ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಮಿನಿ ಘೋಷಣೆ ಗಡುವು ಜನವರಿ1ಕ್ಕೆ ವಿಸ್ತರಣೆ

Published : Sep 28, 2023, 05:49 PM IST
ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಮಿನಿ ಘೋಷಣೆ ಗಡುವು ಜನವರಿ1ಕ್ಕೆ ವಿಸ್ತರಣೆ

ಸಾರಾಂಶ

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಮಿನಿ ಹೆಸರಿಸಲು ನೀಡಿದ್ದ ಗಡುವನ್ನು ಸೆಬಿ ಜನವರಿ 1ಕ್ಕೆ ವಿಸ್ತರಿಸಿದೆ. ಈ ಹಿಂದೆ ನಾಮಿನಿ ಸೇರ್ಪಡೆಗೆ ಸೆಪ್ಟೆಂಬರ್ 30 ಅಂತಿಮ ಗಡುವಾಗಿತ್ತು. 

ನವದೆಹಲಿ (ಸೆ.27): ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಿರಾಳತೆ ನೀಡುವ ಸುದ್ದಿಯಿದು. ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ನಾಮಿನಿ ನಮೂದಿಸಲು ನೀಡಿದ್ದ ಅಂತಿಮ ಗಡುವನ್ನು ಸೆಬಿ  2024ರ ಜನವರಿ 1ರ ತನಕ ವಿಸ್ತರಿಸಿದೆ. ಈ ಹಿಂದೆ ನಾಮಿನಿ ಆಯ್ಕೆಗೆ ಸೆಪ್ಟೆಂಬರ್ 30ರ ಗಡುವು ನೀಡಲಾಗಿತ್ತು. ಇನ್ನು ಜನವರಿ 1ಕ್ಕಿಂತ ಮೊದಲು ನಾಮಿನಿ ನಮೂದಿಸಬೇಕು ಅಥವಾ ನಾಮಿನಿ ಇಲ್ಲ ಎಂಬ ಬಗ್ಗೆ ಘೋಷಣಾ ಪತ್ರ ಸಲ್ಲಿಕೆ ಮಾಡಬೇಕು. ಒಂದು ವೇಳೆ ಇವೆರಡನ್ನೂ ಮಾಡಲು ವಿಫಲರಾದರೆ, ಅಂಥವರ ಹೂಡಿಕೆ ಅಥವಾ ಫೋಲಿಯೋ ನಿಷ್ಕ್ರಿಯಗೊಳಿಸಲಾಗುವುದು ಎಂದು ಸೆಬಿ ತಿಳಿಸಿದೆ. ಹೂಡಿಕೆದಾರರಿಗೆ ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳಲು ಹಾಗೂ ಸೂಕ್ತ ವಾರಸುದಾರರಿಗೆ ಆ ಹಣ ತಲುಪಿಸಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಸೆಬಿ ಈ ಕ್ರಮ ಕೈಗೊಂಡಿದೆ. ಈ ಹಿಂದೆ ಕೂಡ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಮಿನಿ ಹೆಸರಿಸಲು ನೀಡಿದ್ದ ಅಂತಿಮ ಗಡುವನ್ನು ಸೆಬಿ ಅನೇಕ ಬಾರಿ ವಿಸ್ತರಿಸಿತ್ತು.

'ಮಾರುಕಟ್ಟೆ ಭಾಗಿದಾರರ ಅಭಿಪ್ರಾಯದ ಆಧಾರದಲ್ಲಿ ಫೋಲಿಯೋಗಳನ್ನು ಫ್ರಿಜ್ ಮಾಡುವ ಗಡುವನ್ನು 2023ರ ಸೆಪ್ಟೆಂಬರ್ 30ರ ಬದಲು 2024ರ ಜನವರಿ 1ಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ' ಎಂದು ಸೆಬಿ ತನ್ನ ಸುತ್ತೋಲೆಯಲ್ಲಿ ಮಾಹಿತಿ ನೀಡಿದೆ.

ಡಿಮ್ಯಾಟ್ ಖಾತೆದಾರರಿಗೆ ಗುಡ್ ನ್ಯೂಸ್; ನಾಮಿನಿ ಸೇರ್ಪಡೆ ಗಡುವು ಡಿ.31ಕ್ಕೆ ವಿಸ್ತರಣೆ

ಇನ್ನು ಮ್ಯೂಚುವಲ್ ಫಂಡ್ ಗಳನ್ನು ನಿರ್ವಹಣೆ ಮಾಡುವ ಅಸೆಟ್ ಮ್ಯಾನೇಜ್ ಮೆಂಟ್ ಕಂಪನಿಗಳು (ಎಎಂಸಿಎಸ್) ಹಾಗೂ ಆರ್ ಟಿಎಎಸ್ ತಮ್ಮ ಹೂಡಿಕೆದಾರರಿಗೆ ನಾಮಿನಿ ಹೆಸರಿಸಲು ಪ್ರೋತ್ಸಾಹ ನೀಡಬೇಕು. ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನೆರವು ನೀಡಬೇಕು. ಪ್ರತಿ 15 ದಿನಕ್ಕೊಮ್ಮೆ ಈ ಬಗ್ಗೆ ಇ-ಮೇಲ್ ಹಾಗೂ ಎಸ್ ಎಂಎಸ್ ಮೂಲಕ ಎಲ್ಲ ಹೂಡಿಕೆದಾರರಿಗೆ ನಾಮಿನಿ ಹೆಸರಿಸುವ ಬಗ್ಗೆ ನೆನಪಿಸುವ ಕಾರ್ಯ ಮಾಡುವಂತೆ ಸೆಬಿ ಕೋರಿದೆ. 

