
Business Desk: ದೇಶದ ಎಫ್ ಎಂಸಿಜೆ ಕ್ಷೇತ್ರದಲ್ಲಿ ಐಟಿಸಿ ಲಿಮಿಟೆಡ್ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಸಿಗರೇಟ್, ಕುಕ್ಕೀಸ್, ಸ್ಟೇಷನರಿ, ಸೋಪ್ ಗಳು ಹೀಗೆ ಐಟಿಸಿ ಹಲವಾರು ಉತ್ಪನ್ನಗಳನ್ನು ಹೊಂದಿದೆ. ಅಲ್ಲದೆ, ಐಟಿಸಿ ಅನೇಕ ಹೋಟೆಲ್ ಗಳನ್ನು ಕೂಡ ಹೊಂದಿದೆ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಉದ್ಯಮವನ್ನು ವಿಸ್ತರಿಸಿಕೊಂಡಿರುವ ಐಟಿಸಿ ಗ್ರೂಪ್ ಚೇರ್ಮನ್ ಹಾಗೂ ಎಂಡಿ ಸಂಜೀವ್ ಪುರಿ. ಇವರ ಒಟ್ಟು ವೇತನದಲ್ಲಿ 2022–23ನೇ ಹಣಕಾಸು ಸಾಲಿನಲ್ಲಿ ಶೇ.53.08 ಏರಿಕೆಯಾಗಿದ್ದು, 16.31 ಕೋಟಿ ರೂ. ಆಗಿದೆ. ಐಟಿಸಿಯಂತಹ ದೊಡ್ಡ ಸಂಸ್ಥೆಯನ್ನು ಮುನ್ನಡೆಸೋದು ಸುಲಭದ ಮಾತು ಖಂಡಿತಾ ಅಲ್ಲ. ಅದಕ್ಕೆ ಸಾಕಷ್ಟು ಪರಿಶ್ರಮ ವಹಿಸಬೇಕಾಗುತ್ತದೆ ಕೂಡ. ಇದೇ ಕಾರಣಕ್ಕೆ ಸಂಜೀವ್ ಪುರಿ ಅವರ ವೇತನದಲ್ಲಿ ಕೂಡ ಏರಿಕೆ ಮಾಡಲಾಗಿದೆ. 2015ರಲ್ಲಿ ಸಂಜೀವ್ ಪುರಿ ಅವರನ್ನು ಐಟಿಸಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಅದಾದ ಎರಡು ವರ್ಷಗಳ ಬಳಿಕ ಅವರನ್ನು ಕಂಪನಿಯ ಸಿಇಒ ಆಗಿ ನೇಮಿಸಲಾಗಿತ್ತು. ಅದಾದ ಮರುವರ್ಷ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹುದ್ದೆಗೆ ನೇಮಕ ಮಾಡಲಾಯಿತು.
ಸಂಜೀವ್ ಪುರಿ ಸಾಕಷ್ಟು ಪ್ರತಿಭಾವಂತ ಉದ್ಯಮಿ ಎಂದರೆ ತಪ್ಪಿಲ್ಲ. ಐಟಿಸಿ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ ಅವರ ಪಾತ್ರ ನಿರ್ಣಾಯಕ. ಇದೇ ಕಾರಣಕ್ಕೆ ಸಂಸ್ಥೆಯಲ್ಲಿ ಅವರು ಒಂದೊಂದೇ ಹುದ್ದೆ ಮೇಲೇರುತ್ತ ಬಂದಿದ್ದಾರೆ. ಐಐಟಿ ಕಾನ್ಪುರದಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ಪುರಿ, ಅಮೆರಿಕದ ವಾರ್ಟನ್ ಸ್ಕೂಲ್ ಆಫ್ ಬ್ಯುಸಿನೆಸ್ ನಿಂದ ಎಂಬಿಎ ಪದವಿ ಪೂರ್ಣಗೊಳಿಸಿದ್ದಾರೆ. 1986ರಲ್ಲಿ ಐಟಿಸಿ ಸೇರ್ಪಡೆಗೊಂಡ ಇವರು, ಅಲ್ಲಿಂದ ಇಲ್ಲಿಯ ತನಕ ಸಂಸ್ಥೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ.
ಮುಖೇಶ್ ಅಂಬಾನಿ ಮುಂಬೈ ನಿವಾಸ ಅಂಟಿಲಿಯಾ ಎಲ್ಲರಿಗೂ ಗೊತ್ತು; ಆದ್ರೆ ಲಂಡನ್ ನಲ್ಲಿರುವ ಈ ಐಷಾರಾಮಿ ಬಂಗ್ಲೆ ಗೊತ್ತಾ?
