
ಮುಂಬೈ (ಜು.14): ಕಳಪೆ ಗುಣಮಟ್ಟದ ಕಾನೂನುಬಾಹಿರ ಸೊಳ್ಳೆ ನಿವಾರಕ ಅಗರಬತ್ತಿಗಳು ಡೆಂಗ್ಯೂ, ಮಲೇರಿಯಾದಂತಹ ಸೊಳ್ಳೆಗಳಿಂದ ಹರಡುವ ರೋಗಗಳಿಗಿಂತ ದೊಡ್ಡ ಮತ್ತು ತಕ್ಷಣದ ಆರೋಗ್ಯ ಬೆದರಿಕೆಯಾಗಿ ಹೊರಹೊಮ್ಮಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಮನೆಗಳಲ್ಲಿ ಬಳಸುವ ಕೀಟನಾಶಕಗಳ ಸುರಕ್ಷಿತ ಬಳಕೆ ಉತ್ತೇಜಿಸುವ ಲಾಭರಹಿತ ಉದ್ಯಮ ಸಂಸ್ಥೆಯಾಗಿರುವ ಗೃಹ ಕೀಟನಾಶಕ ನಿಯಂತ್ರಣ ಸಂಸ್ಥೆ (ಎಚ್ಐಸಿಎ) ನಡೆಸಿದ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಗ್ರ ಅಧ್ಯಯನದಲ್ಲಿ ಈ ಸಂಗತಿ ಬಹಿರಂಗಗೊಂಡಿದೆ.
ರಾಷ್ಟ್ರೀಯ ಡೆಂಗ್ಯೂ ದಿನ (ಮೇ 16) ಕ್ಕೆ ಮುಂಚಿತವಾಗಿ, ʼಎಚ್ಐಸಿಎʼ ನಿಯೋಜಿಸಿದ್ದ ಈ ಸಮೀಕ್ಷೆಯನ್ನು ಮಾರುಕಟ್ಟೆ ಸಂಶೋಧನಾ ಕಂಪನಿಯಾಗಿರುವ ಕಂಟಾರ್ (Kantar) ನಡೆಸಿದೆ. ಸಮೀಕ್ಷೆ ನಡೆದ ಶೇಕಡ 95ರಷ್ಟು ಮನೆಗಳಲ್ಲಿ ಕಳೆದ ವರ್ಷ ಮಲೇರಿಯಾ ಅಥವಾ ಡೆಂಗ್ಯೂನಂತಹ ಸೊಳ್ಳೆಗಳಿಂದ ಹರಡುವ ಯಾವುದೇ ಬಗೆಯ ಕಾಯಿಲೆಗಳು ವರದಿಯಾಗಿಲ್ಲ. ಅನುಮೋದಿಸದ ರಾಸಾಯನಿಕಗಳನ್ನು ಬಳಸಿ ತಯಾರಿಸಿರುವ ನಕಲಿ ಸೊಳ್ಳೆ ಅಗರಬತ್ತಿಗಳ ಬಳಕೆಯು ಉಸಿರಾಟಕ್ಕೆ ಪ್ರಮುಖ ಅಡಚಣೆಯಾಗಿದೆ ಎಂದು ಶೇಕಡ 70ರಷ್ಟು ವೈದ್ಯರು ವರ್ಗೀಕರಿಸಿದ್ದಾರೆ. ಶೇಕಡ 67ರಷ್ಟು ವೈದ್ಯರ ಪ್ರಕಾರ, ನಕಲಿ ಉತ್ಪನ್ನಗಳ ಬಳಕೆಯು ಸಿಗರೇಟ್ ಸೇವನೆಯ ಹೊಗೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳಿಗೆ ಹೋಲಿಸಬಹುದಾಗಿದೆ.
