Interest Rate Hike: ಗೃಹ ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿದ ಎಚ್ ಡಿಎಫ್ ಸಿ ಬ್ಯಾಂಕ್; ಪರಿಷ್ಕೃತ ದರ ಮೇ 1ರಿಂದಲೇ ಜಾರಿಗೆ

By Suvarna NewsFirst Published May 2, 2022, 4:43 PM IST
Highlights

*RPLR 5 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದ ಎಚ್ ಡಿಎಫ್ ಸಿ
*ಎಚ್ ಡಿಎಫ್ ಸಿ ಬ್ಯಾಂಕಿನ ಗೃಹಸಾಲದ ಬಡ್ಡಿದರ ಶೇ.6.7ರಿಂದ ಪ್ರಾರಂಭ
*ದೊಡ್ಡ ಸಾಲಗಳಿಗೆ ಈ ಬಡ್ಡಿದರ ಶೇ.7ಕ್ಕಿಂತ ಹೆಚ್ಚಿದೆ

ಮುಂಬೈ (ಮೇ 2):  ಭಾರತೀಯ ಸ್ಟೇಟ್ ಬ್ಯಾಂಕ್ (SBI) ಇತ್ತೀಚೆಗೆ ಸಾಲದ (Loan) ಮೇಲಿನ ಬಡ್ಡಿದರ (Interest rate) ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿತ್ತು. ಈಗ ಎಚ್ ಡಿಎಫ್ ಸಿ (HDFC) ಬ್ಯಾಂಕ್ ಸರದಿ. ಗೃಹಸಾಲಗಳ (Home Loan) ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಿರುವುದಾಗಿ ಖಾಸಗಿ ವಲಯದ ಬ್ಯಾಂಕ್ ಎಚ್ ಡಿಎಫ್ ಸಿ  ಭಾನುವಾರ (ಮೇ 1) ಪ್ರಕಟಿಸಿದೆ.

ಮೇ 1ರಿಂದ ಜಾರಿಗೆ ಬರುವಂತೆ ಗೃಹ ಸಾಲಗಳ ಮೇಲಿನ ರಿಟೇಲ್ ಪ್ರೈಮ್ ಲೆಂಡಿಂಗ್ ರೇಟ್ (RPLR) 5 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಲಾಗಿದೆ. ಆರ್ ಪಿಎಲ್ ಆರ್ ಫ್ಲೋಟಿಂಗ್ ರೇಟ್ ಸಾಲಗಳಿಗೆ ಬೆಂಚ್ ಮಾರ್ಕ್ ಆಗಿದೆ.  ಉದಾಹರಣೆಗೆ 15 ವರ್ಷಗಳ ಅವಧಿಗೆ ಒಂದು ಕೋಟಿ ರೂ. ಸಾಲ ತೆಗೆದಿದ್ರೆ  ಬಡ್ಡಿದರದಲ್ಲಿ ಶೇ.0.05 ಪಾಯಿಂಟ್ ಏರಿಕೆಯಾಗಿ ಪ್ರತಿ ತಿಂಗಳ ಇಎಂಐಯಲ್ಲಿ 400 ಹೆಚ್ಚಳವಾಗಲಿದೆ. 

ಕೇಂದ್ರದಿಂದ ಐಟಿ ರಿಟರ್ನ್ಸ್‌ ಪರಿಷ್ಕರಣೆಗೆ ಹೊಸ ಫಾರ್ಮ್!

ಎಚ್ ಡಿಎಫ್ ಸಿ (HDFC) ಬ್ಯಾಂಕ್ ಸುದೀರ್ಘಾವಧಿಯ ಠೇವಣಿಗಳ ಷೇರನ್ನು ಹೆಚ್ಚಿಸಲು ಬಯಸಿದೆ. ಹೀಗಾಗಿ ಈ ಠೇವಣಿಗಳ ಮೇಲಿನ ಪ್ರಸ್ತುತವಿರುವ ಬಡ್ಡಿದರವನ್ನು ಹೆಚ್ಚಳ ಮಾಡಲು ಬಯಸಿದೆ ಕೂಡ. ಎಚ್ ಡಿಎಫ್ ಸಿ ಬ್ಯಾಂಕಿನ ಗೃಹಸಾಲದ ಬಡ್ಡಿದರ ಶೇ.6.7ನಿಂದ ಪ್ರಾರಂಭವಾಗುತ್ತದೆ. ಆದ್ರೆ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವ ಸಾಲಗಾರರು ಹಾಗೂ ದೊಡ್ಡ ಸಾಲಗಳಿಗೆ ಈ ಬಡ್ಡಿದರ ಶೇ.7ಕ್ಕಿಂತ ಹೆಚ್ಚಿದೆ. ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ಶೇ.6.4ರಿಂದ ಶೇ.6.6 ಬಡ್ಡಿದರದಲ್ಲಿ ಗೃಹಸಾಲಗಳನ್ನು ನೀಡುತ್ತಿವೆ. ಆದ್ರೆ ರೆಪೋ ದರ ಹೆಚ್ಚಾದಂತೆ ಎಲ್ಲ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುತ್ತವೆ. 

