NPS ಹೂಡಿಕೆ ಈಗ ಇನ್ನಷ್ಟು ಸರಳ; ಕ್ಯುಆರ್ ಕೋಡ್ ಬಳಸಿ ಕೊಡುಗೆಗೆ ಅವಕಾಶ

Published : Dec 22, 2023, 02:27 PM IST
NPS ಹೂಡಿಕೆ ಈಗ ಇನ್ನಷ್ಟು ಸರಳ; ಕ್ಯುಆರ್ ಕೋಡ್ ಬಳಸಿ ಕೊಡುಗೆಗೆ ಅವಕಾಶ

ಸಾರಾಂಶ

ಎನ್ ಪಿಎಸ್ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆ ಈಗ ಮತ್ತಷ್ಟು ಸರಳಗೊಂಡಿದೆ. ಯುಪಿಐ ಕ್ಯುಆರ್ ಕೋಡ್ ಬಳಸಿಕೊಂಡು ಈ ಖಾತೆಗೆ ಹಣ ಜಮೆ ಮಾಡಬಹುದು.   

Business Desk: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ ಪಿಎಸ್) ಚಂದಾದಾರರಿಗೆ ಶುಭ ಸುದ್ದಿಯೊಂದು ಇದೆ. ಈಗ ನಿಮ್ಮ ಎನ್ ಪಿಎಸ್ ಖಾತೆಗೆ ಹಣ ಜಮೆ ಮಾಡೋದು ಸರಳವಾಗಿದೆ. ಅಂದ್ರೆ ನೀವು ಯುಪಿಐ ಕ್ಯುಆರ್ ಕೋಡ್ ಬಳಸಿ ಎನ್ ಪಿಎಸ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಪಿಂಚಣಿ ನಿಧಿ ನಿರ್ವಹಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ಇಂಥದೊಂದು ಅವಕಾಶವನ್ನು ಚಂದಾದಾರರಿಗೆ ಕಲ್ಪಿಸಿದೆ. ಚಂದಾದಾರರು ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಎನ್ ಪಿಎಸ್ ಖಾತೆಗೆ ಹಣ ವರ್ಗಾಯಿಸಬಹುದು. ಪ್ರತಿಯೊಬ್ಬರಿಗೂ ವಿಭಿನ್ನ ಕ್ಯುಆರ್ ಕೋಡ್ ನೀಡಲಾಗುತ್ತದೆ. ಈ ಕ್ಯುಆರ್ ಕೋಡ್ ಅನ್ನು ಹೂಡಿಕೆದಾರರು ಸೇವ್ ಮಾಡಿಟ್ಟುಕೊಳ್ಳಬಹುದು. ಇನ್ನು ಕ್ಯುಆರ್ ಕೋಡ್  ಟೈರ್-1 ಹಾಗೂ ಟೈರ್ -2 ಖಾತೆಗಳಿಗೆ ಬೇರೆ ಬೇರೆಯಾಗಿರುತ್ತದೆ.ಈ ಮೂಲಕ ಎನ್ ಪಿಎಸ್ ಖಾತೆಗೆ ಕೊಡುಗೆಯನ್ನು ಸರಳಗೊಳಿಸೋದು ಹಾಗೂ ಈ ಪ್ರಕ್ರಿಯೆಯನ್ನು ಹೆಚ್ಚು ಸ್ನೇಹಪರ ಹಾಗೂ ದಕ್ಷತೆಯಿಂದ ಕೂಡಿರುವಂತೆ ಮಾಡೋದು ಪಿಎಫ್ ಆರ್ ಡಿಎ ಉದ್ದೇಶವಾಗಿದೆ. 

ಎನ್ ಪಿಎಸ್ ಖಾತೆ ತೆರೆದ ಬಳಿಕ ಅದಕ್ಕೆ ಹಣ ಜಮೆ ಮಾಡೋದು ಹೇಗೆ ಎಂಬ ಬಗ್ಗೆ ಕೂಡ ಮಾಹಿತಿ ಹೊಂದಿರೋದು ಅಗತ್ಯ. ನೀವು ಎನ್ ಪಿಎಸ್ ಖಾತೆಗೆ ಹಣವನ್ನು ಆಪ್ ಲೈನ್ ಅಥವಾ ಆನ್ ಲೈನ್ ವಿಧಾನದ ಮೂಲಕ ಜಮೆ ಮಾಡಲು ಅವಕಾಶವಿದೆ. ಈಗ ಯುಪಿಐ ಕ್ಯುಆರ್ ಕೋಡ್ ವಿಧಾನದ ಮೂಲಕ ಈ ಪ್ರಕ್ರಿಯೆ ಇನ್ನಷ್ಟು ಸರಳವಾಗಿದೆ. 