2016ರಿಂದ 2017ರ ತನಕ ಪುರಿ ಐಟಿಸಿಯ ಸಿಒಒ ಆಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಅವರು ಎಫ್ ಎಂಸಿಜೆ ಕಂಪನಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಕೂಡ. ಹಾಗೆಯೇ ಐಟಿಸಿ ತಂಬಾಕು ಘಟಕದ ಮಾರಾಟ ಹಾಗೂ ವಿತರಣೆಯ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. ಹಾಗೆಯೇ ಐಟಿಸಿ ಇನ್ಫೋಟೆಕ್ ಕಂಪನಿಯ ಸಾಫ್ಟ್ ವೇರ್ ವಿಭಾಗದ ಮೇಲ್ವಿಚಾರಣೆ ಕೂಡ ನೋಡಿಕೊಂಡಿದ್ದರು. ಹಾಗೆಯೇ ಐಟಿಸಿ ನೇಪಾಳದ ಮುಖ್ಯಸ್ಥರಾಗಿ ಕೂಡ ಪುರಿ ಕಾರ್ಯನಿರ್ವಹಿಸಿದ್ದರು.
ಇನ್ನು ಭಾರತ ಸರ್ಕಾರದ ವಿವಿಧ ಯೋಜನೆಗಳಲ್ಲಿ ಭಾಗವಹಿಸಿರುವ ಸಂಜೀವ್ ಪುರಿ, ದೇಶದ ಅಭಿವೃದ್ಧಿಗೆ ಕೂಡ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಭಾರತ ಸರ್ಕಾರದ ಸಲಹಾ ಸಮಿತಿಯ 15ನೇ ಹಣಕಾಸು ಪ್ಯಾನಲ್ ಅನ್ನು ಸಂಜೀವ್ ಪುರಿ ಮುನ್ನಡೆಸಿದ್ದರು. ಈ ಸಮಿತಿಯನ್ನು ಕೃಷಿ ಉತ್ಪನ್ನಗಳ ರಫ್ತನ್ನು ಹೇಗೆ ಉತ್ತೇಜಿಸಬಹುದು ಎಂಬ ಬಗ್ಗೆ ಚರ್ಚಿಸಲು ರಚಿಸಲಾಗಿತ್ತು.ಸಂಜೀವ್ ಪುರಿ ಅವರನ್ನು 2019 ಜುಲೈ 22ರಂದು ಐಟಿಸಿ ಎಂಡಿ ಆಗಿ ಆಯ್ಕೆ ಮಾಡಲಾಗಿತ್ತು. ಇವರ ಅಧಿಕಾರಾವಧಿ 2024ರ ಜುಲೈ 21ರಂದು ಮುಕ್ತಾಯವಾಗಲಿದೆ. 2023ರ ಮಾರ್ಚ್ 31ಕ್ಕೆ ಅನ್ವಯಿಸುವಂತೆ ಐಟಿಸಿಯಲ್ಲಿ 23,725 ಕಾಯಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.
ಟಾಟಾ ಕಂಪನಿಯ ಈ ಷೇರಿನಿಂದ ಕೆಲವೇ ನಿಮಿಷಗಳಲ್ಲಿ 500 ಕೋಟಿ ಸಂಪತ್ತು ಗಳಿಸಿದ ರಾಕೇಶ್ ಜುಂಜುನ್ವಾಲಾ ಪತ್ನಿ!
2022–23ನೇ ಸಾಲಿನಲ್ಲಿ ಪುರಿ ಐಟಿಸಿಯಿಂದ 2.88 ಕೋಟಿ ರೂ. ಮೂಲ ವೇತನ ಪಡೆದಿದ್ದರು. ಇದರ ಜೊತೆಗೆ 57ಲಕ್ಷ ರೂ. ಇತರ ಭತ್ಯೆಗಳು ಹಾಗೂ ಪ್ರದರ್ಶನ ಆಧಾರಿತ ಬೋನಸ್ /ದೀರ್ಘಾವಧಿ ಸಹಾಯಧನ/ ಕಮೀಷನ್ ಇತ್ಯಾದಿ ಸೇರಿ 12.86 ಕೋಟಿ ರೂ. ಅಂದರೆ ಒಟ್ಟು 16.31 ಕೋಟಿ ರೂ. ಇದಕ್ಕೂ ಹಿಂದಿನ ವರ್ಷ ಪುರಿ ಅವರ ಸಂಪೂರ್ಣ ಭತ್ಯೆ 10.66 ಕೋಟಿ ರೂ. ಇದರಲ್ಲಿ 2.64 ಕೋಟಿ ರೂ. ಮೂಲ ವೇತನ ಹಾಗೂ 49.63ಲಕ್ಷ ರೂ. ಇತರ ಭತ್ಯೆಗಳು ಸೇರಿವೆ. 2022ನೇ ಹಣಕಾಸು ಸಾಲಿನಲ್ಲಿ ಪುರಿ ಅವರು 7.52 ಕೋಟಿ ರೂ. ಭತ್ಯೆ ಅಥವಾ ಕಮೀಷನ್ ಪಡೆದಿದ್ದಾರೆ. ಇನ್ನು ಐಟಿಸಿಯ ಮಾರುಕಟ್ಟೆ ಬಂಡವಾಳ 5,88,000 ಕೋಟಿ ರೂ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.