*ಸತತ ನಾಲ್ಕನೇ ಬಾರಿ RBI ಗರಿಷ್ಠ ಸಹನಾ ಮಟ್ಟ ಮೀರಿದ ಚಿಲ್ಲರೆ ಹಣದುಬ್ಬರ
*ಏಪ್ರಿಲ್ ನಲ್ಲಿ ಆಹಾರ ಹಣದುಬ್ಬರ ಶೇ.8.38ಕ್ಕೆ ಏರಿಕೆ
*ನಗರಕ್ಕಿಂತ ಗ್ರಾಮೀಣ ಭಾಗದಲ್ಲೇ ಹಣದುಬ್ಬರ ಹೆಚ್ಚು
ನವದೆಹಲಿ (ಮೇ 12): ಭಾರತದ ಚಿಲ್ಲರೆ (Retail) ಹಣದುಬ್ಬರ (Inflation) ಏಪ್ರಿಲ್ (April) ತಿಂಗಳಲ್ಲಿ 8 ವರ್ಷಗಳ ಗರಿಷ್ಠ ಮಟ್ಟ ಶೇ.7.79 ಏರಿಕೆಯಾಗಿದೆ. ಈ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರೋ ಶೇ.6ರ ಗರಿಷ್ಠ ಸಹನಾ ಮಟ್ಟವನ್ನು (Tolerance level) ಸತತ ನಾಲ್ಕನೇ ಬಾರಿ ಮೀರಿದೆ ಎಂದು ಕೇಂದ್ರ ಸರ್ಕಾರ (Central Government) ಗುರುವಾರ ಬಿಡುಗಡೆಗೊಳಿಸಿದ ಅಂಕಿಅಂಶಗಳು ಸ್ಪಷ್ಟಪಡಿಸಿವೆ.
ಅಡುಗೆ ಎಣ್ಣೆ ಬೆಲೆ ಹಾಗೂ ಇಂಧನಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿರುವುದೇ ಚಿಲ್ಲರೆ ಹಣದುಬ್ಬರ ಏರಿಕೆಗೆ ಕಾರಣ ಎಂದು ಹೇಳಲಾಗಿದೆ. ಚಿಲ್ಲರೆ ಹಣದುಬ್ಬರ (Retail Inflation) ಏರಿಕೆಗೆ ಕಾರಣವಾಗಿರುವ ಆಹಾರ ಹಣದುಬ್ಬರ (Food inflation) ಶೇ.8.38ಕ್ಕೆ ಏರಿಕೆ ದಾಖಲಿಸಿದ್ದು, ಇದು ಈ ಹಣಕಾಸು ಸಾಲಿನಲ್ಲೇ ಈ ತನಕದ ಅತ್ಯಧಿಕ ಏರಿಕೆಯಾಗಿದೆ. ಕಳೆದ ತಿಂಗಳು ಅಂದ್ರೆ ಮಾರ್ಚ್ ನಲ್ಲಿ ಆಹಾರ ಹಣದುಬ್ಬರ ಶೇ.7.68ರಷ್ಟಿತ್ತು. 2021ರಲ್ಲಿ ಆಹಾರ ಹಣದುಬ್ಬರ ಶೇ.1.96ರಷ್ಟಿತ್ತು. ಅಂದ್ರೆ ಕೇವಲ ಒಂದು ವರ್ಷದ ಅವಧಿಯಲ್ಲಿ ಆಹಾರ ಹಣದುಬ್ಬರ ತೀವ್ರ ಗತಿಯ ಏರಿಕೆ ದಾಖಲಿಸಿದೆ.
ಸತತ 4 ತಿಂಗಳಿಂದ ಗ್ರಾಹಕ ದರ ಸೂಚ್ಯಂಕ (CPI) ಆಧಾರಿತ ಹಣದುಬ್ಬರ (Inflation) ಏರಿಕೆಯಾಗುತ್ತಿದ್ದು, ಆರ್ ಬಿಐ ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟವನ್ನು ಮೀರಿದೆ. ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.95ಕ್ಕೆ ಏರಿಕೆಯಾಗಿದ್ರೆ, ಫೆಬ್ರವರಿಯಲ್ಲಿ ಶೇ.6.07ಕ್ಕೆ ಹೆಚ್ಚಳವಾಗಿತ್ತು.
