ಅಫ್ಘಾನಿಸ್ತಾನದ ಕರೆನ್ಸಿಗೆ ಶಹಬ್ಬಾಸಗಿರಿ; ಜಗತ್ತಿನಲ್ಲೇ ಉತ್ತಮ ನಿರ್ವಹಣೆ ತೋರುತ್ತಿರುವ ಕರೆನ್ಸಿ ಎಂಬ ಬಿರುದು!

Published : Sep 28, 2023, 04:13 PM IST
ಅಫ್ಘಾನಿಸ್ತಾನದ ಕರೆನ್ಸಿಗೆ ಶಹಬ್ಬಾಸಗಿರಿ; ಜಗತ್ತಿನಲ್ಲೇ ಉತ್ತಮ ನಿರ್ವಹಣೆ ತೋರುತ್ತಿರುವ ಕರೆನ್ಸಿ ಎಂಬ ಬಿರುದು!

ಸಾರಾಂಶ

ಅಫ್ಘಾನಿಸ್ತಾನದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿರೋದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ, ಇಲ್ಲಿನ ಕರೆನ್ಸಿ ಮಾತ್ರ ಈ ಬಾರಿ ಜಗತ್ತಿನಲ್ಲಿ ಅತ್ಯುತ್ತಮ ನಿರ್ವಹಣೆ ತೋರುತ್ತಿರುವ ಕರೆನ್ಸಿ ಎಂದು ಗುರುತಿಸಿಕೊಂಡಿದೆ. ಇದಕ್ಕೇನು ಕಾರಣ ಗೊತ್ತಾ?   

ನವದೆಹಲಿ (ಸೆ.28): ಜಗತ್ತಿನಲ್ಲಿ ಅತ್ಯುತ್ತಮ ನಿರ್ವಹಣೆ ತೋರುತ್ತಿರುವ ಕರೆನ್ಸಿ ಯಾವುದು ಗೊತ್ತಾ? ತಿಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ತಾಲಿಬಾನಿಗಳ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದ ಕರೆನ್ಸಿ ಅಫ್ಘಾನಿ ಈ ತ್ರೈಮಾಸಿಕದಲ್ಲಿ ಜಗತ್ತಿನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಕರೆನ್ಸಿಯಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ತಿಳಿಸಿದೆ. ಈ ಅವಧಿಯಲ್ಲಿ ಅಫ್ಘಾನಿ ಕರೆನ್ಸಿ ಮೌಲ್ಯದಲ್ಲಿ ಶೇ.9ರಷ್ಟು ಏರಿಕೆ ಕಂಡುಬಂದಿದೆ. ಇದಕ್ಕೆ ಕಾರಣ ಮಾನವೀಯ ನೆಲೆಯಲ್ಲಿ ದೊರಕಿರುವ ಬಿಲಿಯನ್ ಡಾಲರ್ ನೆರವು ಹಾಗೂ ನೆರೆಯ ಏಷ್ಯಾದ ರಾಷ್ಟ್ರಗಳ ಜೊತೆಗೆ ಹೆಚ್ಚಿರುವ ವ್ಯಾಪಾರ. ಅಧಿಕಾರಕ್ಕೆ ಬಂದ ಎರಡು ವರ್ಷಗಳಿಂದ ತಾಲಿಬಾನಿಗಳು ಕರೆನ್ಸಿ ಮೇಲಿನ ತಮ್ಮ  ಹಿಡಿತವನ್ನು ಬಿಗಿಗೊಳಿಸಲು ಅನೇಕ ಕ್ರಮಗಳನ್ನು ಅನುಷ್ಠಾನಗೊಳಿಸಿವೆ. ಈ ಕ್ರಮಗಳಲ್ಲಿಸ್ಥಳೀಯ ವಹಿವಾಟುಗಳಲ್ಲಿ ಡಾಲರ್ ಹಾಗೂ ಪಾಕಿಸ್ತಾನಿ ರೂಪಾಯಿ ಬಳಕೆ ನಿರ್ಬಂಧ ಹಾಗೂ ದೇಶದಿಂದ ಯುಎಸ್ ಡಾಲರ್ ಹೊರಹೋಗದಂತೆ ಬಿಗಿಯಾದ ನಿರ್ಬಂಧಗಳನ್ನು ವಿಧಿಸಿರೋದು ಸೇರಿದೆ. ಅಲ್ಲದೆ, ಅಫ್ಘಾನಿಸ್ತಾನದಲ್ಲಿ ಆನ್ ಲೈನ್ ವಹಿವಾಟುಗಳನ್ನು ಅಪರಾಧ ಎಂದು ಪರಿಗಣಿಸಲಾಗಿದ್ದು, ಈ ನಿಯಮ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆಯ ಬೆದರಿಕೆಯನ್ನು ಕೂಡ ಹಾಕಲಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ಹೇಳಿದೆ.

