
ಮುಂಬೈ(ಮೇ.30): ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶನಿವಾರ ಮತ್ತೆ ಪೆಟ್ರೋಲ್‌ಗೆ 26 ಪೈಸೆ ಮತ್ತು ಡೀಸೆಲ್ ದರವನ್ನು 28 ಪೈಸೆಯಷ್ಟುಏರಿಕೆ ಮಾಡಿವೆ. ಇದರೊಂದಿಗೆ ವಾಣಿಜ್ಯ ನಗರಿ ಮುಂಬೈನಲ್ಲಿ ಇದೇ ಮೊದಲ ಬಾರಿ ಪೆಟ್ರೋಲ್ ದರ 100 ರು. ದಾಟಿದೆ. ಪೆಟ್ರೋಲ್ ದರ ಶತಕ ಬಾರಿಸಿದ ದೇಶದ ಮೊದಲ ಮೆಟ್ರೋ ನಗರ ಮುಂಬೈ ಆಗಿದೆ.
ಶನಿವಾರದ ದರ ಏರಿಕೆ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಈ ತಿಂಗಳಲ್ಲಿ 15 ಸಲ ಏರಿಸಿದಂತಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 97.07 ರು. ಮತ್ತು ಡೀಸೆಲ್ ದರವು 89.99 ರು.ಗೆ ಏರಿಕೆಯಾಗಿದೆ. ಇನ್ನು ದೆಹಲಿಯಲ್ಲಿ ಲೀ. ಪೆಟ್ರೋಲ್ ದರ 93.94 ರು.ಗೆ ಮತ್ತು ಡೀಸೆಲ್ ಬೆಲೆ 84.89ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ದರ 100.19 ರು. ತಲುಪಿದೆ ಹಾಗೂ ಡೀಸೆಲ್ ಬೆಲೆ 92.17 ರು.ನೊಂದಿಗೆ ಶತಕದ ಬೆನ್ನುಹತ್ತಿದೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವೆಡೆ ಈ ಹಿಂದೆಯೇ ಪೆಟ್ರೋಲ್ ಬೆಲೆ ಶತಕ ಬಾರಿಸಿತ್ತು.
ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ದಿನನಿತ್ಯ ತೈಲ ಬೆಲೆ ಪರಿಷ್ಕರಣೆಗೆ ಬ್ರೇಕ್ ಹಾಕಲಾಗಿತ್ತು. ಆದರೆ ಈ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾದ ಮೇ 5ರಿಂದಲೇ ದೇಶಾದ್ಯಂತ ಪ್ರತಿ ನಿತ್ಯ ತೈಲ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ.
ಎಲ್ಲೆಲ್ಲಿ ಶತಕ?
ರಾಜಸ್ಥಾನ
ಮಧ್ಯಪ್ರದೇಶ
ಮಹಾರಾಷ್ಟ್ರ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.