ಟ್ರೇಡಿಂಗ್ ಮಾಡೋರಿಗೆ F&O ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ, ಇದೊಂದು ಷೇರು ಮಾರುಕಟ್ಟೆಯಲ್ಲಿ ಜೂಜಾಡಿದಂತೆ. ಎಫ್&ಓ ಆಡುವವರು ಪ್ರತಿದಿನವೂ ಸಾವಿರಾರು ರೂಪಾಯಿಗಳನ್ನು ಗಳಿಸುತ್ತಾರೆ ಹಾಗೂ ಕಳೆದುಕೊಳ್ಳುತ್ತಾರೆ. ಇದು ಬಹಳ ಗಂಭೀರವಾದ ಆರ್ಥಿಕ ಅಪಾಯಗಳನ್ನು ಹೊಂದಿರುವ ಟ್ರೇಡಿಂಗ್ ಆಗಿದ್ದು, ಅನೇಕರು ಸುಲಭವಾಗಿ ದುಡ್ಡು ಮಾಡುವುದಕ್ಕೆ ಹೋಗಿ ಇದ್ದಿದ್ದನ್ನು ಕಳೆದುಕೊಳ್ಳುತ್ತಾರೆ. ಕೆಲವರು ಗಳಿಸುತ್ತಾರೆ. ಅದೃಷ್ಟದ ಮೇಲೆ ಈ ಆಟ ನಿಂತಿದೆ. ಪ್ರತಿದಿನವೂ ಸಾವಿರಾರು ಜನ ಎಫ್&ಒ ಟ್ರೇಡಿಂಗ್ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಎಫ್&ಒ ಟ್ರೇಡಿಂಗ್ ಮಾಡ್ತಿದ್ದ ಯುವಕನ ಖಾತೆಗೆ ಬೈ ಮಿಸ್ಟೆಕ್ ಆಗಿ ಹಣಕಾಸು ಸಂಸ್ಥೆಯಾದ ಕೊಟಕ್ ಸೆಕ್ಯೂರಿಟಿಸ್ 40 ಕೋಟಿ ರೂಪಾಯಿಗಳನ್ನು ಟ್ರಾನ್ಸ್‌ಫರ್ ಮಾಡಿದೆ. ಆ ಹಣವನ್ನು ಆ ಟ್ರೇಡರ್ ಕೂಡಲೇ ಹೂಡಿಕೆ ಮಾಡಿದ್ದು, ಕೇವಲ 20 ನಿಮಿಷದಲ್ಲಿ ಆತ 1.75 ಕೋಟಿ ರೂಪಾಯಿಗಳನ್ನು ಗಳಿಸಿದ್ದಾನೆ.
ಇತ್ತ ಕೊಟಕ್ ಸೆಕ್ಯೂರಿಟಿಸ್ ತಾನು ಮಾಡಿದ ತಪ್ಪನ್ನು ಗಮನಿಸಿ ಕೂಡಲೇ ಎಚ್ಚೆತ್ತುಕೊಂಡು ತಾನು ಮಾಡಿದ ಈ ಹಣ ವರ್ಗಾವಣೆಯನ್ನು ವಾಪಸ್ ಪಡೆದಿದ್ದೆ. ತಾನು ಟ್ರಾನ್ಸ್‌ಫರ್ ಮಾಡಿದ್ದ ಹಣವನ್ನಷ್ಟೇ ಟ್ರೇಡರ್‌ನ ಖಾತೆಯಿಂದ ವಾಪಸ್ ಪಡೆದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ, ಬದಲಾಗಿ ಕೊಟಕ್ ಸೆಕ್ಯೂರಿಟಿಸ್ ಆತ ಆ ಹಣದಿಂದ ಗಳಿಸಿದ 1.75 ಕೋಟಿ ರೂಪಾಯಿಗಳನ್ನು ವಾಪಸ್ ಪಡೆದಿದೆ. ಟ್ರೇಡರ್ ಗಜಾನನ ರಾಜ್‌ಗುರು ಅವರು ತನಗೆ ಬಂದ ಪ್ರಾಫಿಟ್‌ನ್ನು ನೀಡುವಂತೆ ಕೊಟಕ್ ಸೆಕ್ಯೂರಿಟಿಸ್‌ಗೆ ಮನವಿ ಮಾಡಿದೆ. ಆದರೆ ಆತನ ಮನವಿಯನ್ನು ಕೊಟಕ್ ಸೆಕ್ಯೂರಿಟಿಸ್ ತಿರಸ್ಕರಿಸಿದೆ. ಇದನ್ನು ವಿರೋಧಿಸಿ ಆ ಟ್ರೇಡರ್ ಗಜಾನನ ರಾಜ್‌ಗುರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಈಗ ಆತನ ಪರವಾಗಿ ತೀರ್ಪು ನೀಡಿದೆ.
