ಏಷ್ಯಾದಲ್ಲೇ ಪಾಕಿಸ್ತಾನ ಅತ್ಯಂತ ದುಬಾರಿ ರಾಷ್ಟ್ರ,ಇಲ್ಲಿ ಜೀವನ ನಿರ್ವಹಣೆ ಬಲುಕಷ್ಟ; ಎಡಿಬಿ ವರದಿ

By Suvarna NewsFirst Published Apr 13, 2024, 5:30 PM IST
Highlights

ಜೀವನ ನಿರ್ವಹಣೆಗೆ ಪಾಕಿಸ್ತಾನ ಏಷ್ಯಾದಲ್ಲೇ ಅತ್ಯಂತ ದುಬಾರಿ ರಾಷ್ಟ್ರವಾಗಿದೆ. ಇಲ್ಲಿ ಹಣದುಬ್ಬರ ಕೂಡ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಎಡಿಬಿ ವರದಿ ತಿಳಿಸಿದೆ. 
 

ನವದೆಹಲಿ (ಏ.13):  ಇಡೀ ಏಷ್ಯಾದಲ್ಲೇ ಜೀವನ ನಿರ್ವಹಣೆಗೆ ಅತ್ಯಂತ ದುಬಾರಿ ದೇಶ ಪಾಕಿಸ್ತಾನ ಎಂದು ಏಷಿಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ವರದಿ ಬಹಿರಂಗಪಡಿಸಿದೆ. ಪಾಕಿಸ್ತಾನದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಸಂಕಷ್ಟದಿಂದ ಅಲ್ಲಿನ ಜನರಿಗೆ ಜೀವನ ನಿರ್ವಹಣೆ ದುಬಾರಿಯಾಗಿದೆ. ಹಣದುಬ್ಬರ ದರ ಶೇ.25ರಲ್ಲಿದೆ ಎಂದು ವರದಿ ತಿಳಿಸಿದೆ. ಜಾಗತಿಕ ಹಣಕಾಸು ಸಂಸ್ಥೆ ಮನಿಲಾದಲ್ಲಿ ಈ ವರದಿಯನ್ನು ಗುರುವಾರ ಬಿಡುಗಡೆಗೊಳಿಸಿತ್ತು. ಹಾಗೆಯೇ ಎಡಿಬಿ ಪಾಕಿಸ್ತಾನದ ಆರ್ಥಿಕತೆ ಬೆಳವಣಿಗೆ ದರವನ್ನು ಶೇ.1.9ಕ್ಕೆ ಅಂದಾಜಿಸಿದೆ. ಇದು ಏಷ್ಯಾದಲ್ಲೇ ನಾಲ್ಕನೇ ಅತೀಕಡಿಮೆ ಬೆಳವಣಿಗೆ ದರವಾಗಿದೆ. ಇನ್ನು ಎಡಿಬಿ ವರದಿಯಲ್ಲಿ ಪ್ರಸ್ತಾಪಿಸಿರುವ ಪಾಕಿಸ್ತಾನದ ಆರ್ಥಿಕತೆಯ ನೋಟದಲ್ಲಿ ಮುಂದಿನ ಹಣಕಾಸು ಸಾಲಿಗೆ ಶೇ.15ರಷ್ಟು ಹಣದುಬ್ಬರ ದರವನ್ನು ಅಂದಾಜಿಸಿದೆ. ಇದು ಈ ಭಾಗದ 46 ರಾಷ್ಟ್ರಗಳಲ್ಲಿ ಅತೀಹೆಚ್ಚಿನ ಹಣದುಬ್ಬರ ದರವಾಗಿದೆ. ಇನ್ನು ಈ ವರದಿ 2024-25ನೇ ಹಣಕಾಸು ಸಾಲಿಗೆ ಶೇ.2.8ರಷ್ಟು ಬೆಳವಣಿಗೆ ದರವನ್ನು ಅಂದಾಜಿಸಿದೆ. ಈ ಮೂಲಕ ಈ ಭಾಗದಲ್ಲೇ ಐದನೇ ಅತೀಕಡಿಮೆ ಬೆಳವಣಿಗೆ ದರವಾಗಿದೆ.

