
ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಜೊಹೊ (Zoho) ಈಗ ದೇಶದಾದ್ಯಂತ ಜನಪ್ರಿಯವಾಗುತ್ತಿದೆ. ಈ ಕಂಪನಿಯಲ್ಲಿ ಸಾಮಾನ್ಯ ಕಾವಲುಗಾರನಾಗಿ ಕೆಲಸಕ್ಕೆ ಸೇರಿ, ಈಗ ತನ್ನ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಯಶಸ್ಸು ಕಂಡಿದ್ದಾರೆ ತಮಿಳುನಾಡಿನ ಯುವಕ ಅಬ್ದುಲ್ ಅಲಿಮ್. ಅವರ ಯಶೋಗಾಥೆಯನ್ನು ನೋಡೋಣ.
ಪರಿಶ್ರಮದಿಂದ ಬೆಳೆದ ಯುವಕ
ಕೆಲಸ ಹುಡುಕುವ ತಾಣವಾದ ಲಿಂಕ್ಡ್‌ಇನ್‌ನಲ್ಲಿ (linkedin) ಅಬ್ದುಲ್ ಅಲಿಮ್ ಪೋಸ್ಟ್ ಮಾಡಿದ್ದು, 2013ರಲ್ಲಿ ಕೇವಲ 1,000 ರೂಪಾಯಿಯೊಂದಿಗೆ ಮನೆಯಿಂದ ಹೊರಟಿದ್ದರಂತೆ. ಅದರಲ್ಲಿ 800 ರೂಪಾಯಿ ರೈಲು ಟಿಕೆಟ್‌ಗೆ ಖರ್ಚಾಗಿತ್ತು. ಕೆಲಸ ಸಿಗುವ ಮೊದಲು ಸುಮಾರು ಎರಡು ತಿಂಗಳು ಬೀದಿಗಳಲ್ಲಿಯೇ ಇದ್ದು, ನಂತರ ಜೊಹೋದಲ್ಲಿ ಕಾವಲುಗಾರನಾಗಿ ಕೆಲಸಕ್ಕೆ ಸೇರಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Success Story : ಆಫೀಸ್ ಬಾಯ್ ಆಗಿದ್ದ ಈತ ಸಿಇಓ ಆಗಿದ್ದು ಹೇಗೆ ?
ಕಣ್ಣುಗಳಲ್ಲಿ ಸಾಧನೆಯ ಕಿಡಿ
ಇಲ್ಲಿಂದಲೇ ಅಬ್ದುಲ್ ಅಲಿಮ್ ಅವರ ಇಡೀ ಜೀವನ ಬದಲಾಯಿತು. ಅಂದರೆ, ಜೊಹೋದಲ್ಲಿ 12 ಗಂಟೆಗಳ ಕಾಲ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾಗ ಒಂದು ತಿರುವು ಸಿಕ್ಕಿತು. ಜೊಹೋದ ಹಿರಿಯ ಉದ್ಯೋಗಿ ಶಿಬು ಅಲೆಕ್ಸಿಸ್, 'ನಿನ್ನ ಕಣ್ಣುಗಳಲ್ಲಿ ಏನೋ ಒಂದು ಕಿಡಿ ಕಾಣುತ್ತಿದೆ' ಎಂದು ಅಬ್ದುಲ್ ಅಲಿಮ್‌ಗೆ ಸ್ಫೂರ್ತಿ ತುಂಬಿದರು.
