ಹಬ್ಬದ ಖರ್ಚಿಗೆ ಕಡಿವಾಣ ಹಾಕೋದು ಹೇಗೆ? ಇಲ್ಲಿದೆ ಟಿಪ್ಸ್

By Suvarna NewsFirst Published Oct 25, 2021, 2:48 PM IST
Highlights

ಹಬ್ಬವೆಂದ್ರೆ ಆ ತಿಂಗಳು ಖರ್ಚು ಹೆಚ್ಚೆಂದೇ ಅರ್ಥ. ಅನಗತ್ಯವಾಗಿ ಹಬ್ಬಕ್ಕೆ ಖರ್ಚು ಮಾಡೋದು ಖಂಡಿತಾ ಜೇಬಿಗೆ ಹೊರೆ. ಹಾಗಾದ್ರೆ ಹಬ್ಬದ ಖರ್ಚಿನ ಹೊರೆ ತಗ್ಗಿಸೋದು ಹೇಗೆ?

ಅಕ್ಟೋಬರ್ ಅಂದ್ರೇನೆ ಹಬ್ಬಗಳ ಮಾಸ. ಹಬ್ಬವೆಂದ್ರೆ ಕೇಳಬೇಕಾ, ಪೂಜೆ-ಪುನಸ್ಕಾರ, ಹೊಸ ಬಟ್ಟೆ, ಮನೆ ತುಂಬಾ ನೆಂಟರಿಷ್ಟರು, ಬಗೆ ಬಗೆಯ ಖಾದ್ಯಗಳು, ಉಡುಗೊರೆಗಳು. ಹೀಗೆ ಖುಷಿ ಪಡಲು ಹಲವು ಕಾರಣಗಳಿರುತ್ತವೆ. ಆದ್ರೆ ಈ ಎಲ್ಲ ಖುಷಿಗೆ ಜೇಬಿನಿಂದ ಹೆಚ್ಚುವರಿ ಹಣ ವ್ಯಯಿಸೋದು ಕೂಡ ಅನಿವಾರ್ಯ. ಇದೇ ಕಾರಣಕ್ಕೆ ಹಬ್ಬವೆಂದ್ರೆ ಖರ್ಚು. ಕಳೆದೆರಡು ವರ್ಷಗಳಿಂದ ಕೊರೋನಾ ಕಾರಣಕ್ಕೆ ಅನೇಕರ ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿಲ್ಲ. ಹೀಗಿರೋವಾಗ ಹಬ್ಬದ ಸಂಭ್ರಮ ಜೇಬಿಗೆ ಹೊರೆಯಾಗಬಾರದೆಂದ್ರೆ ನಮಗೆ ನಾವೇ ಕೆಲವು ಆರ್ಥಿಕ ನಿಯಮಗಳನ್ನು ರೂಪಿಸಿಕೊಂಡು ಅನುಸರಿಸೋದು ಒಳ್ಳೆಯದು. ಇದ್ರಿಂದ ಅನಗತ್ಯ ಖರ್ಚಿಗೆ ಕಡಿವಾಣ ಹಾಕ್ಬಹುದು. ಹಾಗಾದ್ರೆ ಖರ್ಚು ತಗ್ಗಿಸಲು ಏನ್ ಮಾಡ್ಬೇಕು?

ಬಜೆಟ್ ಸಿದ್ಧಪಡಿಸಿಕೊಳ್ಳಿ

ಕೆಲವರು ಹಬ್ಬ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡೋವಾಗ ಹಿಂದೆ ಮುಂದೆ ಯೋಚನೆ ಮಾಡೋದಿಲ್ಲ. ಇದ್ರಿಂದ ಅನಗತ್ಯವಾಗಿ ಹಣ ಪೋಲಾಗೋ ಜೊತೆ  ಭವಿಷ್ಯದ ಯೋಜನೆಗಳಿಗೆ ಹೊಡೆತ ಬೀಳೋ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಪ್ರತಿ ಪೈಸೆ ಖರ್ಚು ಮಾಡೋ ಮುನ್ನ ಯೋಚಿಸಿ ಮುಂದಡಿಯಿಡೋದು ಉತ್ತಮ. ನಿಮ್ಮ ಆದಾಯದ ಎಷ್ಟು ಭಾಗವನ್ನು ಹಬ್ಬಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಖರ್ಚು ಮಾಡುತ್ತೀರಿ ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಅದಕ್ಕೆ ಅನುಗುಣವಾಗಿ ಹಣ ವ್ಯಯಿಸಿ. ಇದ್ರಿಂದ ಖರ್ಚಿನ ಮೇಲೆ ನಿಮಗೆ ಹಿಡಿತ ಸಿಕ್ಕುತ್ತದೆ.

