* ಇಂಡೋನೇಷಿಯಾ ಪಾಮ್ ಆಯಿಲ್ ಮೇಲಿನ ರಫ್ತು ನಿರ್ಬಂಧ ತೆರವು ಹಿನ್ನೆಲೆ
* ಪಾಮ್ ಆಯಿಲ್ ಬೆಲೆ 15 ದಿನದಲ್ಲಿ ಕೆಜಿಗೆ 30- 40 ಅಗ್ಗ
* ಕೆಜಿಗೆ 180 ಇದ್ದಿದ್ದು ಇದೀಗ 140ಕ್ಕೆ ಇಳಿಕೆ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜು.07): ಇಂಡೋನೇಷಿಯಾ ಪಾಮ್ ಆಯಿಲ್ ರಫ್ತಿಗೆ ವಿಧಿಸಿದ್ದ ನಿರ್ಬಂಧ ತೆರವು ಮಾಡಿರುವ ಹಿನ್ನೆಲೆ ತಾಳೆ ಎಣ್ಣೆ ದರ ದಿನೇ ದಿನೇ ಇಳಿಯುತ್ತಿದ್ದು, ಕಳೆದ 15 ದಿನಗಳಲ್ಲಿ ಪ್ರತಿ ಕೆಜಿಗೆ 40 ಕಡಿಮೆಯಾಗಿದೆ. ಅಲ್ಲದೇ ಉಳಿದ ಅಡುಗೆ ಎಣ್ಣೆ (ಸೂರ್ಯಕಾಂತಿ, ಶೇಂಗಾ)ಯ ಬೆಲೆಯೂ ನಿಧಾನಕ್ಕೆ ಇಳಿಯುವ ಸಾಧ್ಯತೆ ಇದೆ.
undefined
ಕೋವಿಡ್ ಸಂಕಷ್ಟದ ಪರಿಣಾಮ ಮತ್ತು ಉಕ್ರೇನ್ ಯುದ್ಧದಿಂದಾಗಿ ಅಡುಗೆ ಎಣ್ಣೆ ಬೆಲೆ ಗಗನಮುಖಿಯಾಗಿತ್ತು. ಶೇಂಗಾ ಮತ್ತು ಸೂರ್ಯಕಾಂತಿ ಎಣ್ಣೆಗೆ ಪೈಪೋಟಿ ಮಾಡುವಷ್ಟರ ಮಟ್ಟಿಗೆ ಪಾಮ್ ಆಯಿಲ್ ದುಬಾರಿಯಾಗಿತ್ತು. ಕೆಲವೊಂದು ಬಾರಿ ಶೇಂಗಾ ಎಣ್ಣೆಯ ದರಕ್ಕೇ ಮಾರಿದ್ದುಂಟು.
Edible Oil Price:ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ಇಳಿಕೆ; ಲೀಟರ್ ಗೆ 10ರೂ. ತಗ್ಗಿಸಿದ ಅದಾನಿ ವಿಲ್ಮರ್
ಅಡುಗೆ ಎಣ್ಣೆ ಬೆಲೆ ಹೆಚ್ಚಳ ಇತರೆ ಬೆಲೆಗಳ ಹೆಚ್ಚಳಕ್ಕೂ ಕಾರಣವಾಗಿತ್ತು. ಹೋಟೆಲ್‌ನಲ್ಲಿ ತಿಂಡಿ, ತಿನಿಸು ದುಬಾರಿಯಾಗುವುದಕ್ಕೂ ಪರೋಕ್ಷವಾಗಿ ಕಾರಣವಾಗಿತ್ತು. ಇಂಡೋನೇಷಿಯಾ ಹಣದುಬ್ಬರವನ್ನು ತಗ್ಗಿಸಲು ಪಾಮ್ ಆಯಿಲ್ ರಫ್ತಿಗೆ ನಿರ್ಬಂಧ ಹೇರಿತು. ಭಾರತ ಪಾಮ್ ಆಯಿಲ್‌ಗೆ ಅವಲಂಬನೆ ಆಗಿರುವುದೇ ಇಂಡೋನೇಷಿಯಾ ಮತ್ತು ಮಲೇಷಿಯಾದಿಂದ. ಹೀಗಾಗಿ ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಸೃಷ್ಟಿಯಾಗಿ ಕಳೆದೊಂದು ವರ್ಷದಿಂದ ಅಡುಗೆ ತೈಲ ಬೆಲೆ ಏರಿಕೆಗೆ ಕಾರಣವಾಯಿತು. ಪಾಮ್ ಆಯಿಲ್ ದರ ಹೆಚ್ಚಳವಾಗುತ್ತಿದ್ದಂತೆ ಶೇಂಗಾ ಎಣ್ಣೆಯ ದರವೂ ಏರಿಕೆಯಾಗಿತ್ತು. ಅದರಲ್ಲೂ ಉಕ್ರೇನ್ ಯುದ್ಧದಿಂದಾಗಿ ಸೂರ್ಯಕಾಂತಿ ಎಣ್ಣೆಯ ಅಭಾವವೂ ಸೃಷ್ಟಿಯಾಯಿತು.
