ಗೋ ಫಸ್ಟ್‌ ವಿಮಾನ ಸೇವೆ ದಿವಾಳಿ ಎಫೆಕ್ಟ್‌: ದೇಶದಲ್ಲಿ ವಿಮಾನ ಟಿಕೆಟ್‌ ದರ 4 - 6 ಪಟ್ಟು ಹೆಚ್ಚಳ

By BK AshwinFirst Published May 8, 2023, 1:29 PM IST
Highlights

ಒಂದು ವೇಳೆ 7 ದಿನಗಳ ಮುಂಚಿತವಾಗಿ ಟಿಕೆಟ್‌ ಕಾಯ್ದಿರಿಸಿದರೆ 20,000 ದಿಂದ 25,000 ರೂ. ದರ ನಿಗದಿ ಮಾಡಲಾಗಿದೆ. ಇನ್ನು ಮೊದಲೇ ಗೋಫಸ್ಟ್‌ ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿದ್ದ ಪ್ರಯಾಣಿಕರು, ಸಂಸ್ಥೆಯಿಂದ ಕೆಲಸ ಕಳೆದುಕೊಂಡು ಬೇರೆಡೆ ಉದ್ಯೋಗ ಹುಡುಕುತ್ತಿರುವ ಸಿಬ್ಬಂದಿಗೂ ದಿವಾಳಿ ಸಂಕಷ್ಟ ತಂದೊಡ್ಡಿದೆ.

ನವದೆಹಲಿ (ಮೇ 8, 2023): ಭಾರತದ ಪ್ರಮುಖ 5 ಏರ್‌ಲೈನ್‌ಗಳಲ್ಲಿ ಒಂದಾಗಿದ್ದ ಗೋ ಫಸ್ಟ್‌ ವಿಮಾನಯಾನ ಸಂಸ್ಥೆ ದಿವಾಳಿಯಾದ ಪರಿಣಾಮ ಇದೀಗ ಭಾರತದಲ್ಲಿ ವಿಮಾನ ಪ್ರಯಾಣದ ಟಿಕೆಟ್‌ ದರ ತೀವ್ರ ಏರಿಕೆಯಾಗಿದ್ದು, ಕೆಲ ಮಾರ್ಗಗಳ ದರವು ಸಿಕ್ಕಾಪಟ್ಟೆ ಏರಿಕೆಯಾಗಿದೆ. ಈ ಪೈಕಿ ದೆಹಲಿ- ಲೇಹ್‌ ಟಿಕೆಟ್‌ ದರ 38,000 ರೂ.ಗೆ ಏರಿಕೆಯಾಗಿದೆ. 

ಒಂದು ವೇಳೆ 7 ದಿನಗಳ ಮುಂಚಿತವಾಗಿ ಟಿಕೆಟ್‌ ಕಾಯ್ದಿರಿಸಿದರೆ 20,000 ದಿಂದ 25,000 ರೂ. ದರ ನಿಗದಿ ಮಾಡಲಾಗಿದೆ. ಇನ್ನು ಮೊದಲೇ ಗೋಫಸ್ಟ್‌ ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿದ್ದ ಪ್ರಯಾಣಿಕರು, ಸಂಸ್ಥೆಯಿಂದ ಕೆಲಸ ಕಳೆದುಕೊಂಡು ಬೇರೆಡೆ ಉದ್ಯೋಗ ಹುಡುಕುತ್ತಿರುವ ಸಿಬ್ಬಂದಿಗೂ ದಿವಾಳಿ ಸಂಕಷ್ಟ ತಂದೊಡ್ಡಿದೆ. ಈಗಾಗಲೇ ಉಳಿದ ಎಲ್ಲ ವಿಮಾನಗಳು ಶೇ.90 ರಷ್ಟು ಭರ್ತಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಇದನ್ನು ಓದಿ: ಮೇ 9 ರವರೆಗೆ Go First ವಿಮಾನಗಳು ಕ್ಯಾನ್ಸಲ್; ಪ್ರಯಾಣಿಕರಿಗೆ ಸಕಾಲಕ್ಕೆ ರೀಫಂಡ್‌ ಮಾಡಲು ಡಿಜಿಸಿಎ ಸೂಚನೆ