ಹೋಲಿಕೆ ಬಿಡಿ

ಪಕ್ಕದ ಮನೆಯವರು ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ ಎಂಬ ಕಾರಣಕ್ಕೆ ನೀವು ಕೂಡ ಅವರಂತೆಯೇ ಮಾಡಲು ಮುಂದಾದ್ರೆ ನಿಮ್ಮ ಜೇಬಿಗೇ ಹೊರೆ ಎಂಬುದನ್ನು ಮರೆಯಬೇಡಿ. ಇನ್ನೊಬ್ಬರು ಮಾಡುತ್ತಾರೆ ಎಂಬ ಕಾರಣಕ್ಕೆ ನಿಮ್ಮ ಆದಾಯವನ್ನು ಪರಿಗಣಿಸದೆ ಖರ್ಚು ಮಾಡೋದು ತಪ್ಪು. ಇದ್ರಿಂದ ಮುಂದೆ ಆರ್ಥಿಕ ಸಂಕಷ್ಟ ಎದುರಾಗಬಹುದು.

ವೇತನದಿಂದ ಕಡಿತವಾಗುವ ಹಣ ಎಲ್ಲಿ ಡೆಪಾಸಿಟ್ ಆಗುತ್ತೆ?

ನಿಮ್ಮ ಇತಿಮಿತಿಯಲ್ಲಿ ಖರ್ಚು ಮಾಡಿದ್ರೆ ಯಾವ ತೊಂದರೆಯೂ ಎದುರಾಗೋದಿಲ್ಲ. ಆದಕಾರಣ ಪಕ್ಕದ ಮನೆಯವರು ದೀಪಾವಳಿಗೆ 10 ಸಾವಿರ ರೂ. ಮೌಲ್ಯದ ಪಟಾಕಿ ತಂದಿದ್ದಾರೆ ಎಂಬ ಕಾರಣಕ್ಕೆ ನೀವು ಕೂಡ ಅಷ್ಟೇ ಮೊತ್ತದ ಪಟಾಕಿ ಖರೀದಿಸೋ ಮುನ್ನ ಒಮ್ಮೆ ಯೋಚಿಸಿ.

ಆಡಂಬರಕ್ಕಾಗಿ ವ್ಯಯಿಸಬೇಡಿ

ನಮ್ಮ ಮನೆ ಹಬ್ಬದ ಬಗ್ಗೆ ನೆರೆಹೊರೆಯವರು, ಬಂಧುಗಳು, ಸ್ನೇಹಿತರು ಎಲ್ಲ ಹಾಡಿ ಹೊಗಳಬೇಕು ಎಂಬ ಕಾರಣಕ್ಕೆ ಕೆಲವರು ಸಾಕಷ್ಟು ಹಣ ವ್ಯಯಿಸುತ್ತಾರೆ. ದುಬಾರಿ ಬಟ್ಟೆ, ಚಿನ್ನಾಭರಣಗಳು, ಬೆಳ್ಳಿ ಪೂಜಾ ಸಾಮಗ್ರಿಗಳನ್ನುಕೊಳ್ಳುತ್ತಾರೆ. ಈ ರೀತಿ ಆಡಂಬರಕ್ಕಾಗಿ ಖರ್ಚು ಮಾಡೋ ಮನಸ್ಥಿತಿ ನಿಮಗಿದ್ರೆ ಈಗಲೇ ಬದಲಾಯಿಸಿಕೊಳ್ಳಿ. ಇಲ್ಲವೆಂದ್ರೆ ಹಬ್ಬಗಳಿಗೆ ಮಾತ್ರವಲ್ಲ, ಪ್ರತಿ ವಿಚಾರಕ್ಕೂ ನೀವು ದುಂದುವೆಚ್ಚ ಮಾಡೋದು ಗ್ಯಾರಂಟಿ.

ಈ 5 ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರಬಲ್ಲವು!