ಇತ್ತೀಚೆಗೆ ನಡೆದ ಈ ಸಮೀಕ್ಷೆಯಲ್ಲಿ ದೇಶದಾದ್ಯಂತದ 12 ನಗರಗಳಲ್ಲಿನ 1,264 ಮನೆಗಳನ್ನು ಗುರುತಿಸಲಾಗಿತ್ತು. 405 ವೈದ್ಯರ ಅಭಿಪ್ರಾಯಗಳನ್ನು ದಾಖಲಿಸಲಾಗಿತ್ತು. ವೈದ್ಯರ ಗುಂಪಿನಲ್ಲಿ ಶ್ವಾಸಕೋಶ ತಜ್ಞರು, ಮಕ್ಕಳ ವೈದ್ಯರು, ಸಾಮಾನ್ಯ ವೈದ್ಯರು ಮತ್ತು ಸ್ತ್ರೀರೋಗ ತಜ್ಞರು ಸೇರಿದ್ದಾರೆ. ನಕಲಿ ಸೊಳ್ಳೆ ಅಗರಬತ್ತಿಗಳ ವ್ಯಾಪಕ ಬಳಕೆಯಿಂದಾಗಿ ಮನೆಗಳಲ್ಲಿ ಹೆಚ್ಚುತ್ತಿರುವ ಆರೋಗ್ಯ ಬಿಕ್ಕಟ್ಟಿನ ಮೇಲೆ ಈ ಸಮೀಕ್ಷೆಯು ಬೆಳಕು ಚೆಲ್ಲಿದೆ.
ನಕಲಿ ಸೊಳ್ಳೆ ಅಗರಬತ್ತಿಗಳ ಬಳಕೆಯು ಉಂಟು ಮಾಡುತ್ತಿರುವ ಆರೋಗ್ಯ ಸಮಸ್ಯೆಯ ಪ್ರಮಾಣವು ಗಮನಾರ್ಹವಾಗಿದೆ. ದೇಶದಲ್ಲಿ ಸೊಳ್ಳೆ ನಿವಾರಕ ಅಗರಬತ್ತಿ ಮಾರುಕಟ್ಟೆಯು ಅಂದಾಜು ₹ 2,000 ಕೋಟಿ ಮೊತ್ತ ಹೊಂದಿದೆ. ಇದರಲ್ಲಿ ಶೇಕಡ 85ರಷ್ಟರವರೆಗೆ ಅಕ್ರಮ ಅಥವಾ ಅನಿಯಂತ್ರಿತ ತಯಾರಿಕಾ ಕಂಪನಿಗಳೇ ಪ್ರಾಬಲ್ಯ ಹೊಂದಿವೆ. ಸರ್ಕಾರದಿಂದ ಯಾವುದೇ ಅನುಮೋದನೆ ಪಡೆಯದ ಉತ್ಪನ್ನಗಳು, ಕೇಂದ್ರ ಕೀಟನಾಶಕ ನೋಂದಣಿಯ (ಸಿಐಆರ್) ಕಡ್ಡಾಯ ಲೇಬಲ್ವನ್ನೂ ಹೊಂದಿರುವುದಿಲ್ಲ. ಉತ್ಪನ್ನಗಳಲ್ಲಿ ಬಳಸಿರುವ ಪದಾರ್ಥಗಳನ್ನು ಸ್ಪಷ್ಟವಾಗಿ ಬಹಿರಂಗಪಡಿಸಿರುವುದಿಲ್ಲ. ಈ ಉತ್ಪನ್ನಗಳನ್ನು ಸಾಮಾನ್ಯವಾಗಿ ಕಂಫರ್ಟ್, ಸ್ಲೀಪ್ವೆಲ್, ರಿಲ್ಯಾಕ್ಸ್, ಸನ್-ರಿಲ್ಯಾಕ್ಸ್, ಸುಭನಿತ್ರ, ಹಂಟಿಂಗ್ ಟೈಗರ್, ಹೈ ವೋಲ್ಟೇಜ್, ಹ್ಯಾಪಿ ನೈಟ್, ಡೆಂಗ್ಯೂ ಕಿಲ್ಲರ್ ಮತ್ತು ಹೈ-ಪವರ್ ಮುಂತಾದ ಹೆಸರುಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳನ್ನು ನಿಯಂತ್ರಕ ಅನುಮೋದನೆಗಳಿಲ್ಲದೆ ಅಥವಾ ಬಳಸಿದ ಪದಾರ್ಥಗಳ ವಿವರಗಳನ್ನು ಸ್ಪಷ್ಟವಾಗಿ ಬಹಿರಂಗಪಡಿಸದೆ ಮಾರಾಟ ಮಾಡಲಾಗುತ್ತಿದೆ. ಶೇಕಡ 59ರಷ್ಟು ಕುಟುಂಬಗಳು ಇಂತಹ ಉತ್ಪನ್ನಗಳನ್ನು ಬಳಸುತ್ತಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಅರ್ಧದಷ್ಟು ಜನರು ಮೂರು ವರ್ಷಗಳಿಗೂ ಹೆಚ್ಚು ಕಾಲ ಇಂತಹ ಉತ್ಪನ್ನಗಳನ್ನೇ ಬಳಸುತ್ತಿದ್ದಾರೆ.
