ಲಕ್ಷದ್ವೀಪಕ್ಕೆ ಕೊಟ್ಯಂತರ ರು.ಸರಕು ಪೂರೈಕೆ ಈಗ ಕೇರಳ ಪಾಲು

Kannadaprabha News   | Asianet News
Published : May 31, 2021, 10:14 AM ISTUpdated : May 31, 2021, 10:48 AM IST
ಲಕ್ಷದ್ವೀಪಕ್ಕೆ ಕೊಟ್ಯಂತರ ರು.ಸರಕು ಪೂರೈಕೆ ಈಗ ಕೇರಳ ಪಾಲು

ಸಾರಾಂಶ

ಲಕ್ಷದ್ವೀಪಕ್ಕೆ ಕಳೆದ ಒಂದೂಕಾಲು ವರ್ಷದಿಂದ ರಾಜ್ಯದಿಂದ ಸರಕು ಸಾಗಾಟವೇ ಇಲ್ಲ ರಾಜ್ಯದ ಬೊಕ್ಕಸಕ್ಕೆ ಹಾಗೂ ವಹಿವಾಟಿಗೆ ನೂರಾರು ಕೋಟಿ ರು. ಆದಾಯ ನಷ್ಟ ಕೊರೋನಾ ನಂತರ ಲಕ್ಷದ್ವೀಪದ ಸಂಪೂರ್ಣ ಆರ್ಥಿಕ ವಹಿವಾಟು ಕೇರಳ ಮೂಲಕ ನಡೆಯುತ್ತಿದೆ

- ಸಂದೀಪ್ ವಾಗ್ಲೆ
ಮಂಗಳೂರು (ಮೇ.31):
ದೇಶದ ಕೇಂದ್ರಾಡಳಿತ ಪ್ರದೇಶ, ಕರ್ನಾಟಕದೊಂದಿಗೆ ದೊಡ್ಡ ಮಟ್ಟದ ಆರ್ಥಿಕ ಬಾಂಧವ್ಯ ಹೊಂದಿರುವ ಲಕ್ಷದ್ವೀಪಕ್ಕೆ ಕೊರೋನಾ ಆರಂಭವಾದ ಕಳೆದ ಒಂದೂಕಾಲು ವರ್ಷದಿಂದ ರಾಜ್ಯದಿಂದ ಸರಕು ಸಾಗಾಟವೇ ಆಗಿಲ್ಲ. ಹೀಗಾಗಿ ರಾಜ್ಯದ ಬೊಕ್ಕಸ ಹಾಗೂ ವಹಿವಾಟಿಗೆ ನೂರಾರು ಕೋಟಿ ರು. ಆದಾಯ ನಷ್ಟವಾಗಿದ್ದು, ಇದರ ಲಾಭ ಕೇರಳದ ಪಾಲಾಗಿದೆ.

ಕೊರೋನಾ ನಂತರ ಲಕ್ಷದ್ವೀಪದ ಸಂಪೂರ್ಣ ಆರ್ಥಿಕ ವಹಿವಾಟು ಕೇರಳ ಮೂಲಕವೇ ನಡೆಯುತ್ತಿದೆ. ಲಕ್ಷದ್ವೀಪ ಸಮೂಹಕ್ಕೆ ದಿನಸಿ, ಆಹಾರ ಧಾನ್ಯಗಳು, ದಿನೋಪಯೋಗಿ ವಸ್ತುಗಳು, ಸೀಮೆಂಟ್, ಕಬ್ಬಿಣ, ಜಲ್ಲಿ, ಮರಳು ಇತ್ಯಾದಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪೈಕಿ ಶೇ.30ರಷ್ಟು ಸಾಗಾಟವಾಗುತ್ತಿರುವುದು ಮಂಗಳೂರು ಬಂದರಿನಿಂದ. ಉಳಿದದ್ದು ಕೇರಳದ ಬೇಪೋರ್ ಹಾಗೂ ಕೊಚ್ಚಿ ಬಂದರಿನಿಂದ ಪೂರೈಕೆಯಾಗುತ್ತದೆ. ಆದರೆ ಕಳೆದ ಒಂದೂವರೆ ವರ್ಷಗಳ ಹಿಂದೆ ಲಾಕ್‌ಡೌನ್ ಜಾರಿಯಾದಾಗ ರಾಜ್ಯದಿಂದ ಸ್ಥಗಿತವಾದ ಸರಕು ಪೂರೈಕೆ ಇದುವರೆಗೂ ಆರಂಭವಾಗಿಲ್ಲ. 

ಆದರೆ ಕೇರಳ ಸರಕು ಪೂರೈಕೆಗೆ ಅವಕಾಶ ನೀಡಿದ್ದರಿಂದ ಶೇ.100ರಷ್ಟು ಸರಕು ಅಲ್ಲಿಂದಲೇ ಲಕ್ಷದ್ವೀಪಕ್ಕೆ ರವಾನೆಯಾಗುತ್ತಿದೆ ರಾಜ್ಯದಿಂದ ಬೇರೆ ಕಡೆ ಸರಕು ಸಾಗಾಟಕ್ಕೆ ಅವಕಾಶ ಇದ್ದರೂ ಲಕ್ಷದ್ವೀಪಕ್ಕೆ ಮಾತ್ರ ಇನ್ನೂ ಅವಕಾಶ ನೀಡಿಲ್ಲ. ಹೀಗಾಗಿ ರಾಜ್ಯದ ರೈತರ ಬೆಳೆಗಳು, ಉತ್ಪಾದನೆಗಳ ದೊಡ್ಡ ಮಾರುಕಟ್ಟೆಯನ್ನು ಕಸಿದುಕೊಂಡಂತಾಗಿದೆ. 