ಇನ್ನೊಬ್ಬರನ್ನು ಮೆಚ್ಚಿಸೋ ಪ್ರಯತ್ನ ಬಿಡಿ

ಹಬ್ಬದ ದಿನ ದೇವರ ಕೋಣೆ ಅಲಂಕಾರದಿಂದ ಹಿಡಿದು ಅಡುಗೆ ತನಕ ಪ್ರತಿ ವಿಚಾರಕ್ಕೂ ಇನ್ನೊಬ್ಬರ ಮೆಚ್ಚುಗೆ ಬಯಸೋರು ಕೂಡ ದುಂದುವೆಚ್ಚ ಮಾಡುತ್ತಾರೆ. ಇನ್ನೊಬ್ಬರನ್ನು ಮೆಚ್ಚಿಸೋ ಪ್ರಯತ್ನದಲ್ಲಿ ನೋಡಿದ್ದೆಲ್ಲ ಖರೀದಿಸುತ್ತಾರೆ. ಅದೆಷ್ಟೇ ದುಬಾರಿ ವಸ್ತುವಾಗಿದ್ರೂ ಆ ಕ್ಷಣಕ್ಕೆ ಅವರು ದುಡ್ಡಿನ ಬಗ್ಗೆ ಚಿಂತಿಸದೆ ಅದನ್ನು ಕೊಳ್ಳುತ್ತಾರೆ. ಆದ್ರೆ ಇಂಥ ಮನಸ್ಥಿತಿಯಿಂದ ಖರ್ಚು ಹೆಚ್ಚಿ ಆ ನಂತರ ಪಶ್ಚತ್ತಾಪ ಪಡಬೇಕಾಗುತ್ತದೆ.

ಕೈಲಾಗದವರ ಬಗ್ಗೆಯೂ ಯೋಚಿಸಿ

ದೀಪಾವಳಿಯಂದು ನಿಮ್ಮ ಮನೆಯಲ್ಲಿ ಬಣ್ಣ ಬಣ್ಣದ ದೀಪಗಳು ರಾರಾಜಿಸಬಹುದು. ಬಗೆ ಬಗೆಯ ಸಿಹಿ ತಿನಿಸುಗಳು, ಖಾದ್ಯಗಳನ್ನು ನೀವು ಹೊಟ್ಟೆ ಬಿರಿಯುವಷ್ಟು ತಿಂದು ಖುಷಿ ಪಡಬಹುದು. ಆದ್ರೆ ಆ ದಿನ ಒಂದು ಹೊತ್ತಿನ ಊಟಕ್ಕಾಗಿ ಪರದಾಡೋ ಜನರು ಕೂಡ ಇದ್ದಾರೆ. ಹೀಗಾಗಿ ಬೇರೆಯವರ ಮನೆ ಹಬ್ಬದ ಆಚರಣೆ ನೋಡಿ ಮರುಗೋ ಬದಲು ನಿಮಗಿಂತ ಕಷ್ಟದಲ್ಲಿರೋರ ಬಗ್ಗೆ ಯೋಚಿಸೋದು ಉತ್ತಮ. ಇದ್ರಿಂದ ನೀವು ಆಡಂಬರಕ್ಕಿಂತ ಸರಳ ಆಚರಣೆಗೆ ಹೆಚ್ಚು ಮಹತ್ವ ನೀಡುತ್ತೀರಿ. 

ಆರ್ಥಿಕ ನಿರ್ವಹಣೆ: ಭಾರತಕ್ಕೆ ಐಎಂಎಫ್‌ ಭೇಷ್‌!

ನಿಮ್ಮ ಬಳಿಯಿರೋ ವಸ್ತುಗಳನ್ನೊಮ್ಮೆ ಗಮನಿಸಿ

ನಿಮ್ಮ ತಲೆಯಲ್ಲಿ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸೋ ಯೋಚನೆ ಮೂಡಬಹುದು. ಆ ತಕ್ಷಣ ನಿಮ್ಮ ವಾರ್ಡ್ರೋಪ್ ತೆರೆದು ನೋಡಿ. ಅಲ್ಲಿರೋ ಬಟ್ಟೆಗಳ ಸಂಗ್ರಹ ನೋಡಿ ಹೊಸ ಬಟ್ಟೆ ಖರೀದಿಸೋ ಯೋಚನೆ ಮರೆಯಾಗಬಹುದು. ಅದೇರೀತಿ ನಿಮ್ಮ ಮನೆಯಲ್ಲಿ ಬಳಕೆಯಿಲ್ಲದೆ ಬಿದ್ದಿರೋ ವಸ್ತುಗಳನ್ನು ಗಮನಿಸಿ. ಇದ್ರಿಂದ ಅನಗತ್ಯ ವಸ್ತುಗಳನ್ನು ಖರೀದಿಸೋ ನಿಮ್ಮ ಬಯಕೆಗೆ ಕಡಿವಾಣ ಬೀಳುತ್ತದೆ.

click me!