ವ ಹಾಗೂ ಸಾರ್ವಜನಿಕ ನೀತಿ ಅಧ್ಯಯನ ಮಾಡಿದ್ದಾರೆ.
Viral Video : ಚಾಲಕನಿಗೆ ರಾತ್ರಿ ರೈಲ್ವೆ ಟ್ರ್ಯಾಕ್ ಹೇಗೆ ಕಾಣುತ್ತೆ? ವೈರಲ್ ವಿಡಿಯೋಗೆ ಕಮೆಂಟ್ ಮಾಡಿದ ಎಲಾನ್ ಮಸ್ಕ್
ವೇತನ ಎಷ್ಟಿತ್ತು?
ಮೋಹಿತ್ ಜೋಶಿ ಏಷ್ಯಾ (Asia), ಅಮೆರಿಕ (America) ಹಾಗೂ ಯುರೋಪ್ (Europe) ಖಂಡಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ಇಂಗ್ಲೆಂಡ್ ರಾಜ್ಯಧಾನಿ ಲಂಡನ್ ನಲ್ಲಿ (London) ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನೆಲೆಸಿದ್ದಾರೆ. 2021ರಲ್ಲಿ ಮೋಹಿತ್ ವೇತನ 15 ಕೋಟಿ ರೂ.ನಿಂದ 34 ಕೋಟಿ ರೂ.ಗೆ ಏರಿಕೆಯಾಗಿತ್ತು. ಇನ್ಫೋಸಿಸ್ ಫೈಲಿಂಗ್ ಪ್ರಕಾರ 2021-2022ನೇ ಸಾಲಿನಲ್ಲಿ ಮೋಹಿತ್ ಜೋಶಿ 34.89 ಕೋಟಿ ರೂ. ಪರಿಹಾರ ಪಡೆದಿದ್ದರು. ಅಂದರೆ ಒಂದು ದಿನದ ಜೋಶಿ ಅವರ ವೇತನ ಸುಮಾರು 95 ಲಕ್ಷ ರೂ. ಟೆಕ್ ಮಹೀಂದ್ರಾದಲ್ಲಿ ಇವರಿಗೆ ಎಷ್ಟು ವೇತನ ನಿಗದಿಪಡಿಸಲಾಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.