ಅಫ್ಘಾನಿಸ್ತಾನದ ಕರೆನ್ಸಿ ಅದೆಷ್ಟೇ ಉತ್ತಮ ನಿರ್ವಹಣೆ ತೋರಿದ್ದರೂ ಬಡತನದಿಂದ ಕೂಡಿರುವ ರಾಷ್ಟ್ರವೇ ಆಗಿದ್ದು, ಅತ್ಯಂತ ಕಳಪೆ ಮಾನವ ಹಕ್ಕುಗಳ ದಾಖಲೆಗಳನ್ನೊಳಗೊಂಡಿದೆ. ಈ ನಡುವೆ  ಅಫ್ಘಾನಿ ಕಳೆದ ಒಂದು ವರ್ಷದಲ್ಲಿ ಶೇ.14ರಷ್ಟು ಏರಿಕೆ ಕಂಡಿದೆ. ಆ ಮೂಲಕ ಜಾಗತಿಕ ಕರೆನ್ಸಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಕೊಲಂಬಿಯಾ ಹಾಗೂ ಶ್ರೀಲಂಕಾದ ಕರೆನ್ಸಿಗಳಿಗಿಂತ ಹಿಂದಿದೆ. 

ಇನ್ನು ರಾತ್ರಿ ಹೊತ್ತಿನಲ್ಲೂ ಷೇರು ವಹಿವಾಟು?

ಅಂತಾರಾಷ್ಟ್ರೀಯ ನಿರ್ಬಂಧಗಳ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಆರ್ಥಿಕತೆ ಜಾಗತಿಕ ಹಣಕಾಸು ವ್ಯವಸ್ಥೆಯಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಟ್ಟಿದೆ. ಅಫ್ಘಾನಿಸ್ತಾನದಲ್ಲಿನ ಆರ್ಥಿಕ ದುಸ್ಥಿತಿಗಳ ಬಗ್ಗೆ ವಿಶ್ವ ಬ್ಯಾಂಕ್ ವರದಿಯೊಂದು ಬೆಳಕು ಚೆಲ್ಲಿದೆ. ಗಂಭೀರ ನಿರುದ್ಯೋಗ ಸಮಸ್ಯೆ, 2/3ರಷ್ಟು ಕುಟುಂಬಗಳು ಮೂಲ ಅಗತ್ಯಗಳಿಗೆ ತಡಕಾಡುವ ಪರಿಸ್ಥಿತಿ ಹಾಗೂ ಹಣದುಬ್ಬರ ಆರ್ಥಿಕ ಹಿಂಜರಿಕೆಗೆ ದಾರಿ ಮಾಡಿಕೊಟ್ಟಿರುವುದು ಈ ವರದಿಯಲ್ಲಿ ದಾಖಲಿಸಲಾಗಿರುವ ಅಫ್ಘಾನಿಸ್ತಾನದ ಪ್ರಮುಖ ಸಮಸ್ಯೆಗಳಾಗಿವೆ.

ಅಫ್ಘಾನಿಸ್ತಾನದಲ್ಲಿನ ಬಡಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ನಿರಂತರವಾಗಿ ನೆರವನ್ನು ಒದಗಿಸುತ್ತ ಬಂದಿದೆ. ಯುಎಸ್ ಡಾಲರ್ ಲೆಕ್ಕದಲ್ಲಿ ಸಹಾಯಹಸ್ತ ಚಾಚುತ್ತ ಬಂದಿದೆ. ಒಟ್ಟಿಗೆ 40 ಮಿಲಿಯನ್ ಡಾಲರ್ ತನಕ ನೆರವು ನೀಡಿದ್ದು, 2021ರ ಕೊನೆಯ ತನಕ ಕನಿಷ್ಠ 18 ತಿಂಗಳಿಗೆ ಸಾಕಾಗುವಷ್ಟು ನೆರವು ನೀಡುತ್ತಿದೆ. 