ಎನ್ ಪಿಎಸ್ ನಿಯಮ ಬದಲಾವಣೆ; ವಿತ್ ಡ್ರಾ ಪ್ರಕ್ರಿಯೆಯಲ್ಲಿ ಬ್ಯಾಂಕ್ ಖಾತೆ ಮಾಹಿತಿ ಪರಿಶೀಲನೆಗೆ ಹೊಸ ವಿಧಾನ

ಪಿಎಫ್ ಆರ್ ಡಿಎ ಸುತ್ತೋಲೆಯಲ್ಲಿ ನಮೂದಿಸಿರುವ ಮಾಹಿತಿ ಅನ್ವಯ ನೇರ ರವಾನೆ (ಡಿ-ರೆಮಿಟ್) ಆಯ್ಕೆಯನ್ನು ಚಂದಾದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ತನಕ 10ಲಕ್ಷ ಡಿ-ರಿಮಿಟ್ ಐಡಿಗಳನ್ನು ಸೃಷ್ಟಿಸಲಾಗಿದೆ. ಇನ್ನು ವಿವಿಧ ವಲಯದ ಚಂದಾದಾರರು ಒಟ್ಟಾಗಿ ಅಂದಾಜು 2700 ಕೋಟಿ ರೂ. ಕೊಡುಗೆ ನೀಡಿದ್ದಾರೆ. ಇನ್ನು ಬೆಳಗ್ಗೆ 9.30ರ ತನಕ ಟ್ರಸ್ಟಿ ಬ್ಯಾಂಕಿಗೆ ಅದರ ಕಾರ್ಯನಿರ್ವಾಹಣೆ ಹಾಗೂ ಸೆಟ್ಲಮೆಂಟ್ ದಿನ ಬರುವ ಎನ್ ಪಿಎಸ್ ಕೊಡುಗೆಯನ್ನು ಅದೇ ದಿನ ಹೂಡಿಕೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಕೂಡ ಪಿಎಫ್ ಆರ್ ಡಿಎ ನೀಡಿದೆ.

ಇನ್ನು ಯುಪಿಐ ಕ್ಯುಆರ್ ಕೋಡ್ ಆಧಾರಿತ ಎನ್ ಪಿಎಸ್ ಕೊಡುಗೆಯನ್ನು ಡಿ-ರಿಮಿಟ್ ಐಡಿ ಹೊಂದಿರೋರು ಮಾತ್ರ ಮಾಡ್ಬಹುದು. ಪ್ರಸ್ತುತ ಚಂದಾದಾರರು ತಮ್ಮ ಬ್ಯಾಂಕ್ ಖಾತೆಗಳಿಂದ ಎನ್ ಪಿಎಸ್ ಖಾತೆಗೆ ಡಿ-ರಿಮಿಟ್ ಐಡಿ ಬಳಸಿಕೊಂಡು ನೇರವಾಗಿ ಕೊಡುಗೆ ನೀಡಬಹುದು. ಡಿ-ರಿಮಿಟ್ ಐಡಿ 15 ಅಂಕೆಗಳನ್ನು ಹೊಂದಿದೆ. ಇದನ್ನು ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನೀವು ಫಲಾನುಭವಿ ಎಂದು ನಮೂದಿಸಿ ಆ ಬಳಿಕ ನಿಮ್ಮ ಉಳಿತಾಯ ಖಾತೆಯಿಂದ ಹಣ ವರ್ಗಾವಣೆ ಮಾಡಬೇಕಾಗುತ್ತದೆ. 

ಎನ್‌ಪಿಎಸ್‌, ಪಿಪಿಎಫ್‌ ಅಥವಾ ವಿಪಿಎಫ್‌? ನಿಮ್ಮ ಭವಿಷ್ಯಕ್ಕಾಗಿ ಹಣವನ್ನು ಎಲ್ಲಿ ಹೂಡಿಕೆ ಮಾಡ್ಬೇಕು ನೋಡಿ..

ಎನ್ ಪಿಎಸ್ ಗೆ ಕ್ಯುಆರ್ ಆಧಾರಿತ ಕೊಡುಗೆ ನೀಡಲು ಡಿ-ರಿಮಿಟ್ ಐಡಿ ಹೊಂದಿರೋದು ಅಗತ್ಯ. ಈ ಐಡಿ ಹೊಂದಿರದವರು ಸಿಆರ್ ಎಎಸ್ ವೆಬ್ ಸೈಟ್ ನಲ್ಲಿ ಇದನ್ನು ಸೃಷ್ಟಿಸಬಹುದು. 

ನಿವೃತ್ತಿಗಾಗಿ ಹಣವನ್ನು ಉಳಿಸಲು ಎನ್ ಪಿಎಸ್ ಉತ್ತಮ  ಹೂಡಿಕೆ ಮಾರ್ಗವಾಗಿದೆ. ಇದು 18 ಮತ್ತು 60 ವರ್ಷ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿರುವ ಸರ್ಕಾರಿ ಬೆಂಬಲಿತ ಸ್ವಯಂ ನಿವೃತ್ತಿ ಯೋಜನೆಯಾಗಿದೆ. ಇದು ಸಾಂಪ್ರದಾಯಿಕ ನಿವೃತ್ತಿ ಯೋಜನೆಗಳಿಗಿಂತ ಹೆಚ್ಚಿನ ಆದಾಯ ನೀಡುವ ಸಾಲ ಮತ್ತು ಈಕ್ವಿಟಿ ಹೂಡಿಕೆ ಆಯ್ಕೆಗಳ ಮಿಶ್ರಣ ಒದಗಿಸುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