ಮೂಗಿಗೆ ಹತ್ತಿ ಹೂವಿನ ಹಾರ.. ಈ ಸ್ಟಾರ್ಟ್ಅಪ್ ಮಾಡುತ್ತೆ ಶವಸಂಸ್ಕಾರ

By Anusha KbFirst Published Nov 23, 2022, 1:28 PM IST
Highlights

ಪ್ರತಿಯೊಂದನ್ನು ವ್ಯವಹಾರದಂತೆ ಕಾಣುವ ಇಂದಿನ ಕಾಲಘಟ್ಟದಲ್ಲಿ ಈಗ ಅಂತ್ಯಸಂಸ್ಕಾರವನ್ನೇ ವ್ಯವಹಾರವಾಗಿಸಿಕೊಂಡ ಹೊಸ ಉದ್ಯಮವೊಂದು ಮುಂಬೈನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಅದೀಗ ಚರ್ಚೆಗೆ ಕಾರಣವಾಗಿದೆ.

ವಿಶ್ವದ ಅನೇಕ ಸಮುದಾಯಗಳು ಸಾವಿನ ನಂತರದ ಮುಕ್ತಿ ಮಾರ್ಗದ ಬಗ್ಗೆ ಅನೇಕ ನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ. ಸಾವಿನ ಅದರಲ್ಲೂ ಭಾರತದಲ್ಲಿ ಮೃತಪಟ್ಟ ಹಲವು ವರ್ಷಗಳ ನಂತರವೂ ಪೂರ್ವಜರ ಸ್ಮರಣೆಯನ್ನು ಮುಂದಿನ ತಲೆಮಾರುಗಳು ಪೂಜಿಸುವ ಆರಾಧಿಸುವ ಸಂಪ್ರದಾಯವಿದೆ. ವ್ಯಕ್ತಿಯ ಸಾವಿನ ನಂತರದ ಅಂತ್ಯಸಂಸ್ಕಾರವನ್ನು ಆತನ ಕುಟುಂಬಸ್ಥರು ಬಂಧುಗಳು ಸೇರಿ ಮಾಡುತ್ತಾರೆ. ಆದರೆ ಪ್ರತಿಯೊಂದನ್ನು ವ್ಯವಹಾರದಂತೆ ಕಾಣುವ ಇಂದಿನ ಕಾಲಘಟ್ಟದಲ್ಲಿ ಈಗ ಅಂತ್ಯಸಂಸ್ಖಾರವನ್ನೇ ವ್ಯವಹಾರವಾಗಿಸಿಕೊಂಡ ಹೊಸ ಉದ್ಯಮವೊಂದು ಮುಂಬೈನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಅದೀಗ ಚರ್ಚೆಗೆ ಕಾರಣವಾಗಿದೆ.

ಅಧುನಿಕ ಜೀವನಶೈಲಿ ತಂತ್ರಜ್ಞಾನ (Technology) ಉದ್ಯಮರಂಗಕ್ಕೆ ಇಂದು ಹೊಸ ಆಯಾಮ ನೀಡಿದೆ. ಪ್ರಸ್ತುತ ಭಾರತದಲ್ಲಿ ಸಾವಿರಾರು ಹೊಸ ಹೊಸ ಉದ್ಯಮಗಳು ಕಾರ್ಯಾರಂಭಿಸಿವೆ. ಒಂದು ಕಡೆ ಸೂಜಿ ದಾರದಿಂದ ಹಿಡಿದು ವಾಸಿಂಗ್ ಮೆಷಿನ್‌ವರೆಗೆ, ಅಕ್ಕಿಯಿಂದ ಹಿಡಿದು ಬಿರಿಯಾನಿಯವರೆಗೆ (Biriyani) ಎಲ್ಲವೂ ಮೊಬೈಲ್‌ನ ಒಂದು ಕ್ಲಿಕ್ ಮೂಲಕ ಮನೆ ಬಾಗಿಲು ತಲುಪುತ್ತಿದ್ದರೆ, ಮತ್ತೊಂದೆಡೆ ದುಡ್ಡಿದ್ದರೆ ಸಾಕು ನಮ್ಮ ಮದುವೆಯಲ್ಲೂ ನಾವು ನೆಂಟರಂತೆ ನಿಲ್ಲುವಂತೆ ಮಾಡುವ ಮದುವೆ ಮುಂಜಿ ಮುಂತಾದ ಎಲ್ಲಾ ಸಮಾರಂಭ ನಡೆಸಿಕೊಡುವ ಇವೆಂಟ್ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳು ಎಲ್ಲೆಡೆ ದಾಪುಗಾಲಿಟ್ಟು ಸಮಾರಂಭ ನಡೆಸಲು ಬಯಸುವವರ ತೊಂದರೆಗಳನ್ನೆಲ್ಲಾ ಆತಂಕ ಒತ್ತಡಗಳನ್ನೆಲ್ಲಾ ಕಡಿಮೆ ಮಾಡಿವೆ. ಆದರೆ ಹೊಸ ವಿಷಯ ಏನೆಂದರೆ ಈಗ ಸಾವಿನ ನಂತರದ ಎಲ್ಲಾ ಗೌರವಯುತ ಕಾರ್ಯ ಸಂಸ್ಕಾರಗಳನ್ನು ನಡೆಸಲು ಹೊಸ ಸಂಸ್ಥೆಯೊಂದು ಆರಂಭವಾಗಿದೆ.

Life after death: ಸತ್ತ ಮೇಲೆ ಆತ್ಮದ ಜೊತೆ ಏನೆಲ್ಲಾ ಹೋಗುತ್ತೆ ಗೊತ್ತಾ?