ಗೃಹ ಕೀಟ ನಿಯಂತ್ರಣ ಸಂಘದ (ಎಚ್ಐಸಿಎ) ಕಾರ್ಯದರ್ಶಿ ಮತ್ತು ನಿರ್ದೇಶಕ ಜಯಂತ್ ದೇಶಪಾಂಡೆ ಅವರು ಪ್ರತಿಕ್ರಿಯಿಸಿ, “ಸ್ಥಳೀಯ ಅಂಗಡಿಗಳು ಮತ್ತು ಔಷಧಿ ಮಾರಾಟ ಮಳಿಗೆಗಳಲ್ಲಿ ಮಾರಾಟವಾಗುವ ಸೊಳ್ಳೆ ಅಗರಬತ್ತಿಗಳಲ್ಲಿ ಹೆಚ್ಚಿನ ಪಾಲು ಪರೀಕ್ಷಿಸದ, ಕಾನೂನುಬಾಹಿರ ಉತ್ಪನ್ನಗಳಾಗಿದ್ದು ಕಡ್ಡಾಯ ʼಸಿಐಆರ್ʼ ನೋಂದಣಿ ಸಂಖ್ಯೆಯನ್ನೂ ಹೊಂದಿರುವುದಿಲ್ಲ. ಗ್ರಾಹಕರು ʼಸಿಐಆರ್ʼ ನೋಂದಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಪ್ರದರ್ಶಿಸುವ ಉತ್ಪನ್ನಗಳನ್ನಷ್ಟೇ ಖರೀದಿಸಬೇಕು. ಅಸ್ಪಷ್ಟ ಹೇಳಿಕೆ ಅಥವಾ ಕಡ್ಡಾಯವಾಗಿ ಪ್ರಕಟಿಸಬೇಕಾದ ಮಾಹಿತಿ ಇಲ್ಲದಿರುವ ಉತ್ಪನ್ನಗಳನ್ನು ಖರೀದಿಸಬಾರದು” ಎಂದು ಸಲಹೆ ನೀಡಿದ್ದಾರೆ.
ಮನೆಗಳಲ್ಲಿ ದೀರ್ಘಾವಧಿವರೆಗೆ ಕಳಪೆ ಗುಣಮಟ್ಟದ ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ವೈದ್ಯರು ಕಳವಳಕಾರಿ ಮಾಹಿತಿ ಒದಗಿಸಿದ್ದಾರೆ. ಕಳಪೆ ಗುಣಮಟ್ಟದ ಸೊಳ್ಳೆ ಅಗರಬತ್ತಿಗಳ ನಿಯಮಿತ ಬಳಕೆ ಜೊತೆಗೆ, ಹೆಚ್ಚುತ್ತಿರುವವ ಕೌಟುಂಬಿಕ ಆರೋಗ್ಯ ವೆಚ್ಚಗಳಿಗೆ ತಳಕು ಹಾಕುತ್ತಾರೆ. ಔಷಧಿ ಅಂಗಡಿಗಳಲ್ಲಿ ಮಾರಾಟ ಮಾಡುವ ಉತ್ಪನ್ನದ ಕಾರಣಕ್ಕೆ ಅದನ್ನು ಸುರಕ್ಷಿತ ಎಂದು ಶೇಕಡ 48ರಷ್ಟು ಗ್ರಾಹಕರು ಪರಿಗಣಿಸುತ್ತಾರೆ. ಗಿಡಮೂಲಿಕೆ ಅಥವಾ ಸಿಟ್ರೊನೆಲ್ಲಾ ಆಧಾರಿತ ಉತ್ಪನ್ನಗಳು ಸುರಕ್ಷಿತ ಎನ್ನುವುದು ಶೇಕಡ 50ರಷ್ಟು ಗ್ರಾಹಕರ ನಂಬಿಕೆಯಾಗಿದೆ. ಬಳಕೆದಾರರನ್ನು ಹಾದಿ ತಪ್ಪಿಸುವ ಹೇಳಿಕೆಗಳು ಮತ್ತು ಯಾವುದೇ ಬಗೆಯ ನಿಯಂತ್ರಣ ಕ್ರಮಗಳ ನಿಗಾ ವ್ಯವಸ್ಥೆ ಇಲ್ಲದಿರುವುದರಿಂದ ಈ ಉತ್ಪನ್ನಗಳು ಇನ್ನೂ ಹೆಚ್ಚಿನ ಅಪಾಯಗಳನ್ನು ಹೊಂದಿವೆ ಎಂದು ಶೇಕಡ 66ರಷ್ಟು ವೈದ್ಯರು ಹೇಳಿದ್ದಾರೆ.