ಇನ್ನು ಎಡಿಬಿ ಪ್ರಕಾರ ಪಾಕಿಸ್ತಾನದಲ್ಲಿನ ಜೀವನ ನಿರ್ವಹಣೆ ವೆಚ್ಚ ಇಡೀ ದಕ್ಷಿಣ ಏಷ್ಯಾದಲ್ಲಿ ಅತ್ಯಧಿಕವಾಗಿದೆ. ಇನ್ನು 2025ನೇ ಹಣಕಾಸು ಸಾಲಿನಲ್ಲಿ ಅಂದಾಜು ಹಣದುಬ್ಬರ ದರ ಶೇ.25ರಷ್ಟಿದ್ದು, ಇದು ಇಡೀ ಏಷ್ಯಾದಲ್ಲೇ ಜೀವನ ಸಾಗಿಸಲು ಅತ್ಯಂತ ದುಬಾರಿ ರಾಷ್ಟ್ರವಾಗಿದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ (ಎಸ್ ಡಿಬಿ) ಶೇ.21ರಷ್ಟು ಹಣದುಬ್ಬರ ಗುರಿಯನ್ನು ತಪ್ಪಲಿದೆ. ಸರ್ಕಾರ ಶೇ.22ರಷ್ಟು ಬಡ್ಡಿದರ ವಿಧಿಸಿದ್ದರೂ ಈ ಹಣದುಬ್ಬರ ದರ ತಲುಪಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ. 

ಪಾಕಿಸ್ತಾನದಲ್ಲಿ ಸರ್ಕಾರಕ್ಕಿಂತ ಮಿಲಿಟರಿಯೇ ಪವರ್ ಫುಲ್ ಯಾಕೆ..?

2025ನೇ ಹಣಕಾಸು ಸಾಲಿನಲ್ಲಿ ಶೇ.1.9ರಷ್ಟು ಬೆಳವಣಿಗೆ ದರದ ಮೂಲಕ ಪಾಕಿಸ್ತಾನ ನಾಲ್ಕನೇ ಅತೀಕಡಿಮೆ ಬೆಳವಣಿಗೆ ದಾಖಲಿಸಿದ ರಾಷ್ಟ್ರವಾಗಲಿದೆ. ಇದಕ್ಕಿಂತ ಮುಂದಿನ ಮೂರು ಸ್ಥಾನಗಳಲ್ಲಿ ಮಯನ್ಮಾರ್, ಅಝರ್ಬೈಜಾನ್ ಹಾಗೂ ನೌರು ಎಂಬ ರಾಷ್ಟ್ರಗಳಿವೆ ಎಂದು ವರದಿ ತಿಳಿಸಿದೆ. ಇನ್ನು ಪಾಕಿಸ್ತಾನದಲ್ಲಿ 10 ಮಿಲಿಯನ್ ಗಿಂತ ಹೆಚ್ಚು ಜನರು ಬಡತನಕ್ಕೆ ತುತ್ತಾಗಲಿದ್ದಾರೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ 98 ಮಿಲಿಯನ್ ಜನರು ಬಡತನದಲ್ಲಿದ್ದಾರೆ. 

ಇನ್ನು ಈ ವರದಿ ಪ್ರಕಾರ ಪಾಕಿಸ್ತಾನ ಪ್ರಮುಖ ಹಣಕಾಸಿನ ಅಗತ್ಯಗಳು ಹಾಗೂ ಹಳೆಯ ಸಾಲದಿಂದ ಅನೇಕ ಸವಾಲುಗಳನ್ನು ಎದುರಿಸಲಿದೆ. ಇನ್ನು ರಾಜಕೀಯ ಅಸ್ಥಿರತೆ ಕೂಡ ಸುಧಾರಣೆಯ ಪ್ರಯತ್ನಗಳಿಗೆ ದೊಡ್ಡ ಸವಾಲಾಗಲಿದೆ ಎಂದು ವರದಿ ತಿಳಿಸಿದೆ. 