ಇಂತಹ ಸಂಸ್ಥೆಯೊಂದು ಗಮನಕ್ಕೆ ಬಂದಿದ್ದು, ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವ್ಯಾಪಾರ ಮೇಳ 2022ರಲ್ಲಿ. ಅಲ್ಲಿ ಹೊಸ ಹೊಸ ಉದ್ಯಮಗಳು, ಉದ್ಯಮಿಗಳು ತಮ್ಮ ಹೊಸ ಆವಿಷ್ಕಾರ ಹೊಸ ಬ್ಯುಸಿನೆಸ್ ಐಡಿಯಾಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಅಲ್ಲಿಯೇ ಅಂತಿಮ ಸಂಸ್ಕಾರ ಸೇವೆ (funeral service) ಎಂಬ ಸ್ಟಾಲೊಂದು ವಿಚಿತ್ರವಾದ ಆತಂಕದೊಂದಿಗೆ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯ್ತು. 

ऐसे ‘स्टार्टअप’ की ज़रूरत क्यों पड़ी होगी ? pic.twitter.com/UekzjZ5o7b

— Awanish Sharan (@AwanishSharan)

ಈ ಸ್ಟಾಲ್‌ನ ಫೋಟೋವೊಂದನ್ನು ತೆಗೆದು ಭಾರತೀಯ ಆಡಳಿತ ಸೇವೆ ಅಧಿಕಾರಿ ಅವನೀಶ್ ಶರಣ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಸ್ಟಾಲ್‌ನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ಇದು ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, ಚರ್ಚೆಗೆ ಕಾರಣವಾಗಿದೆ. ಸುಖಾಂತ್ ಅಂತ್ಯಸಂಸ್ಕಾರ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ (Sukhant Funeral Management Private Limited) ಎಂದು ಈ ಸಂಸ್ಥೆಯ ಹೆಸರು ನೋಂದಣಿ ಆಗಿದೆ. ಇಲ್ಲಿ ಶವಸಂಸ್ಕಾರದ ವೇಳೆ ನಡೆಸುವ ಆರತಿ ಹಾಗೂ ಹೂವಿನ ದಳಗಳ ಮಾದರಿಯನ್ನು ಕೂಡ ಇರಿಸಲಾಗಿತ್ತು. ಇಂತಹ ಸ್ಟಾರ್ಟ್‌ಅಪ್‌ನ ಅಗತ್ಯವೇಕೆ ಬಂತು ಎಂದು ಬರೆದು ಈ ಫೋಟೋವನ್ನು ಐಎಎಸ್ ಅಧಿಕಾರಿ ಪೋಸ್ಟ್ ಮಾಡಿದ್ದಾರೆ. 

Bengaluru Tech Summit: ಬಿಟಿಎಸ್‌ನಲ್ಲಿ 20 ನೂತನ ಸ್ಟಾರ್ಟಪ್‌ ಉತ್ಪನ್ನ ಬಿಡುಗಡೆ: ಸಚಿವ ಅಶ್ವತ್ಥನಾರಾಯಣ

ಮುಂಬೈ (Mumbai) ಮೂಲದ ಈ ಸ್ಟಾರ್ಟ್‌ಅಪ್ ಮೃತರಿಗೆ ಗೌರಯುತವಾದ ವಿದಾಯದ ಗುರಿಯನ್ನು ಹೊಂದಿದೆ. ಈ ಸಂಸ್ಥೆ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನಡೆಸುವಲ್ಲಿ ವಿಶೇಷತೆಯನ್ನು ಹೊಂದಿದೆಯಂತೆ. ಶ್ರದ್ದಾಂಜಲಿ, ಪೂರ್ವ ನಿರ್ಧಾರಿತ ಅಂತ್ಯಸಂಸ್ಕಾರ, ಹಾಗೂ ಅಂತಿಮ ಸಂಸ್ಕಾರವನ್ನು ಅದು ನಡೆಸಿಕೊಡುವುದು. 

ಬಹುಶಃ ಇವತ್ತಿನ ವಿಭಕ್ತ ಕುಟುಂಬದ ಕಾರಣದಿಂದಾಗಿ ಈ ವ್ಯವಸ್ಥೆ ಬೇಕಾಗಬಹುದು ಎಂದು ಅನೇಕರು ಒಪ್ಪಿಕೊಂಡಿದ್ದಾರೆ. ಜನಸಂಖ್ಯೆ (Population) ಹೆಚ್ಚಳ ಹಾಗೂ ನಿರುದ್ಯೋಗದ (Unemployment) ಕಾರಣಕ್ಕೆ ಮಕ್ಕಳು ಕುಟುಂಬವನ್ನು ತೊರೆದು ವಿದೇಶದಲ್ಲಿ ವ್ಯಾಸಂಗಕ್ಕೆ ಉದ್ಯೋಗಕ್ಕೆ ತೆರಳುತ್ತಾರೆ. ನಂತರ ಅಲ್ಲೇ ಸೆಟಲ್ ಆಗುತ್ತಾರೆ. ಈ ಕಾರಣಕ್ಕೆ ಈ ಸೇವೆ ಈಗ ನಗರಗಳಲ್ಲಿ ಬಹಳ ಅಗತ್ಯ ಎನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಸಂಸ್ಥೆಯ ಸಂಸ್ಥಾಪಕ ಹೇಗೆ ತನ್ನ ಟಾರ್ಗೆಟ್ ಪ್ಲಾನ್ ಮಾಡಬಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಅನೇಕರು ಇದೊಂದು ಭವಿಷ್ಯದದಲ್ಲಿ ಬಹಳ ಅಗತ್ಯವಿರುವ ಸೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಎಂಥಾ ಕಾಲ ಬಂತು ನೋಡಿ..?

click me!