ಇನ್ನು ಅಫ್ಘಾನಿಸ್ತಾನದಲ್ಲಿ ವಿದೇಶಿ ಕರೆನ್ಸಿಗಳ ವಿನಿಮಯಕ್ಕೆ ನಗರಗಳು ಹಾಗೂ ಹಳ್ಳಿಗಳಲ್ಲಿ ಸ್ಟೋರ್ ಗಳಿದ್ದು, ಇಲ್ಲಿ ಮಾಡಲಾಗುತ್ತದೆ. ಕರೆನ್ಸಿ ವಿನಿಮಯ ಮಾಡಿಕೊಡುವವರಿಗೆ 'ಶರ್ರಫ್' ಎಂದು ಕರೆಯಲಾಗುತ್ತದೆ. ಕಾಬೂಲ್ ಸರೈ ಶಹ್ಜದ ಮಾರುಕಟ್ಟೆಗಳಲ್ಲಿ ಮಿಲಿಯನ್ ಗಟ್ಟಲೆ ಡಾಲರ್ ಗಳನ್ನು ಮುಕ್ತವಾಗಿ ವಿನಿಮಯ ಮಾಡಲಾಗುತ್ತದೆ. ಬೇರೆ ರಾಷ್ಟ್ರಗಳಂತೆ ಇಲ್ಲಿ ವಿದೇಶಿ ಕರೆನ್ಸಿಗಳ ವಿನಿಮಯಕ್ಕೆ ಯಾವುದೇ ನಿರ್ಬಂಧಗಳಿಲ್ಲ.

ಒಂದೇ ದಿನದಲ್ಲಿ 90 ಕೋಟಿಗೂ ಅಧಿಕ ಲಾಭ ಗಳಿಸಿದ ರಾಕೇಶ್‌ ಜುಂಜುನ್ವಾಲಾ ಪತ್ನಿ: ನಿಮ್ಮ ಬಳಿಯೂ ಇದ್ಯಾ ಈ ಸ್ಟಾಕ್?

ಅಂತಾರಾಷ್ಟ್ರೀಯ ಹಣಕಾಸಿನ ನಿರ್ಬಂಧ ಹೇರಿಕೆಯ ಪರಿಣಾಮ ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಎಲ್ಲ ಹಣದ ವಹಿವಾಟುಗಳು ಹವಾಲಾ ಹಣ ವರ್ಗಾವಣೆ ವ್ಯವಸ್ಥೆಯನ್ನೇ ಅವಲಂಬಿಸಿವೆ. ಶರ್ರಫ್ ಉದ್ಯಮ ಕೂಡ ಈ ವ್ಯವಸ್ಥೆಯನ್ನೇ ಆಶ್ರಯಿಸಿದೆ. ಈ ವರ್ಷ ಅಫ್ಘಾನಿಸ್ತಾನಕ್ಕೆ ಸುಮಾರು 3.2 ಬಿಲಿಯನ್ ಡಾಲರ್ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಆದರೆ, ಕೇವಲ 1.1 ಬಿಲಿಯನ್ ಡಾಲರ್ ಮಾತ್ರ ನೀಡಲಾಗಿದೆ. ಕಳೆದ ವರ್ಷ ವಿಶ್ವಸಂಸ್ಥೆ ಅಫ್ಘಾನಿಸ್ತಾನಕ್ಕೆ 4 ಬಿಲಿಯನ್ ಡಾಲರ್ ಹಣಕಾಸಿನ ನೆರವು ನೀಡಿತ್ತು. ಇದಕ್ಕೆ ಕಾರಣ ಅಲ್ಲಿನ ಸುಮಾರು 41 ಮಿಲಿಯನ್ ಜನರು ಹಸಿವಿನ ಭಯದಿಂದ ಬದುಕುತ್ತಿದ್ದಾರೆ ಎಂದು ಹೇಳಲಾಗಿತ್ತು. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!