ಭಾರತದ ಪ್ರಮುಖ ವಿಮಾನಯಾನ ಸಂಸ್ಥೆ ಗೋ ಫಸ್ಟ್ ದಿವಾಳಿ ಎಂದು ಘೋಷಣೆಯಾದ ನಂತರ, ವಿಮಾನ ದರಗಳು ಏರಿಕೆಯಾಗಿದೆ. ಈ ಹಿನ್ನೆಲೆ ವಿಮಾನ ಪ್ರಯಾಣಿಕರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ವಾಡಿಯಾ ಗ್ರೂಪ್ ಒಡೆತನದ ಗೋ ಫಸ್ಟ್ ಸುಮಾರು 53 ವಿಮಾನಗಳೊಂದಿಗೆ ಭಾರತದ ಸುಮಾರು 34 ಸ್ಥಳಗಳಿಗೆ ವಿಮಾನಯಾನ ಸೇವೆಗಳನ್ನು ಒದಗಿಸುತ್ತದೆ. GoFirst ಪ್ರತಿದಿನ ಸರಾಸರಿ 200 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತದೆ. ಆದರೆ, ಸದ್ಯ ಗೋ ಫಸ್ಟ್ ದಿವಾಳಿಯಾಗಿದ್ದು, ವಿಮಾನಯಾನ ಸೇವೆಗಳನ್ನೂ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: 1,508 ರೂ.ಗೆ ವಿಮಾನದಲ್ಲಿ ಪ್ರಯಾಣಿಸಿ: ಗೋ ಫಸ್ಟ್‌ನಿಂದ ಇಂಡಿಪೆಂಡೆನ್ಸ್ ಡೇ ಸೇಲ್‌

ಯುಎಸ್‌ನಲ್ಲಿ PW ಎಂದೂ ಕರೆಯಲ್ಪಡುವ ಪ್ರ್ಯಾಟ್ ಮತ್ತು ವಿಟ್ನಿಯಿಂದ ವಿಮಾನ ಎಂಜಿನ್‌ಗಳನ್ನು ವಿತರಿಸದ ಕಾರಣ ಗೋ ಫಸ್ಟ್ ವಿಮಾನಗಳನ ಸೇವೆ ನಿಲ್ಲಿಸಬೇಕಾಯಿತು. ಅಲ್ಲದೆ, ಇದರಿಂದ ಕಂಪನಿಗೆ 50ರಷ್ಟು ನಷ್ಟವಾಗಿದೆ ಎಂದೂ ವರದಿಯಾಗಿದೆ. ಜತೆಗೆ ಬದಲಿ ಎಂಜಿನ್‌ಗಳನ್ನು ಒದಗಿಸಲು ಪ್ರ್ಯಾಟ್ ಮತ್ತು ವಿಟ್ನಿ ವಿಳಂಬ ಮಾಡಿದೆ. ಇದರಿಂದಾಗಿ ಕಳೆದ ವರ್ಷ ಮಾರ್ಚ್‌ನಲ್ಲೇ ಗೋ ಫಸ್ಟ್‌ನ 13 ವಿಮಾನಗಳ ಸೇವೆಯನ್ನು ನಿಲ್ಲಿಸಲಾಗಿತ್ತು. ಈಗ ಆ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಶುಲ್ಕ ಹೆಚ್ಚಳ
ಈ ನಿಟ್ಟಿನಲ್ಲಿ ಸದ್ಯ ಮೇ 3 ರಿಂದ ಮೇ 12 ರವರೆಗೆ ಎಲ್ಲಾ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ. ಅಲ್ಲದೆ, ಟಿಕೆಟ್ ಮಾರಾಟವನ್ನು ಮೇ 15 ರವರೆಗೆ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ GoFirst ವಿಮಾನಗಳು ನಿರ್ವಹಿಸುವ ಮಾರ್ಗಗಳಲ್ಲಿ ವಿಮಾನ ದರಗಳು ತೀವ್ರವಾಗಿ ಏರಿಕೆಯಾಗಿದೆ. ಅದರಂತೆ ಮೇ 3ಕ್ಕೆ ದೆಹಲಿಯಿಂದ ಮುಂಬೈಗೆ ಪ್ರಯಾಣ ದರ ಶೇ. 37ಕ್ಕೂ ಹೆಚ್ಚು ಏರಿಕೆಯಾಗಿದೆ. ಇಂತಹ ಹಲವು ಮಾರ್ಗಗಳಲ್ಲಿ ವಿಮಾನ ದರ 4 ರಿಂದ 6 ಪಟ್ಟು ಏರಿಕೆಯಾಗಿದೆ. ಅಂದರೆ ಸಾಮಾನ್ಯ ಟಿಕೆಟ್ ದರಕ್ಕಿಂತ 10,000 ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ: ಸೂಡಾನ್‌ನಲ್ಲಿ ವಾಯುಪಡೆ ರಾತ್ರಿ ಸಾಹಸ: ವಿಮಾನ ಇಳಿಯಲೂ ಕಷ್ಟವಾದ ಸ್ಥಳದಲ್ಲಿ ಲ್ಯಾಂಡಿಂಗ್ ಮಾಡಿ 121 ಜನರ ರಕ್ಷಣೆ

