ಮೇ 1ರಿಂದ ಹೊಸ ಜಿಎಸ್ ಟಿ ನಿಯಮ ಜಾರಿ; ಈ ಉದ್ಯಮಗಳಿಗೆ ಮಾತ್ರ ಅನ್ವಯ

By Suvarna News  |  First Published Apr 13, 2023, 5:25 PM IST

100 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ಉದ್ಯಮಗಳು ತಮ್ಮ ಎಲೆಕ್ಟ್ರಾನಿಕ್ ಇನ್ ವಾಯ್ಸ್ ಅನ್ನು ವಿತರಣೆ ಮಾಡಿದ 7 ದಿನಗಳೊಳಗೆ ಇನ್ ವಾಯ್ಸ್ ನೋಂದಣಿ ಪೋರ್ಟಲ್ ನಲ್ಲಿ (ಐಆರ್ ಪಿ) ಅಪ್ಲೋಡ್ ಮಾಡಬೇಕು. ಈ ನಿಯಮ ಮೇ 1ರಿಂದಲೇ ಜಾರಿಗೆ ಬರಲಿದೆ ಎಂದು ಜಿಎಸ್ ಟಿ ನೆಟ್ ವರ್ಕ್ ತಿಳಿಸಿದೆ. 
 


ನವದೆಹಲಿ (ಏ13): ಉದ್ಯಮಗಳಿಗೆ ಸಂಬಂಧಿಸಿ ಹೊಸ ಜಿಎಸ್ ಟಿ ನಿಯಮ ಮೇ 1ರಿಂದ ಜಾರಿಗೆ ಬರಲಿದೆ. 100 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ಉದ್ಯಮಗಳು ತಮ್ಮ ಎಲೆಕ್ಟ್ರಾನಿಕ್ ಇನ್ ವಾಯ್ಸ್ ಅನ್ನು ವಿತರಣೆ ಮಾಡಿದ 7 ದಿನಗಳೊಳಗೆ ಇನ್ ವಾಯ್ಸ್ ನೋಂದಣಿ ಪೋರ್ಟಲ್ ನಲ್ಲಿ (ಐಆರ್ ಪಿ) ಅಪ್ಲೋಡ್ ಮಾಡಬೇಕು. ಈ ನಿಯಮ ಮೇ 1ರಿಂದಲೇ ಜಾರಿಗೆ ಬರಲಿದೆ ಎಂದು ಜಿಎಸ್ ಟಿ ನೆಟ್ ವರ್ಕ್ ತಿಳಿಸಿದೆ. ಪ್ರಸ್ತುತ ಇನ್ ವಾಯ್ಸ್ ನೋಂದಣಿ ಪೋರ್ಟಲ್ ನಲ್ಲಿ (ಐಆರ್ ಪಿ) ಉದ್ಯಮಗಳು ಇಂಥ ಇನ್ ವಾಯ್ಸ್ ಗಳನ್ನು ವಿತರಣೆ ಮಾಡಿದ ದಿನಾಂಕವನ್ನು ಪರಿಗಣಿಸದೆ ಯಾವಾಗ ಅಂದರೆ ಆವಾಗ ಅಪ್ಲೋಡ್ ಮಾಡುತ್ತಿವೆ. 'ಸಮಯ ಪಾಲನೆಯನ್ನು ಅನುಸರಿಸುವಂತೆ ಮಾಡಲು ಈ ವರ್ಗದಲ್ಲಿ ತೆರಿಗೆದಾರರು ವಿತರಣೆ ದಿನಾಂಕದಿಂದ 7 ದಿನಗಳಿಗಿಂತ  ಹಳೆಯದಾದ ಇನ್ ವಾಯ್ಸ್ ಗಳನ್ನು ವರದಿ ಮಾಡಲು ಅವಕಾಶವಿಲ್ಲ' ಎಂದು ಜಿಎಸ್ ಟಿಎನ್ ತಿಳಿಸಿದೆ. ಈ ಅಗತ್ಯಗಳಿಗೆ ಬದ್ಧವಾಗಿರಲು ತೆರಿಗೆದಾರರಿಗೆ ಸಾಕಷ್ಟು ಸಮಯ ನೀಡುವ ಉದ್ದೇಶದಿಂದ ಈ ಹೊಸ ನಿಯಮವನ್ನು ಮೇ 1ರಿಂದ  ಜಾರಿ ಮಾಡಲಾಗುತ್ತಿದೆ.  ಈ ನಿರ್ಬಂಧ ಇನ್ ವಾಯ್ಸ್ ಗೆ ಮಾತ್ರ ಅನ್ವಯಿಸುತ್ತದೆ. ಡೆಬಿಟ್/ ಕ್ರೆಡಿಟ್ ನೋಟ್ಸ್ ವರದಿ ಮಾಡಲು ಯಾವುದೇ ಸಮಯ ಮಿತಿಯಿಲ್ಲ ಎಂದು ಜಿಎಸ್ ಟಿಎನ್ ತಿಳಿಸಿದೆ. 