ಇನ್ನು ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲೇ ಹಣದುಬ್ಬರ ಹೆಚ್ಚಿದೆ. ಏಪ್ರಿಲ್ ತಿಂಗಳಲ್ಲಿ ಗ್ರಾಮೀಣ ಹಣದುಬ್ಬರ ಶೇ.8.38ಕ್ಕೆ ಏರಿಕೆಯಾಗಿದೆ. ಮಾರ್ಚ್ ನಲ್ಲಿ ಇದು ಶೇ. 7.66ರಷ್ಟಿತ್ತು. ಇನ್ನು ಕಳೆದ ವರ್ಷ ಅಂದ್ರೆ 2021ರ ಏಪ್ರಿಲ್ ನಲ್ಲಿ ಶೇ.3.75ರಷ್ಟಿತ್ತು. ಇನ್ನು ನಗರ ಹಣದುಬ್ಬರ ಮಾರ್ಚ್ ನಲ್ಲಿ ಶೇ.6.12ರಷ್ಟಿದ್ದರೆ, ಏಪ್ರಿಲ್ ನಲ್ಲಿ ಶೇ. 7.09ಕ್ಕೆ ಏರಿಕೆಯಾಗಿದೆ. 2021ರ ಏಪ್ರಿಲ್ ನಲ್ಲಿ ಶೇ.4.71ರಷ್ಟಿತ್ತು.
ಹಣದುಬ್ಬರ ಗರಿಷ್ಠ ಮಿತಿ ಎಷ್ಟು?
ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿಲ್ಲರೆ ಹಣದುಬ್ಬರ ಸಹನಾ ಮಿತಿಯನ್ನು ಶೇ.4ಕ್ಕೆ ನಿಗದಿಪಡಿಸಿದ್ದು, ಉಭಯ ಕಡೆ ಶೇ.2ರಷ್ಟು ಮಾರ್ಜಿನ್ ನೀಡಿದೆ. ಹೀಗಾಗಿ ಹಣದುಬ್ಬರದ ಗರಿಷ್ಠ ಮಿತಿ ಶೇ.6 ಎಂದು ಹೇಳಬಹುದು.
ನಿತ್ಯ ಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಗೋಧಿ ಹಿಟ್ಟು, ತರಕಾರಿಗಳು, ಎಲ್ ಪಿಜಿ ಗ್ಯಾಸ್ ಸಿಲಿಂಡರ್, ಬ್ರೆಡ್, ಬಿಸ್ಕೆಟ್ ಹೀಗೆ ಪ್ರತಿ ಅಗ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನರು ತತ್ತರಿಸಿದ್ದಾರೆ. ಅಷ್ಟೇ ಅಲ್ಲ, ತಿಂಗಳ ಆದಾಯದಲ್ಲಿ ಕುಟುಂಬದ ನಿರ್ವಹಣ ವೆಚ್ಚವನ್ನು ಸರಿದೂಗಿಸಲು ಟೂಥ್ ಪೇಸ್ಟ್ ನಿಂದ ಹಿಡಿದು ಸೋಪ್ ಗಳ ತನಕ ಪ್ರತಿ ವಸ್ತುಗಳ ಖರೀದಿಯನ್ನು ಕಡಿಮೆ ಮಾಡಿದ್ದಾರೆ. ಜಾಗರೂಕತೆಯಿಂದ ನಿತ್ಯ ವಸ್ತುಗಳನ್ನು ಬಳಸುವ ಮೂಲಕ ವೆಚ್ಚ ಕುಟುಂಬದ ನಿರ್ವಹಣಾ ವೆಚ್ಚ ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ.
ಚಿಲ್ಲರೆ ಹಣದುಬ್ಬರ ಏರಿಕೆ ಆರ್ ಬಿಐ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದ್ದು, ಹಣದುಬ್ಬರ ನಿಯಂತ್ರಣಕ್ಕೆ ಕಠಿಣ ಕ್ರಮಗಳ ಜಾರಿಗೆ ಕ್ರಮ ಕೈಗೊಳ್ಳುವಂತೆ ಮಾಡಿದೆ.
ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ, ಜನಸಾಮಾನ್ಯರ ಜೀವನದ ಮೇಲೆ ಉಂಟಾಗುವ ಪರಿಣಾಮವೇನು ?
ಕಳೆದ ವಾರವಷ್ಟೇ ಆರ್ ಬಿಐ ಹಣಕಾಸು ನೀತಿ ಸಮಿತಿ (MPC) ತುರ್ತುಸಭೆ ನಡೆಸಿ ರೆಪೋದರವನ್ನು 40 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸುವ ಮೂಲಕ ಶೇ.4ರಿಂದ ಶೇ.4.40 ಏರಿಕೆ ಮಾಡಿತ್ತು. ಹಾಗೆಯೇ ನಗದು ಮೀಸಲು ಅನುಪಾತವನ್ನು (Cash Reserve Ratio) 50 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆ ಮಾಡುವ ಮೂಲಕ ಶೇ.4.50 ಕ್ಕೆ ನಿಗದಿಪಡಿಸಲಾಗಿದೆ. ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ನಿಗದಿತ ಸಹನಾ ಮಟ್ಟ ಮೀರಿರುವ ಹಿನ್ನೆಲೆಯಲ್ಲಿ ರೆಪೋದರ ಏರಿಕೆ ಮಾಡುತ್ತಿರುವುದಾಗಿಯೂ ಆರ್ ಬಿಐ ತಿಳಿಸಿತ್ತು.