ಬೆಂಗಳೂರಿನಿಂದಲೇ ಶುರು, ಇನ್ಮುಂದೆ ಇನ್ಸ್‌ಟಾಮಾರ್ಟ್‌ನಲ್ಲೇ ಬುಕ್‌ ಮಾಡಬಹುದು ಗ್ಯಾಸ್‌ ಸಿಲಿಂಡರ್‌!

Published : Jul 15, 2026, 08:36 PM IST
Swiggy Instamart

ಸಾರಾಂಶ

ಇನ್‌ಸ್ಟಾಮಾರ್ಟ್, ಹೆಚ್‌ಪಿಸಿಎಲ್ ಸಹಯೋಗದೊಂದಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಆನ್-ಡಿಮಾಂಡ್ ವಿತರಣೆಯನ್ನು ಆರಂಭಿಸಿದೆ. ಈ ಸೇವೆಯಡಿ, ಗ್ರಾಹಕರು 'ಹೆಚ್‌ಪಿ ನವ್ಯ' 10 ಕೆಜಿ ಕಾಂಪೋಸಿಟ್ ಸಿಲಿಂಡರ್‌ಗಳನ್ನು ಇನ್‌ಸ್ಟಾಮಾರ್ಟ್ ಆ್ಯಪ್ ಮೂಲಕ ಆರ್ಡರ್ ಮಾಡಬಹುದು.

ಬೆಂಗಳೂರು (ಜು.15): ದಿನಸಿ ವಸ್ತುಗಳು ಮತ್ತು ತರಕಾರಿಗಳನ್ನು ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ದೇಶದ ಪ್ರಮುಖ ಕ್ವಿಕ್ ಕಾಮರ್ಸ್ ಕಂಪನಿ 'ಇನ್‌ಸ್ಟಾಮಾರ್ಟ್' (Instamart) ಈಗ ಮತ್ತೊಂದು ಕ್ರಾಂತಿಕಾರಕ ಹೆಜ್ಜೆಯಿಟ್ಟಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಜೊತೆ ಕೈಜೋಡಿಸಿರುವ ಇನ್‌ಸ್ಟಾಮಾರ್ಟ್, ದೇಶದಲ್ಲೇ ಮೊದಲ ಬಾರಿಗೆ ಗ್ರಾಹಕರು ಇಚ್ಛಿಸಿದ ತಕ್ಷಣವೇ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆನ್-ಡಿಮಾಂಡ್ (On-Demand) ವಿತರಣಾ ಸೇವೆಯನ್ನು ಪ್ರಕಟಿಸಿದೆ.

ಇದರ ಅಡಿಯಲ್ಲಿ ಗ್ರಾಹಕರು ಇನ್ನು ಮುಂದೆ ಇನ್‌ಸ್ಟಾಮಾರ್ಟ್ ಆ್ಯಪ್ ಮೂಲಕವೇ ಹೆಚ್‌ಪಿಸಿಎಲ್ ಕಂಪನಿಯ ನೂತನ 10 ಕೆಜಿ ತೂಕದ ಹಗುರವಾದ 'ಹೆಚ್‌ಪಿ ನವ್ಯ' (HP Navya) ಕಾಂಪೋಸಿಟ್ ಎಲ್‌ಪಿಜಿ ಸಿಲಿಂಡರ್ ಅನ್ನು ಆರ್ಡರ್ ಮಾಡಬಹುದಾಗಿದೆ.

ನವ್ಯ ಸಿಲಿಂಡರ್‌ನ ವಿಶೇಷತೆ ಏನು?

ಹೆಚ್‌ಪಿ ನವ್ಯ ಕಾಂಪೋಸಿಟ್ ಸಿಲಿಂಡರ್‌ಗಳು ಅತ್ಯಂತ ಹಗುರವಾಗಿದ್ದು, ತುಕ್ಕು ನಿರೋಧಕ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಸಿಲಿಂಡರ್‌ನ ಹೊರಕವಚವು ಪಾರದರ್ಶಕವಾಗಿರುವುದರಿಂದ (Transparent Body), ಗ್ರಾಹಕರು ಸಿಲಿಂಡರ್ ಒಳಗಿರುವ ಗ್ಯಾಸ್ ಮಟ್ಟವನ್ನು ಹೊರಗಿನಿಂದಲೇ ಸುಲಭವಾಗಿ ನೋಡಬಹುದು. ಇದರ ಕಾಂಪ್ಯಾಕ್ಟ್ ವಿನ್ಯಾಸವು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೆ, ಸಣ್ಣ ಕುಟುಂಬಗಳಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಮತ್ತು ತುರ್ತು ಸಂದರ್ಭದಲ್ಲಿ ಹೆಚ್ಚುವರಿ ಸಿಲಿಂಡರ್ ಬಯಸುವ ಗ್ರಾಹಕರಿಗೆ ಅತ್ಯಂತ ಅನುಕೂಲಕರವಾಗಿದೆ.