ಈ ಸಂಬಂಧ ಜಿಎಸ್ ಟಿಎನ್ ಉದಾಹರಣೆ ಸಹಿತ ವಿವರಣೆ ನೀಡಿದೆ. ಒಂದು ವೇಳೆ ಇನ್ ವಾಯ್ಸ್ 2023ರ ಏಪ್ರಿಲ್ 1ರಂದು ನೀಡಲ್ಪಟ್ಟಿದ್ದರೆ, 2023ರ ಏಪ್ರಿಲ್ 8ರ ಬಳಿಕ ಇದನ್ನು ವರದಿ ಮಾಡುವಂತಿಲ್ಲ. ಇನ್ ವಾಯ್ಸ್ ನೋಂದಣಿ ಪೋರ್ಟಲ್ ನಲ್ಲಿ ವ್ಯಾಲಿಡೇಷನ್ ಸಿಸ್ಟ್ಂ ರೂಪಿಸಲಾಗಿದ್ದು, ಏಳು ದಿನಗಳ ಬಳಿಕ ಬಳಕೆದಾರರು ಇನ್ ವಾಯ್ಸ್ ರಿಪೋರ್ಟ್ ಮಾಡಲು ಅವಕಾಶ ನೀಡುವುದಿಲ್ಲ. ಹೀಗಾಗಿ ತೆರಿಗೆದಾರರು ಇನ್ ವಾಯ್ಸ್ ವಿತರಣೆ ಮಾಡಿದ ಏಳು ದಿನಗಳೊಳಗೆ ಅದನ್ನು ರಿಪೋರ್ಟ್ ಮಾಡುವುದು ಅಗತ್ಯ ಎಂದು ಜಿಎಸ್ ಟಿಎನ್ ತಿಳಿಸಿದೆ.

Tap to resize

Latest Videos

ಹೊಸ ತೆರಿಗೆ ವ್ಯವಸ್ಥೆ ಗೊಂದಲ ಮೂಡಿಸಿದೆಯಾ? ಈ ಕುರಿತ ಸಂದೇಹಗಳಿಗೆ ಇಲ್ಲಿದೆ ಉತ್ತರ

ಜಿಎಸ್ ಟಿ ಕಾನೂನಿನ ಅನ್ವಯ ಐಆರ್ ಪಿಯಲ್ಲಿ ಇನ್ ವಾಯ್ಸ್ ಅಪ್ಲೋಡ್ ಮಾಡದಿದ್ರೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸೌಲಭ್ಯ ಉದ್ಯಮಗಳಿಗೆ ಸಿಗೋದಿಲ್ಲ. 

ಈ ಉದ್ಯಮಗಳಿಗೆ ಇನ್ ವಾಯ್ಸ್ ಕಡ್ಡಾಯ
ಸರಕು ಹಾಗೂ ಸೇವಾ ತೆರಿಗೆ ಅಡಿಯಲ್ಲಿ ಅಥವಾ ಜಿಎಸ್ ಟಿ ತೆರಿಗೆ ವ್ಯಾಪ್ತಿಯಲ್ಲಿ 10 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ಉದ್ಯಮಗಳಿಗೆ 2022ರ ಅಕ್ಟೋಬರ್ 1ರಿಂದ ಇ-ಇನ್ ವಾಯ್ಸ್ ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಸರ್ಕಾರ ಈ ಮಿತಿಯನ್ನು 20 ಕೋಟಿ ರೂ.ಗೆ ನಿಗದಿಪಡಿಸಿತ್ತು.  ಉದ್ಯಮಗಳಿಂದ ಆದಾಯ ಸೋರಿಕೆ ತಡೆ ಹಾಗೂ ಉತ್ತಮ ತೆರಿಗೆ ಸಂಗ್ರಹದ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಕುರಿತ ಅಧಿಸೂಚನೆಯನ್ನು ನೇರ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿ (CBIC) 2023ರ ಆಗಸ್ಟ್ 1ರಂದು ಹೊರಡಿಸಿತ್ತು. ಜಿಎಸ್ ಟಿ ಮಂಡಳಿಯ ಶಿಫಾರಸ್ಸುಗಳ ಆಧಾರದಲ್ಲಿ ನಿಯಮಗಳನ್ನು ರೂಪಿಸಲಾಗಿದೆ.

ಯುಪಿಐ ಪಾವತಿಗೆ ಇಎಂಐ ಸೌಲಭ್ಯ; ಹೊಸ ಸೇವೆ ಪರಿಚಯಿಸಿದ ಐಸಿಐಸಿಐ ಬ್ಯಾಂಕ್

2020ರ ಅಕ್ಟೋಬರ್ ನಲ್ಲಿ ಬಿ2ಬಿ ವಹಿವಾಟಿನ ಇ-ಇನ್ ವಾಯ್ಸ್ 500 ಕೋಟಿ ರೂ. ಮೀರಿದ ವಹಿವಾಟಿಗೆ ಕಡ್ಡಾಯವಾಗಿತ್ತು. ಇದನ್ನು ಆ ಬಳಿಕ ಅಂದರೆ 2021ರ ಜನವರಿಯಲ್ಲಿ 100 ಕೋಟಿಗೆ ಇಳಿಸಲಾಗಿತ್ತು. 2021ರ ಏಪ್ರಿಲ್ 1ರಿಂದ 50 ಕೋಟಿ ರೂ.ಗೆ ಇಳಿಕೆ ಮಾಡಲಾಗಿತ್ತು. ಆ ಬಳಿಕ 2022ರ ಏಪ್ರಿಲ್ 1ರಿಂದ 20 ಕೋಟಿ ರೂ.ಗೆ ಇಳಿಸಲಾಯಿತು. ಆ ಬಳಿಕ 2022ರ ಅಕ್ಟೋಬರ್ 1ರಿಂದ 10 ಕೋಟಿ ರೂ.ಗೆ ಇಳಿಕೆ ಮಾಡಲಾಗಿತ್ತು. 

click me!