ಆನ್ ಲೈನ್ ವಂಚಕರ ಕಣ್ಣು ಯಾವಾಗ ಎಲ್ಲಿ ಬೀಳುತ್ತೋ ಹೇಳಕ್ಕಾಗಲ್ಲ.ಇತ್ತೀಚಿನ ದಿನಗಳಲ್ಲಿ ಇಪಿಎಫ್ ಖಾತೆಗಳಿಗೆ ಈ ವಂಚಕರು ಕನ್ನ ಹಾಕಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅಪರಿಚಿತ ವ್ಯಕ್ತಿಗಳೊಂದಿಗೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. ಅದರಲ್ಲೂ ಒಟಿಪಿಯನ್ನು ಇಪಿಎಫ್ಒ ಎಂದಿಗೂ ಕೇಳುವುದಿಲ್ಲ. ಆದಕಾರಣ ಒಟಿಪಿ ಮಾಹಿತಿ ಹಂಚಿಕೊಳ್ಳಬೇಡಿ ಎಂದು ಟ್ವೀಟ್ ಮೂಲಕ ಇಪಿಎಫ್ಒ ಮನವಿ ಮಾಡಿದೆ.
ನವದೆಹಲಿ (ನ.23): ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್ಒ) ದೇಶಾದ್ಯಂತ ಲಕ್ಷಾಂತರ ಮಂದಿ ಖಾತೆಗಳನ್ನು ಹೊಂದಿದ್ದಾರೆ. ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಈ ಖಾತೆಗೆ ಜಮೆ ಮಾಡಲಾಗುತ್ತದೆ. ಇದು ನಿವೃತ್ತಿ ಅಥವಾ ನಿವೃತ್ತಿಯ ನಂತರದ ಪಿಂಚಣಿ ಯೋಜನೆಯಾಗಿದೆ. ಈ ಸೌಲಭ್ಯವು ವೇತನ ಪಡೆಯುವ ಎಲ್ಲರಿಗೂ ಲಭ್ಯವಿದೆ. ಈ ಯೋಜನೆಯಡಿಯಲ್ಲಿ, ಉದ್ಯೋಗಿ ಹಾಗೂ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ತಮ್ಮ ಮೂಲ ವೇತನದಿಂದ ಇಪಿಎಫ್ ಖಾತೆಗೆ ಶೇ.12ರಷ್ಟು ಮೊತ್ತವನ್ನು ಕೊಡುಗೆ ನೀಡುತ್ತಾರೆ. ಇಪಿಎಫ್ ಖಾತೆಗೆ ಸರ್ಕಾರ ಪ್ರತಿ ವರ್ಷ ಬಡ್ಡಿ ಜಮೆ ಮಾಡುತ್ತದೆ. ಪ್ರಸ್ತುತ ಶೇ.8.1ರಷ್ಟು ಬಡ್ಡಿ ನೀಡಲಾಗುತ್ತಿದೆ. ಇಪಿಎಫ್ ಒನಲ್ಲಿ ನಿವೃತ್ತಿ ಬದುಕಿಗಾಗಿ ಹೂಡಿಕೆ ಮಾಡಲಾಗುತ್ತಿದ್ದರೂ ಮಕ್ಕಳ ವಿದ್ಯಾಭ್ಯಾಸ, ಮದುವೆ ಅಥವಾ ಅನಾರೋಗ್ಯ ಮುಂತಾದ ತುರ್ತು ಹಣಕಾಸಿನ ಅವಶ್ಯಕತೆಯಿದ್ದಾಗ ಈ ಹಣವನ್ನು ಬಳಕೆ ಮಾಡಲು ಅವಕಾಶವಿದೆ. ಆದರೆ, ಇಂಥ ಸಂದರ್ಭಗಳಲ್ಲಿ ಖಾತೆಯಿಂದ ಹಣ ವಿತ್ ಡ್ರಾ ಮಾಡುವಾಗ ಕೆಲವೊಂದು ಎಚ್ಚರಿಕೆ ವಹಿಸೋದು ಅಗತ್ಯ ಎಂದು ಪಿಎಫ್ಒ ತಿಳಿಸಿದೆ. ಡಿಜಿಟಲೀಕರಣದ ಹಿನ್ನೆಲೆಯಲ್ಲಿ ಇಂದು ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕಿ ಇಪಿಎಫ್ಒ ಖಾತೆಯಲ್ಲಿನ ಹಣವನ್ನು ವಂಚಕರು ವಿತ್ ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಆದ ಕಾರಣ ವೈಯಕ್ತಿಕ ಮಾಹಿತಿಗಳನ್ನ ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳದಂತೆ ಇಪಿಎಫ್ ಒ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಇಪಿಎಫ್ಒ ಟ್ವೀಟ್
ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಟ್ವೀಟ್ ಮೂಲಕ ಸೈಬರ್ ವಂಚನೆ ಬಗ್ಗೆ ತನ್ನ ಲಕ್ಷಾಂತರ ಖಾತೆದಾರರನ್ನು ಎಚ್ಚರಿಸಿದೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಟ್ವೀಟ್ ಮಾಡಿರುವ ಇಪಿಎಫ್ಒ, ಆಧಾರ್ ಕಾರ್ಡ್ , ಪ್ಯಾನ್ ಕಾರ್ಡ್, ಯುಎಎನ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಇಪಿಎಫ್ ಒ ಖಾತೆದಾರರಿಂದ ಕೇಳುತ್ತದೆ. ಆದರೆ, ಎಂದಿಗೂ ಒಟಿಪಿ ತಿಳಿಸುವಂತೆ ಮನವಿ ಮಾಡೋದಿಲ್ಲ. ಯಾವುದೇ ಅಪರಿಚಿತ ಸಂಖ್ಯೆಯಿಂದ ಕರೆ ಅಥವಾ ಮೆಸೇಜ್ ಮೂಲಕ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೋರಿದರೆ ನೀಡಬೇಡಿ ಎಂದು ಮನವಿ ಮಾಡಿದೆ.