ಪಾಕಿಸ್ತಾನದ ಆರ್ಥಿಕತೆ ಹಲವಾರು ಸವಾಲುಗಳ ನಡುವೆ ಹೆಣಗಾಡುತ್ತಿದೆ. 2022ನೇ ಹಣಕಾಸು ಸಾಲಿನಲ್ಲಿ ಶೇ. 6.1 ಹಾಗೂ 2021ನೇ ಸಾಲಿನಲ್ಲಿ ಶೇ.5.8ರಷ್ಟು ಬೆಳವಣಿಗೆ ದಾಖಲಿಸಿದೆ. 2023ನೇ ಹಣಕಾಸು ಸಾಲಿನಲ್ಲಿ ಪಾಕಿಸ್ತಾನದ ಆರ್ಥಿಕತೆ ಸಂಕೋಚಿತಗೊಂಡಿದೆ. ಇದಕ್ಕೆ ಕಾರಣ ಪ್ರವಾಹದಿಂದ ಸೃಷ್ಟಿಯಾದ ಗಣನೀಯ ಪ್ರಮಾಣದ ಹಾನಿ. ಇದರಿಂದ ಆ ರಾಷ್ಟ್ರ ಶತಕೋಟಿ ಡಾಲರ್ ಗಳಷ್ಟು ನಷ್ಟ ಅನುಭವಿಸಿದೆ. 

ಸಾಲದ ಸೀರೆಯುಟ್ಟ ಬೆಗ್ಗರ್‌ಸ್ತಾನ: ಪಾಕಿಸ್ತಾನದಲ್ಲಿ ಆರ್ಥಿಕತೆಯ ಅಂತಿಮ ಯಾತ್ರೆ..!

ಇನ್ನು ಪಾಕಿಸ್ತಾನದ ಬಾಹ್ಯ ಸಾಲದ ಹೊರೆ ಕೂಡ ಹೆಚ್ಚಿದೆ. ಇದು 125 ಬಿಲಿಯನ್ ಡಾಲರ್ ತಲುಪಿದೆ. ಇನ್ನು 25 ಬಿಲಿಯನ್ ಡಾಲರ್ ಬಾಹ್ಯ ಸಾಲವನ್ನು ತೀರಿಸಲೇಬೇಕಾದಂತಹ ಸಂಕಷ್ಟಕ್ಕೆ ಕೂಡ ಸಿಲುಕಿದೆ. ಪಾಕಿಸ್ತಾನದ ಜೊತೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 3 ಬಿಲಿಯನ್ ಡಾಲರ್ ಕಾರ್ಯಕ್ರಮ ಮಾರ್ಚ್ ನಲ್ಲಿ ಮುಗಿಯಲಿದೆ. ಈ ಕಾರ್ಯಕ್ರಮವನ್ನು ದೇಶದ ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸಲು ಬೆಂಬಲ ನೀಡುವ ನಿರ್ಣಾಯಕ ಮೂಲವಾಗುವಂತೆ ರೂಪಿಸಲಾಗಿತ್ತು.  ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ 8 ಬಿಲಿಯನ್ ಡಾಲರ್ ನಲ್ಲಿದ್ದು, ತನ್ನ ಹಣಕಾಸಿನ ಆಯಾಮವನ್ನು ಜಾಗರೂಕತೆಯಿಂದ ಬದಲಾಯಿಸಬೇಕಾದಂತಹ ಅನಿವಾರ್ಯತೆಯಲ್ಲಿ ಸಿಲುಕಿದೆ.

click me!