ಈ ಹಿಂದೆ ಅನೇಕ ಮ್ಯೂಚುವಲ್ ಫಂಡ್ ಗಳು ನಾಮಿನಿ ಇಲ್ಲದೆಯೇ ಫೋಲಿಯೋ (ಹೂಡಿಕೆ) ಖಾತೆಗಳನ್ನು ತೆರೆದಿದ್ದವು. ಅಲ್ಲದೆ, ಜಂಟಿಯಾಗಿ ಮ್ಯೂಚುವಲ್ ಫಂಡ್ ಖಾತೆ ತೆರೆದಿರೋರಲ್ಲಿ ಕೂಡ ಅನೇಕರು ನಾಮಿನಿ ಹೆಸರಿಸಿಲ್ಲ. ಹೀಗಾಗಿ ಸೆಬಿ ನಾಮಿನಿ ಸೇರ್ಪಡೆ ವಿಚಾರವನ್ನು ಕಡ್ಡಾಯಗೊಳಿಸಿತ್ತು. 

2022ರ ಜೂನ್ 15ರ ಸುತ್ತೋಲೆಯಲ್ಲಿ ಸೆಬಿ 2022ರ ಆಗಸ್ಟ್ 1ರಂದು ಅಥವಾ ಆ ಬಳಿಕ ನಾಮಿನಿ ಘೋಷಣೆ  ಅಥವಾ ಮಾಹಿತಿ ಸಲ್ಲಿಕೆ ಮಾಡೋದನ್ನು ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಕಡ್ಡಾಯಗೊಳಿಸಿತ್ತು. ಆದರೆ, ಆ ಬಳಿಕ ಗಡುವನ್ನು ಅನೇಕ ಬಾರಿ ವಿಸ್ತರಿಸುತ್ತ ಬಂದಿದೆ. 

ನಾಮಿನಿ ಸಲ್ಲಿಕೆ ಏಕೆ ಮುಖ್ಯ?
ಮ್ಯೂಚುವಲ್ ಫಂಡ್ ಹೂಡಿಕೆದಾರರು ನಾಮಿನಿ ಹೆಸರಿಸೋದು ಅತ್ಯಗತ್ಯ. ಏಕೆಂದರೆ ಇದರಿಂದ ಒಂದು ವೇಳೆ ಮ್ಯೂಚುವಲ್ ಫಂಡ್ ಹೂಡಿಕೆದಾರರು ಮರಣ ಹೊಂದಿದರೆ ಹಣ ಅವರ ಸೂಕ್ತ ವಾರಸುದಾರರಿಗೆ ಸಿಗುತ್ತದೆ. ಮ್ಯೂಚುವಲ್ ಫಂಡ್, ಬ್ಯಾಂಕ್ ಎಫ್ ಡಿ ಸೇರಿದಂತೆ ಪ್ರತಿ ಹೂಡಿಕೆಗೂ ಸೂಕ್ತ ನಾಮಿನಿಯನ್ನು ಹೆಸರಿಸೋದು ಅಗತ್ಯ. ಒಂದು ವೇಳೆ ನಾಮಿನಿಯನ್ನು ಹೆಸರಿಸದಿದ್ರೆ ಆ ಹಣವನ್ನು ಪಡೆಯಲು ಕುಟುಂಬ ಸದಸ್ಯರು ಸಾಕಷ್ಟು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಒಟ್ಟಾರೆ ಹಣ ಪಡೆಯುವ ಪ್ರಕ್ರಿಯೆ ಜಟಿಲವಾಗುತ್ತದೆ. 

ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಸೆ.30 ಅಂತಿಮ ಗಡುವು, ತಪ್ಪಿದ್ರೆ ಖಾತೆ ನಿಷ್ಕ್ರಿಯ

ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಗಡುವು ವಿಸ್ತರಣೆ
ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆಗೆ ನೀಡಿದ್ದ ಗಡುವನ್ನು ಸೆಬಿ ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿದ್ದು, ಡಿಸೆಂಬರ್ 31ರ ತನಕ ಕಾಲಾವಕಾಶ ನೀಡಿದೆ. ಈ ಹಿಂದೆ ನಾಮಿನಿ ಸೇರ್ಪಡೆಗೆ ಸೆ.30 ಅಂತಿಮ ಗಡುವಾಗಿತ್ತು. ಅಂತಿಮ ಗಡುವಿನೊಳಗೆ ನಾಮಿನಿ ಸೇರ್ಪಡೆ ಮಾಡದಿದ್ರೆ ಡಿಮ್ಯಾಟ್ ಖ್ಯಾತೆಯನ್ನು ನಿಷ್ಕ್ರಿಯಗೊಳಿಸೋದಾಗಿ ಸೆಬಿ ತಿಳಿಸಿತ್ತು. ಇದಕ್ಕೂ ಮುನ್ನ ನಾಮಿನಿ ಸೇರ್ಪಡೆಗೆ ಮಾ.31ರ ಗಡುವು ನೀಡಲಾಗಿತ್ತು. ಆದರೆ, ಸೆಬಿ ಆ ಬಳಿಕ ಈ ಗಡುವನ್ನು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಿತ್ತು. ಈಗ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!