ಬಳಕೆದಾರರ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಇಂತಹ ಉತ್ಪನ್ನಗಳ ಬಗ್ಗೆ ಗ್ರಾಹಕರಲ್ಲಿ ಹೆಚ್ಚಿನ ಅರಿವು ಇಲ್ಲದಿರುವುದರ ಬಗ್ಗೆಯೂ ಸಮೀಕ್ಷೆಯು ಬೆಳಕು ಚೆಲ್ಲಿದೆ. ಸುರಕ್ಷಿತ, ಅನುಮೋದಿತ ಪರ್ಯಾಯ ಉತ್ಪನ್ನಗಳ ಬಗ್ಗೆ ಜನರಿಗೆ ಹೆಚ್ಚಿನ ತಿಳಿವಳಿಕೆ ಇಲ್ಲ. ಕಳಪೆ ಉತ್ಪನ್ನಗಳು ದುಷ್ಪರಿಣಾಮ ಬೀರುವುದರ ಹೊರತಾಗಿಯೂ ಸುಲಭವಾಗಿ ದೊರೆಯುವ ಕಳಪೆ ಗುಣಮಟ್ಟದ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಬಳಕೆದಾರರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎನ್ನುವುದರ ಬಗ್ಗೆಯೂ ಸಮೀಕ್ಷೆ ಗಮನ ಸೆಳೆದಿದೆ.
ಸಮೀಕ್ಷೆಯ ಒಳನೋಟಗಳ ಬಗ್ಗೆ ಫೋರ್ಟಿಸ್ನ ಸಹವರ್ತಿ ಆಸ್ಪತ್ರೆಯಾಗಿರುವ ಮಾಹೀಮ್ನ ಎಸ್. ಎಲ್ ರಹೇಜಾ ಆಸ್ಪತ್ರೆಯ ಕ್ರಿಟಿಕಲ್ ಕೇರ್ ವಿಭಾಗದ ನಿರ್ದೇಶಕ ಡಾ. ಸಂಜೀತ್ ಸಸಿಧರನ್ ಅವರು ಪ್ರತಿಕ್ರಿಯಿಸಿ, "ಡೆಂಗ್ಯೂ ಜ್ವರದಂತಹ ಸೋಂಕುಗಳನ್ನು ರಕ್ಷಿಸಲು ಸೊಳ್ಳೆ ನಿವಾರಕಗಳ ಬಳಕೆಯು ಅಗತ್ಯವಾದರೂ, ಸೊಳ್ಳೆ ಅಗರಬತ್ತಿಗಳು ಸೇರಿದಂತೆ ಈ ಉತ್ಪನ್ನಗಳಿಂದ ಹೊರಹೊಮ್ಮುವ ಹೊಗೆಗೆ ನಿರಂತರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಮಾರುಕಟ್ಟೆಯಲ್ಲಿ ಮಾರಾಟವಾಗುವ ಕೆಲವು ಸೊಳ್ಳೆ ನಿವಾರಕಗಳು ಅಗತ್ಯವಿರುವ ಮಾನದಂಡಗಳನ್ನು ಪೂರೈಸದ ಕಾರಣ ಆರೋಗ್ಯ ಸಂಬಂಧಿ ಸಮಸ್ಯೆಗಳು ಉದ್ಭವಿಸುತ್ತವೆ.