ಯಾರಿಗೆ ಸಿಗಲಿದೆ ಪ್ರಯೋಜನ?

ಈ ಹೊಸ ಸೇವೆಯ ಲಾಭ ಪಡೆಯಲು ಗ್ರಾಹಕರು ಮೊದಲೇ ಯಾವುದೇ ಗೃಹಬಳಕೆಯ ಎಲ್‌ಪಿಜಿ ಸಂಪರ್ಕ (Domestic LPG Connection) ಹೊಂದಿರಬೇಕಾದ ಅಗತ್ಯವಿಲ್ಲ. ಹೀಗಾಗಿ, ವಿದ್ಯಾರ್ಥಿಗಳು, ಒಂಟಿಯಾಗಿ ವಾಸಿಸುವ ಉದ್ಯೋಗಸ್ಥರು ಮತ್ತು ಸಣ್ಣ ಕುಟುಂಬಗಳಿಗೆ ಯಾವುದೇ ದಾಖಲೆಗಳ ಸಮಸ್ಯೆ ಇಲ್ಲದೆ ಸುಲಭವಾಗಿ ಗ್ಯಾಸ್ ಸಿಲಿಂಡರ್ ಸಿಗಲಿದೆ.

ಮೊದಲು ಸಿಲಿಕಾನ್ ಸಿಟಿಯಲ್ಲಿ ಆರಂಭ: ಈ ವಿಶಿಷ್ಟ ಸೇವೆ ಅತ್ಯಂತ ಮೊದಲಿಗೆ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಭವಾಗಲಿದೆ. ಬೆಂಗಳೂರಿನ ಗ್ರಾಹಕರು ಇನ್‌ಸ್ಟಾಮಾರ್ಟ್ ಆ್ಯಪ್ ಮೂಲಕ ನೇರವಾಗಿ 10 ಕೆಜಿಯ 'ಹೆಚ್‌ಪಿ ನವ್ಯ' ಸಿಲಿಂಡರ್ ಅಥವಾ ಸಣ್ಣ ಮಾದರಿಯ 5 ಕೆಜಿಯ ಮೆಟಲ್ ಎಲ್‌ಪಿಜಿ ಸಿಲಿಂಡರ್ ಅನ್ನು ಆರ್ಡರ್ ಮಾಡಬಹುದು.

ಗುರುತಿನ ಚೀಟಿ ಕಡ್ಡಾಯ: ಮೊದಲ ಬಾರಿಗೆ ಆರ್ಡರ್ ಮಾಡುವ ಗ್ರಾಹಕರಿಗೆ ಗುರುತಿನ ಚೀಟಿ ಪರಿಶೀಲನೆ (Identity Verification) ಮತ್ತು ಪ್ರೂಫ್-ಆಫ್-ಡೆಲಿವರಿ ಪ್ರಕ್ರಿಯೆ ಕಡ್ಡಾಯವಾಗಿರುತ್ತದೆ.

ಸುರಕ್ಷಿತ ವಿತರಣೆ: ಆರ್ಡರ್ ಮಾಡಿದ ಸಿಲಿಂಡರ್‌ಗಳನ್ನು ಹೆಚ್‌ಪಿಸಿಎಲ್‌ನ ಅಧಿಕೃತ ಡಿಸ್ಟ್ರಿಬ್ಯೂಟರ್ ನೆಟ್‌ವರ್ಕ್ ಮೂಲಕವೇ ತಲುಪಿಸಲಾಗುತ್ತದೆ. ಡಿಸ್ಟ್ರಿಬ್ಯೂಟರ್ ಸಂಸ್ಥೆಯ ತರಬೇತಿ ಪಡೆದ ಸಿಬ್ಬಂದಿಯೇ ಸುರಕ್ಷತೆ ಹಾಗೂ ನಿಯಂತ್ರಣಾ ಮಾನದಂಡಗಳ ಅಡಿಯಲ್ಲಿ ಇವುಗಳನ್ನು ಗ್ರಾಹಕರ ಮನೆಗೆ ತಲುಪಿಸಲಿದ್ದಾರೆ.

ಆ್ಯಪ್‌ನಲ್ಲಿ ಆರ್ಡರ್ ಮಾಡುವುದು ಹೇಗೆ?