ಎಸ್‌ಬಿಐ ಹಾಗೂ ಇತರ ಬ್ಯಾಂಕ್‌ಗಳಾದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ), ಆ್ಯಕ್ಸಿಸ್‌, ಕೋಟಕ್‌ ಮಹೀಂದ್ರಾ ತಮ್ಮ ಸಾಲದ ಮೇಲಿನ ಬಡ್ಡಿ ದರಗಳನ್ನು ಏ. 15ರಿಂದ ಜಾರಿಗೆ ಬರುವಂತೆ ಶೇ.0.1ರಷ್ಟುಹೆಚ್ಚಿಸಿವೆ.  ಸಾಲದ ಮೇಲಿನ ಬಡ್ಡಿ ದರವನ್ನು ಬ್ಯಾಂಕ್‌ಗಳು ಏರಿಸಿದ್ದು 3 ವರ್ಷದಲ್ಲಿ ಇದೇ ಮೊದಲು. 
ಏಪ್ರಿಲ್ 8ರಂದು ನಡೆದ ಆರ್ ಬಿಐ (RBI) ಹಣಕಾಸು ನೀತಿ  ಸಮಿತಿ ಸಭೆಯಲ್ಲಿ (MPC) ಸತತ 11ನೇ ಬಾರಿಗೆ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.ರಷ್ಯಾ- ಉಕ್ರೇನ್‌ ಯುದ್ಧ ಬಿಕ್ಕಟ್ಟು ಮತ್ತು ಹಣದುಬ್ಬರ ಏರಿಕೆಯ ನಡುವೆಯೂ ಆರ್ ಬಿಐ ರೆಪೋ ದರ ಏರಿಕೆ ಮಾಡಿಲ್ಲ.ರೆಪೋ ದರವನ್ನು ಶೇ.4 ಮತ್ತು ರಿವರ್ಸ್‌ ರೆಪೋ ದರವನ್ನು ಹಿಂದಿನ ಶೇ.3.35ರಲ್ಲೇ ಮುಂದುವರಿಸಲು ನಿರ್ಧರಿಸಿದೆ. 

ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ ಹಗರಣ: ಮುಂಬೈ, ಪುಣೆಯಲ್ಲಿ ಸಿಬಿಐ ದಾಳಿ

ಕಳೆದ ತಿಂಗಳಷ್ಟೇ ಎಚ್ ಡಿಎಫ್ ಸಿ ಬ್ಯಾಂಕ್ ಸ್ಥಿರ ಠೇವಣಿಗಳ (Fixed Deposits) ಮೇಲಿನ ಬಡ್ಡಿದರವನ್ನು (Interest rate) ಹೆಚ್ಚಿಸಿತ್ತು. ಎಚ್ ಡಿಎಫ್ ಸಿ ಬ್ಯಾಂಕಿನ ಈ ಪರಿಷ್ಕೃತ ಬಡ್ಡಿದರ (Interest rate) ಏಪ್ರಿಲ್ 6ರಿಂದಲೇ ಜಾರಿಗೆ ಬಂದಿದೆ. ಒಂದು ವರ್ಷದ ಸ್ಥಿರ ಠೇವಣಿ ( FD) ಬಡ್ಡಿದರ 10 ಬೇಸಿಸ್ ಪಾಯಿಂಟ್ ಗಳಷ್ಟು ಅಂದರೆ  ಶೇ.5 ರಿಂದ ಶೇ.5.10ರಷ್ಟು ಹೆಚ್ಚಿಸಲಾಗಿದೆ. ಇನ್ನು ಒಂದು ವರ್ಷ ಒಂದು ದಿನದಿಂದ ಹಿಡಿದು ಎರಡು ವರ್ಷಗಳ ತನಕದ ಎಫ್ ಡಿ (FD) ಬಡ್ಡಿದರವನ್ನು 10 ಬೇಸಿಸ್ ಪಾಯಿಂಟ್ ಗಳಷ್ಟು ಅಂದ್ರೆ ಶೇ.5ರಿಂದ ಶೇ.5.10ರಷ್ಟು ಹೆಚ್ಚಿಸಲಾಗಿದೆ. ಹಾಗೆಯೇ 2 ವರ್ಷ 1 ದಿನದಿಂದ 3 ವರ್ಷ ತನಕದ ಎಫ್ ಡಿ ಮೇಲಿನ ಬಡ್ಡಿದರವನ್ನು ಶೇ.5.20  ಹೆಚ್ಚಿಸಲಾಗಿದೆ. 3 ವರ್ಷ 1 ದಿನದಿಂದ 5 ವರ್ಷಗಳ ತನಕದ ಎಫ್ ಡಿ (FD) ಮೇಲಿನ ಬಡ್ಡಿದರವನ್ನು ಶೇ.5.45ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ 5 ವರ್ಷ 1 ದಿನದಿಂದ 10 ವರ್ಷಗಳ ತನಕದ ಎಫ್ ಡಿ (FD) ಮೇಲಿನ ಬಡ್ಡಿದರವನ್ನು ಶೇ.5.60ಕ್ಕೆ ಹೆಚ್ಚಿಸಲಾಗಿದೆ.
 

click me!