ಕೆಲವು ಉತ್ಪನ್ನಗಳು ಪೈರೆಥ್ರಾಯ್ಡ್, ಆರ್ಗನೋಫಾಸ್ಫೇಟ್, ಭಾರ ಲೋಹಗಳು ಮತ್ತು ಶ್ವಾಸಕೋಶದ ಹಾದಿಯಲ್ಲಿ ಕಿರಿಕಿರಿ ಉಂಟು ಮಾಡುವಂತಹ ವಿಷಕಾರಿ ವಸ್ತುಗಳನ್ನು ಒಳಗೊಂಡಿರಬಹುದು. ಮನೆಯಲ್ಲಿ ನಿರಂತರವಾಗಿ ಈ ಅಕ್ರಮ ಸೊಳ್ಳೆ ಅಗರಬತ್ತಿಗಳನ್ನು ಬಳಸುವವರಲ್ಲಿ ಉಸಿರಾಟದ ತೊಂದರೆಗಳು ಮತ್ತು ಅಲರ್ಜಿಗಳು ಹೆಚ್ಚಾಗಿ ಕಂಡುಬರುತ್ತಿವೆ. ಮಕ್ಕಳು, ವೃದ್ಧರು, ಆಸ್ತಮಾ ರೋಗಿಗಳು ಮತ್ತು ಶ್ವಾಸಕೋಶದ ಕಾಯಿಲೆಯಿಂದ (ಸಿಒಪಿಡಿ) ಬಳಲುತ್ತಿರುವವರಲ್ಲಿ ಈ ಹೊಗೆಯನ್ನು ಉಸಿರಾಡುವುದರಿಂದ ಉಸಿರಾಟದ ತೊಂದರೆಗಳು ಉಲ್ಬಣಗೊಳ್ಳಬಹುದು. ಉಸಿರಾಟದ ಕಿರಿಕಿರಿಯಿಂದಾಗಿ ನಿರಂತರ ಕೆಮ್ಮು, ಉಬ್ಬಸ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆʼ ಎಂದು ಹೇಳಿದ್ದಾರೆ.
ಅಗ್ಗದ ಮತ್ತು ಸುರಕ್ಷಿತ ಪರಿಹಾರ ಒದಗಿಸುತ್ತದೆ ಎಂದು ನಂಬಲಾದ ಉತ್ಪನ್ನದ ನಿರಂತರ ಬಳಕೆಯು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಜನರು ಸುರಕ್ಷಿತವಾದ ಸೊಳ್ಳೆ ನಿವಾರಕಗಳನ್ನು ಬಳಸುವುದು ಉತ್ತಮ. ನಿಯಂತ್ರಣ ಪ್ರಾಧಿಕಾರಗಳಿಂದ ಅನುಮೋದಿಸಲ್ಪಟ್ಟ ಮತ್ತು ಮನೆ ಬಳಕೆಯ ಸುರಕ್ಷತಾ ಪರೀಕ್ಷೆಗೆ ಒಳಪಟ್ಟಿರುವ ಉತ್ಪನ್ನಗಳನ್ನು ಬಳಸುವುದರ ಪ್ರಯೋಜನಗಳ ಬಗ್ಗೆ ಬಳಕೆದಾರರು ಎಚ್ಚರವಹಿಸಬೇಕುʼ ಎಂದು ಹೇಳಿದ್ದಾರೆ.
ಗ್ರಾಹಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದರ ಮತ್ತು ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳುವ ಅಗತ್ಯವನ್ನು ಈ ಸಮೀಕ್ಷೆಯು ಮನದಟ್ಟು ಮಾಡಿಕೊಟ್ಟಿದೆ. ಅನಿಯಂತ್ರಿತ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸುವುದರ ಮಹತ್ವವನ್ನು ಬಲವಾಗಿ ಪ್ರತಿಪಾದಿಸಿದೆ. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ನಿವಾರಕಗಳನ್ನು ನಿರಂತರವಾಗಿ ಬಳಸುವುದರಿಂದ ದೀರ್ಘಾವಧಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಿರುವುದನ್ನು ಖಚಿತಪಡಿಸಿಕೊಳ್ಳಲು ಮರೆಯಬಾರದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.