ಇಳಿಕೆ ಶುರು:
ಇಂಡೋನೇಷಿಯಾ ಪಾಮ್ ಆಯಿಲ್ ಮೇಲಿನ ರಫ್ತು ನಿರ್ಬಂಧ ಸಡಿಲಿಕೆ ಮಾಡುತ್ತಿದ್ದಂತೆ ಕಳೆದೊಂದು ತಿಂಗಳಿಂದ ತಾಳೆಎಣ್ಣೆ ದರ ಇಳಿಯುತ್ತಲೇ ಇದೆ. ಈಗಾಗಲೇ ಪ್ರತಿ ಕೆಜಿಗೆ .180 ರುಪಾಯಿ ಇದ್ದಿದ್ದು ಇದೀಗ .140 ಆಸುಪಾಸು ಇದ್ದು, ಇನ್ನೂ ಇಳಿಯುವ ಸಾಧ್ಯತೆ ಇದೆ. ಹಾಗೆ ನೋಡಿದರೆ 4 ವರ್ಷಗಳ ಹಿಂದೆ ಪಾಮ್ ಆಯಿಲ್ ದರ ಇದ್ದಿದ್ದೇ ಪ್ರತಿ ಕೆಜಿಗೆ ಕೇವಲ .70- 80. ಆದರೆ, ಅದು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಾ ಕಳೆದ ವರ್ಷ ಆಕಾಶದೆತ್ತರಕ್ಕೆ ಹೋಗಿತ್ತು. ಆದರೆ, ಇದೀಗ ದರ ಪುನಃ ತಗ್ಗಲು ಪ್ರಾರಂಭವಾಗಿದೆ.
Edible Oil Price:ಗೃಹಿಣಿಯರಿಗೆ ಸಿಹಿ ಸುದ್ದಿ; ಅಡುಗೆ ಎಣ್ಣೆ ಬೆಲೆ ಲೀಟರ್ ಗೆ 15ರೂ. ಇಳಿಕೆ
ಶೇಂಗಾ ಎಣ್ಣೆ ಪರ್ಯಾಯ
ಪಾಮ್ ಆಯಿಲ್ ದರ ವಿಪರೀತ ಏರಿಕೆಯಾಗಿದ್ದರಿಂದ ಜನರು ಶೇಂಗಾ ಎಣ್ಣೆಯತ್ತ ವಾಲಿದ್ದರು. ಆದರೆ, ಈಗ ಪಾಮ್ ಆಯಿಲ್ ದರಕ್ಕೂ ಮತ್ತು ಶೇಂಗಾ ಎಣ್ಣೆ ದರಕ್ಕೂ ಪ್ರತಿ ಕೆಜಿಗೆ ಸುಮಾರು .40- 50 ವ್ಯತ್ಯಾಸವಿದೆ. ಹೀಗಾಗಿ ಶೇಂಗಾ ಎಣ್ಣೆಯ ಬಳಕೆಗಿಂತ ಪಾಮ್ ಆಯಿಲ್ ಬಳಕೆಯೇ ಅಧಿಕವಾಗುತ್ತಿದೆ. ಇದರಿಂದ ಸಹಜವಾಗಿಯೇ ಶೇಂಗಾ ಎಣ್ಣೆ ದರವೂ ಶೀಘ್ರದಲ್ಲಿಯೇ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ.
ಇಂಡೋನೇಷಿಯಾ ರಫ್ತು ನಿರ್ಬಂಧ ತೆರವು ಮಾಡಿದ್ದರಿಂದ ಪಾಮ್ ಆಯಿಲ್ ದರ ಕಡಿಮೆಯಾಗುತ್ತಿದೆ. ಇನ್ನು ಇಳಿಯುವ ಸಾಧ್ಯತೆ ಇದೆ. ಇದರಿಂದ ಸಹಜವಾಗಿಯೇ ಅಡುಗೆ ಎಣ್ಣೆ ಬಳಕೆ ಮಾಡುವವರು ಪಾಮ್ ಆಯಿಲ್‌ಗೆ ಮುಗಿಬೀಳುವುದರಿಂದ ಇತರೆ ಅಡುಗೆ ಎಣ್ಣೆಯ ಬೆಲೆ ಸ್ವಲ್ಪ ತಗ್ಗಲಿದೆ ಅಂತ ಅಡುಗೆ ಎಣ್ಣೆ ಸಗಟು ವ್ಯಾಪಾರಿ ಪ್ರಭುದೇವ ತೆಂಗಿನಕಾಯಿ ತಿಳಿಸಿದ್ದಾರೆ.