ಲಕ್ಷದ್ವೀಪದಲ್ಲಿ ಅಮೆರಿಕ ಕಿರಿಕ್‌: ಭಾರತಕ್ಕೆ ತಿಳಿಸದೆ ಗಸ್ತು ತಿರುಗಿದ ನೌಕೆ! .

ಕೋಟ್ಯಂತರ ರು. ವಹಿವಾಟು: ಮಂಗಳೂರು ಹಳೆ ಬಂದರಿನಿಂದ ವಾರಕ್ಕೆ ಏನಿಲ್ಲವೆಂದರೂ ತಲಾ 100ಕ್ಕೂ ಅಧಿಕ ಟನ್ ಸರಕು ತುಂಬಿಕೊಂಡು ನಾಲ್ಕೈದು ಮಂಜಿ (ಭಾರಿ ಸಾಮರ್ಥ್ಯದ ಬೃಹತ್ ನಾವೆ)ಗಳು ಪ್ರತಿವಾರ ಸರಕು ಸಾಮಗ್ರಿ ಹೊತ್ತು ಲಕ್ಷದ್ವೀಪಕ್ಕೆ ಸಂಚರಿಸುತ್ತಿದ್ದವು.  ಇದನ್ನು ಹೊರತುಪಡಿಸಿ ವಾರಕ್ಕೊಂದು ಶಿಪ್‌ನಲ್ಲಿ ಪ್ರಯಾಣಿಕರ ಸಂಚಾರ ಹಾಗೂ ಸಾಮಗ್ರಿಗಳ ಪೂರೈಕೆಯಾಗುತ್ತಿತ್ತು. ಇದರಿಂದ ವಾರವೊಂದಕ್ಕೇ ಹಲವು ಕೋಟಿ ರು.ಗಳ ವಹಿವಾಟು ನಡೆಯುತ್ತಿತ್ತು.

ಕಳೆದ ವರ್ಷದಿಂದ 2-3 ಬಾರಿ ಶಿಪ್ ಸಂಚಾರಕ್ಕೆ ಅವಕಾಶ ಮಾತ್ರ ನೀಡಲಾಗಿದೆ. ಆದರೆ ಯಾವುದೇ ಮಂಜಿಗೂ ಸರಕು ಸಾಗಾಟಕ್ಕೆ ರಾಜ್ಯದಿಂದ ಅನುಮತಿ ನೀಡಿಲ್ಲ ಎಂದು ಉದ್ಯಮಿ ಹಾಗೂ ಬಂದರು ಶ್ರಮಿಕರ ಸಂಘದ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಜ್ ಹೇಳುತ್ತಾರೆ.

ನೂರಾರು ಕಾರ್ಮಿಕರು ಬೀದಿಗೆ: ಲಕ್ಷದ್ವೀಪಕ್ಕೆ ಸರಕು ಸಾಗಾಟ ಸ್ಥಗಿತವಾಗಿದ್ದರಿಂದ ಅದನ್ನೇ ನಂಬಿಕೊಂಡ ನೂರಾರು ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಉತ್ಪಾದನಾ ಪ್ರದೇಶದಿಂದ ಸರಕು ತರುವುದರಿಂದ ಹಿಡಿದು ಲೋಡಿಂಗ್ ನಡೆಸುವವರೆಗೆ ನೂರಾರು ಕಾರ್ಮಿಕರು ದುಡಿಯುತ್ತಿದ್ದರು. ಹಳೆ ಬಂದರಿನಲ್ಲಿ ಈ ಕೆಲಸಕ್ಕಾಗಿಯೇ 300- 400ರಷ್ಟು ಕಾರ್ಮಿಕರಿದ್ದಾರೆ.

ಕಳೆದ ವರ್ಷದಿಂದೀಚೆಗೆ ಈ ದುಡಿದು ತಿನ್ನುವ ವರ್ಗದ ಅನ್ನಕ್ಕೂ ಕಲ್ಲು ಬಿದ್ದಿದೆ. ಪ್ರತಿವರ್ಷ ಕರ್ನಾಟಕ ಅನೇಕ ಮಂದಿ ಲಕ್ಷದ್ವೀಪಕ್ಕೆ ದುಡಿಯಲು ಹೋಗುತ್ತಾರೆ. ಅಲ್ಲಿನವರು ಇಲ್ಲಿಗೆ ಬಂದು ತಮಗೆ ಬೇಕಾದ್ದನ್ನು ಖರೀದಿಸಿ ಹೋಗುತ್ತಾರೆ. ಈಗ ಅದೆಲ್ಲದಕ್ಕೂ ರಾಜ್ಯದ ನಿರ್ಬಂಧದಿಂದ ತೊಡಕಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!