ಹಗಲಲ್ಲಿ ಕಾವಲುಗಾರ; ಸಂಜೆಯಲ್ಲಿ ಓದು
ಶಿಬು ಅಲೆಕ್ಸಿಸ್, 'ನೀನು ಏನು ಓದಿದ್ದೀಯಾ?' ಎಂದು ಕೇಳಿದಾಗ, 'ನಾನು 10ನೇ ತರಗತಿವರೆಗೆ ಓದಿದ್ದೇನೆ. ಆದರೆ ಬೇಸಿಕ್ ಕಂಪ್ಯೂಟರ್ ಗೊತ್ತು. HTML ಬಗ್ಗೆ ಸ್ವಲ್ಪ ತಿಳಿದಿದೆ' ಎಂದು ಅಬ್ದುಲ್ ಅಲಿಮ್ ಹೇಳಿದ್ದಾರೆ. ಅವರಲ್ಲಿನ ಆಸಕ್ತಿಯನ್ನು ಗಮನಿಸಿದ ಶಿಬು ಅಲೆಕ್ಸಿಸ್ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ಅದರಂತೆ. ಸುಮಾರು 8 ತಿಂಗಳ ಕಾಲ ಅಲಿಮ್, ಹಗಲಲ್ಲಿ ಕಾವಲುಗಾರನ ಕೆಲಸ ಮತ್ತು ಸಂಜೆಯಲ್ಲಿ ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಆಸಕ್ತಿಯಿಂದ ಕಲಿತರು.
ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ
ಈ ವಿಷಯವನ್ನು ಅಲೆಕ್ಸಿಸ್ ಜೊಹೋ ಮ್ಯಾನೇಜರ್‌ಗೆ ತಿಳಿಸಿದರು. ಅಬ್ದುಲ್ ಅಲಿಮ್ ಅವರ ಆಸಕ್ತಿಯನ್ನು ಅರ್ಥಮಾಡಿಕೊಂಡ ಮ್ಯಾನೇಜರ್, ಅವರನ್ನು ಸಂದರ್ಶನಕ್ಕೆ ಕರೆದರು. ಆ ಇಂಟರ್ವ್ಯೂನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ, ಅಲಿಮ್ ಅವರನ್ನು ಸಾಫ್ಟ್‌ವೇರ್ ಡೆವಲಪರ್ ಆಗಿ ಮ್ಯಾನೇಜರ್ ನೇಮಿಸಿಕೊಂಡರು. ಈಗ ಅಬ್ದುಲ್ ಅಲಿಮ್ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪರಿಶ್ರಮ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಎತ್ತರಕ್ಕೆ ಬೆಳೆಯಬಹುದು ಎಂಬುದಕ್ಕೆ ಅಲಿಮ್ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.
ಇದನ್ನೂ ಓದಿ: 8ನೇ ಕ್ಲಾಸಲ್ಲಿ ಶಾಲೆ ಬಿಟ್ಟ 15ಕ್ಕೆ ಅಂಗಡಿ ತೆರೆದ: ಈಗ ದುಬೈನ ಬುರ್ಜ್ ಖಲೀಫಾದಲ್ಲಿ ವಾಸ
Zoho ಗೆ ಸಾವಿರ ಮೆಚ್ಚುಗೆಗಳು
ಈ ಹಂತದಲ್ಲಿ ಜೊಹೋ ಕಂಪನಿಯನ್ನು ಖಂಡಿತವಾಗಿಯೂ ಮೆಚ್ಚಲೇಬೇಕು. ಕೈಯಲ್ಲಿ ಪದವಿ ಇದ್ದರೆ ಮಾತ್ರ ಕೆಲಸ ಎಂದು ಹಲವು ಕಂಪನಿಗಳು ಹೇಳುವಾಗ, 'ನಿನ್ನಲ್ಲಿ ಪ್ರತಿಭೆ ಇದ್ದರೆ ಸಾಕು, ಪದವಿ ನಂತರ' ಎಂಬ ಆಧಾರದ ಮೇಲೆ ಅಬ್ದುಲ್ ಅಲಿಮ್ ಅವರ ಜೀವನವನ್ನು ರೂಪಿಸಿದ ಜೊಹೊ ಮತ್ತು ಶ್ರೀಧರ್ ವೆಂಬು ಅವರನ್ನು ಎಷ್ಟು ಹೊಗಳಿದರೂ ಸಾಲದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.