ಇನ್ನೊಂದೆಡೆ, ಗೋ ಫಸ್ಟ್‌ ವಿಮಾನ ಸೇವೆ ಸ್ಥಗಿತವಾದ ಬಳಿಕ ವಿಮಾನ ಪ್ರಯಾಣ ದರ ಹೆಚ್ಚಳ ವಿವರ ಹೀಗಿದೆ.. 

  • ದೆಹಲಿ-ಲೇಹ್ ಮಾರ್ಗದ ಸಾಮಾನ್ಯ ದರ 4,772 ರೂ.ಗಳಾಗಿದ್ದು, ಆದರೆ ಈಗ 26,819 ರೂ.ಗೆ ಏರಿಕೆಯಾಗಿದೆ.
  • ಚಂಡೀಗಢ - ಶ್ರೀನಗರಕ್ಕೆ ಸಾಮಾನ್ಯ ದರ 4,745 ರಿಂದ 26,148 ರೂ.ಗೆ ಏರಿಕೆಯಾಗಿದೆ.
  • ಶ್ರೀನಗರ-ಚಂಡೀಗಢ ಸಾಮಾನ್ಯ ದರ 4,047 ರಿಂದ 24,418 ರೂ.ಗೆ ಏರಿಕೆಯಾಗಿದೆ.
  • ಮುಂಬೈ-ಲಖನೌಗೆ ಸಾಮಾನ್ಯ ದರ 4,046 ರೂ.ನಿಂದ 20,934 ರೂ.ಗೆ ಏರಿಕೆಯಾಗಿದೆ.
  • ಶ್ರೀನಗರ-ಛತ್ತೀಸ್‌ಗಢದ ಸಾಮಾನ್ಯ ಪ್ರಯಾಣ ದರ 4,772 ರಿಂದ 26,819 ರೂ.ಗೆ ಏರಿಕೆಯಾಗಿದೆ.

ಇದನ್ನೂ ಓದಿ: ಗಗನಸಖಿಯರ ಜತೆ ಪೋರ್ಚುಗಲ್‌ನಿಂದ ಐರ್ಲೆಂಡ್‌ಗೆ ವಿಮಾನದಲ್ಲಿ ಏಕಾಂಗಿಯಾಗಿ ಪಯಣಿಸಿದ ವಿಐಪಿ ಗೆಸ್ಟ್‌..!

ಬೇಸಿಗೆ ರಜೆಗಳು ಮತ್ತು ಗೋ ಫಸ್ಟ್‌ ವಿಮಾನ ಸೇವೆ ಸ್ಥಗಿತದಿಂದ ಬೆಲೆ ಹೆಚ್ಚಾಗಿದೆ ಎಂದು ಹೇಳಲಾಗಿದ್ದು, ಈ ಬೆಲೆ ಮುಂದಿನ ತಿಂಗಳವರೆಗೆ ಅಂದಾಜು ಇದೇ ರೀತಿಯಲ್ಲಿ ಇರಲಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ವಿಮಾನ ನಿಲ್ದಾಣಗಳಿಗೆ 12 ಬಿಲಿಯನ್ ಡಾಲರ್ ಹೂಡಿಕೆ: ಚೀನಾ ಆರ್ಥಿಕತೆ ಮೀರಿಸಲು ಭಾರತದ ಮಾಸ್ಟರ್‌ಪ್ಲ್ಯಾನ್‌..!

click me!