ಗ್ರಾಹಕರು ಇನ್‌ಸ್ಟಾಮಾರ್ಟ್ ಆ್ಯಪ್ ತೆರೆದು 10 ಕೆಜಿಯ ಹೆಚ್‌ಪಿ ನವ್ಯ ಕಾಂಪೋಸಿಟ್ ಸಿಲಿಂಡರ್ ಅಥವಾ 5 ಕೆಜಿಯ ಲೋಹದ ಸಿಲಿಂಡರ್ ಅನ್ನು ಕಾರ್ಟ್‌ಗೆ ಸೇರಿಸಿ ಆರ್ಡರ್ ಮಾಡಬಹುದು. ಮೊದಲ ಬಾರಿ ಬುಕ್ ಮಾಡುವಾಗ ಹೊಸ ಸಿಲಿಂಡರ್ ಹಾಗೂ ಡೆಪಾಸಿಟ್ ಶುಲ್ಕ ಇರಲಿದ್ದು, ಹೊಸ ಸಿಲಿಂಡರ್ ನೀಡಲಾಗುತ್ತದೆ. ತದನಂತರದ ಆರ್ಡರ್‌ಗಳಲ್ಲಿ ರಿಫಿಲ್ (ಮರುಪೂರಣ) ಮಾಡುವಾಗ ಗ್ರಾಹಕರು ಹಳೆಯ ಖಾಲಿ ಹೆಚ್‌ಪಿಸಿಎಲ್ ಸಿಲಿಂಡರ್ ಅನ್ನು ಡೆಲಿವರಿ ಬಾಯ್‌ಗೆ ಹಿಂತಿರುಗಿಸಬೇಕಾಗುತ್ತದೆ.

ಷೇರು ಮಾರುಕಟ್ಟೆಯಲ್ಲಿ ಸ್ವಿಗ್ಗಿ ಭರ್ಜರಿ ಏರಿಕೆ

ಈ ಘೋಷಣೆಯ ಬೆನ್ನಲ್ಲೇ ಇನ್‌ಸ್ಟಾಮಾರ್ಟ್‌ನ ಮಾತೃ ಸಂಸ್ಥೆಯಾದ 'ಸ್ವಿಗ್ಗಿ' (Swiggy) ಸಂಸ್ಥೆಯ ಷೇರುಗಳು ಮಾರುಕಟ್ಟೆಯಲ್ಲಿ ತೀವ್ರ ಏರಿಕೆ ಕಂಡಿವೆ. ವಹಿವಾಟಿನ ಅವಧಿಯಲ್ಲಿ ಕಂಪನಿಯ ಷೇರು ಮೌಲ್ಯ ಶೇಕಡಾ 4 ಕ್ಕಿಂತ ಹೆಚ್ಚು ಜಿಗಿತ ಕಂಡಿದೆ. ಹಿಂದಿನ ದಿನದ ವಹಿವಾಟಿನಲ್ಲಿ ರೂ. 258.75 ಕ್ಕೆ ಸ್ಥಿರವಾಗಿದ್ದ ಷೇರುಗಳು, ಇಂದು ಆರಂಭದಲ್ಲೇ ರೂ. 259.30 ರಲ್ಲಿ ತೆರೆದುಕೊಂಡವು. ಮಾರುಕಟ್ಟೆಯ ಗರಿಷ್ಠ ಮಟ್ಟದಲ್ಲಿ ಈ ಷೇರು ರೂ. 270.80 ರವರೆಗೂ ಜಿಗಿದಿದ್ದು, ಮಧ್ಯಾಹ್ನ 2.38 ರ ಸುಮಾರಿಗೆ ಶೇಕಡಾ 4.19 ರಷ್ಟು ಏರಿಕೆಯೊಂದಿಗೆ ರೂ. 269.60 ರ ಹಂತದಲ್ಲಿ ವಹಿವಾಟು ನಡೆಸುತ್ತಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಯಾವ ಸ್ಕೂಲ್‌ನಲ್ಲಿ ಓದ್ತಿದ್ದಾರೆ ಮುಕೇಶ್‌ ಅಂಬಾನಿ ಮೊಮ್ಮಗ? ಶಾಲೆಯ ಫೀಸ್‌ ಕೇಳಿದ್ರೆ ಹೌಹಾರೋದು ಗ್ಯಾರಂಟಿ
ರೈತರೇ ಭೂಮಿಯ ಕಳೆ ತೆಗೆಯಲು ಇನ್ನು ಬೇರೆ ಮಾರ್ಗ ಬಳಸಿ, ಪ್ರಖ್ಯಾತ Paraquat Dichloride ಶೀಘ್ರದಲ್ಲೇ ಬ್ಯಾನ್‌!