ಈಗ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡೋದು ತುಂಬಾ ಸುಲಭ, ಆಧಾರ್ ಕಾರ್ಡ್ ಇದ್ರೆ ಸಾಕು, ಅದು ಹೇಗೆ?
ವಂಚನೆ ನಡೆದ ತಕ್ಷಣ ದೂರು ನೀಡಿ
ಉದ್ಯೋಗ ಬದಲಾವಣೆ ಮಾಡುವ ಸಂದರ್ಭದಲ್ಲಿ ಅನೇಕ ಜನರು ಇಪಿಎಫ್ ಖಾತೆಗೆ ಸಂಬಂಧಿಸಿ ವಂಚನೆಗೆ ಒಳಗಾಗುತ್ತಿದ್ದಾರೆ. ಇಂಥ ಅನೇಕ ಪ್ರಕರಣಗಳು ಈಗಾಗಲೇ ವರದಿಯಾಗಿವೆ. ಇಪಿಎಫ್ಒ ಮಾಹಿತಿಗಳನ್ನು ನವೀಕರಿಸುವ ನೆಪದಲ್ಲಿ ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಇತರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ಆ ಬಳಿಕ ಮಾಹಿತಿ ನೀಡಿದ ವ್ಯಕ್ತಿಗಳ ಇಪಿಎಫ್ ಖಾತೆಯಲ್ಲಿರುವ ಹಣವನ್ನು ಎಗರಿಸಲಾಗುತ್ತಿದೆ. ಯಾವುದೇ ಸನ್ನಿವೇಶದಲ್ಲೂ ವೈಯಕ್ತಿಕ ಮಾಹಿತಿಗಳನ್ನು ಯಾರಿಗೂ ಬಿಟ್ಟು ಕೊಡಬೇಡಿ. ಒಂದು ವೇಳೆ ನಮ್ಮ ಇಪಿಎಫ್ ಖಾತೆಗೆ ಯಾರಾದ್ರೂ ಕನ್ನ ಹಾಕಿದ್ರೆ ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ.
ಎಸ್ ಬಿಐ ಖಾತೆಯ ಶಾಖೆ ಬದಲಾವಣೆಗೆ ಬ್ಯಾಂಕ್ ಗೆ ಭೇಟಿ ನೀಡಬೇಕಾಗಿಲ್ಲ, ಆನ್ ಲೈನ್ ನಲ್ಲೇ ಮಾಡ್ಬಹುದು!
ಸಾಕಷ್ಟು ವಿಳಂಬದ ಬಳಿಕ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ 2021-2022ನೇ ಸಾಲಿನ ಬಡ್ಡಿ ಜಮೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ವಿಳಂಬವಾದ ಕಾರಣಕ್ಕೆ ಯಾವುದೇ ಇಪಿಎಫ್ ಖಾತೆದಾರರಿಗೂ ಬಡ್ಡಿಯಲ್ಲಿ ಯಾವುದೇ ನಷ್ಟವಾಗೋದಿಲ್ಲ. ಅವರಿಗೆ ಸಿಗಬೇಕಾದ ಮೊತ್ತದ ಬಡ್ಡಿ ಅವರ ಖಾತೆಗೆ ಜಮಾ ಆಗುತ್ತದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭರವಸೆ ನೀಡಿದೆ. ಇನ್ನು ನಿಮ್ಮ ಇಪಿಎಫ್ ಖಾತೆಗೆ ಬಡ್ಡಿ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಅನೇಕ ಮಾರ್ಗಗಳಿವೆ. ಇಪಿಎಫ್ ಒ ಅಧಿಕೃತ ವೆಬ್ ಸೈಟ್ epfindia.gov.in.ಭೇಟಿ ನೀಡಿ ನೋಡಬಹುದು. ಹಾಗೆಯೇ ನಿಮ್ಮ ಮೊಬೈಲ್ ನಲ್ಲಿ “EPFOHO UAN ENG" ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಮೆಸೇಜ್ (Message) ಕಳುಹಿಸಿ ಕೂಡ ಇಪಿಎಫ್ ಖಾತೆ ಬ್ಯಾಲೆನ್ಸ್ ಚೆಕ್ ಮಾಡಬಹುದು.