ಇದನ್ನೂ ಓದಿ: ಕಂಚಿನ ಕಂಠ ನಿರರ್ಗಳವಾದ ಭಾಷಾ ಪ್ರಯೋಗ: ಈ ಬಾಲಕನ ಕ್ರಿಕೆಟ್ ಕಾಮೆಂಟರಿ ಕೇಳೋದೆ ಚೆಂದ
2022 ರಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅಂದರೆ ಕಳೆದ ತಿಂಗಳ ಡಿಸೆಂಬರ್‌ನಲ್ಲಿ ತೀರ್ಪು ನೀಡಿದ್ದು, ರಾಜ್‌ಗುರು ಲಾಭವನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದೆ. ಆದರೆ ಕೋಟಕ್ ಸೆಕ್ಯುರಿಟೀಸ್ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಮುಂದಿನ ವಿಚಾರಣೆಯನ್ನು ಫೆಬ್ರವರಿ 4, 2026 ಕ್ಕೆ ನಿಗದಿಪಡಿಸಲಾಗಿದೆ. ಅಲ್ಲಿಯವರೆಗೆ, ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ.
ವ್ಯವಸ್ಥೆಯ ದೋಷದಿಂದ ಗಜಾನನ ರಾಜಗುರು ಅವರಿಗೆ ಬಂದ 1.75 ಕೋಟಿ ರೂ. ಲಾಭವನ್ನು ಕೋಟಕ್ ಸೆಕ್ಯುರಿಟೀಸ್ ಮರುಪಡೆಯಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದ್ದು, ಅವರು ಪಡೆದ ಲಾಭಗಳು ಅನ್ಯಾಯದ ಪುಷ್ಟೀಕರಣವಲ್ಲ ಎಂದು ಹೇಳಿದೆ. ಇತ್ತ ಆತ ಪಡೆದ ಲಾಭ ಅವನಿಗೆ ಸೇರದ ಹಣವನ್ನು ಬಳಸಿಕೊಂಡು ಗಳಿಸಲ್ಪಟ್ಟಿವೆ ಎಂದು ಕೋಟಕ್ ಸೆಕ್ಯುರಿಟಿಸ್ ವಾದಿಸಿದೆ. ತಾಂತ್ರಿಕ ದೋಷದಿಂದಾಗಿ ಹೆಚ್ಚುವರಿ ಲಾಭ ಲಭ್ಯವಾದ ಮಾತ್ರಕ್ಕೆ ಲಾಭವಾಗುವುದಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ಇದನ್ನೂ ಓದಿ: ಬೀದಿಯಲ್ಲೇ ಗಂಡ ಹೆಂಡತಿ ಹೊಡೆದಾಟ: ಜಗಳದ ನಂತರ ಮಗುವನ್ನು ರಸ್ತೆಯಲ್ಲೇ ಬಿಟ್ಟು ದಂಪತಿ ಎಸ್ಕೇಪ್
ರಾಜಗುರು ಆರಂಭದಲ್ಲಿ 54 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದರು, ನಂತರ 2.38 ಕೋಟಿ ರೂಪಾಯಿ ಲಾಭ ಗಳಿಸಿದ್ದರು, ಇದು ಅಂತಿಮವಾಗಿ 1.75 ಕೋಟಿ ರೂಪಾಯಿ ನಿವ್ವಳ ಲಾಭಕ್ಕೆ ಕಾರಣವಾಯಿತು ಎಂದು ನ್ಯಾಯಾಲಯ ಹೇಳಿದೆ. ಮುಖ್ಯವಾಗಿ, ತಪ್ಪಾದ ಮಾರ್ಜಿನ್ ಕ್ರೆಡಿಟ್‌ನಿಂದಾಗಿ ಕೋಟಕ್ ಸೆಕ್ಯುರಿಟೀಸ್‌ಗೆ ಯಾವುದೇ ಆರ್ಥಿಕ ನಷ್ಟ ಆಗಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು. ಟ್ರೇಡರ್ ಗಳಿಸಿದ ಲಾಭವೂ ಆತನ ಸ್ವಂತ ನಿರ್ಧಾರಗಳು, ಕೌಶಲ್ಯ ಮತ್ತು ಅಪಾಯವನ್ನು ಎದುರಿಸುವ ಮೂಲಕ ಗಳಿಸಿದ್ದಾಗಿದೆ. ಬ್ರೋಕರ್ ತಪ್ಪಾಗಿ ಒದಗಿಸಿದ ಮಾರ್ಜಿನ್ ಬಳಸಿ ವಹಿವಾಟುಗಳನ್ನು ನಡೆಸಿದ್ದದರು ಎಂಬ ಕಾರಣಕ್ಕೆ ಅದನ್ನು ಪಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ವಿಚಾರಣೆ ವೇಳೆ ಹೇಳಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.